ಮಂಗಳವಾರ, ಮಾರ್ಚ್ 28, 2023
29 °C

ಶಿಕ್ಷಕಸ್ನೇಹಿ, ಕಾಲಮಿತಿ ಬದ್ಧ ಹಾಗೂ ಪಾರದರ್ಶಕ ವರ್ಗಾವಣೆ ನಡೆಯಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಪ್ರತೀ ವರ್ಷ ವಿವಾದಕ್ಕೆ ಕಾರಣವಾಗುತ್ತಿದ್ದ ಶಾಲಾ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಈ ಬಾರಿ ಹೊಸ ರೂಪು ನೀಡಿದೆ. ಸೆಪ್ಟೆಂಬರ್‌ ಕೊನೆಯ ವಾರದಿಂದ ಆರಂಭವಾಗುವ ವರ್ಗಾವಣಾ ಪ್ರಕ್ರಿಯೆ ಇದೇ ಮೊದಲ ಬಾರಿಗೆ ‘ಶಿಕ್ಷಕಮಿತ್ರ’ ಹೆಸರಿನ ಆ್ಯಪ್‌ ಮೂಲಕ ನಡೆಯುತ್ತಿದೆ. ಈ ಮೂಲಕ ಹೆಚ್ಚಿನ ಗೊಂದಲಗಳಿಲ್ಲದೆ ವರ್ಗಾವಣೆ ನಡೆಯುವ ನಿರೀಕ್ಷೆಯು ಶಿಕ್ಷಕರ ವಲಯದಲ್ಲಿ ಮೂಡಿದೆ. ಆ್ಯಪ್‌ ಮೂಲಕವೇ ಶಿಕ್ಷಕರಿಗೆ ವರ್ಗಾವಣಾ ಆದೇಶವೂ ದೊರೆಯಲಿದೆ. ಸ್ಥಳ ಆಯ್ಕೆಗಾಗಿ ಶಿಕ್ಷಕರು ಕೌನ್ಸೆಲಿಂಗ್‌ ಕೇಂದ್ರಕ್ಕೆ ಬರುವುದನ್ನು ಬಿಟ್ಟರೆ, ವರ್ಗಾವಣೆಯ ಎಲ್ಲ ಕೆಲಸಗಳು ಆ್ಯಪ್‌ ಮೂಲಕವೇ ನಡೆಯಲಿವೆ. ಇದರಿಂದ ಶಿಕ್ಷಕರು ಕಚೇರಿಗೆ ಅಲೆಯುವುದು ತಪ್ಪುತ್ತದೆ. ಕೊರೊನಾ ಸೋಂಕಿನ ಆತಂಕದ ಸಂದರ್ಭದಲ್ಲಿ ಮನೆಯಲ್ಲಿದ್ದುಕೊಂಡೇ ಕೌನ್ಸೆಲಿಂಗ್‌ನ ಬಹುತೇಕ ಚಟುವಟಿಕೆಗಳನ್ನು ನಡೆಸುವುದು ಶಿಕ್ಷಕರ ಸುರಕ್ಷತೆಯ ದೃಷ್ಟಿಯಿಂದಲೂ ಸ್ವಾಗತಾರ್ಹ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರತೀ ವರ್ಷ ಗದ್ದಲ ಮತ್ತು ಗೊಂದಲಕ್ಕೆ ಕಾರಣವಾಗುತ್ತಿತ್ತು. ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದ ‘ಕಡ್ಡಾಯ ವರ್ಗಾವಣೆ’ ಹಲವು ಗೊಂದಲಗಳಿಂದ ಕೂಡಿತ್ತು, ಶಿಕ್ಷಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ವರ್ಗಾವಣೆ ಪ್ರಕ್ರಿಯೆ ಕೂಡ ಹಲವು ಬಾರಿ ಮುಂದಕ್ಕೆ ಹೋಗಿತ್ತು. ಆ ಗೊಂದಲಗಳನ್ನು ಬಗೆಹರಿಸುವ ಉದ್ದೇಶದಿಂದ, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳಿಗೆ ಈಗಿನ ಸರ್ಕಾರವು ತಿದ್ದುಪಡಿ ತಂದಿದೆ. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಆ್ಯಪ್‌ ರೂಪಿಸುವ ವಿಷಯವನ್ನು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿತ್ತು. ಪ್ರಸ್ತುತ ‘ಶಿಕ್ಷಕಮಿತ್ರ’ ಆ್ಯಪ್‌ ಬಳಕೆಗೆ ಸಿದ್ಧವಾಗಿದ್ದು, ಅದರ ಮೂಲಕವೇ ವರ್ಗಾವಣೆಯ ಎಲ್ಲ ಚಟುವಟಿಕೆಗಳು ನಡೆಯಲಿವೆ. ಇದು ಅತ್ಯಂತ ಪಾರದರ್ಶಕ ಹಾಗೂ ಶಿಕ್ಷಕಸ್ನೇಹಿ ವರ್ಗಾವಣೆ ನೀತಿ ಎಂದು ಶಿಕ್ಷಣ ಇಲಾಖೆ ಹೇಳಿಕೊಂಡಿದೆ. ಈವರೆಗಿನ ವರ್ಗಾವಣೆಗಳಲ್ಲಿನ ಗೊಂದಲಗಳು ಹಾಗೂ ಅಧಿಕಾರಿಗಳ ಹಸ್ತಕ್ಷೇಪ ಪ್ರಸ್ತುತ ಆ್ಯಪ್ ಮೂಲಕ ನಡೆಯುವ ಪ್ರಕ್ರಿಯೆಯಲ್ಲಿ ಇರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.

ಇದುವರೆಗೂ ವರ್ಗಾವಣೆ ಎನ್ನುವುದು ಕೆಲವು ಸಂದರ್ಭಗಳಲ್ಲಿ ಶಿಕ್ಷಕರಿಗೆ ಶಿಕ್ಷೆಯ ಭಾವನೆ ಹುಟ್ಟಿಸುತ್ತಿತ್ತು. ಈ ಮೊದಲು ಕೂಡ ಆನ್‌ಲೈನ್‌ ಮೂಲಕವೇ ವರ್ಗಾವಣೆಯ ಕೌನ್ಸೆಲಿಂಗ್‌ ನಡೆಯುತ್ತಿತ್ತು. ಆದರೆ, ಆ ಪ್ರಕ್ರಿಯೆಯಲ್ಲಿ ಆಗುತ್ತಿತ್ತು ಎನ್ನಲಾದ ಅಧಿಕಾರಿಗಳ ಹಸ್ತಕ್ಷೇಪದ ಬಗ್ಗೆ ದೂರುಗಳು ಕೆಲವು ಶಿಕ್ಷಕರಿಂದಲೇ ವ್ಯಕ್ತವಾಗಿದ್ದವು. ಗೊಂದಲದಿಂದ ಕೂಡಿದ್ದ ನಿಯಮಗಳ ಲಾಭವನ್ನು, ಸಂಘಟನೆಗಳ ಹೆಸರಿನಲ್ಲಿ ಒಂದೇ ಕಡೆ ಬೇರೂರಿದವರು ಹಾಗೂ ರಾಜಕಾರಣಿಗಳ ನಂಟುಳ್ಳ ಶಿಕ್ಷಕರು ಪಡೆಯುತ್ತಿದ್ದರು. ಅಂಥ ದೂರುಗಳಿಗೆ ಪ್ರಸಕ್ತ ವರ್ಗಾವಣೆ ನೀತಿಯಲ್ಲಿ ಅವಕಾಶವಿಲ್ಲ ಎಂದು ಭಾವಿಸಲಾಗಿದೆ. ಶೈಕ್ಷಣಿಕ ವರ್ಷ ಆರಂಭಗೊಂಡು ಎರಡು– ಮೂರು ತಿಂಗಳುಗಳಾದರೂ ಶಿಕ್ಷಕರು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ನಿಯೋಜನೆಗೊಳ್ಳುವ ಕೆಲಸವೇ ಪೂರ್ಣಗೊಳ್ಳುತ್ತಿರಲಿಲ್ಲ. ಅಂತಹ  ಸಂದರ್ಭಗಳಲ್ಲಿ, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿತ್ತು. ಪ್ರಸ್ತುತ ಕೊರೊನಾ ನಿರ್ಬಂಧಗಳ ಕಾರಣದಿಂದಾಗಿ ತರಗತಿಗಳಿನ್ನೂ ಆರಂಭಗೊಂಡಿಲ್ಲ. ತರಗತಿಗಳು ಆರಂಭಗೊಳ್ಳುವ ಮೊದಲೇ ವರ್ಗಾವಣೆ ಪ್ರಕ್ರಿಯೆ ಮುಗಿಯುವಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕು. ಹಾಗೆಯೇ ಪ್ರತೀ ವರ್ಷ ಬೇಸಿಗೆ ರಜೆ ಸಂದರ್ಭದಲ್ಲಿಯೇ ವರ್ಗಾವಣೆ ಚಟುವಟಿಕೆಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. ಹೊಸ ವ್ಯವಸ್ಥೆ ಪಾರದರ್ಶಕವಾದುದು ಹಾಗೂ ಶಿಕ್ಷಕಸ್ನೇಹಿ ಎಂದು ಇಲಾಖೆ ಹೇಳಿಕೊಂಡರೆ ಸಾಲದು. ಆ ವಿಶ್ವಾಸವು ಶಿಕ್ಷಕವೃಂದದಲ್ಲೂ ಮೂಡಬೇಕು. ವರ್ಗಾವಣೆಯು ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಿದೆ ಎನ್ನುವ ನಂಬಿಕೆ ಮೂಡಬೇಕು. ಅಪಸ್ವರಗಳಿಗೆ ಆಸ್ಪದ ಕಲ್ಪಿಸದೆ ಕಾಲಮಿತಿಯ ಬದ್ಧತೆಗೆ ಒಳಪಟ್ಟು ಕೌನ್ಸೆಲಿಂಗ್ ನಡೆಯುವಂತಾದರೆ, ಅದು ಶಿಕ್ಷಣ ಇಲಾಖೆಯ ಮಟ್ಟಿಗೆ ಬಹುದೊಡ್ಡ ಸಾಧನೆಯೇ ಸರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು