ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ತೀಸ್ತಾ ಸೆಟಲ್‌ವಾಡ್‌ ಬಂಧನ- ಪ್ರತೀಕಾರದ ಕ್ರಮ

Last Updated 29 ಜೂನ್ 2022, 19:32 IST
ಅಕ್ಷರ ಗಾತ್ರ

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಮತ್ತು ಗುಜರಾತ್‌ನ ಪೊಲೀಸ್ ಮಹಾನಿರ್ದೇಶಕರಾಗಿದ್ದ ಆರ್‌.ಬಿ. ಶ್ರೀಕುಮಾರ್ ಅವರ ವಿರುದ್ಧ ಗುಜರಾತ್ ಪೊಲೀಸರು ದಾಖಲು ಮಾಡಿರುವ ‍ಪ್ರಕರಣಗಳು, ಈ ಇಬ್ಬರ ವಿರುದ್ಧ ರಾಜ್ಯ ಸರ್ಕಾರ ಹಾಗೂ ಪೊಲೀಸರು ತೆಗೆದುಕೊಂಡ ಪ್ರತೀಕಾರದ ಕ್ರಮಗಳಂತೆ ಕಾಣಿಸುತ್ತಿವೆ. 2002ರಲ್ಲಿ ನಡೆದ ಕೋಮು ಗಲಭೆಗಳನ್ನು ಗುಜರಾತ್ ರಾಜ್ಯದ ಆಡಳಿತ ವ್ಯವಸ್ಥೆ ಹಾಗೂ ಅಲ್ಲಿನ ಪೊಲೀಸರು ನಿಭಾಯಿಸಿದ ಬಗೆಯನ್ನು ಇವರಿಬ್ಬರೂ ಪ್ರಶ್ನಿಸಿದ್ದರು. ಅಲ್ಲದೆ, ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಾನೂನು ಸಮರ ಸಾರಿದ್ದರು ಕೂಡ.

ಕೋಮು ಗಲಭೆಗಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳ ತನಿಖೆ ನಡೆಸಿದ ವಿಶೇಷ ತನಿಖಾ ತಂಡವು (ಎಸ್‌ಐಟಿ) ರಾಜ್ಯದ ಆಡಳಿತ ವ್ಯವಸ್ಥೆಗೆ ಹಾಗೂ ಪೊಲೀಸರಿಗೆ ನೀಡಿದ್ದ ಕ್ಲೀನ್‌ ಚಿಟ್‌ ಅನ್ನು ಪ್ರಶ್ನಿಸಿ ಜಾಕಿಯಾ ಜಾಫ್ರಿ ಅರ್ಜಿ ಸಲ್ಲಿಸುವಲ್ಲಿ ತೀಸ್ತಾ ಅವರ ಪಾತ್ರವೂ ಇತ್ತು. ಜಾಕಿಯಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ವಜಾಗೊಳಿಸಿದೆ. ಕೋಮುಗಲಭೆಗಳಲ್ಲಿ ಸಂತ್ರಸ್ತರಾದ ಹಲವರಿಗೆ ನ್ಯಾಯಾಲಯದ ಕದ ತಟ್ಟಲು ತೀಸ್ತಾ ಅವರು ಸಹಾಯ ಮಾಡಿದ್ದರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಕೋಮುಗಲಭೆಗಳು ನಡೆದಿವೆ. ಗಲಭೆಗಳಲ್ಲಿ ಮೋದಿ ಅವರ ಮತ್ತು ಇತರ ಕೆಲವರ ಪಾತ್ರವೂ ಇತ್ತು ಎಂಬ ಅರ್ಥ ಬರುವಂತೆ ಶ್ರೀಕುಮಾರ್ ಅವರು ಕೆಲವು ಹೇಳಿಕೆಗಳನ್ನು ನೀಡಿದ್ದರು. ಶ್ರೀಕುಮಾರ್ ಮತ್ತು ತೀಸ್ತಾ ವಿರುದ್ಧ ದಾಖಲು ಮಾಡಲಾಗಿರುವ ಎಫ್‌ಐಆರ್‌ನಲ್ಲಿ (ಪ್ರಥಮ ಮಾಹಿತಿ ವರದಿ) ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಹೆಸರೂ ಇದೆ. ಭಟ್ ಅವರು ಇನ್ನೊಂದು ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿದ್ದಾರೆ.

‘ವಿಚಾರ ತಣ್ಣಗಾಗಲು ಬಿಡಬಾರದು ಎಂಬ ಉದ್ದೇಶದಿಂದ ರಾಜ್ಯದ ಅತೃಪ್ತ ಅಧಿಕಾರಿಗಳು, ಬಹಿರಂಗವಾಗಿ ಹೇಳಲು ಆಗದಂತಹ ಉದ್ದೇಶಕ್ಕಾಗಿ... ಪ್ರಕ್ರಿಯೆಗಳನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳುವವರು ಕಾನೂನು ಕ್ರಮ ಎದುರಿಸಬೇಕು, ಅವರ ವಿರುದ್ಧ ಕಾನೂನಿಗೆ ಅನುಗುಣವಾಗಿ ಕ್ರಮ ಜರುಗಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದ ನಂತರದಲ್ಲಿ ಈ ಇಬ್ಬರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯ ಆಡಿದ ಮಾತುಗಳನ್ನು ಗಮನಿಸಿ ಪೊಲೀಸರು ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.ಆದರೆ, ಗಲಭೆಗಳಲ್ಲಿ ಸಂತ್ರಸ್ತರಾದ ಹಲವರ ಜೊತೆ ನಿಂತುಕೊಂಡ, ನ್ಯಾಯ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿದ ಹಲವರ ಜೊತೆಗೂ ಇದ್ದ ವ್ಯಕ್ತಿಗಳ ವಿರುದ್ಧ ಪೊಲೀಸರು ನ್ಯಾಯಾಲಯ ಆಡಿರುವ ಮಾತುಗಳ ಆಧಾರದಲ್ಲಿ ಕ್ರಮಕ್ಕೆ ಮುಂದಾದಂತಹ ಸನ್ನಿವೇಶ ನಿರ್ಮಾಣವಾಗಿರುವುದು ವಿಷಾದಕರ.

ನ್ನೊಂದು ಪ್ರಕರಣದಲ್ಲಿ ತೀಸ್ತಾ ವಿರುದ್ಧ ಮಾಡಿದ್ದ ಆರೋಪಗಳನ್ನು ನ್ಯಾಯಾಲಯವು ಬೇರೆ ಒಂದು ಸಂದರ್ಭದಲ್ಲಿ ‘ಸುಳ್ಳು’ ಎಂದು ಕರೆದಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಈಗ ಆರೋಪಿಗಳ ವಿರುದ್ಧ ‘ಕ್ರಿಮಿನಲ್ ಪಿತೂರಿ, ನಕಲಿ ದಾಖಲೆ ಸೃಷ್ಟಿ, ಅಮಾಯಕರನ್ನು ಸಿಲುಕಿಸಲು ನ್ಯಾಯಾಲಯದಲ್ಲಿ ತಪ್ಪು ಸಾಕ್ಷ್ಯಗಳನ್ನುಸಲ್ಲಿಸಿದ’ ಆರೋಪ ಹೊರಿಸಲಾಗಿದೆ. ಮೂವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ. ಇದು ಸುಪ್ರೀಂ ಕೋರ್ಟ್‌ನ ಸೂಚನೆಯ ಅನುಸಾರ ಎಂದು ಅವರು ಹೇಳಿದ್ದಾರೆ. ‘ತೆರೆಯ ಹಿಂದಿನ ಪಿತೂರಿ, ಹಣಕಾಸು ಮತ್ತು ಇತರ ಲಾಭಗಳು, ಇತರರ ಜೊತೆ ಷಾಮೀಲಾಗಿ ಗಂಭೀರ ಅಪರಾಧ ಎಸಗಲು ಆಮಿಷ ಒಡ್ಡಿದ್ದು’ ಮುಂತಾದವುಗಳನ್ನು ಪತ್ತೆ ಮಾಡುವ ಉದ್ದೇಶ ಪೊಲೀಸರಿಗೆ ಇದೆ.

ಸರ್ಕಾರ ಹಾಗೂ ಅದರ ನಾಯಕರನ್ನು ಟೀಕಿಸುವವರು, ಅವರಲ್ಲಿ ತಪ್ಪು ಹುಡುಕುವವರು ಮುಂದೊಂದು ದಿನ ಒಂದಲ್ಲ ಒಂದು ರೀತಿಯಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಸಂದೇಶವನ್ನು ಈ ಮೂವರ ವಿರುದ್ಧ ತೆಗೆದುಕೊಂಡಿರುವ ಕ್ರಮವು ನೀಡುತ್ತಿದೆ. ಹಿಂದೆ ನಡೆದ ಹಲವು ಬಂಧನಗಳು ಕೂಡ ಇದೇ ಸಂದೇಶವನ್ನು ರವಾನಿಸಿವೆ ಎಂಬುದು ನಿಜ. ಸುಪ್ರೀಂ ಕೋರ್ಟ್‌ ಆಡಿರುವ ಮಾತುಗಳು ಪ್ರಾಸಂಗಿಕ ಮಾತ್ರ. ತೀಸ್ತಾ ಮತ್ತು ಶ್ರೀಕುಮಾರ್ ಬಂಧನವನ್ನು ಹಲವರು ಖಂಡಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು ಎಂದು ಹಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಆಗ್ರಹಿಸಿದ್ದಾರೆ. ನ್ಯಾಯವನ್ನು ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತುವವರನ್ನು ಪೀಡಿಸುವ, ಶಿಕ್ಷಿಸುವ ಕೆಲಸ ಆಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT