ಭಾನುವಾರ, ಸೆಪ್ಟೆಂಬರ್ 19, 2021
30 °C

ಸಂಪಾದಕೀಯ: ಜಾಹೀರಾತು ನಿಯಮಕ್ಕೆ ತಡೆ ನೀಡಿ ಬೆಂಗಳೂರಿನ ಸೌಂದರ್ಯ ಕಾಪಾಡಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನಲ್ಲಿ ಹೋರ್ಡಿಂಗ್‌, ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ ಅಳವಡಿಕೆಗೆ ರಾಜ್ಯ ಸರ್ಕಾರ ಪುನಃ ಅವಕಾಶ ನೀಡಿದ್ದು, ಹಾದಿ–ಬೀದಿಗಳಲ್ಲಿ ಇವುಗಳ ಹಾವಳಿ ಮತ್ತೆ ಶುರುವಾಗಲಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಚುನಾಯಿತ ಕೌನ್ಸಿಲ್‌ ಇಲ್ಲದ ಸಮಯದಲ್ಲಿ ‘ಬಿಬಿಎಂಪಿ ಜಾಹೀರಾತು ನಿಯಮಗಳು– 2019’ ಅನ್ನು ಆತುರಾತುರವಾಗಿ ಜಾರಿಗೆ ತರಲಾಗಿದೆ. ಕೋವಿಡ್‌ ಸಂಕಷ್ಟ ಹಾಗೂ ಪ್ರಕೃತಿ ವಿಕೋಪದ ಈ ಸೂಕ್ಷ್ಮ ಸಂದರ್ಭದಲ್ಲಿ ಸರ್ಕಾರ ಅತ್ಯುತ್ಸಾಹದಿಂದ ಈ ನಿರ್ಧಾರ ಕೈಗೊಂಡಿದ್ದರ ಹಿಂದೆ ಜಾಹೀರಾತು ಮಾಫಿಯಾದ ಒತ್ತಡ ಕೆಲಸ ಮಾಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲದೆ ಇಲ್ಲ. ಇದರಿಂದ, ನಗರದ ಹಾದಿಬೀದಿಗಳನ್ನು ಜಾಹೀರಾತು ಮುಕ್ತಗೊಳಿಸಲು ಮೂರು ವರ್ಷಗಳಿಂದ ನಡೆದಿದ್ದ ಎಲ್ಲ ಪ್ರಯತ್ನಗಳನ್ನು ಮತ್ತೆ ಶೂನ್ಯಕ್ಕೆ ತಂದು ನಿಲ್ಲಿಸಿದಂತಾಗಿದೆ. ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುತ್ತಿದ್ದ ಹೋರ್ಡಿಂಗ್‌ಗಳು, ಒಂದೆಡೆ ನಗರದ ಸೌಂದರ್ಯವನ್ನು ಹಾಳುಗೆಡವುತ್ತಿದ್ದವು. ಮತ್ತೊಂದೆಡೆ ಬಿಬಿಎಂಪಿಗೆ ಸಿಗಬೇಕಿದ್ದ ವರಮಾನದಲ್ಲಿ ಭಾರಿ ಸೋರಿಕೆ ಆಗುತ್ತಿತ್ತು. ನಗರಕ್ಕೆ ರಾಷ್ಟ್ರೀಯ ನಾಯಕರು ಯಾರಾದರೂ ಬಂದರೆಂದರೆ ಬೀದಿಗಳಲ್ಲಿ ಕಣ್ಣಿಗೆ ಕಿರಿಕಿರಿ ಆಗುವಷ್ಟು ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ಗಳು ರಾರಾಜಿಸುತ್ತಿದ್ದವು. ಫ್ಲೆಕ್ಸ್‌ಗಳ ತೋರಣ ಹರಿದುಬಿದ್ದು ಅಪಘಾತಗಳೂ ಸಂಭವಿಸಿದ್ದವು. ಈ ಎಲ್ಲ ಅಂಶಗಳನ್ನು ಗಮನಿಸಿಯೇ ಹೈಕೋರ್ಟ್‌, ಜಾಹೀರಾತು ಹಾವಳಿಯನ್ನು ತಡೆಗಟ್ಟುವಂತೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಚಾಟಿ ಬೀಸಿತ್ತು. ಆಗ ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಬಿಬಿಎಂಪಿ, ನಗರದ ಬೀದಿಗಳನ್ನು ಜಾಹೀರಾತು ಮುಕ್ತಗೊಳಿಸಿತ್ತು. ಸಾರ್ವಜನಿಕ ಪ್ರದೇಶಗಳಲ್ಲಿ ಹೋರ್ಡಿಂಗ್‌, ಫ್ಲೆಕ್ಸ್‌, ಬ್ಯಾನರ್‌ಗಳೂ ಸೇರಿದಂತೆ ವಾಣಿಜ್ಯ ಉದ್ದೇಶದ ಎಲ್ಲ ವಿಧದ ಜಾಹೀರಾತುಗಳನ್ನೂ ನಿಷೇಧಿಸಿತ್ತು. ಬಿಬಿಎಂಪಿಯ ಈ ನಿರ್ಣಯಕ್ಕೆ ಹೈಕೋರ್ಟ್‌ನ ಏಕಸದಸ್ಯ ಪೀಠವು ತಡೆಯಾಜ್ಞೆ ನೀಡಿತ್ತು. ಆದರೆ, ವಿಭಾಗೀಯ ಪೀಠವು ತಡೆಯಾಜ್ಞೆಯನ್ನು ರದ್ದುಪಡಿಸಿತ್ತು. ಈ ನಡುವೆ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ನಿರ್ಣಯಕ್ಕೆ ವಿರುದ್ಧವಾಗಿ, ನಗರದಲ್ಲಿ ಹೋರ್ಡಿಂಗ್‌ ಸೇರಿದಂತೆ ವಿವಿಧ ರೀತಿಯ ಜಾಹೀರಾತುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು 2019ರ ಜುಲೈನಲ್ಲಿ ಜಾಹೀರಾತು ನಿಯಮಗಳ ಕರಡು ಅಧಿಸೂಚನೆಯನ್ನು ಪ್ರಕಟಿಸಿತ್ತು. ಬಿಬಿಎಂಪಿಯ ಚುನಾಯಿತ ಕೌನ್ಸಿಲ್‌ನ ಸದಸ್ಯರು ಪಕ್ಷಭೇದ ಮರೆತು ಈ ಕರಡು ಅಧಿಸೂಚನೆಯನ್ನು ವಿರೋಧಿಸಿದ್ದರು.

ಬಿಬಿಎಂಪಿ ಜಾರಿಗೊಳಿಸಿರುವ ಜಾಹೀರಾತು ನೀತಿಯನ್ನು ಹಿಂಪಡೆಯುವಂತೆ ಸರ್ಕಾರದ ಮೇಲೆ ಜಾಹೀರಾತು ಮಾಫಿಯಾ ಸತತವಾಗಿ ಒತ್ತಡ ಹೇರುತ್ತಲೇ ಇತ್ತು. ಇದಕ್ಕೆ ಪ್ರತಿಯಾಗಿ ಸಾರ್ವಜನಿಕರು ನಗರದ ಬೀದಿಗಳಲ್ಲಿ ಜಾಹೀರಾತುಗಳ ಹಾವಳಿಗೆ ಮತ್ತೆ ಅವಕಾಶ ಕಲ್ಪಿಸಬಾರದು ಎಂದು ಒತ್ತಾಯಿ ಸುತ್ತಾ ಬಂದಿದ್ದರು. ಈ ವಿರೋಧದ ಕಾವು ಎಷ್ಟರಮಟ್ಟಿಗೆ ಇತ್ತೆಂದರೆ, 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಬೆಂಗಳೂರಿನಲ್ಲಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ಹಾವಳಿ ತಡೆಯಲು ಕ್ರಮ ಕೈಗೊಳ್ಳುವುದಾಗಿ ತನ್ನ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಆದರೆ, ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿದ್ದರೂ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಮರೆತು ಜಾಹೀರಾತು ಮಾಫಿಯಾಕ್ಕೆ ಸರ್ಕಾರ ಮಣಿದಿದೆ ಎನ್ನದೆ ವಿಧಿಯಿಲ್ಲ. ಅದರಲ್ಲೂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ಕೊನೆಯ ದಿನ ಈ ತೀರ್ಮಾನ ಕೈಗೊಂಡಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ. ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಹೊಸ ನಿಯಮಗಳು ಅನೇಕ ಗೊಂದಲಗಳನ್ನೂ ಹುಟ್ಟುಹಾಕಿವೆ. ಇವು ಬಿಬಿಎಂಪಿ ರೂಪಿಸಿರುವ ಜಾಹೀರಾತು ನೀತಿಗೆ ತದ್ವಿರುದ್ಧವಾಗಿವೆ. ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯದ ಕಟ್ಟಡಗಳಲ್ಲೂ ಈಗ ಹೋರ್ಡಿಂಗ್‌ ಅಳವಡಿಸ ಬಹುದು. ಇದಂತೂ ಸರ್ಕಾರ ತಾನೇ ರಚಿಸಿದ ನಿಯಮಗಳ ಉಲ್ಲಂಘನೆಗೆ ಅವಕಾಶ ಕಲ್ಪಿಸುತ್ತದೆ. ಫ್ಲೆಕ್ಸ್‌ ಮತ್ತು ಬಂಟಿಂಗ್ಸ್‌ ಬಳಕೆಗೂ ಅನುವು ಮಾಡಿಕೊಡುವ ಈ ನಿಯಮಗಳು ಪರಿಸರ ಮಾಲಿನ್ಯ ಹೆಚ್ಚಳಕ್ಕೂ ಕಾರಣವಾಗಲಿವೆ. ಧಾರ್ಮಿಕ ಉದ್ದೇಶದ ಜಾಹೀರಾತುಗಳ ಉಚಿತ ಅಳವಡಿಕೆಗೆ ಅನುವು ಮಾಡಿಕೊಟ್ಟಿರುವುದು ಇನ್ನೊಂದು ಅಪಾಯಕಾರಿ ನಡೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಶುಭ ಕೋರುವ ಜಾಹೀರಾತುಗಳು ಎಲ್ಲೆಂದರಲ್ಲಿ ಮತ್ತೆ ರಾರಾಜಿಸುವುದಕ್ಕೆ ಇದು ಕಾರಣವಾಗಲಿದೆ. ಇವುಗಳ ತೆರವು ಬಿಬಿಎಂಪಿ ಪಾಲಿಗೆ ಭವಿಷ್ಯದಲ್ಲಿ ಮತ್ತೆ ತಲೆನೋವಾಗಲಿದೆ. ರಸ್ತೆ ಮಟ್ಟಕ್ಕಿಂತ 25 ಮೀಟರ್ ಎತ್ತರದವರೆಗಿನ ಹೋರ್ಡಿಂಗ್‌ಗಳಿಗೆ, ಕಣ್ಣು ಕುಕ್ಕುವ ನಿಯಾನ್‌ ಬೆಳಕಿನ ಮತ್ತು ಡಿಜಿಟಲ್‌ ರೂಪದ ಜಾಹೀರಾತುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಈ ನಿರ್ಧಾರವೂ ಮುಂದೆ ಅಪಾಯಗಳನ್ನು ತಂದೊಡ್ಡಬಹುದು. ‘ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುವ ಹಾಗೂ ಸಂಚಾರ ಸಿಗ್ನಲ್‌ಗಳನ್ನು ಹೋಲುವ ಜಾಹೀರಾತುಗಳನ್ನು ಅಳವಡಿಸುವಂತಿಲ್ಲ. ರಸ್ತೆಗಳು ಕೂಡುವಲ್ಲಿ ವಾಹನ ನಿಲುಗಡೆ ರೇಖೆಯ 25 ಮೀಟರ್ ವ್ಯಾಪ್ತಿಯಲ್ಲಿ ಹೋರ್ಡಿಂಗ್‌ ಅಳವಡಿಸುವಂತಿಲ್ಲ’ ಎಂದು ನಿಯಮಗಳಲ್ಲಿ ಹೇಳಲಾಗಿದೆ. ಇಂತಹ ನಿಯಮಗಳು ಹಿಂದೆಯೂ ಜಾರಿಯಲ್ಲಿದ್ದವು. ಆದರೆ ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬೇಕಾದ ವ್ಯವಸ್ಥೆ ಬಿಬಿಎಂಪಿಯಲ್ಲಿ ಇಲ್ಲ. ‘ಹೊಸ ನಿಯಮಗಳು ಬಿಬಿಎಂಪಿಗೆ ಭಾರಿ ವರಮಾನವನ್ನೇನೂ ತರುವುದಿಲ್ಲ. ಜಾಹೀರಾತು ಏಜೆನ್ಸಿಗಳು ಹಣ ಮಾಡುವುದಕ್ಕಷ್ಟೇ ಅವಕಾಶ ಮಾಡಿಕೊಡಲಿವೆ. ಹೋರ್ಡಿಂಗ್‌ ಅಳವಡಿಕೆಗೆ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ ಅವಕಾಶ ಕಲ್ಪಿಸಿದ್ದರೆ, ಬಿಬಿಎಂಪಿಗೆ ಜಾಸ್ತಿ ವರಮಾನ ಬರುತ್ತಿತ್ತು’ ಎಂಬುದು ನಗರಯೋಜನಾ ತಜ್ಞರ ಅಭಿಪ್ರಾಯ. ಜನರ ಆಶಯಗಳಿಗೆ ವಿರುದ್ಧವಾದ ಹೊಸ ಜಾಹೀರಾತು ನಿಯಮವನ್ನು ಮುಖ್ಯಮಂತ್ರಿಯವರು ತಕ್ಷಣ ತಡೆಹಿಡಿಯಬೇಕು. ಬಿಬಿಎಂಪಿ ಕೌನ್ಸಿಲ್‌ ಅಂಗೀಕರಿಸಿರುವ ಜಾಹೀರಾತು ನೀತಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು