ಬುಧವಾರ, ಆಗಸ್ಟ್ 17, 2022
25 °C

ಸಂಪಾದಕೀಯ: ರೆಪೊ ದರ ಯಥಾಸ್ಥಿತಿ, ಗ್ರಾಹಕರ ವಿಶ್ವಾಸ ಹೆಚ್ಚಿಸಬೇಕು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತದ ಅರ್ಥವ್ಯವಸ್ಥೆಯು ಈಗ ಹಿಂಜರಿತದ ಸ್ಥಿತಿಯನ್ನು ಪ್ರವೇಶಿಸಿದೆ. ಸತತ ಎರಡು ತ್ರೈಮಾಸಿಕಗಳಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಕುಸಿತದ ಹಾದಿಯಲ್ಲಿ ಸಾಗಿರುವುದರ ಪರಿಣಾಮವಾಗಿ ಈ ಸ್ಥಿತಿ ಎದುರಾಗಿದೆ. ದೇಶವು ಆರ್ಥಿಕ ಹಿಂಜರಿತದ ಸ್ಥಿತಿಗೆ ಹೊರಳಿಕೊಂಡಿ
ದ್ದನ್ನು ಕಾಣುತ್ತಿರುವುದು ಇದೇ ಮೊದಲು. ಇಂತಹ ಸಂದರ್ಭದಲ್ಲಿ ಸಭೆ ಸೇರಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರ ಹಾಗೂ ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಿದೆ. ಇದು ನಿರೀಕ್ಷಿತವೇ ಆಗಿದೆ. ಈ ವರ್ಷದ ಫೆಬ್ರುವರಿಯಲ್ಲಿ ರೆಪೊ ದರವು ಶೇಕಡ 5.15ರಷ್ಟು ಇತ್ತು. ಇದು ಈಗಾಗಲೇ ಶೇಕಡ 4ಕ್ಕೆ ಇಳಿಕೆ ಕಂಡಾಗಿದೆ. ರೆಪೊ ದರದಲ್ಲಿ ಇನ್ನಷ್ಟು ಇಳಿಕೆ ಈ ಸಂದರ್ಭದಲ್ಲಿ ಆಗಲಿಕ್ಕಿಲ್ಲ ಎಂದು ಹಣಕಾಸು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರು ಅಭಿಪ್ರಾಯಪಟ್ಟಂತೆಯೇ, ಎಂಪಿಸಿಯ ಸದಸ್ಯರು ದರ ಇಳಿಕೆ ಬೇಡ ಎಂಬ ತೀರ್ಮಾನವನ್ನು ಒಕ್ಕೊರಲಿನಿಂದ ಕೈಗೊಂಡರು ಎಂದು ವರದಿಯಾಗಿದೆ. ಹಣದುಬ್ಬರ ಪ್ರಮಾಣವು ತೀರಾ ಮೇಲ್ಮಟ್ಟದಲ್ಲಿ ಇರುವ ಈ ಸಂದರ್ಭದಲ್ಲಿ ಇಂತಹ ತೀರ್ಮಾನ ಕೈಗೊಂಡಿರುವುದು ಸರಿಯಾದುದೇ. ಹಣದುಬ್ಬರವು ಈ ವರ್ಷದ ಆರಂಭದಿಂದಲೂ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಅಕ್ಟೋಬರ್‌ ಅಂತ್ಯದ ವೇಳೆಗೆ ಅದು ಶೇಕಡ 7.61ರ ಮಟ್ಟವನ್ನು ತಲುಪಿದೆ. ಸಾರ್ವಜನಿಕರು ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲಿ ಇರಿಸುವ ಹಣಕ್ಕೆ ಸಿಗುವ ವಾರ್ಷಿಕ ಬಡ್ಡಿಯ ಪ್ರಮಾಣವು ಈಗ ಹಣದುಬ್ಬರದ ಪ್ರಮಾಣಕ್ಕಿಂತ ಕಡಿಮೆಯೇ ಇದೆ. ವಾಸ್ತವದಲ್ಲಿ, ಇದೇ ಮಟ್ಟದ ಹಣದುಬ್ಬರ ಪ್ರಮಾಣ ಹಾಗೂ ಇದೇ ಮಟ್ಟದ ಬಡ್ಡಿ ದರ ಮುಂದುವರಿದರೆ, ಹಣ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಅದು ಈಗಾಗಲೇ ಸ್ವಲ್ಪಮಟ್ಟಿಗೆ ಆಗಿದೆ ಎಂಬುದೂ ನಿಜ.

ಇಂತಹ ಪರಿಸ್ಥಿತಿಯಲ್ಲಿ ಆರ್‌ಬಿಐ, ರೆಪೊ ದರಗಳಲ್ಲಿ ಈಗಿನ ಮಟ್ಟವನ್ನೇ ಮುಂದೆಯೂ ಕಾಯ್ದುಕೊಳ್ಳಲು ಬಯಸುವುದಾದರೆ, ಹಣದುಬ್ಬರ ಪ್ರಮಾಣವನ್ನು ತಗ್ಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಅದಾಗದಿದ್ದಲ್ಲಿ, ಬಡ್ಡಿ ದರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುವ ಬಗ್ಗೆಯೂ ಆಲೋಚಿಸಬಹುದು. ಹಣದುಬ್ಬರ ಪ್ರಮಾಣವು ಈ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶೇಕಡ 5.8ರ ಮಟ್ಟಕ್ಕೆ ತಗ್ಗಲಿದೆ ಎಂಬುದು ಆರ್‌ಬಿಐ ಮಾಡಿರುವ ಅಂದಾಜು. ಅಲ್ಲಿಯವರೆಗೂ ಅದು ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ. ಇದು ಕಳವಳಕಾರಿ. ಏಕೆಂದರೆ, ತೀವ್ರ ಹಣದುಬ್ಬರ ಹಾಗೂ ಠೇವಣಿ ಮೇಲಿನ ಕಡಿಮೆ ಬಡ್ಡಿ ದರದ ಸ್ಥಿತಿಯು ನೇರವಾಗಿ ಏಟು ಕೊಡುವುದು ದೇಶದ ಜನಸಾಮಾನ್ಯರಿಗೆ. ಹಾಲಿ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇಕಡ (–)9.5ರಷ್ಟು ಇರಲಿದೆ ಎಂದು ಈ ಮೊದಲು ಅಂದಾಜಿಸಿದ್ದ ಆರ್‌ಬಿಐ, ಈಗ ತನ್ನ ಅಂದಾಜನ್ನು ಪರಿಷ್ಕರಿಸಿದೆ. ಅರ್ಥವ್ಯವಸ್ಥೆಯು ನಿರೀಕ್ಷೆಗಿಂತ ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಅದು ಈ ವರ್ಷದಲ್ಲಿ ಶೇಕಡ (–)7.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಈ ಅಂಕಿ–ಅಂಶದಲ್ಲಿ ಭಾರಿ ಖುಷಿಗೆ ಕಾರಣವಾಗುವಂಥದ್ದು ಏನೂ ಇಲ್ಲವಾದರೂ ಕುಸಿತದ ಪ್ರಮಾಣದಲ್ಲಿ ಒಂದಿಷ್ಟು ಕಡಿಮೆ ಆಗಬಹುದು ಎಂಬ ಭರವಸೆಯನ್ನು ಇದು ಮೂಡಿಸುವಂತೆ ಇದೆ. ಆದಾಯ, ಉದ್ಯೋಗ ಲಭ್ಯತೆ, ಒಟ್ಟಾರೆ ಅರ್ಥವ್ಯವಸ್ಥೆ ಕುರಿತು ಗ್ರಾಹಕರಲ್ಲಿನ ವಿಶ್ವಾಸದ ಬಗ್ಗೆ ಆರ್‌ಬಿಐ ನಡೆಸಿದ ಸಮೀಕ್ಷೆಯು ನವೆಂಬರ್‌ನಲ್ಲಿ ಗ್ರಾಹಕರ ವಿಶ್ವಾಸ ಕಡಿಮೆ ಮಟ್ಟದಲ್ಲಿಯೇ ಇದ್ದಿದ್ದನ್ನು ಕಂಡುಕೊಂಡಿದೆ. ಜಿಡಿಪಿ ಬೆಳವಣಿಗೆ ದರ, ಹಣದುಬ್ಬರ ಪ್ರಮಾಣ, ರೆಪೊ ದರ... ಇಂಥವುಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳನ್ನೆಲ್ಲ ಹಿತಕರ ಮಟ್ಟಕ್ಕೆ ತರುವ ಮೊದಲು ಆಗಬೇಕಿರುವುದು ಗ್ರಾಹಕರಲ್ಲಿ ಅರ್ಥವ್ಯವಸ್ಥೆಯ ಬಗ್ಗೆ ವಿಶ್ವಾಸ ಹೆಚ್ಚಿಸುವಂತೆ ಮಾಡುವ ಕೆಲಸ. ಅವರು ಖುಷಿಯಿಂದ, ವಿಶ್ವಾಸದಿಂದ ಮಾರುಕಟ್ಟೆಯಲ್ಲಿ ಖರೀದಿ ವಹಿವಾಟು ಆರಂಭಿಸಿದರೆ ಹೆಚ್ಚಿನ ಸಮಸ್ಯೆಗಳು ತಾವಾಗಿಯೇ ಪರಿಹಾರ ಆಗುತ್ತವೆ. ಈ ಕೆಲಸವು ಆರ್‌ಬಿಐ ಒಂದರಿಂದಲೇ ಆಗುವಂಥದ್ದಲ್ಲ; ಇದಕ್ಕೆ ಸರ್ಕಾರಗಳ ನೆರವೂ ಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು