ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭಾರತದ ಮುಡಿಗೆ ಸ್ಯಾಫ್ ಗರಿ, ಫುಟ್‌ಬಾಲ್ ಆಟಕ್ಕೆ ನವಶಕ್ತಿ

Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ಕ್ರಿಕೆಟ್‌ ಆಟ ವಿಜೃಂಭಿಸುವ ಭಾರತದಲ್ಲಿ, ಬೇರೆ ಕ್ರೀಡೆಗಳಲ್ಲಿ ದಾಖಲಾಗುವ ಪ್ರತಿಯೊಂದು ಸಾಧನೆಯೂ ಅಮೂಲ್ಯ. ಈ ದಿಸೆಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಭಾರತ ಫುಟ್‌ಬಾಲ್ ತಂಡವು ಮಹತ್ವದ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದೆ. ಇದೀಗ ದಕ್ಷಿಣ ಏಷ್ಯಾ ಫುಟ್‌ಬಾಲ್ ಫೆಡರೇಷನ್ (ಸ್ಯಾಫ್‌) ಚಾಂಪಿಯನ್‌ಷಿಪ್‌ನಲ್ಲಿ ಒಂಬತ್ತನೇ ಬಾರಿ ಪ್ರಶಸ್ತಿ ಗೆದ್ದಿರುವುದೂ ಮಹತ್ವದ ಸಾಧನೆಯಾಗಿದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕುವೈತ್ ವಿರುದ್ಧ ನಡೆದ ಫೈನಲ್‌ನಲ್ಲಿ ಚೆಟ್ರಿ ಬಳಗವು ಪೆನಾಲ್ಟಿ ಶೂಟೌಟ್‌ನಲ್ಲಿ ರೋಚಕ ಜಯ ಸಾಧಿಸಿತು. ಮಳೆ, ಚಳಿಯನ್ನೂ ಲೆಕ್ಕಿಸದೇ ಕ್ರೀಡಾಂಗಣದಲ್ಲಿ ಸೇರಿದ್ದ 20 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಂಭ್ರಮಿಸಿದರು. ಇದು ಬೆಂಗಳೂರಿನ ಫುಟ್‌ಬಾಲ್ ಪ್ರೀತಿಗೆ ಹಿಡಿದ ಕನ್ನಡಿಯಾಗಿತ್ತು. ಹಲವಾರು ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರರನ್ನು ದೇಶಕ್ಕೆ ನೀಡಿದ ಹೆಗ್ಗಳಿಕೆ ಉದ್ಯಾನನಗರಿಯದ್ದು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ ನಾಯಕರಾಗಿರುವ ಚೆಟ್ರಿ ಈಗ ಸ್ಥಳೀಯ ಅಭಿಮಾನಿಗಳ ಕಣ್ಮಣಿಯಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರ ನಾಯಕತ್ವದ ತಂಡವು ತ್ರಿರಾಷ್ಟ್ರ ಸರಣಿ, ಇಂಟರ್‌ ಕಾಂಟಿನೆಂಟಲ್ ಕಪ್ ಹಾಗೂ ಸ್ಯಾಫ್‌ ಕಪ್‌ ಗೆದ್ದುಕೊಂಡಿರುವುದು ಸಣ್ಣ ಸಾಧನೆಯೇನಲ್ಲ. ಇದರೊಂದಿಗೆ ಫಿಫಾ ರ‍್ಯಾಂಕಿಂಗ್‌ನಲ್ಲಿ ನೂರನೇ ಸ್ಥಾನಕ್ಕೂ ಏರಿದೆ. 27 ವರ್ಷಗಳ ಹಿಂದೆ 94ನೇ ರ‍್ಯಾಂಕ್‌ ಗಳಿಸಿದ್ದು ಭಾರತದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಆದರೆ ಫಿಫಾ ವಿಶ್ವಕಪ್ ಮತ್ತು ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಳಿಸಲು ತಂಡವು ಕ್ರಮಿಸಬೇಕಾದ ಹಾದಿ ಇನ್ನೂ ದೂರವಿದೆ. ಆದರೂ ಈಗ ಮೂಡಿಬರುತ್ತಿರುವ ಯಶಸ್ಸುಗಳು ತಂಡದ ಆತ್ಮವಿಶ್ವಾಸ ವೃದ್ಧಿಸುವ ಮೆಟ್ಟಿಲುಗಳಾಗಲಿವೆ.

ಈ ಸಲದ ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ ಎಂಟು ತಂಡಗಳು ಸ್ಪರ್ಧಿಸಿದ್ದವು. ಎ ಗುಂಪಿನಲ್ಲಿದ್ದ ಭಾರತಕ್ಕೆ ಪಾಕಿಸ್ತಾನವು ಮೊದಲ ಎದುರಾಳಿಯಾಗಿತ್ತು. ಉಭಯ ದೇಶಗಳ ನಡುವೆ ಇರುವ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ವೀಸಾ ಪಡೆಯುವಲ್ಲಿ ವಿಳಂಬವಾದರೂ ಪಾಕಿಸ್ತಾನ ತಂಡವು ಭಾರತಕ್ಕೆ ಆಗಮಿಸಿತು. ಉಭಯ ತಂಡಗಳ ನಡುವಣ ಪಂದ್ಯವು ಆಕರ್ಷಣೆಯ ಕೇಂದ್ರಬಿಂದುವೂ ಆಗಿತ್ತು. ಅದರಲ್ಲಿ ಆತಿಥೇಯ ಭಾರತ ಜಯಿಸಿತು. ಉಳಿದಂತೆ ನೇಪಾಳ ಮತ್ತು ಕುವೈತ್ ತಂಡಗಳು ನೀಡಿದ ಕಠಿಣ ಪೈಪೋಟಿಯನ್ನು ಮೀರಿ ನಿಲ್ಲುವಲ್ಲಿ ಚೆಟ್ರಿ ಬಳಗವು ಯಶಸ್ವಿಯಾಯಿತು.

ನಾಕೌಟ್‌ ಹಂತದಲ್ಲಿ ಲೆಬನಾನ್‌ ಸವಾಲನ್ನೂ ಗೆದ್ದಿತು. ಈ ಎಲ್ಲ ಪಂದ್ಯಗಳಲ್ಲಿಯೂ ಚೆಟ್ರಿ ನಾಯಕತ್ವ ಮತ್ತು ಗೋಲು ಗಳಿಕೆಯ ಕೌಶಲಗಳು ಮೇಲುಗೈ ಸಾಧಿಸಿದವು. ಅವರೊಂದಿಗೆ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಶ್ರೇಷ್ಠ ಆಟವೂ ಪ್ರಮುಖ ಪಾತ್ರ ವಹಿಸಿತು. ಸಂದೇಶ್ ಜಿಂಗನ್, ಲಾಲಿಯಂಜುವಾಲಾ ಚಾಂಗ್ಟೆ, ನವೋರೆಮ್ ಮಹೇಶ್‌ ಸಿಂಗ್, ಉದಾಂತ ಸಿಂಗ್, ಅಬ್ದುಲ್ ಸಮದ್ ಮತ್ತು ಅನ್ವರ್ ಅಲಿ ಅವರ ಕಾಣಿಕೆಯೂ ಮಹತ್ವದ್ದಾಗಿದೆ. ಒಟ್ಟಾರೆ ತಂಡವಾಗಿ ಭಾರತವು ಮಿಂಚಿದೆ. ಆದರೆ ತಂಡದ ಮುಖ್ಯ ಕೋಚ್ ಇಗೋರ್ ಸ್ಟಿಮ್ಯಾಚ್‌ ಅವರು ಅತಿರೇಕದ ವರ್ತನೆಯಿಂದಾಗಿ ಎರಡು ಕೆಂಪು ಕಾರ್ಡ್ ಪಡೆದರು.

ಫೈನಲ್ ಸೇರಿದಂತೆ ಮೂರು ಪಂದ್ಯಗಳಲ್ಲಿ ಅವರು ಹೊರಗುಳಿಯಬೇಕಾಯಿತು. ಸಹಾಯಕ ಕೋಚ್ ಮಹೇಶ್ ಗಾವ್ಳಿ ತಮ್ಮ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದರು. ಈ ಟೂರ್ನಿಯಲ್ಲಿ ಒಟ್ಟು ಐದು ಗೋಲುಗಳನ್ನು ಗಳಿಸಿದ 38 ವರ್ಷದ ಚೆಟ್ರಿಯವರದ್ದು ಗಣನೀಯ ಸಾಧನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ 142 ಪಂದ್ಯಗಳಿಂದ 92 ಗೋಲು ಗಳಿಸಿದ್ದಾರೆ. ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಮತ್ತು ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ನಂತರದ ಸ್ಥಾನದಲ್ಲಿ ಚೆಟ್ರಿ ಇರುವುದು ದೇಶದ ಗೌರವ ಹೆಚ್ಚಿಸಿದೆ.

ಪ್ರತಿವರ್ಷ ನಡೆಯುವ ಐಎಸ್‌ಎಲ್‌ನಂತಹ ಫ್ರ್ಯಾಂಚೈಸಿ ಲೀಗ್ ಟೂರ್ನಿಯು ದೇಶದ ಫುಟ್‌ಬಾಲ್‌ ಕ್ರೀಡೆಯಲ್ಲಿ ಉತ್ತಮ ಬದಲಾವಣೆಗೆ ಪೂರಕವಾಗಿದೆ. ವಿದೇಶಿ ಆಟಗಾರರೊಂದಿಗೆ ಬೆರೆಯುತ್ತಿರುವ ಇಲ್ಲಿಯ ಪ್ರತಿಭೆಗಳು ಹೊಸಕಾಲದ ಕೌಶಲಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಯುರೋಪ್ ದೇಶದ ತರಬೇತಿ ಅಕಾಡೆಮಿಗಳು ಕೂಡ ಈಗ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ವೃತ್ತಿಪರತೆಗೆ ಒತ್ತು ನೀಡುತ್ತಿರುವುದು ಭಾರತದಲ್ಲಿ ಫುಟ್‌ಬಾಲ್ ಬೆಳವಣಿಗೆಗೆ ಶಕ್ತಿ ತುಂಬುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT