ಶುಕ್ರವಾರ, ಜನವರಿ 27, 2023
17 °C

ಸಂಪಾದಕೀಯ| ಪಾಕ್ ಸೇನಾ ಮುಖ್ಯಸ್ಥರಾಗಿ ಮುನೀರ್: ನಾಯಕತ್ವ ಗುಣಕ್ಕೆ ಅಗ್ನಿಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬ ಕುರಿತು ಕೆಲ ತಿಂಗಳುಗಳಿಂದ ಇದ್ದ ಊಹಾಪೋಹಕ್ಕೆ ತೆರೆಬಿದ್ದಿದೆ. ಲೆಫ್ಟಿನೆಂಟ್‌ ಜನರಲ್‌ ಅಸೀಮ್‌ ಮುನೀರ್ ಅವರನ್ನು ಸೇನೆಯ ಮುಖ್ಯಸ್ಥರನ್ನಾಗಿ ಅಲ್ಲಿನ ಪ್ರಧಾನಿ ಶೆಹಬಾಜ್‌ ಷರೀಫ್‌ ನೇಮಿಸಿದ್ದಾರೆ. ಮುನೀರ್ ಅವರು ಸೇನಾ ಗುಪ್ತಚರ ವಿಭಾಗ ಮತ್ತು ಗುಪ್ತಚರ ಸಂಸ್ಥೆ ಇಂಟರ್‌ ಸರ್ವಿಸಸ್‌ ಇಂಟೆಲಿಜೆನ್ಸ್‌ನ (ಐಎಸ್‌ಐ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮುನೀರ್‌ ಅವರು ಬಾಜ್ವಾ ಅವರಿಗೆ ನಿಷ್ಠರಾಗಿದ್ದ ಸೇನಾಧಿಕಾರಿ. ಸೇನೆಯ ಅತ್ಯುನ್ನತ ಹುದ್ದೆಗೆ ಸರ್ಕಾರವು ಪರಿಗಣನೆಗೆ ತೆಗೆದುಕೊಂಡ ಆರು ಜನರಲ್‌ಗಳಲ್ಲಿ ಮುನೀರ್‌ ಅವರೇ ಅತ್ಯಂತ ಹಿರಿಯರಾಗಿದ್ದರು. ಮುನೀರ್‌ ಅವರು ಅತ್ಯಂತ ದಕ್ಷವಾದ ಸೇವಾ ದಾಖಲೆಯನ್ನು ಹೊಂದಿದ್ದಾರೆ ಎಂದೂ ಹೇಳಲಾಗುತ್ತಿದೆ. ಸೇನೆಯ ಮುಂದಿನ ಮುಖ್ಯಸ್ಥರನ್ನಾಗಿ ಮುನೀರ್ ಅವರನ್ನು ಆಯ್ಕೆ ಮಾಡುವಲ್ಲಿ ಅಲ್ಲಿನ ಸರ್ಕಾರವು ಹಿರಿತನ ಮತ್ತು ಪ್ರತಿಭೆಗೆ ಮಣೆ ಹಾಕಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಎಲ್ಲ ರಾಜಕೀಯ ಪಕ್ಷಗಳೂ ಈ ನೇಮಕಕ್ಕೆ ಸಹಮತ ಸೂಚಿಸಿವೆ ಎಂದೂ ವರದಿಯಾಗಿದೆ. ಪಾಕಿಸ್ತಾನದ ರಾಜಕಾರಣವು ಸಂಪೂರ್ಣವಾಗಿ ಧ್ರುವೀಕರಣಗೊಂಡಿದೆ; ರಾಜಕೀಯದ ಭಾಗವೇ ಆಗಿದ್ದ ಸೇನೆಯು ತಾನು ರಾಜಕಾರಣದಲ್ಲಿ ಆಸಕ್ತಿಯನ್ನೇ ಹೊಂದಿಲ್ಲ ಎಂದು ಪದೇ ಪದೇ ಘೋಷಿಸಿದೆ; ಈ ಹೊತ್ತಿನಲ್ಲಿ ಸೇನಾ ಮುಖ್ಯಸ್ಥನ ಆಯ್ಕೆಯು ಸರ್ವಸಮ್ಮತವಾಗಿ ಆಗಿದೆ. ಹಾಗಿದ್ದರೂ ಮುನೀರ್‌ ಅವರ ಆಯ್ಕೆಯು ಎಲ್ಲ ಪ್ರಮುಖ ರಾಜಕೀಯ ‍ಪಕ್ಷಗಳಿಗೂ ಒಪ್ಪಿತವಾಗಿದೆ ಎಂದು ನಂಬುವುದು ಕಷ್ಟ. ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಮುನೀರ್ ಅವರ ನೇಮಕವು ಪಥ್ಯವಾಗಿಲ್ಲ. ಬಾಜ್ವಾ ಮತ್ತು ಇಮ್ರಾನ್‌ ನಡುವೆ ಇತ್ತೀಚೆಗೆ ಸಂಘರ್ಷ ಏರ್ಪಟ್ಟಿತ್ತು. ಹೀಗಾಗಿ, ಬಾಜ್ವಾ ಅವರಿಗೆ ನಿಷ್ಠರಾಗಿರುವ ಮುನೀರ್ ನೇಮಕವನ್ನು ಇಮ್ರಾನ್‌ ಒಪ್ಪಿಕೊಳ್ಳುವುದು ಕಷ್ಟ. 

ಸೇನಾ ಮುಖ್ಯಸ್ಥರಾಗಿ ಮುನೀರ್ ಅವರು ಅಧಿಕಾರ ವಹಿಸಿಕೊಳ್ಳುತ್ತಿರುವ ಈ ಸನ್ನಿವೇಶವು ಅತ್ಯಂತ ಸವಾಲಿನದ್ದಾಗಿದೆ. ತಮ್ಮ ಪ್ರತಿಭಟನಾ ಜಾಥಾವನ್ನು ಕೈಬಿಡುವುದಾಗಿ ಇಮ್ರಾನ್‌ ಅವರು ಈಗ ಹೇಳಿದ್ದಾರೆ. ಆದರೆ, ಎಲ್ಲ ಶಾಸನಸಭೆಗಳಲ್ಲಿರುವ ತಮ್ಮ ಪಕ್ಷದ ಪ್ರತಿನಿಧಿಗಳಿಗೆ ರಾಜೀನಾಮೆ ನೀಡಲು ಸೂಚಿಸುವ ಮೂಲಕ ಚುನಾವಣೆಯನ್ನು ಅನಿವಾರ್ಯ ವಾಗಿಸುವ ಕಾರ್ಯತಂತ್ರವನ್ನು ಇಮ್ರಾನ್‌ ಹೆಣೆದಿದ್ದಾರೆ. ಇಮ್ರಾನ್‌ ಅವರ ಕಾರ್ಯತಂತ್ರವು ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದರೆ, ಅದು ಮುನೀರ್ ಅವರು ಎದುರಿಸಬೇಕಾಗುವ ಮೊದಲ ಸವಾಲು ಆಗಬಹುದು. ಮಧ್ಯಪ್ರವೇಶಿಸುವ ಪ್ರಲೋಭನೆ
ಯನ್ನು ನಿಯಂತ್ರಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಬಹುದೇ? ಅವರು ಈ ಅವಕಾಶವನ್ನು ಸೇಡು ತೀರಿಸಿಕೊಳ್ಳಲು ಬಳಸಿಕೊಳ್ಳಬಹುದೇ? ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದೇ? ಪಾಕಿಸ್ತಾನದ ಆಂತರಿಕ ಸುರಕ್ಷತೆಯು ಶೋಚನೀಯ ಸ್ಥಿತಿಯಲ್ಲಿದೆ. ತೆಹ್ರೀಕ್‌ ಎ ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆಯು ಗಂಭೀರವಾದ ಬೆದರಿಕೆಯಾಗಿದೆ. ಇದು ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರದ ಜೊತೆಗೆ ಪಾಕಿಸ್ತಾನದ ಸಂಬಂಧದ ಮೇಲೆಯೂ ಕರಿಛಾಯೆ ಬೀರುತ್ತದೆ. ಟಿಟಿಪಿ ಮತ್ತು ಬಲೂಚ್‌ ಪ್ರದೇಶದಲ್ಲಿನ ಭಯೋತ್ಪಾದನೆಯ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ಸೇನೆಯು ಬೆಂಬಲಿಸಬಹುದೇ? ಭಾರತದ ಜೊತೆಗಿನ ಸಂಬಂಧದ ಕುರಿತೂ ಗಮನ ಹರಿಸಬೇಕಿದೆ. ಭಾರತದ ಜೊತೆಗಿನ ಸಂಬಂಧವನ್ನು ಉತ್ತಮಪಡಿಸಿಕೊಳ್ಳುವ ದಿಸೆಯಲ್ಲಿ ಸರ್ಕಾರವು ಕೆಲಸ ಮಾಡಲು ಮುನೀರ್ ಅವರು ಅವಕಾಶ ಕೊಡಬಹುದೇ? ಅಥವಾ ಕದನವಿರಾಮ ಉಲ್ಲಂಘನೆ ಮತ್ತು ಉಗ್ರರನ್ನು ಭಾರತಕ್ಕೆ ಕಳುಹಿಸುವ ಐಎಸ್‌ಐ ಮತ್ತು ಸೇನೆಯ ಈ ಹಿಂದಿನ ಕುತಂತ್ರವನ್ನೇ ಮುನೀರ್‌ ಅವರೂ ಅನುಸರಿಸಲಿದ್ದಾರೆಯೇ?

ಸ್ವಾತಂತ್ರ್ಯ ಬಂದಾಗಿನಿಂದಲೂ ಪಾಕಿಸ್ತಾನದಲ್ಲಿ ಆಳ್ವಿಕೆ ನಡೆಸಿರುವ ಎಲ್ಲ ಸರ್ಕಾರಗಳೂ ಸೇನೆಯ ಮೇಲೆ ಒಂದು ಕಣ್ಣಿಟ್ಟುಕೊಂಡೇ ಇದ್ದವು. ಗಡಿಯಲ್ಲಿನ ಸುರಕ್ಷತೆಯನ್ನು ಖಾತರಿಪಡಿಸುವುದು ಮುನೀರ್‌ ಅವರ ಹೊಣೆಗಾರಿಕೆಯಾಗಿದೆ. ಪಾಕಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಸೇನಾ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಮುನೀರ್ ಅವರು ಸಕಾರಾತ್ಮಕ ಸಂದೇಶ ರವಾನಿಸಬಹುದು. ಈ ಮೂಲಕ ಜನರಿಗೆ ಹೆಚ್ಚು ಉತ್ತರದಾಯಿ ಎನಿಸಿಕೊಳ್ಳಬಹುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು