ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Prjavani Editorial | ಶರಾವತಿ ಯೋಜನೆ ಸಂತ್ರಸ್ತರನ್ನು ಅಭದ್ರತೆಯಿಂದ ರಕ್ಷಿಸಿ

ಫಾಲೋ ಮಾಡಿ
Comments

ಸಾರ್ವಜನಿಕ ಬಳಕೆಯ ಉದ್ದೇಶ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಂದ ಜಮೀನು, ನೆಲೆ ಕಳೆದುಕೊಂಡು ಸಂತ್ರಸ್ತರಾದವರ ಪುನರ್ವಸತಿಗಾಗಿ ಅರಣ್ಯ ಜಮೀನನ್ನು ಅರಣ್ಯೇತರ ಉದ್ದೇಶಗಳಿಗೆ ಬಳಕೆ ಮಾಡಲು ಡಿನೋಟಿಫೈ ಮಾಡಿ 1994ರಿಂದ 2017ರವರೆಗೆ ಹೊರಡಿಸಿದ್ದ 56 ಅಧಿಸೂಚನೆ ಗಳನ್ನು ಅರಣ್ಯ ಇಲಾಖೆಯು ರದ್ದುಗೊಳಿಸಿದೆ.

ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಅರಣ್ಯ ಜಮೀನನ್ನು ಕರ್ನಾಟಕ ಅರಣ್ಯ ಕಾಯ್ದೆ–1963ರ ಸೆಕ್ಷನ್‌ 28ರ ಅಡಿಯಲ್ಲಿ ಡಿನೋಟಿಫೈ ಮಾಡಿ ಆದೇಶ ಹೊರಡಿಸಲಾಗಿತ್ತು. ಅಂತಹ ಎಲ್ಲ ಆದೇಶಗಳನ್ನು ರದ್ದುಗೊಳಿಸಿರುವ ಅರಣ್ಯ ಇಲಾಖೆಯು ಹತ್ತಾರು ಸಾವಿರ ಎಕರೆ ಜಮೀನನ್ನು ಅರಣ್ಯ ಪ್ರದೇಶ ಎಂಬುದಾಗಿ ಪುನಃ ಘೋಷಿಸಿದೆ. ಈ ಆದೇಶವು ಪರಿಸರವಾದಿಗಳಿಗೆ ಖುಷಿ ತಂದಿರಬಹುದು. ಆದರೆ, 1960ರ ದಶಕದಲ್ಲಿ ಶರಾವತಿ ಜಲ ವಿದ್ಯುತ್‌ ಯೋಜನೆಗಾಗಿ ಮನೆ, ಜಮೀನು ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಇದೇ ಆದೇಶವು ಆತಂಕಕ್ಕೆ ತಳ್ಳಿದೆ.

ಡಿನೋಟಿಫಿಕೇಷನ್‌ ಆದೇಶಗಳನ್ನು ರದ್ದುಪಡಿಸಿ ಪುನಃ ಅರಣ್ಯ ಪ್ರದೇಶ ಎಂದು ಘೋಷಿಸಲಾಗಿರುವ ಜಮೀನಿನಲ್ಲಿ ಸುಮಾರು 10,000 ಎಕರೆಯಷ್ಟು ಪ್ರದೇಶವು ಶರಾವತಿ ಜಲ ವಿದ್ಯುತ್‌ ಯೋಜನೆಯಿಂದ ಸಂತ್ರಸ್ತವಾದ ಕುಟುಂಬಗಳ ಪುನರ್ವಸತಿಗೆ ಬಳಕೆಯಾಗಿತ್ತು. ಅರಣ್ಯ ಜಮೀನನ್ನು ಡಿನೋಟಿಫೈ ಮಾಡಿದ್ದ 56 ಅಧಿಸೂಚನೆಗಳನ್ನು ರದ್ದುಗೊಳಿಸಿ 2022ರ ಸೆಪ್ಟೆಂಬರ್‌ 28ರಂದು ಅರಣ್ಯ ಇಲಾಖೆ ಆದೇಶ ಹೊರಡಿಸಿತ್ತು. ಇದೇ ಫೆಬ್ರುವರಿ 16ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 1920 ಮತ್ತು 1926ರಲ್ಲಿ ‘ರಾಜ್ಯ ಅರಣ್ಯ’ ಎಂದು ಅಧಿಸೂಚನೆ ಹೊರಡಿಸಿದ್ದ ಎರಡು ಪ್ರದೇಶಗಳನ್ನು ಶರಾವತಿ ಸಂತ್ರಸ್ತರ ಪುನರ್ವಸತಿಗಾಗಿ ಡಿನೋಟಿಫೈ ಮಾಡಿ 2017ರಲ್ಲಿ ಹೊರಡಿಸಿದ್ದ ಆದೇಶವೊಂದನ್ನು ಪ್ರಶ್ನಿಸಿ ಗಿರೀಶ್‌ ಆಚಾರ್‌ ಎಂಬ ಪರಿಸರವಾದಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಕರ್ನಾಟಕ ಅರಣ್ಯ ಕಾಯ್ದೆ–1963ರ ಸೆಕ್ಷನ್‌ 28ರ ಅಡಿಯಲ್ಲಿ ಅರಣ್ಯ ಜಮೀನನ್ನು ಡಿನೋಟಿಫೈ ಮಾಡುವ ಮೊದಲು ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಸೆಕ್ಷನ್‌–2ರ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್‌ ವಿಭಾಗೀಯ ಪೀಠ 2021ರಲ್ಲಿ ತೀರ್ಪು ನೀಡಿತ್ತು. ‘ಅರಣ್ಯ ಸಂರಕ್ಷಣಾ ಕಾಯ್ದೆ–1980 ಜಾರಿಯಾದ ಬಳಿಕ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೇ ಕರ್ನಾಟಕ ಅರಣ್ಯ ಕಾಯ್ದೆ–1963ರ ಸೆಕ್ಷನ್‌–28ರ ಅಡಿಯಲ್ಲಿ ಅರಣ್ಯ ಜಮೀನನ್ನು ಡಿನೋಟಿಫೈ ಮಾಡಿ ಹೊರಡಿಸಲಾಗಿರುವ ಎಲ್ಲ ಆದೇಶಗಳು ಕಾನೂನುಬಾಹಿರ’ ಎಂದು ನ್ಯಾಯಾಲಯ ಹೇಳಿತ್ತು. ಈ ಪ್ರಕರಣದಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಅಭಿಪ್ರಾಯ ನೀಡಿದ್ದ ಕಾನೂನು ಇಲಾಖೆಯು ‘ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದ ಅಧಿಸೂಚನೆಯಂತೆಯೇ ಇರುವ ಇತರ ಅಧಿಸೂಚನೆಗಳನ್ನು ಹಿಂಪಡೆಯದಿದ್ದರೆ ನ್ಯಾಯಾಂಗ ನಿಂದನೆಯ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಹೇಳಿತ್ತು. ನ್ಯಾಯಾಂಗ ನಿಂದನೆಯ ತೂಗುಗತ್ತಿಯಿಂದ ‍ಪಾರಾಗಲು 56 ಅಧಿಸೂಚನೆಗಳನ್ನು ಹಿಂಪಡೆಯಲಾಗಿದೆ.

ಸಂತ್ರಸ್ತ ಕುಟುಂಬಗಳು ಸ್ಥಳಾಂತರಗೊಂಡು ಹಲವು ದಶಕಗಳೇ ಕಳೆದರೂ ನೆಲೆ ನಿಂತ ಜಾಗದ ಮೇಲಿನ ಹಕ್ಕು ಪಡೆಯಲು ಈವರೆಗೂ ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆ ಸಮೀಪಿಸಿರುವಾಗಲೇ ಅರಣ್ಯ ಜಮೀನು ಡಿನೋಟಿಫೈ ಅಧಿಸೂಚನೆಗಳೂ ರದ್ದುಗೊಂಡಿರುವುದು ರಾಜಕೀಯ ಕಾವು ಏರಲು ಕಾರಣವಾಗಿದೆ. ಶರಾವತಿ ಯೋಜನೆ ಸಂತ್ರಸ್ತರ ಪುನರ್ವಸತಿಗಾಗಿ ಅರಣ್ಯ ಜಮೀನನ್ನು ಡಿನೋಟಿಫೈ ಮಾಡಿರುವ ನಿರ್ಧಾರಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಶಿವಮೊಗ್ಗ ಜಿಲ್ಲೆಯವರೇ ಆಗಿರುವ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರು ನಡೆಸಿದ ಪ್ರಯತ್ನ ಫಲ ನೀಡಿಲ್ಲ.

ತಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ಸಂತ್ರಸ್ತರ ರಕ್ಷಣೆಗಾಗಿ ಕೈಗೊಂಡಿದ್ದ ತೀರ್ಮಾನಗಳನ್ನು ಹೈಕೋರ್ಟ್‌ನಲ್ಲಿ ಸರಿಯಾಗಿ ಸಮರ್ಥಿಸಿಕೊಳ್ಳುವಲ್ಲಿ ಈಗಿನ ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಸಂತ್ರಸ್ತರ ಪುನರ್ವಸತಿ ಉದ್ದೇಶಕ್ಕೆ ಒದಗಿಸಿದ ಜಮೀನಿನ ಹಂಚಿಕೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ, ಅನರ್ಹರಿಗೆ ಈ ಯೋಜನೆಯಡಿ ಜಮೀನು ಹಂಚಿಕೆ ಮಾಡಲಾಗಿದೆ ಎಂಬ ಆರೋಪಗಳೂ ಇವೆ. ಶರಾವತಿ ಸಂತ್ರಸ್ತರ ಪುನರ್ವಸತಿಗಾಗಿ ಮೊದಲು ಗುರುತಿಸಿದ್ದ ಕಂದಾಯ ಜಮೀನನ್ನು ಕೆಲವು ಪ್ರಭಾವಿಗಳು ಅತಿಕ್ರಮಿಸಿಕೊಂಡಿದ್ದು, ಈ ಕಾರಣದಿಂದಾಗಿಯೇ ಅರಣ್ಯ ಜಮೀನನ್ನು ಒದಗಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು ಎಂಬ ದೂರುಗಳೂ ಕೇಳಿಬಂದಿವೆ.

ಅರಣ್ಯ ಜಮೀನನ್ನು ಯಥಾಸ್ಥಿತಿಯಲ್ಲಿ ರಕ್ಷಿಸಬೇಕು ಎಂಬುದರಲ್ಲಿ ಎರಡನೇ ಅಭಿಪ್ರಾಯವಿಲ್ಲ. ಆದರೆ, ಶರಾವತಿ ಜಲ ವಿದ್ಯುತ್‌ ಯೋಜನೆಗಾಗಿ ಸರ್ವಸ್ವವನ್ನೂ ಕಳೆದುಕೊಂಡು ಸಂತ್ರಸ್ತವಾದ ಕುಟುಂಬಗಳಿಗೆ ಸರಿಯಾಗಿ ಪುನರ್ವಸತಿ ಕಲ್ಪಿಸುವುದೂ ಅಷ್ಟೇ ಮುಖ್ಯ. ಹೀಗೆ ಜಮೀನು, ಮನೆ ಕಳೆದುಕೊಂಡು ಬೀದಿಗೆ ಬಿದ್ದ ಹಲವು ಕುಟುಂಬಗಳಲ್ಲಿ ಎರಡು, ಮೂರನೆಯ ತಲೆಮಾರುಗಳ ಜನರೂ ಭವಿಷ್ಯದ ಕುರಿತು ಅತಂತ್ರ ಸ್ಥಿತಿ ಅನುಭವಿಸಬೇಕಾದ ಸನ್ನಿವೇಶ ಮುಂದುವರಿದಿರುವುದು ದುರದೃಷ್ಟಕರ.

ಇಂತಹ ದುಃಸ್ಥಿತಿ ಇನ್ನೂ ಮುಂದುವರಿಯಲು ಬಿಡಬಾರದು. ಸಂತ್ರಸ್ತರ ಪುನರ್ವಸತಿಗಾಗಿ ಮೀಸಲಿಟ್ಟಿದ್ದ ಕಂದಾಯ ಜಮೀನಿನ ಒತ್ತುವರಿ ಪತ್ತೆಮಾಡಿ ತೆರವುಗೊಳಿಸಬೇಕು. ಈಗಾಗಲೇ ಸಂತ್ರಸ್ತ ಕುಟುಂಬಗಳ ಸ್ವಾಧೀನದಲ್ಲಿರುವ ಅರಣ್ಯ ಜಮೀನನ್ನು ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಅಡಿಯಲ್ಲಿ ಕೇಂದ್ರದ ಅನುಮತಿ ಪಡೆದು ಪುನರ್ವಸತಿ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆ ಮೂಲಕ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳ ಭವಿಷ್ಯದ ಮೇಲೆ ಕವಿ ದಿರುವ ಆತಂಕದ ಕಾರ್ಮೋಡವನ್ನು ಸರಿಸುವ ಕೆಲಸವನ್ನು ರಾಜ್ಯ ಸರ್ಕಾರ ಬದ್ಧತೆಯಿಂದ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT