ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ-ಚಿರತೆಗಳಿಗೆ ಮುಗ್ಧರ ಇನ್ನಷ್ಟು ಬಲಿ: ಬೋನುಗಳ ಸಂಖ್ಯೆ ಹೆಚ್ಚಿಸಿದರೆ ಸಾಕೆ?

Last Updated 23 ಜನವರಿ 2023, 19:30 IST
ಅಕ್ಷರ ಗಾತ್ರ

ಮನುಷ್ಯರ ಮೇಲೆ ವನ್ಯಮೃಗಗಳ ದಾಳಿಯ ಪ್ರಸಂಗಗಳು ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಸೌದೆಗೆ ಹೋದ ಯುವಕನೊಬ್ಬ ಹುಲಿಯ ಬಾಯಿಗೆ ಸಿಕ್ಕಿ ಸಾವಿಗೀಡಾಗಿದ್ದಾನೆ. ತಿ.ನರಸೀಪುರ ತಾಲ್ಲೂಕಿನ ಹೊರಳಹಳ್ಳಿಯಲ್ಲಿ ಹನ್ನೊಂದು ವರ್ಷದ ಬಾಲಕನೊಬ್ಬ ಚಿರತೆಯ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾನೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕಬ್ಬಿನ ಗದ್ದೆಗಳಲ್ಲಿ ಹೆಚ್ಚುತ್ತಿರುವ ಚಿರತೆಗಳ ಹಾವಳಿ ಬಗ್ಗೆ ತಿ.ನರಸೀಪುರದ ಶಾಸಕರು ಕಳೆದ ತಿಂಗಳು ಸದನದಲ್ಲಿ ಪ್ರಸ್ತಾಪಿಸಿದರಾದರೂ ಬೋನುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಸಲಹೆಯ ಸುತ್ತ ಇಡೀ ಚರ್ಚೆಯೇ ಲಘುಧಾಟಿಯಲ್ಲಿ ನಡೆದಿತ್ತು. ‘ಆನೆ, ಹುಲಿ, ಚಿರತೆಗಳ ಬಳಿಗೆ ನಾವು ಸರ್ವಪಕ್ಷ ನಿಯೋಗ ಹೋಗಿ ಮನವಿ ಕೊಡೋಣ’ ಎಂದು ಶಾಸಕರೊಬ್ಬರು ಹಾಸ್ಯ ಚಟಾಕಿ ಹಾರಿಸಿದರೇ ವಿನಾ ವಿಷಯದ ಗಾಂಭೀರ್ಯ ಯಾರನ್ನೂ ತಟ್ಟಿದಂತಿಲ್ಲ. ಮೊನ್ನೆ ಶಾಲಾ ಬಾಲಕ ಜಯಂತನ ಮೃತ್ಯುವಿನ ಸಂದರ್ಭದಲ್ಲೂ ಸ್ಥಳೀಯರನ್ನು ಸಮಾಧಾನಪಡಿಸಲೆಂದು ‘ಕಬ್ಬಿನ ಕಟಾವು ಮಾಡಿಸುತ್ತೇವೆ, ಪೊದೆಗಳನ್ನು ಸವರಿ ಹಾಕುತ್ತೇವೆ’ ಎಂಬ ಜಾಳು ಭರವಸೆಯು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರಿಂದ ಬಂದಿತೇ ಹೊರತು ಅದರಾಚಿನ ಶಾಶ್ವತ ಕ್ರಮಗಳ ಬಗ್ಗೆ ಯಾವ ಮಾರ್ಗಸೂಚಿಯೂ ಅವರ ಬಳಿ ಇದ್ದಂತಿಲ್ಲ. ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ
₹ 15 ಲಕ್ಷ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದು ಶ್ಲಾಘನೀಯವೇ ಆದರೂ ಪರಿಹಾರ ಮೊತ್ತದಲ್ಲಿ ಹೆಚ್ಚಳವಾದ ಮಾತ್ರಕ್ಕೆ ಮಕ್ಕಳನ್ನು ಕಳೆದುಕೊಂಡ ನೋವು ಶಮನವಾಗಲಾರದು. ಮೇಲಾಗಿ, ಅದು ವನ್ಯಮೃಗಗಳನ್ನು ದೂರವಿಡುವ ಉಪಾಯವಂತೂ ಅಲ್ಲವೇ ಅಲ್ಲ.

ಆನೆ, ಹುಲಿ, ಚಿರತೆಗಳ ಸಂಖ್ಯಾವೃದ್ಧಿಯ ವಿಷಯದಲ್ಲಿ ಕರ್ನಾಟಕ ಇಡೀ ದೇಶಕ್ಕೇ ಮಾದರಿ ಯಾಗುವಂತಿದೆಯಾದರೂ ಸಂರಕ್ಷಿತ ಅರಣ್ಯ ಗಳಲ್ಲಿ ಅವುಗಳ ಬೇಟೆಗೆ ಬೇಕಾದ ಪ್ರಮಾಣದಲ್ಲಿ ಸಸ್ಯಾಹಾರಿ ಮೃಗಗಳು ಸಿಗುತ್ತಿಲ್ಲ. ಏಕೆಂದರೆ ಅರಣ್ಯ ಗಳಲ್ಲಿ ತೃಣಸಸ್ಯಗಳು ಸಮೃದ್ಧವಾಗಿ ಬೆಳೆಯುವ ಬದಲು ಲಂಟಾನಾ, ಯುಪಟೋರಿಯಂ, ಪಾರ್ಥೇನಿಯಂ ಮುಂತಾದ ಆಹಾರೇತರ ಕಳೆಸಸ್ಯಗಳ ಹಾವಳಿ ತೀರಾ ಹೆಚ್ಚಾಗಿದೆ. ಈಚೀಚೆಗಂತೂ ಹೆಜ್ಜೆ ಇಟ್ಟಲ್ಲೆಲ್ಲ ವನ್ಯಜೀವಿಗಳ ಆಶ್ರಯಕ್ಕೆ ಹೊಲಗಳೂ ನೆಡುತೋಪುಗಳೂ ಅವಿತಿಟ್ಟುಕೊಳ್ಳಲು ಗಣಿಗುಂಡಿ ಗಳೂ ಸಿಗುತ್ತವೆ. ಅಲ್ಲೆಲ್ಲ ಬೇಟೆಗೆ ಕುರಿ, ಮೇಕೆ, ಮಂಗಗಳೂ ಬೀಡಾಡಿ ನಾಯಿಗಳೂ ಸುಲಭಕ್ಕೆ ಸಿಗುತ್ತಿರು ವಾಗ ಚಿರತೆಗಳ ಸಂಖ್ಯಾವೃದ್ಧಿ ನಿರಾತಂಕ ನಡೆಯುತ್ತದೆ.

ಮುಂದಿನ ದಿನಗಳಲ್ಲಿ ಮನುಷ್ಯರ ಮತ್ತು ವನ್ಯಜೀವಿಗಳ ಸಂಘರ್ಷ ಹೆಚ್ಚುತ್ತಲೇ ಹೋಗುವುದರಿಂದ ಬೋನುಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಲೀ ಸೆರೆಸಿಕ್ಕ ಮೃಗಗಳ ಮರುವಸತಿಗೆಂದು ವಿಶೇಷ ರಕ್ಷಣಾ ವಲಯಗಳನ್ನು ಹೆಚ್ಚಿಸುವುದಾಗಲೀ ದೀರ್ಘಕಾಲೀನ ಪರಿಹಾರವಾಗಲಾರವು. ರಾಜ್ಯದಲ್ಲಿ 700ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮನುಷ್ಯ- ಚಿರತೆಗಳ ಮುಖಾಮುಖಿ ಆಗುತ್ತಿರುವಾಗ ಅಂಥ ಸಂಘರ್ಷ ಗಳನ್ನು ನಿಭಾಯಿಸಲೆಂದೇ ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವನ್ನು ಆರಂಭಿಸಬೇಕು ಎಂಬ ವನ್ಯ ತಜ್ಞರ ಸಲಹೆಗೆ ಸರ್ಕಾರದ ಮಾನ್ಯತೆ ಸಿಗಬೇಕು. ಎಂದಿನಂತೆ ಅದು ಇನ್ನೊಂದು ಸರ್ಕಾರಿ ಆಡಳಿತ ಯಂತ್ರವಾಗುವ ಬದಲು, ಪಂಚಾಯಿತಿ ಮಟ್ಟದಲ್ಲಿ ವನ್ಯಜೀವಿಗಳ ನಿಭಾವಣೆ ವಿಷಯದಲ್ಲಿ ಸ್ಥಳೀಯ ಜನರೂ ಪಾಲ್ಗೊಳ್ಳುವಂತೆ ಶಿಕ್ಷಣ ಮತ್ತು ಸಬಲೀಕರಣವನ್ನೂ ಹೆಚ್ಚಿಸುವಂತಿರಬೇಕು. ಈ ಬಗೆಯ ಸಂಘರ್ಷ ಕೇವಲ ನಮ್ಮಲ್ಲಷ್ಟೇ ಅಲ್ಲ, ಕೇರಳ, ಹಿಮಾಚಲ ಪ್ರದೇಶ, ಒಡಿಶಾ, ಅಸ್ಸಾಂ ಮುಂತಾದ ವಿವಿಧ ರಾಜ್ಯಗಳಲ್ಲಿ ಹಾಗೂ ಪೂರ್ವ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದ ದೇಶಗಳಲ್ಲೂ ಹೆಚ್ಚುತ್ತಿದೆ. ಆಯಾ ಪ್ರದೇಶಕ್ಕೆ ಸೂಕ್ತವೆನಿಸುವಂತೆ ಸ್ಥಳೀಯರಿಗೆ ವಿಶೇಷ ಹಕ್ಕುಗಳನ್ನೂ ನೀಡಲಾಗುತ್ತಿದೆ. ಗ್ರಾಮೀಣ ಜನರೂ ವನ್ಯಜೀವಿ ನಿಭಾವಣೆಯ ವಿಶಿಷ್ಟ ಉಪಾಯಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ, ಬಾಂಗ್ಲಾದೇಶದಲ್ಲಿ ಹುಲಿಗಳನ್ನು ದೂರವಿಡಲು ಕೃಷಿಕರು ಮತ್ತು ಮೀನುಗಾರರು ತಲೆಯ ಹಿಂಭಾಗದಲ್ಲೂ ಮನುಷ್ಯರ ಮೂಗು–ಕಣ್ಣುಗಳನ್ನು ಚಿತ್ರಿಸಿದ ಮುಖವಾಡಗಳನ್ನು ಧರಿಸುತ್ತಾರೆ. ವಿಶ್ವಬ್ಯಾಂಕ್‌ ವರದಿಯೊಂದರ ಪ್ರಕಾರ, ಆಫ್ರಿಕದ ಬೋಟ್ಸ್‌ವಾನಾ ದೇಶದಲ್ಲಿ ರೈತರು ಆನೆಗಳನ್ನು ದೂರವಿಡಲು ಬೇಲಿಗುಂಟ ಅಲ್ಲಲ್ಲಿ ಪೆಟ್ಟಿಗೆಗಳಲ್ಲಿ ಜೇನು ಸಾಕಣೆ ಮಾಡುತ್ತಾರೆ. ಬೇಲಿಯುದ್ದಕ್ಕೂ ಮೆಣಸಿನ ಪೈರನ್ನು ಬೆಳೆಯುತ್ತಾರೆ ಅಥವಾ ಮೆಣಸಿನ ರಸವನ್ನು ಲೇಪಿಸಿದ ಬಟ್ಟೆಗಳನ್ನು ನೇತು ಹಾಕಿರುತ್ತಾರೆ. ಆನೆಗಳು ವಲಸೆ ಹೊರಡುವ ಋತುಗಳನ್ನು ಗಮನಿಸಿ ಆ ಅವಧಿಗೆ ಮುನ್ನವೇ ಕೊಯ್ಲಿಗೆ ಬರುವ ಕಬ್ಬು, ಶೇಂಗಾ, ಬಾಳೆಯ ವಿಶೇಷ ತಳಿಗಳನ್ನೂ ರೂಪಿಸಲಾಗಿದೆ. ಕೃಷಿಕನ ವರಮಾನವನ್ನೂ ಹೆಚ್ಚಿಸುವ ಇಂಥ ನಾನಾ ಕ್ರಮಗಳ ಬಗ್ಗೆ ಶಾಲೆಗಳಲ್ಲಿ ಪಾಠಗಳೂ ಸೇರ್ಪಡೆಯಾಗಿರುವುದರಿಂದ ವನ್ಯಜೀವಿಗಳ ಸಂಘರ್ಷಗಳನ್ನು ಗಣನೀಯವಾಗಿ ಕಡಿಮೆ ಮಾಡುವಂತೆ ಮುಂದಿನ ಪೀಳಿಗೆಯನ್ನೂ ಸಜ್ಜುಗೊಳಿಸುವ ಕೆಲಸಗಳು ನಡೆದಿವೆ. ಜರ್ಮನಿಯ ಸಹಯೋಗದಲ್ಲಿ, ವನ್ಯಜೀವಿ ಮತ್ತು ಮನುಷ್ಯರ ನಡುವಣ ಸಂಘರ್ಷ ನಿವಾರಣಾ ಕ್ರಮಗಳ ಕುರಿತು ನಮ್ಮಲ್ಲೂ ವಿಶೇಷ ಅಧ್ಯಯನ ನಡೆದಿದ್ದು, ಅದರ ವರದಿಯ ಸೂಕ್ತ ಭಾಗಗಳು ಗ್ರಾಮವಾಸಿಗಳಿಗೂ ಅರ್ಥವಾಗುವಂತೆ ಕನ್ನಡದಲ್ಲಿ ಬರಬೇಕಿದೆ. ಬರೀ ಬೋನು ಮತ್ತು ಅರಿವಳಿಕೆ ಬಂದೂಕಿನಿಂದಾಚೆ ಸಮಗ್ರ ದೃಷ್ಟಿಯಿಂದ ವನ್ಯಜೀವಿಗಳನ್ನು ನಿಭಾಯಿಸುವಲ್ಲಿ ಸ್ಥಳೀಯರನ್ನೂ ತೊಡಗಿಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT