ಮಂಗಳವಾರ, ಜನವರಿ 21, 2020
27 °C

ಕೆಂಪೇಗೌಡ ಪೀಠ ಸ್ಥಾಪನೆಯಷ್ಟೇ ಸಾಲದು ಅಧ್ಯಯನವೂ ನಡೆಯಬೇಕು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ‘ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ’ ಸ್ಥಾಪನೆಯ ವಿಚಾರವು ರಾಜಕೀಯ ತಿಕ್ಕಾಟದ ಸ್ವರೂಪ ಪಡೆದುಕೊಂಡದ್ದು ದುರದೃಷ್ಟಕರ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪೀಠ ಸ್ಥಾಪನೆಯ ನಿರ್ಧಾರ ಕೈಗೊಳ್ಳಲಾಗಿತ್ತು. ಅದಕ್ಕಾಗಿ, ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ (ಬಿಬಿಎಂಪಿ) ಬಜೆಟ್‌ನಲ್ಲಿ ₹ 50 ಕೋಟಿ ಅನುದಾನ ಘೋಷಿಸಲಾಗಿತ್ತು. ಆದರೆ, ಬಿಬಿಎಂಪಿಯಲ್ಲಿ ಸಂಪನ್ಮೂಲ ಲಭ್ಯವಿಲ್ಲದ ಕಾರಣದಿಂದಾಗಿ ಅಧ್ಯಯನ ಪೀಠದ ಕಾಮಗಾರಿ ರದ್ದುಪಡಿಸುವಂತೆ ನಗರಾಭಿವೃದ್ಧಿ ಇಲಾಖೆಯ ಉನ್ನತ ಸಮಿತಿಯು ಬಿಬಿಎಂಪಿಗೆ ಬರೆದ ಪತ್ರವು ರಾಜಕಾರಣದ ಕೆಸರೆರಚಾಟಕ್ಕೆ ಕಾರಣವಾಯಿತು. ಪೀಠವನ್ನು ರದ್ದುಪಡಿಸಲು ಮುಂದಾದ ಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದೆ ಎನ್ನುವ ವಿರೋಧ ಪಕ್ಷಗಳ ನಾಯಕರ ಆರೋಪಗಳಿಗೆ ಉತ್ತರವಾಗಿ, ‘ಪೀಠ ಸ್ಥಾಪನೆ ಯೋಜನೆ ಕೈಬಿಟ್ಟಿಲ್ಲ, ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿ ಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಅದರ ಬೆನ್ನಿಗೇ ನಗರಾಭಿವೃದ್ಧಿ ಇಲಾಖೆಯು ಈ ಯೋಜನೆಯ ಕಾಮಗಾರಿಗೆ ಷರತ್ತುಬದ್ಧ ಅನುಮೋದನೆ ನೀಡಿದೆ. ಈ ಆರೋಪ ಮತ್ತು ಸ್ಪಷ್ಟನೆಗಳ ಹಿಂದೆ ಕೆಂಪೇಗೌಡರ ಬಗೆಗಿನ ಕಾಳಜಿಗಿಂತಲೂ ರಾಜಕೀಯ ಲೆಕ್ಕಾಚಾರಗಳೇ ಎದ್ದುಕಾಣಿಸುತ್ತಿವೆ. ಉದ್ದೇಶಿತ ಪೀಠದಿಂದ ಏನು ಪ್ರಯೋಜನ ಎನ್ನುವ ಸ್ಪಷ್ಟತೆ ಸರ್ಕಾರಕ್ಕೂ ಇದ್ದಂತಿಲ್ಲ, ವಿರೋಧ ಪಕ್ಷಗಳಿಗೂ ಅದು ಬೇಕಾಗಿಲ್ಲ. ಪರಸ್ಪರರನ್ನು ಹೀಗಳೆಯಲು ಕೆಂಪೇಗೌಡರು ದಾಳವಾಗಿ ಬಳಕೆಯಾಗುತ್ತಿದ್ದಾರೆ ಅಷ್ಟೆ. ಈ ಯೋಜನೆಗೆ ಬಿಬಿಎಂಪಿ ₹50 ಕೋಟಿ ನೀಡಬೇಕೆಂಬ ಯೋಚನೆಯೇ ಅಚ್ಚರಿ ಹುಟ್ಟಿಸುವಂತ ಹದ್ದು. ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದಕ್ಕೇ ದುಡ್ಡಿಲ್ಲದ ಬಿಬಿಎಂಪಿ, ಅಧ್ಯಯನ ಪೀಠವೊಂದಕ್ಕೆ ಕೋಟ್ಯಂತರ ರೂಪಾಯಿ ಕೊಡುವಷ್ಟು ಶ್ರೀಮಂತವಾಗಿದೆಯೇ? ಗ್ರಂಥಾಲಯ ಇಲಾಖೆಗೆ ಸೇರಬೇಕಾಗಿದ್ದ ನೂರಾರು ಕೋಟಿ ರೂಪಾಯಿ ಮೊತ್ತವನ್ನು ಬಾಕಿ ಉಳಿಸಿಕೊಂಡು ‘ಪುಸ್ತಕ ಸಂಸ್ಕೃತಿ’ಗೆ ಮೊಳೆ ಹೊಡೆಯುತ್ತಿರುವ ಪಾಲಿಕೆಯು ಕೆಂಪೇಗೌಡರ ಹೆಸರಿನಲ್ಲಿ ಸಾಂಸ್ಕೃತಿಕ ಕಾಳಜಿ ಪ್ರದರ್ಶಿಸುತ್ತದೆಂದು ನಂಬುವುದು ಹೇಗೆ? ಉದ್ದೇಶಿತ ಪೀಠವು ಕೆಂಪೇಗೌಡರ ಇತಿಹಾಸ ಹಾಗೂ ಚಿಂತನೆಗಳ ಅಧ್ಯಯನಕ್ಕೆ ನೆರವಾಗಲಿದೆ ಎಂದು ಹೇಳಲಾಗಿದೆ. ಇದೇ ಕೆಲಸವನ್ನು ವಿಶ್ವವಿದ್ಯಾಲಯದ ಇತಿಹಾಸ ವಿಭಾಗ ಯಾಕೆ ಮಾಡಬಾರದು? ನಮ್ಮ ರಾಜಕಾರಣಿಗಳಿಗೆ ಅಧ್ಯಯನಕ್ಕಿಂತಲೂ ಹೆಚ್ಚಾಗಿ ಹೊಸ ಹೊಸ ಕುರ್ಚಿಗಳ ಅವಕಾಶಗಳನ್ನು ಸೃಷ್ಟಿಸುವುದು, ಆ ಮೂಲಕ ಸಾರ್ವಜನಿಕರ ತೆರಿಗೆಯ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದೇ ಮುಖ್ಯವಾಗಿದೆ.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಒಂದಲ್ಲಾ ಒಂದು ಅಧ್ಯಯನ ಪೀಠ ಇದ್ದೇ ಇದೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಹತ್ತಾರು ವಿಷಯಗಳಿಗೆ ಸಂಬಂಧಿಸಿದ ಪೀಠಗಳಿವೆ. ಇವೆಲ್ಲ ಏನು ಮಾಡುತ್ತಿವೆ ಎಂದು ಪ್ರಶ್ನಿಸಿದರೆ ದೊರೆಯುವ ಉತ್ತರ ನಿರಾಶಾದಾಯಕವಾದುದು. ವರ್ಷಕ್ಕೆ ಒಂದೋ ಎರಡೋ ವಿಚಾರಸಂಕಿರಣ ನಡೆಸುವಷ್ಟಕ್ಕೆ ಅವುಗಳ ಚಟುವಟಿಕೆ ಸೀಮಿತವಾಗಿದೆ. ಸಮುದಾಯಗಳನ್ನು ತೃಪ್ತಿಪಡಿಸುವ ಉದ್ದೇಶದಿಂದ ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಸ್ಥಾಪನೆಯಾಗುವ ಪೀಠಗಳು, ಆ ನಾಯಕರ ಜಯಂತಿ ಸಂದರ್ಭದಲ್ಲಷ್ಟೇ ಸಕ್ರಿಯವಾಗಿರುತ್ತವೆ. ಕೆಲವು ಪೀಠಗಳು ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸುಮಾರು 100 ಅಧ್ಯಯನ ಪೀಠಗಳಿದ್ದು, ಅವುಗಳಿಗೆ ಪ್ರತಿವರ್ಷ ಸರ್ಕಾರದಿಂದ ದೊಡ್ಡ ಮೊತ್ತದ ಅನುದಾನ ದೊರೆಯುತ್ತಿದೆ. ಲಕ್ಷ, ಕೋಟಿಗಳ ಮೊತ್ತದಲ್ಲಿ ಅನುದಾನ ಪಡೆಯುವ ಪೀಠಗಳು ಆ ಮೊತ್ತವನ್ನು ಸದ್ಬಳಕೆ ಮಾಡಿರುವ ಬಗ್ಗೆ ಪರಾಮರ್ಶೆಯೇ ನಡೆದಂತಿಲ್ಲ. ಕೆಲವು ವಿಶ್ವವಿದ್ಯಾಲಯಗಳು ತಮ್ಮಲ್ಲಿನ ಪೀಠಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನೂ ವ್ಯವಸ್ಥಿತವಾಗಿ ಇಟ್ಟಿಲ್ಲ ಎನ್ನಲಾಗಿದೆ. ‘ಅಧ್ಯಯನ ಪೀಠಗಳು ಕಾಲಕಾಲಕ್ಕೆ ನಡೆಸಬೇಕಾದ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಅನುದಾನವನ್ನು ಸರಿಯಾಗಿ ಬಳಸಿಕೊಂಡಿರುವ ಬಗ್ಗೆ ಸಮರ್ಪಕ ಲೆಕ್ಕಪತ್ರಗಳಿಲ್ಲ’ ಎಂದು ಅಧ್ಯಯನ ಪೀಠಗಳ ಸ್ಥಿತಿಗತಿಯ ಪರಿಶೀಲನೆ ನಡೆಸಿದ್ದ ‘ವಿಶ್ವವಿದ್ಯಾಲಯ ಪುನರವಲೋಕನ ಆಯೋಗ’ ಕಳೆದ ವರ್ಷ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಗೆ ದೂಳು ಹಿಡಿದಂತಿದೆ. ರಾಜಕೀಯ ಕಾರಣಗಳಿಗಾಗಿ ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಅತೀವ ಉತ್ಸಾಹ ವ್ಯಕ್ತಪಡಿಸುವ ಸರ್ಕಾರಗಳು, ಅವುಗಳ ನಿರ್ವಹಣೆಗೆ ಮತ್ತು ಬಿಡುಗಡೆ ಮಾಡಿದ ಅನುದಾನದ ಉತ್ತರದಾಯಿತ್ವದ ಬಗ್ಗೆ ಗಮನಹರಿಸುವುದಿಲ್ಲ. ಇದರ ಫಲವಾಗಿಯೇ ಬಹುತೇಕ ಪೀಠಗಳು ಹೆಸರಿಗಷ್ಟೇ ಅಸ್ತಿತ್ವದಲ್ಲಿ ಇವೆ. ಈ ಸಾಲಿಗೆ ಪ್ರಸ್ತುತ ಚರ್ಚೆಯಲ್ಲಿರುವ ಕೆಂಪೇಗೌಡ ಅಧ್ಯಯನ ಪೀಠ ಸೇರಬಾರದು. ಹೊಸ ಪೀಠಗಳನ್ನು ಸ್ಥಾಪಿಸುವ ಬಗ್ಗೆ ಯಾರದೂ ಅಭ್ಯಂತರವಿಲ್ಲ. ಆದರೆ, ಅವುಗಳ ಅನಿವಾರ್ಯದ ಬಗ್ಗೆ ಚರ್ಚೆ ನಡೆಯಬೇಕು, ಅಗತ್ಯವಿದ್ದರಷ್ಟೇ ಪೀಠ ಸ್ಥಾಪನೆಯಾಗಬೇಕು. ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ ಸಾರ್ವಜನಿಕ ಹಣದ ಅಪಬಳಕೆಯಾದರೆ, ಅದು ಆ ನಾಯಕರಿಗೆ ಮಾಡಿದ ಅವಮಾನವೇ ಸರಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು