ಶುಕ್ರವಾರ, ಜೂನ್ 5, 2020
27 °C

ಶಾಲಾ ಪ್ರವೇಶಾತಿ– ಶುಲ್ಕ ಪಾವತಿ ಶಾಲೆಗಳಿಗೆ ಹೃದಯವಂತಿಕೆ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕಿನ ಆತಂಕದಲ್ಲಿ ಇಡೀ ದೇಶ ಕೈಕಾಲುಗಳನ್ನು ಕಟ್ಟಿಕೊಂಡಂತಿರುವ ಸ್ಥಿತಿಯಲ್ಲಿರುವಾಗ, ಕೆಲವು ಖಾಸಗಿ ಶಾಲೆಗಳು ಸಂದರ್ಭದ ಸಂಕೀರ್ಣತೆಯನ್ನು ನಿರ್ಲಕ್ಷಿಸಿ ಪ್ರವೇಶ ಪ್ರಕ್ರಿಯೆಗೆ ಮುಂದಾಗಿರುವುದು ತೀರಾ ಸಂವೇದನಾಶೂನ್ಯ ವರ್ತನೆ. ಮಾನವೀಯ ಮೌಲ್ಯಗಳನ್ನು ರೂಢಿಸಬೇಕಾದ ಶಿಕ್ಷಣ ಕ್ಷೇತ್ರಕ್ಕೆ ವಿರುದ್ಧವಾದ ನಡವಳಿಕೆಯನ್ನು ಶಾಲೆಗಳ ಆಡಳಿತ ಮಂಡಳಿ ರೂಪಿಸಿಕೊಂಡಿರುವುದಕ್ಕೆ ಈ ವರ್ತನೆ ಉದಾಹರಣೆಯಂತಿದೆ.

ಲಾಕ್‌ಡೌನ್‌ ಕಾರಣದಿಂದಾಗಿ ಜನರು ತಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುಗಳನ್ನು ಹೊಂದಿಸಿಕೊಳ್ಳುವುದೇ ದುಸ್ತರವಾಗಿದೆ. ಲಾಕ್‌ಡೌನ್‌ನಿಂದಾಗಿ ಅರ್ಥವ್ಯವಸ್ಥೆಯ ಮೇಲೆ ಆಗಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆ ಬೆಚ್ಚಿಬೀಳಿಸುವಂತಹ ವರದಿಗಳು ಬರುತ್ತಿವೆ. ಆರ್ಥಿಕ ಭದ್ರತೆ ಶಿಥಿಲವಾಗುತ್ತಿದೆ.

ಸಾಲ ಮರುಪಾವತಿ ಕಂತುಗಳಿಗೆ ಮೂರು ತಿಂಗಳ ವಿನಾಯಿತಿ ನೀಡಿರುವ ನಿದರ್ಶನ ಕಣ್ಣ ಮುಂದೆ ಇದೆ. ಇಂತಹ ಸಂದರ್ಭದಲ್ಲಿ, ಮುಂಬರುವ ಶೈಕ್ಷಣಿಕ ವರ್ಷದ ಪ್ರವೇಶ ಶುಲ್ಕ ಪಾವತಿಯ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿಗಳು ತುಸುವಾದರೂ ಹೊಂದಾಣಿಕೆಯ ಮನೋಭಾವ ಪ್ರದರ್ಶಿಸಬಹುದಿತ್ತು. ಅದರ ಬದಲು, ಮುಂಬರುವ ಶೈಕ್ಷಣಿಕ ವರ್ಷದ ಶುಲ್ಕ ಪಾವತಿಸಿ ಎಂದು ಪಾಲಕರನ್ನು ಒತ್ತಾಯಿಸುವುದು ಅಮಾನವೀಯ.

ಪ್ರವೇಶ ಪ್ರಕ್ರಿಯೆಗೆ ಮುಂದಾಗಿರುವ ಶಾಲೆಗಳ ವಿರುದ್ಧ ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿರುವುದು ಸರಿಯಾಗಿದೆ. ರಾಜ್ಯದಲ್ಲಿನ ಯಾವುದೇ ಪಠ್ಯಕ್ರಮದ ಶಾಲೆಗಳು ಸರ್ಕಾರ ಸೂಚಿಸುವವರೆಗೆ ದಾಖಲಾತಿ ಪ್ರಕ್ರಿಯೆ ನಡೆಸುವಂತಿಲ್ಲ ಹಾಗೂ ಪೋಷಕರಿಂದ ಶುಲ್ಕ ಪಡೆಯುವಂತಿಲ್ಲ. ಒಂದುವೇಳೆ ಏಪ್ರಿಲ್‌ ತಿಂಗಳಲ್ಲಿ ಪ್ರವೇಶ ಶುಲ್ಕ ಪಾವತಿಸುವಂತೆ ಪಾಲಕರಿಗೆ ಹೇಳಿದ್ದರೆ, ಆ ಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದರ ಜೊತೆಗೆ, ಮಾನ್ಯತೆಯನ್ನೂ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಕೊರೊನಾ ಸೋಂಕಿನ ಭೀತಿ ಕಾಣಿಸಿಕೊಂಡ ದಿನದಿಂದಲೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿತಾಸಕ್ತಿ ರಕ್ಷಣೆಯ ದಿಸೆಯಲ್ಲಿ ಶಿಕ್ಷಣ ಇಲಾಖೆಯು ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿರುವುದು ಗಮನಾರ್ಹ.

ಈ ಕಾಳಜಿಯ ಮುಂದುವರಿಕೆಯ ಭಾಗವಾಗಿ ಏಪ್ರಿಲ್‌ನಲ್ಲೇ ಶಾಲಾ ಶುಲ್ಕವನ್ನು ಭರಿಸಬೇಕಾದ ಪಾಲಕರ ಮೇಲಿನ ಒತ್ತಡವನ್ನು ನಿವಾರಿಸಲು ಮುಂದಾಗಿರುವುದೂ ಸ್ವಾಗತಾರ್ಹ. ಶಿಕ್ಷಣ ಇಲಾಖೆಯಷ್ಟೇ ಪರಿಣಾಮಕಾರಿಯಾಗಿ ಎಲ್ಲ ಇಲಾಖೆಗಳೂ ವರ್ತಿಸಿದ್ದರೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟ ಒಂದಿಷ್ಟು ಸಹನೀಯವಾಗುತ್ತಿತ್ತೇನೋ?

‘ಅನೇಕ ಕುಟುಂಬಗಳು ಕೆಲಸ ಇಲ್ಲದೆ ಕುಳಿತಿರುವ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಗಳಿಗೆ ಹೃದಯ ಇರಬೇಕು’ ಎನ್ನುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್ ಅವರ ಮಾತು ಒಪ್ಪತಕ್ಕದ್ದು. ಬಿಕ್ಕಟ್ಟಿನ ಸಂದರ್ಭ ಮಾತ್ರವಲ್ಲ, ಎಲ್ಲ ಸಂದರ್ಭಗಳಲ್ಲೂ ಶಿಕ್ಷಣ ಸಂಸ್ಥೆಗಳು ಹೃದಯವಂತಿಕೆಯಿಂದಲೇ ವರ್ತಿಸಬೇಕು. ಶಿಕ್ಷಣ ನೀಡುವವರೇ ಹೃದಯಹೀನರಾದರೆ, ಅಂಥ ಸಂಸ್ಥೆಗಳಲ್ಲಿ ಕಲಿಯುವ ಮಕ್ಕಳು ಸಾಮಾಜಿಕ ಕಾಳಜಿಯ ಮನಃಸ್ಥಿತಿ ಹೊಂದುವುದು ಹೇಗೆ ಸಾಧ್ಯ? ಶಿಕ್ಷಣ ಎಂಬುದು ಮಾರಾಟದ ಸರಕಿನಂತೆ ಆದಾಗ, ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರವೇ ಮಾಡಬೇಕಾಗುತ್ತದೆ ಎನ್ನುವುದಕ್ಕೆ ಕೊರೊನಾ ಸೋಂಕಿನ ಸಂದರ್ಭದಲ್ಲಿ ಕೆಲವು ಖಾಸಗಿ ಶಾಲೆಗಳ ಧೋರಣೆಯೇ ಉದಾಹರಣೆಯಾಗಿದೆ.

ಕೊರೊನಾ ವೈರಾಣು ಸೃಷ್ಟಿಸಿರುವ ಬಿಕ್ಕಟ್ಟು ಸಾಮಾನ್ಯದ್ದಲ್ಲ. ಇಂಥ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಗಳು ತಮ್ಮಲ್ಲಿ ಓದುತ್ತಿರುವ ಮಕ್ಕಳ ಹಾಗೂ ಅವರ ಪಾಲಕರ ವಿಚಾರದಲ್ಲಿ ಹೃದಯವೈಶಾಲ್ಯದಿಂದ ವರ್ತಿಸಲಿ ಎಂದು ನಿರೀಕ್ಷೆ ಮಾಡುವುದು ತಪ್ಪಲ್ಲ. ಇಂಥ ಶಾಲೆಗಳ ಸಿಬ್ಬಂದಿಗೆ ಲಾಕ್‌ಡೌನ್‌ ಅವಧಿಯಲ್ಲಿ ವೇತನ ನಿಲ್ಲಿಸದಂತೆ ಆಡಳಿತ ಮಂಡಳಿಗಳಿಗೆ ಸೂಚಿಸುವ ಕೆಲಸವನ್ನೂ ಸರ್ಕಾರ ಮಾಡಬೇಕಿದೆ.

ಕೊರೊನಾ ಬಿಕ್ಕಟ್ಟು ಪರಿಹಾರ ಕಂಡ ಬಳಿಕ, ಮುಂಬರುವ ಶೈಕ್ಷಣಿಕ ವರ್ಷದ ಶುಲ್ಕದಲ್ಲಿ ವಿನಾಯಿತಿ ನೀಡುವಂತೆಯೂ ಆಡಳಿತ ಮಂಡಳಿಗಳ ಮನವೊಲಿಸಲು ಸರ್ಕಾರ ಪ್ರಯತ್ನಿಸಬೇಕು. ಆತಂಕ–ಆಪತ್ತಿನ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಗಳು ಹೃದಯ ಹೊಂದಿರಬೇಕು ಎಂದು ಅಪೇಕ್ಷಿಸುವ ಸರ್ಕಾರ, ತಾನು ಕೂಡ ತಾಯಿ ಹೃದಯವನ್ನು ಹೊಂದಿರುವುದು ಈ ಹೊತ್ತಿನ ಅಗತ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು