ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅಂಗವಿಕಲ ಬಾಲಕನಿಗೆ ಅವಕಾಶ ನಿರಾಕರಣೆ- ತಪ್ಪಿಸಬಹುದಾಗಿದ್ದ ಪ್ರಸಂಗ

Last Updated 14 ಮೇ 2022, 1:03 IST
ಅಕ್ಷರ ಗಾತ್ರ

ಇಂಡಿಗೊ ಏರ್‌ಲೈನ್ಸ್ ವಿಮಾನಯಾನ ಕಂಪನಿಯ ಅಧಿಕಾರಿಗಳು ಅಂಗವಿಕಲ ಬಾಲಕನೊಬ್ಬನಿಗೆ ವಿಮಾನ ಏರಲು ಅವಕಾಶ ನಿರಾಕರಿಸಿದ್ದಾರೆ. ಬಾಲಕನ ಜೊತೆ ಅವನ ಅಪ್ಪ–ಅಮ್ಮ ಕೂಡ ಇದ್ದರು. ರಾಂಚಿ ವಿಮಾನ ನಿಲ್ದಾಣದಲ್ಲಿ ನಡೆದ ಈ ಪ್ರಕರಣವು ವಿಮಾನಯಾನ ಕಂಪನಿಯ ಸಿಬ್ಬಂದಿಯಲ್ಲಿ ಸಂವೇದನೆ ಕೊರತೆಯ, ಅನುಕಂಪ ಇಲ್ಲದಿರುವುದರ ನಿದರ್ಶನದಂತೆ ಕಾಣುತ್ತದೆ. ಗಾಲಿ ಕುರ್ಚಿ ಮೇಲೆ ಕುಳಿತಿದ್ದ ಆ ಬಾಲಕ, ವಿಮಾನ ನಿಲ್ದಾಣದಲ್ಲಿನ ವಾತಾವರಣ, ತನ್ನ ಸುತ್ತಲಿನ ಗಲಿಬಿಲಿಗಳನ್ನು ಕಂಡು ಆಘಾತಕ್ಕೆ ಒಳಗಾದಂತೆ ಇತ್ತು.

ವಿಮಾನಯಾನ ಕಂಪನಿಯ ಸಿಬ್ಬಂದಿಯು ಆತ ‘ಹೆಚ್ಚು ಸಹಜವಾಗುವವರೆಗೆ’ ವಿಮಾನ ಏರಲು ಅವಕಾಶ ನೀಡಲಾಗದು ಎಂದರು. ವಿಮಾನವು ಟೇಕ್ ಆಫ್ ಆಗುವ ಸಮಯಕ್ಕೆ ಮೊದಲೇ ಆತ ಆಘಾತದ ಸ್ಥಿತಿಯಿಂದ ಹೊರಬಂದನಾದರೂ, ಸಿಬ್ಬಂದಿ ಮಾತ್ರ ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ. ಆತನ ವರ್ತನೆಯು ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಬಹುದು ಎಂದರು. ವಿಮಾನಯಾನ ಕಂಪನಿಯ ಸಿಬ್ಬಂದಿಯು ಇತರ ಪ್ರಯಾಣಿಕರ ಹಿತವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು, ನಿಗದಿತ ಸಮಯದೊಳಗೆ ಅವರು ಒಂದು ತೀರ್ಮಾನವನ್ನು ಕೈಗೊಳ್ಳಲೇಬೇಕು ಎಂಬುದು ನಿಜ. ಆದರೆ, ವಿಶೇಷ ಗಮನದ ಅಗತ್ಯವಿರುವ ವ್ಯಕ್ತಿಗಳನ್ನು ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಅಸೂಕ್ಷ್ಮವಾಗಿ ಕಾಣುವ ಹಲವು ಪ್ರಸಂಗಗಳು ವರದಿಯಾಗಿವೆ. ವಿಮಾನ ನಿಲ್ದಾಣಗಳಲ್ಲಿಯೂ ಇಂತಹ ಪ್ರಸಂಗಗಳು ಆಗಿವೆ. ಆದರೆ ಅವು ಆಗಬಾರದಿತ್ತು.

ಈ ಬಾಲಕ ಎದುರಿಸಿದ ಸಂದರ್ಭವು ಸಾರ್ವಜನಿಕರ ಗಮನಕ್ಕೆ ಬಂದ ನಂತರದಲ್ಲಿ ಇಂಡಿಗೊ ಕಂಪನಿಯು ವಿಷಾದ ವ್ಯಕ್ತಪಡಿಸಿದೆ. ‘ಕ್ಲಿಷ್ಟಕರ ಸನ್ನಿವೇಶವೊಂದರಲ್ಲಿ ಸಿಬ್ಬಂದಿಯು ತಮ್ಮಿಂದ ಸಾಧ್ಯವಿದ್ದ ಅತ್ಯುತ್ತಮ ತೀರ್ಮಾನವೊಂದನ್ನು ಕೈಗೊಂಡಿದ್ದಾರೆ’ ಎಂದು ಹೇಳಿದೆ. ಆದರೆ, ಅಂಗವೈಕಲ್ಯಕ್ಕೆ ತುತ್ತಾದವರು, ಇತರರ ವಿಶೇಷ ಗಮನದ ಅಗತ್ಯವಿರುವ ವ್ಯಕ್ತಿಗಳ ವಿಚಾರದಲ್ಲಿ ಎಲ್ಲರೂ ಹೆಚ್ಚು ಸೂಕ್ಷ್ಮವಾಗಿ ವರ್ತಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಗಮನಿಸಿದಾಗ, ವಿಮಾನಯಾನ ಕಂಪನಿಯ ಸಿಬ್ಬಂದಿಯ ವರ್ತನೆ ತೃಪ್ತಿಕರವಾಗಿ ಇರಲಿಲ್ಲ ಅನ್ನಿಸುತ್ತದೆ. ಬಾಲಕ ಹಾಗೂ ಆತನ ಪಾಲಕರ ಪಾಲಿಗೆ ಇಡೀ ಘಟನೆಯು ಅದೆಷ್ಟು ನೋವು ಕೊಡುವಂಥದ್ದಾಗಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಮಾನಯಾನ ಕಂಪನಿಯ ಸಿಬ್ಬಂದಿ ಬಹುಶಃ ಸೋತರು. ಕಂಪನಿಯು ಬಾಲಕನ ಕುಟುಂಬಕ್ಕೆ ಆ ದಿನದ ಮಟ್ಟಿಗೆ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿತು ಎಂಬುದು ನಿಜ.

ಇಡೀ ಘಟನೆಯ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದ ನಂತರದಲ್ಲಿ ಬಾಲಕನಿಗೆ ವಿದ್ಯುತ್ ಚಾಲಿತ ಗಾಲಿಕುರ್ಚಿ ನೀಡುವುದಾಗಿ ಹೇಳಿದೆ. ಆದರೆ ಆಗಿರುವ ನೋವನ್ನು ಇವು ಯಾವುವೂ ಕಡಿಮೆ ಮಾಡುವುದಿಲ್ಲ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಈ ಘಟನೆಯ ಬಗ್ಗೆ ವಿಚಾರಣೆಗೆ ಆದೇಶಿಸಿದೆ. ವಿಶೇಷ ಕಾಳಜಿಯ ಅಗತ್ಯವಿದ್ದ ಬಾಲಕನೊಬ್ಬ ಆಘಾತಕ್ಕೆ ಒಳಗಾಗಿದ್ದ ಸಂದರ್ಭ ಅದು. ಆದರೆ, ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಬಹುದಾದ ಪ್ರಯಾಣಿಕನಿಗೆ ಅನ್ವಯಿಸುವ ನಿಯಮವನ್ನುವಿಮಾನಯಾನ ಸಿಬ್ಬಂದಿಯು ಈ ಬಾಲಕನಿಗೆ ಅನ್ವಯ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ.

ವಿಶೇಷ ಆರೈಕೆಯ ಅಗತ್ಯವಿರುವ ಪ್ರಯಾಣಿಕರನ್ನು ಸಮಾನವಾಗಿ ಕಾಣಲು, ಅವರ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ನ್ಯಾಯಾಲಯಗಳು ಆದೇಶ ನೀಡಿವೆ. ಡಿಜಿಸಿಎ ಕೂಡ ಇಂತಹ ವ್ಯಕ್ತಿಗಳ ಹಿತ ಕಾಯುವ ಉದ್ದೇಶದಿಂದ ಕೆಲವು ನಿಯಮಗಳನ್ನು ರೂಪಿಸಿದೆ. ನ್ಯಾಯಾಲಯದ ಆದೇಶಗಳನ್ನು, ಡಿಜಿಸಿಎ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು. ಸಾರ್ವಜನಿಕರ ಜೊತೆ ಒಡನಾಡುವವರಿಗೆ, ಸಾರ್ವಜನಿಕ ಸೇವೆಯಲ್ಲಿ ಇರುವವರಿಗೆ ಇಂತಹ ಸಂಗತಿಗಳ ವಿಚಾರವಾಗಿ ಅರಿವು ಮೂಡಿಸಬೇಕು.

ಅಂಗವಿಕಲರ ಜೊತೆ ಹೇಗೆ ವರ್ತಿಸಬೇಕು, ಅವರ ಜೊತೆ ಹೇಗೆ ಸಂವಹನ ನಡೆಸಬೇಕು ಎಂಬ ಮಾಹಿತಿ ನೀಡಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನುಎದುರಿಸುತ್ತಿರುವ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಮಾಡಲು ತೊಂದರೆ ಇಲ್ಲವೇ ಎಂಬುದನ್ನು ಪ್ರಮಾಣೀಕರಿಸಲು ಡಿಜಿಸಿಎ ಮಾನ್ಯತೆ ಹೊಂದಿರುವ ವೈದ್ಯರು ವಿಮಾನ ನಿಲ್ದಾಣಗಳಲ್ಲಿ ಲಭ್ಯರಿದ್ದರೆ ಚೆನ್ನ. ಈ ಸೌಲಭ್ಯವು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಲಭ್ಯವಿದ್ದರೆ, ಈಗ ಎದುರಾದಂತಹ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ನಿಭಾಯಿಸಲು ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT