ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಆರ್‌ಟಿಐ: ವ್ಯವಸ್ಥೆ ದುರ್ಬಲ; ಪೌರರ ಅಧಿಕಾರ ಕಿತ್ತುಕೊಳ್ಳಬೇಡಿ

Published 24 ಅಕ್ಟೋಬರ್ 2023, 23:39 IST
Last Updated 24 ಅಕ್ಟೋಬರ್ 2023, 23:39 IST
ಅಕ್ಷರ ಗಾತ್ರ

ಮಾಹಿತಿ ಹಕ್ಕು ಕಾಯ್ದೆಯು (ಆರ್‌ಟಿಐ) ಜಾರಿಗೆ ಬಂದು 18 ವರ್ಷಗಳು ‍ಪೂರ್ಣಗೊಂಡಿವೆ. ಆದರೆ, ಅದರ ಭವಿಷ್ಯ ಅನಿಶ್ಚಿತವಾಗಿದೆ. ಏಕೆಂದರೆ, ಅದನ್ನು ಜಾರಿಗೆ ತರುವಾಗ ಇದ್ದ ಸದುದ್ದೇಶ ಈಗ ಮರೆತುಹೋಗಿದೆ. ಆರ್‌ಟಿಐಯನ್ನು ಜಾರಿಗೊಳಿಸಲು ಬೇಕಾದ ವ್ಯವಸ್ಥೆಯನ್ನೇ ಕಳೆದ ಕೆಲವು ವರ್ಷಗಳಲ್ಲಿ ದುರ್ಬಲಗೊಳಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಯಾದ ಸತರ್ಕ ನಾಗರಿಕ ಸಂಘಟನೆ (ಎಸ್‌ಎನ್‌ಎಸ್‌), ಮಾಹಿತಿ ಆಯುಕ್ತರ ಕಾರ್ಯಕ್ಷಮತೆ ಕುರಿತಂತೆ ವರದಿಯೊಂದನ್ನು ಸಿದ್ಧಪಡಿಸಿದೆ. ದೇಶದ ಬಹುಭಾಗ
ಗಳಲ್ಲಿ ಈ ವ್ಯವಸ್ಥೆ ನಿಷ್ಕ್ರಿಯವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವ್ಯವಸ್ಥೆಯನ್ನು ವಿವಿಧ ರೀತಿಯಲ್ಲಿ ದುರ್ಬಲಗೊಳಿಸಲಾಗಿದೆ. ಮಾಹಿತಿಗಾಗಿ ಸಲ್ಲಿಕೆಯಾದ ಅರ್ಜಿಗಳು, ದೂರುಗಳು ಮತ್ತು ಮೇಲ್ಮನವಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗಿದ್ದು, ಈಗ ಗರಿಷ್ಠ ಮಟ್ಟಕ್ಕೆ ಮುಟ್ಟಿವೆ. ಹಲವು ಮಾಹಿತಿ ಆಯೋಗಗಳಿಗೆ ಮಾಹಿತಿ ಆಯುಕ್ತರ ನೇಮಕವನ್ನೇ ಮಾಡಿಲ್ಲ. ಹೀಗಾಗಿ, ಆಯೋಗವು
ನಿಷ್ಕ್ರಿಯವಾದಂತಾಗಿದೆ. ಅದರ ಪರಿಣಾಮವಾಗಿ ಕಾಯ್ದೆಯ ವ್ಯಾಪ್ತಿಯೇ ಕುಗ್ಗಿದಂತಾಗಿದೆ. ಆರ್‌ಟಿಐಯ ಉದ್ದೇಶ ಈಡೇರುವುದನ್ನು ತಡೆಯುವ ರೀತಿಯ ಕಾಯ್ದೆಗಳನ್ನು ಸರ್ಕಾರ ರೂಪಿಸಿದೆ. ಆರ್‌ಟಿಐ ಕುರಿತಂತೆ ಸರ್ಕಾರದ ಧೋರಣೆಯು ನಕಾರಾತ್ಮಕವಾಗಿದೆ ಮತ್ತು ಎಲ್ಲ ಹಂತಗಳಲ್ಲಿಯೂ ಆರ್‌ಟಿಐಯನ್ನು ನಿರ್ಬಂಧಿಸಲಾಗುತ್ತಿದೆ. 

ಎಸ್ಎನ್‌ಎಸ್‌ ಸಿದ್ಧಪಡಿಸಿರುವ ವರದಿಯ ಪ್ರಕಾರ, ಮೂರು ರಾಜ್ಯಗಳಲ್ಲಿ ಮಾಹಿತಿ ಆಯೋಗಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. ಐದು ರಾಜ್ಯಗಳ ಆಯೋಗಗಳಿಗೆ ಮುಖ್ಯಸ್ಥರೇ ಇಲ್ಲ. ಕೇಂದ್ರ ಮಾಹಿತಿ ಆಯೋಗದಲ್ಲಿ ಏಳು ಹುದ್ದೆಗಳು ಖಾಲಿ ಇವೆ. ನಾಲ್ವರು ಆಯುಕ್ತರು ಮಾತ್ರ ಕೆಲಸ ಮಾಡುತ್ತಿದ್ದಾರೆ. ನೇಮಕ ಆಗಿರುವ ಆಯುಕ್ತರು ಆ ಹುದ್ದೆಗೆ ಅರ್ಹರೇ ಎಂಬ ಪ್ರಶ್ನೆ ಕೇಳಿಬಂದಿತ್ತು. ಹಾಗೆಯೇ ಅವರ ವಿಶ್ವಾಸಾ
ರ್ಹತೆಯ ಕುರಿತು ಕೂಡ ಸಂದೇಹ ವ್ಯಕ್ತವಾಗಿತ್ತು. ಆಯೋಗಗಳಲ್ಲಿ 3.21 ಲಕ್ಷ ಮೇಲ್ಮನವಿಗಳು ಬಾಕಿ ಇವೆ. ಈಗಿನ ವೇಗದಲ್ಲಿಯೇ ಕೆಲಸಗಳು ನಡೆದರೆ, ಪಶ್ಚಿಮ ಬಂಗಾಳದಲ್ಲಿ ಈ ವರ್ಷ ಜುಲೈ 1ರಂದು ಸಲ್ಲಿಕೆಯಾದ ಮೇಲ್ಮನವಿ ವಿಲೇವಾರಿ ಆಗಲು 24 ವರ್ಷ ಮತ್ತು ಒಂದು ತಿಂಗಳು ಬೇಕು. ಕರ್ನಾಟಕದಲ್ಲಿ 41,047 ಮೇಲ್ಮನವಿಗಳು ವಿಚಾರಣೆಗೆ ಬಾಕಿ ಇವೆ. ಇವೆಲ್ಲವನ್ನೂ ವಿಲೇವಾರಿ ಮಾಡಲು ಒಂದು ವರ್ಷ 11 ತಿಂಗಳು ಬೇಕು. ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗಗಳಿಗೆ ಸಕಾಲಕ್ಕೆ ಆಯುಕ್ತರ ನೇಮಕಕ್ಕೆ ಸರ್ಕಾರಗಳು ಉತ್ಸಾಹ ತೋರುತ್ತಿಲ್ಲ. ಮಾಹಿತಿ ನೀಡಲು ವಿಫಲರಾದ ಅಥವಾ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳಿಗೆ ದಂಡ ವಿಧಿಸುವುದು ಕೂಡ ವಿರಳ. 

ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಮಾಹಿತಿ ಮತ್ತು ಪೌರರಿಗೆ ಬೇಕಾಗಿರುವ ಮಾಹಿತಿಯನ್ನು ಒದಗಿಸಬೇಕು ಎಂಬ ಕಾರಣಕ್ಕೆ ಆರ್‌ಟಿಐ ರೂಪುಗೊಂಡಿದೆ. ಇಂತಹ ಮಾಹಿತಿಯು ಪ್ರಜೆಗಳ ಹಕ್ಕು. ಪಾರದರ್ಶಕತೆ ಇದ್ದಾಗ ಭ್ರಷ್ಟಾಚಾರವು ಸಾಧ್ಯವಾಗುವುದಿಲ್ಲ. ಅದಕ್ಷತೆ, ಸಾರ್ವಜನಿಕ ಸ್ಫೂರ್ತಿಯ ಕೊರತೆ, ಅಹಂಕಾರವು ಅಂಧ ಅಧಿಕಾರದ ಜೊತೆಜೊತೆಗೆ ಸಾಗುತ್ತವೆ. ಜನರಿಗೆ ಮಾಹಿತಿ ಸಿಗಬೇಕು ಎಂಬುದು ಪ್ರಜಾಪ್ರಭುತ್ವದ ಮೂಲಭೂತ ಅಂಶ. ಆದರೆ ಈ ಹಕ್ಕನ್ನು ಈಗ ನಿರ್ಲಕ್ಷಿಸಲಾಗುತ್ತಿದೆ. ಸರ್ಕಾರವು ತಿದ್ದುಪಡಿಯ ಮೂಲಕ  ಮಾಹಿತಿ ಆಯುಕ್ತರ ಸ್ಥಾನಮಾನವನ್ನು ಕುಗ್ಗಿಸಿದೆ. ಡಿಜಿಟಲ್‌ ವೈಯಕ್ತಿಕ ಮಾಹಿತಿ ರಕ್ಷಣೆ ಕಾಯ್ದೆ– 2023 ಜಾರಿಗೆ ಬಂದಿದೆ. ಇದರಿಂದಾಗಿ, ಸಾರ್ವಜನಿಕ ಹುದ್ದೆಯಲ್ಲಿರುವವರ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ಮಹತ್ವ ಇದ್ದಾಗಲೂ ಪಡೆದುಕೊಳ್ಳುವುದು ಅಸಾಧ್ಯವಾಗಿದೆ. ಹಲವು ರಾಜ್ಯಗಳಲ್ಲಿ ಆನ್‌ಲೈನ್‌ ಮೂಲಕ ಆರ್‌ಟಿಐ ಅರ್ಜಿ ಸಲ್ಲಿಕೆಯ ಸೌಲಭ್ಯವೇ ಇಲ್ಲ. ಕೆಲವೆಡೆ ಈ ಸೌಲಭ್ಯ ಇದ್ದರೂ ಅದನ್ನು ಕ್ಲಿಷ್ಟಕರಗೊಳಿಸಲಾಗಿದೆ. ಪೌರರನ್ನು ಸಶಕ್ತಗೊಳಿಸಿದ ಕೆಲವೇ ಕೆಲವು ಕಾಯ್ದೆಗಳಲ್ಲಿ ಆರ್‌ಟಿಐ ಕೂಡ ಒಂದು. ಆದರೆ, ಜನರ ಕೈಗೆ ಕೊಟ್ಟ ಈ ಅಧಿಕಾರವನ್ನು ನಿಧಾನಕ್ಕೆ ಕಸಿದುಕೊಳ್ಳಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT