ಮಂಗಳವಾರ, ಜೂನ್ 28, 2022
25 °C

ಸಂಪಾದಕೀಯ | ಪಂಜಾಬ್: ಕಳಂಕಿತ ಸಚಿವನ ವಜಾ, ಭ್ರಷ್ಟಾಚಾರದ ವಿರುದ್ಧ ಪ್ರಮುಖ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಚದ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ವಿಜಯ್‌ ಸಿಂಗ್ಲಾ ಅವರನ್ನು ಸಂಪುಟದಿಂದ ವಜಾ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ಅವರ ಕ್ರಮ ಭ್ರಷ್ಟಾಚಾರವನ್ನು ಹತ್ತಿಕ್ಕುವ ದಿಸೆಯಲ್ಲಿ ಮಹತ್ವದ ಹೆಜ್ಜೆ. ಆರೋಗ್ಯ ಇಲಾಖೆಯ ಟೆಂಡರ್‌ಗಳು ಮತ್ತು ಖರೀದಿ ಪ್ರಕ್ರಿಯೆಗಳಲ್ಲಿ ಶೇ 1ರಷ್ಟು ಕಮಿಷನ್‌ಗೆ ಸಚಿವರು ಬೇಡಿಕೆಯಿಟ್ಟಿದ್ದರು ಎನ್ನುವ ಆರೋಪ ಕೇಳಿಬಂದ ತಕ್ಷಣವೇ ಮಾನ್‌ ಅವರು ತಮ್ಮ ಸಹೋದ್ಯೋಗಿಯನ್ನು ಸಂಪುಟದಿಂದ ಕೈಬಿಟ್ಟಿದ್ದಾರೆ ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ. ಎರಡು ತಿಂಗಳ ಪ್ರಾಯದ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಪ್ರೌಢವಾಗಿರುವುದಷ್ಟೇ ಅಲ್ಲ, ದಿಟ್ಟತನದಿಂದಲೂ ಕೂಡಿದೆ.

ಭ್ರಷ್ಟಾಚಾರದ ಬಗ್ಗೆ ರಾಜಕಾರಣಿಗಳು ದಪ್ಪ ಚರ್ಮ ಬೆಳೆಸಿಕೊಂಡಿರುವ ಹಾಗೂ ಪ್ರಜಾಪ್ರತಿನಿಧಿಗಳ ಪ್ರಾಮಾಣಿಕತೆಯ ಬಗ್ಗೆ ಜನ ನಂಬಿಕೆ ಕಳೆದುಕೊಂಡಿರುವ ಸನ್ನಿವೇಶದಲ್ಲಿ, ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರದ ನಡೆ ರಾಜಕಾರಣದಲ್ಲಿನ ನೈತಿಕತೆಯ ಬಗ್ಗೆ ಸಮಾಜದಲ್ಲಿ ಮರಳಿ ವಿಶ್ವಾಸ ಮೂಡಿಸುವ ಪ್ರಯತ್ನವಾಗಿದೆ. ಜನರಿಂದ ಚುನಾಯಿತವಾದ ಸರ್ಕಾರವು ಮತದಾರರಿಗೆ ಸದಾ ಉತ್ತರದಾಯಿ ಎಂಬುದನ್ನು ಸಾಬೀತುಪಡಿಸುವ ನಡೆಯೂ ಹೌದು. ‘ಎಎಪಿ ಸರ್ಕಾರವು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ’ ಎಂದು ಭಗವಂತ ಮಾನ್ ಹೇಳಿದ್ದಾರೆ.

‘ಎಎಪಿ ಸರ್ಕಾರ’ ಮಾತ್ರವಲ್ಲ, ಯಾವುದೇ ಜವಾಬ್ದಾರಿಯುತ ಸರ್ಕಾರ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬಾರದು. ದುರದೃಷ್ಟವಶಾತ್‌, ಸಮಕಾಲೀನ ರಾಜಕಾರಣದಲ್ಲಿ ಭ್ರಷ್ಟಾಚಾರದ ವಿರುದ್ಧದ ಮಾತುಗಳೆಲ್ಲವೂ ಭಾಷಣಗಳಿಗಷ್ಟೇ ಸೀಮಿತವಾಗಿವೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಬಹಿರಂಗವಾಗಿ ಆರೋಪಿಸಿದ್ದರು. ಬಹುತೇಕ ಸಚಿವರು ಹಾಗೂ ಶಾಸಕರು ಭ್ರಷ್ಟರಾಗಿದ್ದು, ಆ ಬಗ್ಗೆ ತಮ್ಮಲ್ಲಿ ಸಾಕ್ಷ್ಯಗಳಿರುವುದಾಗಿಯೂ ಅವರು ಹೇಳಿದ್ದರು. ಸರ್ಕಾರಿ ವ್ಯವಸ್ಥೆಯಲ್ಲಿನ ಮಿತಿಮೀರಿದ ಲಂಚಗುಳಿತನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುತ್ತಿಗೆದಾರರ ಸಂಘವು ಪತ್ರಮುಖೇನ ದೂರನ್ನೂ ಸಲ್ಲಿಸಿತ್ತು. ಆ ಆರೋಪಗಳನ್ನು ರಾಜ್ಯ ಸರ್ಕಾರವಾಗಲೀ ಕೇಂದ್ರ ಸರ್ಕಾರವಾಗಲೀ ಗಂಭೀರವಾಗಿ ಪರಿಗಣಿಸಿದಂತೆ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ‘10 ಪರ್ಸೆಂಟ್‌ ಸರ್ಕಾರ’ ಎಂದು ಪ್ರಧಾನಿಯವರು ಚುನಾವಣೆ ಸಂದರ್ಭದಲ್ಲಿ ಟೀಕಿಸಿದ್ದರು. ಈಗ, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಲಂಚದ ಆರೋಪ ಕೇಳಿಬಂದಿರುವಾಗ ಅವರು ಮೌನ ವಹಿಸಿರುವುದು ಸರಿಯೇ?

ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿರುವುದರ ಅಸಹ್ಯಕರ ಉದಾಹರಣೆಗಳು ಆಗಾಗ ವರದಿಯಾಗುತ್ತಲೇ ಇವೆ. ಅಧಿಕಾರಿಗಳ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸುವ ದಾಳಿಗಳಲ್ಲಿ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿ, ಅದರ ವಿವರಗಳು ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಪ್ರಕಟಗೊಳ್ಳುತ್ತವೆ. ಆದರೆ, ಆ ದಾಳಿಗಳು ಔಪಚಾರಿಕತೆಗಷ್ಟೇ ಸೀಮಿತವಾಗಿವೆಯೇ ಹೊರತು ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಕೊಡಿಸುವ ತಾರ್ಕಿಕ ಹಂತಕ್ಕೆ ಹೋದ ಉದಾಹರಣೆಗಳು ವಿರಳ. ಲಂಚ, ಭ್ರಷ್ಟಾಚಾರ ಎನ್ನುವುದು ಸಮಾಜದಲ್ಲಿನ ಬಹುತೇಕರ ಕಣ್ಣಿಗೆ ಈಗ ಅಮೇಧ್ಯವಾಗಿ ಉಳಿದಿಲ್ಲ. ‘ತತ್ವರಹಿತ ರಾಜಕೀಯ’ ಇಂದಿನ ರಾಜಕಾರಣಿಗಳಿಗೆ ಪಾತಕವಾಗಿ ಕಾಣಿಸುತ್ತಿಲ್ಲ.

‘ಭ್ರಷ್ಟಾಚಾರಮುಕ್ತ ಭಾರತ’ ಎನ್ನುವ ಆಕರ್ಷಕ ಹೇಳಿಕೆ ಮಾತಿನ ರೂಪದಲ್ಲಷ್ಟೇ ಉಳಿದುಕೊಂಡಿದೆ. ಕರ್ನಾಟಕದಲ್ಲಂತೂ ಭ್ರಷ್ಟಾಚಾರ ಪ್ರಕರಣ– ಆರೋಪಗಳು ಸಾಲುಸಾಲಾಗಿ ಬೆಳಕಿಗೆ ಬರುತ್ತಿವೆ. ಗುತ್ತಿಗೆದಾರರ ಶೇ 40ರ ಕಮಿಷನ್‌ ಆರೋಪದ ನಂತರ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ವರದಿಯಾಗಿದೆ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ರಕ್ಷಿಸಬೇಕಾದ ಪೊಲೀಸ್‌ ಮತ್ತು ಶಿಕ್ಷಣ ಕ್ಷೇತ್ರಗಳೇ ಕೊಳಕು ಮೆತ್ತಿಕೊಂಡರೆ ಉಳಿದವುಗಳ ಗತಿಯೇನು? ಬಯಲಿಗೆ ಬಂದ ಈ ಪ್ರಕರಣಗಳು ರಾಜಕಾರಣಿಗಳ, ಮುಖ್ಯವಾಗಿ ಸರ್ಕಾರದ ಆತ್ಮಾವಲೋಕನಕ್ಕೆ ಕಾರಣವಾಗಬೇಕಿತ್ತು. ಆದರೆ, ತಮ್ಮನ್ನು ತಾವು ಆತ್ಮವಿಮರ್ಶೆಗೆ ಅತೀತರಂತೆ ಭಾವಿಸಿರುವ ರಾಜಕಾರಣಿಗಳು, ಮನುಷ್ಯಸಹಜ ಸಂವೇದನೆಗಳನ್ನೇ ಕಳೆದುಕೊಂಡಂತಿದ್ದಾರೆ. ಇಂಥ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಪಂಜಾಬ್‌ ಸರ್ಕಾರವು ಕಳಂಕಿತ ಸಚಿವನ ಮೇಲೆ ಕೈಗೊಂಡಿರುವ ಕ್ರಮ ಹೊಸ ಭರವಸೆ ಹುಟ್ಟಿಸುವಂತಿದೆ. ಕಿಂಚಿತ್ ಭ್ರಷ್ಟಾಚಾರವನ್ನೂ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸುವ ಪ್ರಯತ್ನ ಅದಾಗಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪಂಜಾಬ್‌ ಸರ್ಕಾರದ ನಡವಳಿಕೆ ಉಳಿದ ಸರ್ಕಾರಗಳಿಗೂ ಮಾದರಿಯಾಗಬೇಕು. ಸಾರ್ವಜನಿಕ‌ ವಲಯದಲ್ಲಿ ಕಳೆದುಕೊಂಡಿರುವ ನಂಬಿಕೆ ಮತ್ತು ನೈತಿಕತೆಯನ್ನು ಮರಳಿ ಪಡೆಯುವ ಹೊಣೆಗಾರಿಕೆ ರಾಜಕಾರಣಿಗಳದೇ ಆಗಿದೆ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ರಾಜಕಾರಣಿಗಳು ವಿಫಲರಾಗಿ ಸಂವೇದನಾಶೂನ್ಯರಾದಾಗ, ಅವರನ್ನು ಎಚ್ಚರಿಸುವ ಕೆಲಸವನ್ನು ಜನರೇ ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು