ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚಿಲ್ಲರೆ ಹಣದುಬ್ಬರ ಇಳಿಕೆ– ಇನ್ನು ಮುಂಗಾರಿನ ಮೇಲೆ ಗಮನ

Published 14 ಮೇ 2023, 19:56 IST
Last Updated 14 ಮೇ 2023, 19:56 IST
ಅಕ್ಷರ ಗಾತ್ರ

ಹಣಕಾಸು ಜಗತ್ತಿಗೆ ಹೊಸ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ಗೆ ಸಂಬಂಧಿಸಿದಂತೆ, ಹಿತಾನುಭವ ನೀಡುವ ಅಂಕಿ–ಅಂಶಗಳು ಪ್ರಕಟವಾಗಿವೆ. ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹವಾದ ವರಮಾನ ಎಷ್ಟು ಎಂಬುದರ ವಿವರವನ್ನು ಕೇಂದ್ರ ಸರ್ಕಾರವು ಈಚೆಗೆ ಬಿಡುಗಡೆ ಮಾಡಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರದ ಸಾರ್ವಕಾಲಿಕ ಗರಿಷ್ಠ ಮೊತ್ತದ ವರಮಾನವು ಏಪ್ರಿಲ್‌ನಲ್ಲಿ ಸಂಗ್ರಹವಾಗಿದೆ. ಕೇಂದ್ರ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಏಪ್ರಿಲ್‌ ತಿಂಗಳ ಚಿಲ್ಲರೆ ಹಣದುಬ್ಬರ ಕುರಿತ ವಿವರಗಳನ್ನು ಪ್ರಕಟಿಸಿದೆ. ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 4.7ಕ್ಕೆ ತಗ್ಗಿದೆ. ಹಣದುಬ್ಬರ ಇಳಿಕೆಯಲ್ಲಿ ಆಹಾರ ವಸ್ತುಗಳ ಹಣದುಬ್ಬರದಲ್ಲಿ ಆಗಿರುವ ಇಳಿಕೆಯ ಕೊಡುಗೆ ದೊಡ್ಡದಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ದರವು ಈಚಿನ ತಿಂಗಳುಗಳಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಿತಿಯಾಗಿರುವ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುತ್ತಿದ್ದುದೇ ಜಾಸ್ತಿ. ಈಗ ಈ ಮಟ್ಟಕ್ಕೆ ತಗ್ಗಿರುವುದು ಶುಭ ಸಮಾಚಾರವಿದ್ದಂತೆ. ಏಪ್ರಿಲ್‌ನ ಜಿಎಸ್‌ಟಿ ವರಮಾನ ಸಂಗ್ರಹ ಹಾಗೂ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಒಟ್ಟಿಗೆ ಗಮನಿಸಿದಾಗ, ಬೆಲೆ ಏರಿಕೆಯ ಪ್ರಮಾಣ ಕಡಿಮೆ ಆಗಿದೆ ಹಾಗೂ ಮಾರುಕಟ್ಟೆಯಲ್ಲಿ ಲವಲವಿಕೆಯೂ ಹೆಚ್ಚಿನ ಮಟ್ಟದಲ್ಲಿದೆ ಎಂಬುದು ಖಚಿತವಾಗುತ್ತದೆ.

ಚಿಲ್ಲರೆ ಹಣದುಬ್ಬರವು ಕಡಿಮೆ ಆಗಿರುವುದು, ಹಣಕಾಸು ತಜ್ಞರ ಗಮನವು ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಕೈಗೊಳ್ಳುವ ತೀರ್ಮಾನದ ಕಡೆ ಹರಿಯುವಂತೆ ಮಾಡಿದೆ. ಹಣದುಬ್ಬರವು ಅಂಕೆಯನ್ನು ಮೀರಿದ ನಂತರದಲ್ಲಿ, ಅದನ್ನು ನಿಯಂತ್ರಿಸುವ ಉದ್ದೇಶದಿಂದ ಎಂಪಿಸಿ, ರೆಪೊ ದರವನ್ನು ಹೆಚ್ಚು ಮಾಡುತ್ತ ಬಂದಿದೆ. ಈಗ ರೆಪೊ ದರವು ಶೇ 6.50ರಷ್ಟು ಇದೆ. ರೆಪೊ ದರ ಹೆಚ್ಚಾಗಿರುವ ಕಾರಣದಿಂದಾಗಿ ಬಂಡವಾಳ ಸಂಗ್ರಹಿಸಲು ಕಷ್ಟವಾಗುತ್ತಿದೆ ಎಂದು ಉದ್ಯಮಗಳು, ಅದರಲ್ಲೂ ಮುಖ್ಯವಾಗಿ ಬ್ಯಾಂಕ್‌ ಸಾಲವನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಎಂಎಸ್‌ಎಂಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ) ಉದ್ಯಮಗಳು, ಅಳಲು ಹೇಳಿಕೊಂಡಿವೆ. ಹಣದುಬ್ಬರ ದರವು ಇಳಿಕೆ ಆಗಿರುವುದು, ಹಣಕಾಸು ನೀತಿಯ ವಿಚಾರವಾಗಿ ಆರ್‌ಬಿಐ ಕೈಗೊಂಡಿರುವ ಕ್ರಮಗಳು ಸರಿದಾರಿಯಲ್ಲಿ ಸಾಗುತ್ತಿವೆ ಎಂಬುದರ ಸೂಚನೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಎಂಪಿಸಿ ಮುಂದಿನ ಸಭೆಯು ಜೂನ್‌ನಲ್ಲಿ ನಡೆಯಬೇಕಿದೆ. ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ತೀರ್ಮಾನವನ್ನು ಸಮಿತಿಯು ಕೈಗೊಳ್ಳಬಹುದು ಎಂದು ಹಣಕಾಸು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೆಪೊ ದರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂಬ ಖಚಿತ ಸಂದೇಶ ದೊರೆತರೆ, ಬಂಡವಾಳ ಸಂಗ್ರಹದ ಉದ್ದೇಶ ಹೊಂದಿರುವವರ ಪಾಲಿಗೆ ಮುಂದಿನ ಹಾದಿಯು ಸ್ಪಷ್ಟವಾಗುತ್ತದೆ. ದೇಶದ ಕೈಗಾರಿಕಾ ಉತ್ಪಾದನೆಯು ಮಾರ್ಚ್‌ ತಿಂಗಳಲ್ಲಿ ಐದು ತಿಂಗಳ ಕನಿಷ್ಠ ಮಟ್ಟವಾದ ಶೇ 1.1ಕ್ಕೆ ತಗ್ಗಿದೆ. ತಯಾರಿಕಾ ವಲಯದ ಚಟುವಟಿಕೆಗಳಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದ್ದು ಇದಕ್ಕೆ ಒಂದು ಕಾರಣ. ರೆ‍‍ಪೊ ದರದಲ್ಲಿ ಮುಂದೆ ಏರಿಕೆ ಆದಲ್ಲಿ, ಅದರಿಂದ ವಿವಿಧ ವಲಯಗಳ ಮೇಲೆ ಆಗುವ ಪರಿಣಾಮವು ತೀವ್ರವಾಗಿ ಇರಬಹುದು.

ಏಪ್ರಿಲ್‌ನಲ್ಲಿ ಆರ್‌ಬಿಐ ಮಾಡಿದ ಅಂದಾಜಿನ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ದರವು ಬಹಳ ಕಡಿಮೆ ಆಗುವ ಸಾಧ್ಯತೆ ಇಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ 5.3ರಷ್ಟು ಇರಲಿದೆ ಎಂದು ಈ ಮೊದಲು ಅಂದಾಜು ಮಾಡಿದ್ದ ಆರ್‌ಬಿಐ, ಅದನ್ನು ಏಪ್ರಿಲ್‌ನಲ್ಲಿ ಶೇ 5.2ಕ್ಕೆ ತಗ್ಗಿಸಿದೆ. ಹಿಗಾಗಿ, ಮುಂದಿನ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಈಗಿನ ಮಟ್ಟಕ್ಕಿಂತ ತುಸು ಹೆಚ್ಚಾಗುವ ಸಾಧ್ಯತೆಯೂ ಇದೆ. ವಾಸ್ತವದಲ್ಲಿ, ಮುಂದಿನ ದಿನಗಳಲ್ಲಿ ಹಣದುಬ್ಬರದ ಏರಿಳಿತ ಯಾವ ರೀತಿ ಇರಲಿದೆ ಎಂಬುದು ಮುಂಗಾರು ಮಳೆಯು ವಾಡಿಕೆಯಂತೆ ಆಗಲಿದೆಯೇ ಎಂಬುದನ್ನು ಒಂದಿಷ್ಟು ಆಧರಿಸಿದೆ. ಮುಂಗಾರು ಮಳೆ ಕೊರತೆ ಎದುರಾದರೆ, ಅತಿವೃಷ್ಟಿ ಉಂಟಾದರೆ ಆಹಾರ ವಸ್ತುಗಳ ಉತ್ಪಾದನೆಯ ಮೇಲೆ ನೇರವಾಗಿ ಪರಿಣಾಮ ಆಗುತ್ತದೆ. ಅದು ಮತ್ತೆ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ, ನೀತಿ ನಿರೂಪಕರ ಗಮನವು ಇನ್ನು ಮುಂಗಾರಿನ ಮೇಲೆ ಹೆಚ್ಚು ಕೇಂದ್ರೀಕೃತವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT