ಭಾನುವಾರ, ಸೆಪ್ಟೆಂಬರ್ 27, 2020
26 °C

ಶಾಲಾ ಮಕ್ಕಳ ಸುರಕ್ಷತೆ ಮಾರ್ಗಸೂಚಿ ಪಾಲನೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ರೂಪಿಸಿದೆ. ಶಾಲಾ ಮಕ್ಕಳ ಪೋಷಕರ ಸಲಹೆಗಳನ್ನು ಪರಿಗಣಿಸಿ ಈ ಮಾರ್ಗಸೂಚಿ ರೂಪಿಸಲಾಗಿದೆ. ಶಾಲಾ ಮಕ್ಕಳ ವಿಚಾರವಾಗಿ ಕಳೆದ ಕೆಲವು ವರ್ಷಗಳಲ್ಲಿ ವರದಿಯಾದ ಅಹಿತಕರ ವಿದ್ಯಮಾನಗಳು ಅವರ ಸುರಕ್ಷತೆ ವಿಚಾರವಾಗಿ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಮಕ್ಕಳು ಶಾಲೆಗೆ ತೆರಳುವಾಗ, ಶಾಲೆಯಿಂದ ಮರಳುವಾಗ ಮತ್ತು ಅವರು ಶಾಲಾ ಆವರಣದಲ್ಲಿ ಇದ್ದಾಗ ಇಂತಹ ಘಟನೆಗಳು ನಡೆದಿವೆ. ಆ ಹಿನ್ನೆಲೆಯಲ್ಲಿ ನೋಡಿದಾಗ ಈಗ ರೂಪಿಸಿರುವ ಕ್ರಮಗಳು ಸ್ವಾಗತಾರ್ಹವಾಗಿ ಕಾಣುತ್ತಿವೆ. ಶಾಲೆಯಲ್ಲಿ ಹಾಗೂ ಹೊರಗಡೆ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಪರಿಗಣಿಸಿ, ಮಕ್ಕಳಿಗೆ ಒಳ್ಳೆಯ–ಸ್ಪರ್ಶ ಹಾಗೂ ಕೆಟ್ಟ–ಸ್ಪರ್ಶ ಯಾವುದು ಎಂಬುದನ್ನು ಗುರುತಿಸುವ ಕುರಿತು ತಿಳಿವಳಿಕೆ ನೀಡಬೇಕು ಎನ್ನುವ ಅಂಶವನ್ನು ಮಾರ್ಗಸೂಚಿಗಳಲ್ಲಿ ಸೇರಿಸಲಾಗಿದೆ. ಅಲ್ಲದೆ, ಲೈಂಗಿಕ ಕಿರುಕುಳಕ್ಕೆ ತುತ್ತಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂಬ ಅಂಶ ಇದೆ. ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಮರಳುವಾಗ ಮಕ್ಕಳ ಸುರಕ್ಷತೆ ಖಾತರಿಪಡಿಸುವ ಉದ್ದೇಶದಿಂದ, ಶಾಲಾ ವಾಹನದಲ್ಲಿ ಆ ಶಾಲೆಯ ಮಹಿಳಾ ಸಿಬ್ಬಂದಿಯೊಬ್ಬರು ಇರಬೇಕು ಎಂದು ಸೂಚಿಸಲಾಗಿದೆ. ಆ ಮಹಿಳಾ ಸಿಬ್ಬಂದಿ, ಶಾಲಾ ವಾಹನದ ಕಟ್ಟಕಡೆಯ ಮಗುವನ್ನು ಮನೆಯ ಬಳಿ ಬಿಡುವವರೆಗೂ ಇರಬೇಕು. ಶಾಲಾ ಮಕ್ಕಳನ್ನು ಬಸ್‌ ಚಾಲಕನ ನಿಗಾವಣೆಯಲ್ಲಿ ಬಿಡುವುದು ಒಳಿತಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಶಾಲಾ ವಾಹನಗಳು ಶಾಲಾ ಆವರಣದಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವಂತಿಲ್ಲ ಎಂದೂ ಹೇಳಲಾಗಿದೆ. ಅಲ್ಲದೆ, ಶಾಲಾ ವಾಹನಗಳು ತಮ್ಮಲ್ಲಿ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಗಳನ್ನು, ಔಷಧಗಳನ್ನು ಇಟ್ಟುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ತಮ್ಮಲ್ಲಿಗೆ ಬರುವ ವಿದ್ಯಾರ್ಥಿಗಳ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು, ಅವರ ರಕ್ತದ ಗುಂಪಿನ ವಿವರಗಳನ್ನು, ಅವರಿಗೆ ಯಾವುದು ಅಲರ್ಜಿ ಎಂಬುದರ ಮಾಹಿತಿಯನ್ನು ಶಾಲೆಗಳು ಇಟ್ಟುಕೊಳ್ಳಬೇಕಾಗುತ್ತದೆ. ಇವು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರುತ್ತವೆ. ಶಾಲೆಗಳು ತಮ್ಮಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಪ್ರವೇಶ ನೀಡುವುದಕ್ಕೆ ಈ ಮಾರ್ಗಸೂಚಿಗಳು ಲಗಾಮು ಹಾಕಿವೆ. ಈ ಕ್ರಮವನ್ನು ಬಹುಹಿಂದೆಯೇ ಕೈಗೊಳ್ಳಬೇಕಿತ್ತು. ಪ್ರತಿ ಮಗುವಿಗೆ ಒಂದು ಚದರ ಮೀಟರ್‌ನಷ್ಟು ಸ್ಥಳಾವಕಾಶ ಸಿಗಬೇಕು ಎಂದು ಹೇಳಲಾಗಿದೆ. ಈಚಿನ ದಿನಗಳಲ್ಲಿ ಶಾಲೆಗಳನ್ನು ನಡೆಸುವುದು ಆಕರ್ಷಕ ಉದ್ದಿಮೆಯಾಗಿಬಿಟ್ಟಿದೆ. ಕೆಲವರು ಎಲ್ಲೆಂದರಲ್ಲಿ ಶಾಲೆಗಳನ್ನು ತೆರೆಯುತ್ತಿದ್ದಾರೆ. ತಾತ್ಕಾಲಿಕ ಶೆಡ್‌ಗಳಲ್ಲಿ ಕೂಡ ಶಾಲೆ ನಡೆಸಿದ ಉದಾಹರಣೆಗಳು ಇವೆ. ಅಲ್ಲದೆ, ಲಭ್ಯವಿರುವ ಸ್ಥಳಾವಕಾಶಕ್ಕಿಂತ ಹೆಚ್ಚಿನ ಮಕ್ಕಳಿಗೆ ಪ್ರವೇಶ ಕಲ್ಪಿಸುವುದರ ಪರಿಣಾಮವಾಗಿ ಮಕ್ಕಳಿಗೆ ಆಡಲು, ಓಡಲು ಅವಕಾಶ ಇಲ್ಲದಂತೆ ಆಗುತ್ತದೆ ಎಂಬುದು ಗಮನದಲ್ಲಿ ಇರಬೇಕು. ಪ್ರತಿ ಮಗುವಿಗೆ ಇಂತಿಷ್ಟು ಜಾಗ ಸಿಗಬೇಕು ಎಂದು ಸೂಚಿಸುವ ಮೂಲಕ ಸರ್ಕಾರವು ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಕೂಡಿಹಾಕುವ ಪದ್ಧತಿಗೆ ಅಂತ್ಯ ಹಾಡಲು ಯತ್ನಿಸಿದೆ. ಆದರೆ, ಇದು ಅನ್ವಯ ಆಗುವುದು 2017–18ರಲ್ಲಿ ಹಾಗೂ ಆ ಸಾಲಿನ ನಂತರ ಸ್ಥಾಪನೆ ಆದ ಶಾಲೆಗಳಿಗೆ ಮಾತ್ರ ಎಂದು ವರದಿಯಾಗಿದೆ. ಅದಕ್ಕೂ ಹಳೆಯ ಶಾಲೆಗಳನ್ನು ಈ ನಿಯಮದ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ನಿಗದಿ ಮಾಡಿರುವ ವರ್ಷಕ್ಕಿಂತ ಮೊದಲು ಸ್ಥಾಪನೆಯಾದ ಶಾಲೆಗಳಿಗೂ ಈ ನಿಯಮ ಕಡ್ಡಾಯ ಮಾಡಬೇಕು. ಒಂದೇ ಬಾರಿಗೆ ಕಡ್ಡಾಯಗೊಳಿಸಲು ಸಾಧ್ಯವಾಗದಿದ್ದರೆ ಹಂತ–ಹಂತವಾಗಿಯಾದರೂ ಮಾಡಬಹುದು. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಾಗ ಅವರು ಅಲ್ಲಿ ಸುರಕ್ಷಿತರಾಗಿರುತ್ತಾರೆ ಎಂಬ ನಿರೀಕ್ಷೆಯನ್ನೂ ಹೊಂದಿರುತ್ತಾರೆ. ಆದರೆ, ಶಾಲಾ ಬಸ್ಸುಗಳು ಅಪಘಾತಕ್ಕೆ ಈಡಾಗಿರುವುದು ಸೇರಿದಂತೆ ಮಕ್ಕಳಿಗೆ ಅಪಾಯ ತಂದೊಡ್ಡಿದ ಹತ್ತು ಹಲವು ಘಟನೆಗಳು, ಪೋಷಕರ ನಿರೀಕ್ಷೆಗಳಿಗೆ ತಕ್ಕಂತೆ ವ್ಯವಸ್ಥೆ ಇಲ್ಲ ಎಂಬುದನ್ನು ತೋರಿಸಿವೆ. ಈಗ ಸರ್ಕಾರವು ತಾನು ರೂಪಿಸಿದ ಮಾರ್ಗಸೂಚಿಗಳ ಕಡ್ಡಾಯ ಪಾಲನೆ ಆಗುವಂತೆ ನಿಗಾ ವಹಿಸಬೇಕು. ಈ ವಿಚಾರದಲ್ಲಿ ಶಾಲಾ ಆಡಳಿತ ಮಂಡಳಿಗಳ ಜೊತೆ ಪೋಷಕರೂ ಕೈಜೋಡಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.