ಗುರುವಾರ , ಆಗಸ್ಟ್ 18, 2022
23 °C

ಸಂಪಾದಕೀಯ| ಪೆಗಾಸಸ್‌ ಕಣ್ಗಾವಲು ಪ್ರಕರಣ: ನುಣುಚಿಕೊಳ್ಳುವುದು ಬೇಡ, ತನಿಖೆ ಆಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತದ ಗಣನೀಯ ಸಂಖ್ಯೆಯ ಜನರ ‍ಮೊಬೈಲ್‌ಗಳಿಗೆ ಪೆಗಾಸಸ್‌ ಎಂಬ ಕುತಂತ್ರಾಂಶ ವನ್ನು (ಮಾಲ್‌ವೇರ್‌) ನುಗ್ಗಿಸಿ, ಅವರ ಮೇಲೆ ಗೂಢಚರ್ಯೆ ನಡೆಸಲು ಯತ್ನಿಸಲಾಗಿದೆ ಎಂಬುದು ಬಹಿರಂಗವಾಗಿದೆ. ಇದು ನೈತಿಕ, ರಾಜಕೀಯ ಮತ್ತು ಕಾನೂನಿನ ಗಂಭೀರ ಪ್ರಶ್ನೆ ಗಳನ್ನು ಮೂಡಿಸಿದೆ. ಸಾಂವಿಧಾನಿಕ ಪದ್ಧತಿಗಳು ಮತ್ತು ಪ್ರಜಾಸತ್ತಾತ್ಮಕ ನಡತೆಯ ಮೇಲೆ ಪರಿಣಾಮ ಬೀರುವಂತಹದ್ದು. ಇಸ್ರೇಲ್‌ನ ಎನ್‌ಎಸ್ಒ ಗ್ರೂಪ್‌ ಎಂಬ ಕಂಪನಿಯು ಈ ಕುತಂತ್ರಾಂಶವನ್ನು ಪೂರೈಸುತ್ತಿದೆ. ಕಣ್ಗಾವಲಿನ ಗುರಿಯಾಗಿದ್ದವರ ಬಗೆಗಿನ ಮಾಹಿತಿಯು ಸೋರಿಕೆಯಾಗಿದೆ. ಹೀಗೆ ಸೋರಿಕೆಯಾದ ಮಾಹಿತಿಯಲ್ಲಿದ್ದ ದೂರವಾಣಿ ಸಂಖ್ಯೆಗಳ ಪೈಕಿ 300 ಸಂಖ್ಯೆಗಳು ಯಾರಿಗೆ ಸೇರಿದವು ಎಂಬುದನ್ನು ಗುರುತಿಸಲಾಗಿದೆ. ಈಗ ಕೇಂದ್ರದಲ್ಲಿ ಸಚಿವರಾಗಿ ಇರುವವರು, ವಿರೋಧ ಪಕ್ಷಗಳ ನಾಯಕರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಹಕ್ಕುಗಳ ಹೋರಾಟಗಾರರು, ವಕೀಲರು, ಪತ್ರಕರ್ತರು ಸೇರಿದಂತೆ ಹಲವು ಮಂದಿಯ ಮೇಲೆ ಗೂಢಚರ್ಯೆ ನಡೆಸಲು ಉದ್ದೇಶಿಸ ಲಾಗಿತ್ತು ಎಂಬುದು ಮಾಹಿತಿ ಸೋರಿಕೆಯಿಂದ ಬಯಲಿಗೆ ಬಂದಿದೆ. ಸೋರಿಕೆಯು ಇನ್ನೊಂದು ಮಹತ್ವದ ಅಂಶಕ್ಕೂ ಬೆಳಕು ಚೆಲ್ಲಿದೆ– ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗೂಢಚರ್ಯೆಯ ಗುರಿಯಾಗಿದ್ದರು ಎಂದು ವರದಿಯು ಹೇಳಿದೆ; ಜತೆಗೆ ಅವರ ನಿಕಟ ವರ್ತಿಗಳ ಮೇಲೆಯೂ ನಿಗಾ ಇರಿಸಲಾಗಿದೆ ಎಂಬುದು ಹೊಸ ಅರಿವು. ಈಗ ಕೇಂದ್ರದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ಅಶ್ವಿನಿ ವೈಷ್ಣವ್‌ ಅವರೂ ಕಣ್ಗಾವಲಿನಲ್ಲಿದ್ದ ವ್ಯಕ್ತಿಗಳ ಪಟ್ಟಿಯಲ್ಲಿ ಇದ್ದರು. 

ಇಂತಹುದೊಂದು ನಿಗಾ ವ್ಯವಸ್ಥೆಯು ಸರ್ಕಾರದಿಂದ ನೇರವಾಗಿ ಅಥವಾ ಸರ್ಕಾರದ ಒತ್ತಾಸೆಯಿಂದ ಮಾತ್ರ ನಡೆಯಲು ಸಾಧ್ಯ ಎಂಬುದು ಸ್ಪಷ್ಟ. ಆದರೆ, ಈ ಗೂಢಚರ್ಯೆಯ ಜತೆಗೆ ಯಾವುದೇ ಸಂಬಂಧ ಇಲ್ಲ, ಇದರ ಹೊಣೆಗಾರಿಕೆ ಹೊರಲೂ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ಮುನ್ನಾದಿನವೇ ಗೂಢಚರ್ಯೆ ಮಾಹಿತಿ ಸೋರಿಕೆಯ ವರದಿ ಪ್ರಕಟವಾಗಿರುವುದು ಭಾರತದ ಪ್ರಜಾಪ್ರಭುತ್ವದ ಹೆಸರು ಕೆಡಿಸುವ ಪ್ರಯತ್ನದ ಭಾಗ ಎಂದು ಸ್ವತಃ ಸಂತ್ರಸ್ತರೂ ಆಗಿರುವ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. ಸರ್ಕಾರ ಮತ್ತು ಸಚಿವ ಅಶ್ವಿನಿ ಅವರು ಕಡೆಗಣಿಸಿರುವ ಒಂದು ಅಂಶ ಇಲ್ಲಿ ಇದೆ. ಬಹಿರಂಗವಾಗಿರುವ ಮಾಹಿತಿಯು ಭಾರತಕ್ಕೆ ಮಾತ್ರ ಸಂಬಂಧಿಸಿದ್ದು ಅಲ್ಲ. ಹಾಗೆಯೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು ಅಂತರರಾಷ್ಟ್ರೀಯ ಮಟ್ಟದ ತನಿಖಾ ಸಂಸ್ಥೆ. ಜಗತ್ತಿನಾದ್ಯಂತ 50 ಸಾವಿರಕ್ಕೂ ಹೆಚ್ಚು ಜನರ ಮೊಬೈಲ್‌ ಫೋನ್‌ಗೆ ‍ಪೆಗಾಸಸ್‌ ಕುತಂತ್ರಾಂಶವು ನುಸುಳುವಂತೆ ಮಾಡಲಾಗಿದೆ ಎಂದು ಈ ಸಂಸ್ಥೆಯ ವರದಿಯು ಹೇಳಿದೆ. ಹಾಗಾಗಿ, ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಹಿಂದಿನ ದಿನವೇ ಈ ಮಾಹಿತಿ ಬಹಿರಂಗಪಡಿಸಬೇಕು ಎಂಬ ವಿಚಾರದಲ್ಲಿ ಯಾರಿಗೂ ಆಸಕ್ತಿ ಇರುವುದಕ್ಕೆ ಸಾಧ್ಯ ಇಲ್ಲ. ಅದೇನೇ ಇರಲಿ. ಇಲ್ಲಿ ಈಗ ಸಮಯ ಯಾವುದು ಎಂಬುದು ಮುಖ್ಯ ಅಲ್ಲವೇ ಅಲ್ಲ, ಬದಲಿಗೆ ಬಹಿರಂಗವಾಗಿರುವ ವಿಚಾರವೇ ಹೆಚ್ಚು ಮಹತ್ವದ್ದಾಗಿದೆ. ಇದಕ್ಕೆ ಸಂಬಂಧಿಸಿದಂತಹ ಕೆಲವು ವರದಿಗಳು ಎರಡು ವರ್ಷಗಳ ಹಿಂದೆಯೂ ಬಹಿರಂಗ ಆಗಿದ್ದವು. ಹಾಗಾಗಿಯೇ, ಕುತಂತ್ರಾಂಶದ ಮೂಲಕ ಗೂಢಚರ್ಯೆಯ ವಿಚಾರವು ಬಹಳ ಹಿಂದೆಯೇ ಬಹಿರಂಗವಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಈಗಾಗಲೇ ಉತ್ತರ ಕೂಡ ನೀಡಲಾಗಿದೆ ಎಂಬುದು ಕೇಂದ್ರ ಸರ್ಕಾರದ ನಿಲುವು. ಈ ಉತ್ತರ ಕೂಡ ದಾರಿ ತಪ್ಪಿಸುವಂತಹುದೇ ಆಗಿದೆ. ಪೆಗಾಸಸ್‌ ಕುತಂತ್ರಾಂಶವನ್ನು ಖರೀದಿಸಲಾಗಿದೆಯೇ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ 2019ರಲ್ಲಿ ಪ್ರಶ್ನೆ ಕೇಳಲಾಗಿತ್ತು. ಕುತಂತ್ರಾಂಶ ಖರೀದಿಯನ್ನು ಸರ್ಕಾರವು ಆಗ ನಿರಾಕರಿಸಿರಲಿಲ್ಲ. 

ಸರ್ಕಾರ ಎಷ್ಟೇ ನಿರಾಕರಿಸಿದರೂ ಪೆಗಾಸಸ್‌ ಕುತಂತ್ರಾಂಶದ ಮೂಲಕ ಗೂಢಚರ್ಯೆ ನಡೆಸಿದವರು ಯಾರು ಎಂದರೆ ಮೊದಲ ಅನುಮಾನ ಸರ್ಕಾರದ ಬಗ್ಗೆಯೇ ಬರುತ್ತದೆ. ಪೆಗಾಸಸ್‌ ಕುತಂತ್ರಾಂಶವನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುವುದಾಗಿ ಇಸ್ರೇಲ್‌ನ ಕಂಪನಿ ಎನ್‌ಎಸ್‌ಒ ಗ್ರೂಪ್‌ ಹೇಳಿದೆ. ಆದರೆ, ಭಾರತ ಸರ್ಕಾರಕ್ಕೆ ಮಾರಾಟ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಕಂಪನಿಯು ನಿರಾಕರಿಸಿದೆ. ನಿಚ್ಚಳವಾಗಿರುವ ಇನ್ನೊಂದು ಅಂಶವೂ ಸರ್ಕಾರದತ್ತಲೇ ಬೊಟ್ಟು ಮಾಡುತ್ತದೆ. ಗೂಢಚರ್ಯೆಯ ಪಟ್ಟಿಯಲ್ಲಿದ್ದವರಲ್ಲಿ ಹೆಚ್ಚಿನವರು ಸರ್ಕಾರದ ವಿರುದ್ಧ ಇರುವವರು ಅಥವಾ ಕಿರುಕುಳ ನೀಡಬೇಕು ಎಂದು ಸರ್ಕಾರ ಬಯಸಬಹುದಾದ ಸಾಧ್ಯತೆ ಇರುವವರು. ಸರ್ಕಾರವನ್ನು ಬೆಂಬಲಿಸುವವರ ಮೇಲೆ ಕೂಡ ವಿಶೇಷ ಕಾರಣಗಳಿಗಾಗಿ ನಿಗಾ ಇರಿಸಲಾಗಿದೆ ಎಂದು ವರದಿಯು ಹೇಳುತ್ತಿದೆ. ಗೂಢಚರ್ಯೆ ಆರೋಪದ ಬಗ್ಗೆ ಸ್ವತಂತ್ರವಾದ ತನಿಖೆ ನಡೆಯಬೇಕು. ಗೂಢಚರ್ಯೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಗುರುತಿಸಬೇಕು ಮತ್ತು ಕೃತ್ಯದ ಹೊಣೆಯನ್ನು ಅವರ ಮೇಲೆ ಹೊರಿಸಬೇಕು. ಇಡೀ ಪ್ರಕರಣ
ದಲ್ಲಿ ತನಗೆ ಯಾವುದೇ ಪಾತ್ರ ಇಲ್ಲ ಎಂದಾದರೆ, ತನಿಖೆಗೆ ಸಂಬಂಧಿಸಿ ವಿಶೇಷ ಮುತುವರ್ಜಿಯನ್ನು ಸರ್ಕಾರವು ವಹಿಸಬೇಕು. ಇಷ್ಟು ದೊಡ್ಡ ಮಟ್ಟದ ಗೂಢಚರ್ಯೆಯ ಬಗೆಗಿನ ಸತ್ಯವು ಬಯಲಾಗಬೇಕು. ಈ ರೀತಿಯ ಗೂಢಚರ್ಯೆಯು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ; ಪೆಗಾಸಸ್‌ ಪ್ರಕರಣದ ವರದಿಯೇ ಷಡ್ಯಂತ್ರ ಎಂದು ತಳ್ಳಿಹಾಕುವುದು ಸರಿಯಾದ ನಡೆ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯು ಕಣ್ಗಾವಲು ಮತ್ತು ಪೌರರ ಖಾಸಗಿತನದ ಉಲ್ಲಂಘಿಸುವಿಕೆ ಮೂಲಕ ನಡೆಯುವುದು ಸಾಧ್ಯವಿಲ್ಲ. ರಾಜಕೀಯ ಕಾರಣಗಳಿಗಾಗಿ, ಕಾನೂನುಬಾಹಿರವಾಗಿ ಗೂಢಚರ್ಯೆ ನಡೆಸುವ ಸರ್ಕಾರವು ಪ್ರಜಾಸತ್ತಾತ್ಮಕ ನ್ಯಾಯಸಮ್ಮತಿಯನ್ನು ಕಳೆದುಕೊಳ್ಳುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು