ಖಾಸಗಿ ಸಂಘ–ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಂಕುಶ ಹಾಕುವ ಸರ್ಕಾರದ ಪ್ರಯತ್ನ ವಿರೋಧಾಭಾಸಗಳಿಂದ ಕೂಡಿದೆ. ಇದನ್ನು ವಿರೋಧಿಸುವ ಪ್ರತಿಪಕ್ಷವೂ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆಗಳಿಗೆ ಅನುಮತಿ ಪಡೆಯುವುದನ್ನು ಕಡ್ಡಾಯಪಡಿಸಿರುವ ಸರ್ಕಾರದ ನಿರ್ಧಾರ ಹಾದಿಬೀದಿಯ ಚರ್ಚೆ ಹಾಗೂ ರಾಜಕೀಯ ಬಲಪ್ರದರ್ಶನದ ವಿಷಯವಾಗಿರುವುದು ದುರದೃಷ್ಟಕರ. ಸಾರ್ವಜನಿಕ ಸ್ಥಳವನ್ನು ಬಳಸಿಕೊಳ್ಳಲು ಖಾಸಗಿ ಸಂಘಸಂಸ್ಥೆಗಳು ಕಾನೂನು ಪ್ರಾಧಿಕಾರಗಳ ಅನುಮತಿ ಪಡೆಯಬೇಕೆನ್ನುವುದು ಸರಿಯಾದ ನಿಲುವೇ ಆಗಿದೆ. ತಮ್ಮಿಷ್ಟಕ್ಕೆ ತಕ್ಕಂತೆ ಸಾರ್ವಜನಿಕ ಸ್ಥಳಗಳನ್ನು ಬಳಸಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಹಾಗಾಗಿ, ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ. ಆದರೆ, ಈ ನಿರ್ಧಾರದ ಹಿಂದೆ ಆರ್ಎಸ್ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆನ್ನುವ ಉದ್ದೇಶ ಸರ್ಕಾರಕ್ಕಿರುವಂತೆ ಕಾಣಿಸುತ್ತದೆ. ಈ ಉದ್ದೇಶವೇ ಸರ್ಕಾರದ ನಿರ್ಧಾರವನ್ನು ಹಾದಿಬೀದಿ ರಾಜಕಾರಣದ ವಿಷಯವನ್ನಾಗಿಸಿದೆ. ಶಾಲಾ–ಕಾಲೇಜು ಸೇರಿದಂತೆ ಸರ್ಕಾರಿ ಸ್ಥಳಗಳನ್ನು ಆರ್ಎಸ್ಎಸ್ ತನ್ನ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದನ್ನು ನಿರ್ಬಂಧಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದರೊಂದಿಗೆ ಇದೆಲ್ಲ ಪ್ರಕ್ರಿಯೆ ಆರಂಭಗೊಂಡಿತು. ಪ್ರಿಯಾಂಕ್ ಅವರು ಹೇಳಿರುವುದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡ ಮುಖ್ಯಮಂತ್ರಿ, ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ಕುರಿತು ತಮಿಳುನಾಡು ಸರ್ಕಾರ ಕೈಗೊಂಡ ಕ್ರಮವನ್ನು ಪರಿಶೀಲಿಸಿ ಪರಿಗಣಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ತಿಳಿಸಿದ್ದರು. ಆರ್ಎಸ್ಎಸ್ ಒಂದು ಫ್ಯಾಸಿಸ್ಟ್ ಸಂಘಟನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದರು. ಇದೆಲ್ಲದರ ಮುಂದುವರಿದ ಭಾಗವಾಗಿ, ವ್ಯಕ್ತಿಗಳು, ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸುವುದಕ್ಕೂ ಮುನ್ನ ಸರ್ಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳಲೇಬೇಕು ಎಂದು ಗೃಹ ಇಲಾಖೆ ಆದೇಶ ಹೊರಡಿಸಿದೆ.

ಆರ್ಎಸ್ಎಸ್ ಬಗೆಗಿನ ರಾಜ್ಯ ಸರ್ಕಾರದ ನಿಲುವುಗಳು ಅಸ್ಪಷ್ಟವಾಗಿವೆ. ಆರ್ಎಸ್ಎಸ್ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಹಾಗೂ ಅದೊಂದು ಫ್ಯಾಸಿಸ್ಟ್ ಸಂಘಟನೆ ಎನ್ನುವುದು ಸರ್ಕಾರದ ಅಭಿಪ್ರಾಯವಾಗಿದ್ದಲ್ಲಿ, ಅದರ ವಿರುದ್ಧ ಮಾತನಾಡುವುದರ ಬದಲು ಕ್ರಮ ಕೈಗೊಳ್ಳಬೇಕಾಗಿದೆ. ಸರ್ಕಾರದ ಕ್ರಮ ಬಾಯಿಮಾತಿಗೆ ಸೀಮಿತ ಎನ್ನುವುದಾದರೆ, ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಸರ್ಕಾರವೂ ಭಾಗೀದಾರ ಎಂದು ಹೇಳುವುದು ಅನಿವಾರ್ಯ. ಖಾಸಗಿ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಸರ್ಕಾರದ ಕ್ರಮವೂ ಪ್ರಾಮಾಣಿಕ ಆಗಿರುವಂತೆ ಕಾಣಿಸುತ್ತಿಲ್ಲ. ಸಂಸ್ಥೆಯೊಂದನ್ನು ಗುರಿಯಾಗಿ ಇರಿಸಿಕೊಂಡಂತೆ ಸರ್ಕಾರ ವರ್ತಿಸುವುದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಲಾಗದು. ಸರ್ಕಾರ ಹೇಳುತ್ತಿರುವ ನಿರ್ಬಂಧ ಎಲ್ಲ ಸಂಸ್ಥೆಗಳಿಗೂ, ಎಲ್ಲ ಸಮುದಾಯದ ಚಟುವಟಿಕೆಗಳಿಗೂ ಅನ್ವಯ ಆಗಬೇಕು. ಆದರೆ, ಜಾತ್ರೆ, ರಥೋತ್ಸವ, ಮೆರವಣಿಗೆ, ಸಾಮೂಹಿಕ ಪ್ರಾರ್ಥನೆಯಂತಹ ಯಾವುದಾದರೊಂದು ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುವಾಗ, ಅವುಗಳನ್ನು ಕಾನೂನು ಕಣ್ಗಾವಲಿನ ಚೌಕಟ್ಟಿಗೆ ತರುವುದು ಸುಲಭವಲ್ಲ. 2013ರಲ್ಲಿ ಬಿಜೆಪಿ ಅವಧಿಯಲ್ಲಿ ಹೊರಡಿಸಿದ್ದ ಆದೇಶವನ್ನು ನಾವು ಮತ್ತೆ ಜಾರಿಗೊಳಿಸುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರೂ, ಹಳೆಯ ಆದೇಶವನ್ನು ನೆನಪಿಸಿಕೊಂಡಿರುವ ಉದ್ದೇಶ ಹಾಗೂ ಮರಳಿ ಜಾರಿಗೊಳಿಸಿರುವ ರೀತಿ ಅನುಮಾನ ಹುಟ್ಟಿಸುವಂತಿದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸುವುದೇ ಪ್ರತಿಪಕ್ಷದ ಕರ್ತವ್ಯ ಎನ್ನುವಂತೆ ಬಿಜೆಪಿ ನಡೆದುಕೊಳ್ಳುತ್ತಿರುವುದೂ ಅಪೇಕ್ಷಣೀಯವಲ್ಲ. ಸರ್ಕಾರದ ತೀರ್ಮಾನ ಸರಿಯಾದುದಲ್ಲ ಅಥವಾ ದುರುದ್ದೇಶದಿಂದ ಕೂಡಿದೆ ಎನ್ನಿಸಿದಾಗ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಜವಾಬ್ದಾರಿಯುತ ಪ್ರತಿಪಕ್ಷವೊಂದರ ಕರ್ತವ್ಯ. ಕಾನೂನು ಹೋರಾಟವನ್ನು ಬಿಟ್ಟು, ಬೀದಿಗಿಳಿದು ಕಾನೂನು ಉಲ್ಲಂಘಿಸುವುದು ಹೊಣೆಗೇಡಿತನದ ವರ್ತನೆ ಹಾಗೂ ಅಸಾಂವಿಧಾನಿಕ ನಡವಳಿಕೆ.

ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುತ್ತಿರುವುದು ಸರಿಯೋ ತಪ್ಪೋ ಎನ್ನುವ ಚರ್ಚೆಯೂ ಶುರುವಾಗಿದೆ. ಯಾವುದೇ ಸಂಘಟನೆ ಅಥವಾ ಸಮುದಾಯದೊಂದಿಗೆ ಗುರ್ತಿಸಿಕೊಳ್ಳಲು ಸರ್ಕಾರಕ್ಕೇ ಅವಕಾಶ ಇಲ್ಲದಿರುವಾಗ, ಅದರ ನೌಕರರು ಆರ್ಎಸ್ಎಸ್ ಜೊತೆ ಗುರ್ತಿಸಿಕೊಳ್ಳುವುದು ಸರಿಯೇ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೆಲವು ಸರ್ಕಾರಿ ನೌಕರರು ಗಣವೇಷ ಧರಿಸಿ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿರುವುದು ಕರ್ನಾಟಕ ನಾಗರಿಕ ಸೇವಾ ನಡವಳಿಕೆ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ. ಅಂಥ ನೌಕರರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಸೇವಾ ನಿಯಮಾವಳಿಯನ್ನು ಉಲ್ಲಂಘಿಸುವ ನೌಕರರನ್ನು ಪ್ರತಿಪಕ್ಷಗಳು ಬೆಂಬಲಿಸುವುದೂ ಸರಿಯಲ್ಲ. ಆರ್ಎಸ್ಎಸ್ ಜೊತೆಗೆ ಅಥವಾ ಬೇರಾವುದೇ ಸಂಘಟನೆಯೊಂದಿಗೆ ಗುರ್ತಿಸಿಕೊಳ್ಳಬಯಸುವ ಸರ್ಕಾರಿ ನೌಕರರು ತಮ್ಮ ಉದ್ಯೋಗದಿಂದ ಹೊರಬರಲಿಕ್ಕೆ ಅವಕಾಶವಿದ್ದೇ ಇದೆ. ವೈಯಕ್ತಿಕ ಒಲವುನಿಲುವುಗಳಿಗೆ ಸರ್ಕಾರಿ ಸೇವೆ–ನೌಕರಿಯಲ್ಲಿ ಅವಕಾಶವಿಲ್ಲ, ಇರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.