ಶನಿವಾರ, ಜನವರಿ 16, 2021
24 °C

ಸಂಪಾದಕೀಯ: ಶುಲ್ಕ ಪಾವತಿಸದ ಕಾರಣದಿಂದ ಮಕ್ಕಳ ಶಿಕ್ಷಣ ಮೊಟಕಾಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಶಾಲಾ ಶುಲ್ಕವನ್ನು ಪಾವತಿಸದ ಮಕ್ಕಳಿಗೆ ನವೆಂಬರ್‌ 30ರ ಬಳಿಕ ಆನ್‌ಲೈನ್‌ ಶಿಕ್ಷಣವನ್ನು ಮುಂದುವರಿಸುವುದಿಲ್ಲ’ ಎಂದು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ನಿರ್ದಾಕ್ಷಿಣ್ಯವಾಗಿ ಹೇಳಿರುವುದು ಕಳವಳಕಾರಿ. ತರಗತಿ ಪಾಠವಿಲ್ಲದೆ ಮೊದಲೇ ಕುಂಠಿತಗೊಂಡಿರುವ ಮಕ್ಕಳ ಶಿಕ್ಷಣವು ಎಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಈಡಾಗುವುದೋ ಎನ್ನುವ ಆತಂಕ ಪೋಷಕರನ್ನು ಕಾಡುತ್ತಿದೆ. ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲ; ಇತರ ಆಡಳಿತಾತ್ಮಕ ವೆಚ್ಚಗಳನ್ನೂ ಭರಿಸಲು ಆಗುತ್ತಿಲ್ಲ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಒಂದೆಡೆ, ಆಡಳಿತ ಮಂಡಳಿಗಳ ಮೇಲಿರುವ ಆರ್ಥಿಕ ಹೊರೆಯನ್ನು ಯಾರೂ ಅಲ್ಲಗಳೆಯಲಾರರು.

ಇನ್ನೊಂದೆಡೆ, ಪ್ರಸಕ್ತ ಸಾಲಿನಲ್ಲಿ ಶುಲ್ಕ ತುಂಬಲು ಸಾಧ್ಯವಾಗದ ಸ್ಥಿತಿಯಲ್ಲಿ ಹಲವು ಪೋಷಕರು ತೊಳಲಾಡುತ್ತಿರುವುದೂ ಸುಳ್ಳಲ್ಲ. ಅಸಾಧಾರಣವಾದ ಸಂದರ್ಭ ಇದು. ಕೊರೊನಾ ಸಂಕಷ್ಟ ಇಂತಹ ಕೆಟ್ಟ ಸ್ಥಿತಿಯನ್ನು ತಂದೊಡ್ಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಹಲವು ಶಿಕ್ಷಣ ಸಂಸ್ಥೆಗಳು, ಆ ಸಂದರ್ಭದಲ್ಲೇ ಹೆಚ್ಚಿನ ಶುಲ್ಕವನ್ನು ಆಕರಿಸಿದ ಕುರಿತು ದೂರುಗಳು ಕೇಳಿಬಂದಿದ್ದವು. ಆಗ, ಬೋಧನಾ ಶುಲ್ಕವನ್ನು ಹೆಚ್ಚಳ ಮಾಡದಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದ ರಾಜ್ಯ ಸರ್ಕಾರವು ಶುಲ್ಕ ಪಾವತಿಸಲು ಸಾಮರ್ಥ್ಯವಿಲ್ಲದ ಪೋಷಕರ ಮೇಲೆ ಒತ್ತಡ ಹೇರುವಂತಿಲ್ಲ ಎಂದೂ ತಿಳಿಸಿತ್ತು. ನಂತರದ ದಿನಗಳಲ್ಲಿ ಶೈಕ್ಷಣಿಕ ವರ್ಷದ ಮೊದಲ ಅವಧಿಯ ಶುಲ್ಕವನ್ನು ಸಂಗ್ರಹಿಸಲು ಆಡಳಿತ ಮಂಡಳಿಗಳಿಗೆ ಅನುಮತಿಯನ್ನು ನೀಡಿತ್ತು.

ಆದರೆ, ಇದುವರೆಗೆ ಶೇ 30ರಷ್ಟು ಮಕ್ಕಳ ಪೋಷಕರು ಮಾತ್ರ ಶುಲ್ಕ ಪಾವತಿಸಿದ್ದು, ಮಿಕ್ಕವರು ಇನ್ನೂ ನೀಡಿಲ್ಲ ಎನ್ನುವುದು ಆಡಳಿತ ಮಂಡಳಿಗಳ ವಾದ. ಪ್ರಸಕ್ತ ಸಾಲಿನ ಎರಡನೇ ಅವಧಿಯ ಶುಲ್ಕ ಸಂಗ್ರಹಕ್ಕೂ ಅನುಮತಿ ನೀಡಬೇಕು ಎಂಬ ಬೇಡಿಕೆಯನ್ನು ಸಹ ಅವುಗಳು ಶಿಕ್ಷಣ ಇಲಾಖೆಯ ಮುಂದಿಟ್ಟಿವೆ. ಹಾಗೆಯೇ, ಎಂದಿನಂತೆ ಶಾಲೆಗಳನ್ನು ನಡೆಸುವುದಕ್ಕೂ ಆನ್‌ಲೈನ್‌ನಲ್ಲಿ ಪಾಠ ಮಾಡಿಸುವುದಕ್ಕೂ ಅಜಗಜಾಂತರವಿದೆ. ಹಿಂದಿನಂತೆ ಪೂರ್ಣಪ್ರಮಾಣದಲ್ಲಿ ಶುಲ್ಕ ಆಕರಿಸದೆ ಈ ಸಲ ವಿನಾಯಿತಿಯನ್ನು ಘೋಷಿಸಬೇಕು ಎಂಬ ಒತ್ತಾಯ ಹಲವು ಪೋಷಕರಿಂದ ಕೇಳಿಬಂದಿದೆ.

ಎಲ್ಲರೂ ಸಂಕಷ್ಟ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಯಾರಿಗೂ ಹೆಚ್ಚಿನ ಹೊರೆ ಆಗದಂತಹ ಸಂಕಷ್ಟ ನಿವಾರಣೆ ಸೂತ್ರ ಇಂದಿನ ಜರೂರು. ಶಾಲಾ ಆಡಳಿತ ಮಂಡಳಿಗಳು ಹಾಗೂ ಪೋಷಕರ ನಡುವಿನ ಈ ಬಿಕ್ಕಟ್ಟು ಸುಸೂತ್ರವಾಗಿ ಬಗೆಹರಿಯುವಂತಾಗಲು ಶಿಕ್ಷಣ ಇಲಾಖೆಯ ಹೊಣೆಗಾರಿಕೆ ಮಹತ್ವದ್ದಾಗಿದೆ. ಮಧ್ಯಸ್ಥಿಕೆ ವಹಿಸಿ, ಪರಿಹಾರ ಸೂತ್ರವನ್ನು ರೂಪಿಸಬೇಕಾದ ಜವಾಬ್ದಾರಿ ಅದರ ಮೇಲಿದೆ. ಈ ಸಂಬಂಧ ಮಾತುಕತೆ ನಡೆಸುವುದಾಗಿ ಶಿಕ್ಷಣ ಸಚಿವರು ಹೇಳಿರುವುದು ಸ್ವಾಗತಾರ್ಹ.

ಪೂರ್ಣಪ್ರಮಾಣದ ಶುಲ್ಕವನ್ನು ಭರಿಸುವಂತೆ ಆಡಳಿತ ಮಂಡಳಿಗಳು ಪಟ್ಟು ಹಿಡಿಯದೆ ಹೃದಯವಂತಿಕೆ ಮೆರೆಯಬೇಕು. ಶುಲ್ಕದಲ್ಲಿ ಗರಿಷ್ಠ ಪ್ರಮಾಣದ ವಿನಾಯಿತಿ ಘೋಷಿಸಿ, ಆ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅನುವು ಮಾಡಿಕೊಡಬೇಕು. ಶಾಲೆಗಳನ್ನು ನಡೆಸುವ ಕಷ್ಟವನ್ನು ಅರ್ಥ ಮಾಡಿಕೊಂಡು ಸಾಮರ್ಥ್ಯವಿರುವ ಪೋಷಕರಾದರೂ ಶುಲ್ಕವನ್ನು ಭರಿಸಲು ಮುಂದಾಗಬೇಕು. ಶುಲ್ಕ ಪಾವತಿಯಾಗದ ಕಾರಣಕ್ಕೆ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವುದು ಎಲ್ಲರ ಕಾಳಜಿಯಾಗಬೇಕು. ‘ಶುಲ್ಕ ಪಾವತಿಸದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಇಲ್ಲ’ ಎನ್ನುವ ಧೋರಣೆಯಿಂದ ಆಡಳಿತ ಮಂಡಳಿಗಳು ಹಿಂದೆ ಸರಿಯಬೇಕು.

ಮಾನವೀಯತೆ ಮರೆತು ಯಾವುದೇ ಶಿಕ್ಷಣ ಸಂಸ್ಥೆಯು ಮಗುವನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರಗಿಟ್ಟರೆ, ಅದು ಸರ್ಕಾರದ ಸೂಚನೆಯ ಸ್ಪಷ್ಟ ಉಲ್ಲಂಘನೆ ಆಗುತ್ತದೆ. ಅಂತಹ ಸಂಸ್ಥೆಯ ವಿರುದ್ಧ ದಾಕ್ಷಿಣ್ಯವಿಲ್ಲದೆ ಶಿಕ್ಷಣ ಇಲಾಖೆಯು ಕ್ರಮ ಕೈಗೊಳ್ಳಬೇಕು. ಪೋಷಕರಿಂದ ದೂರುಗಳನ್ನು ಸ್ವೀಕರಿಸಿ, ಅಂತಹ ದೂರುಗಳನ್ನು ತಕ್ಷಣ ಪರಿಹರಿಸಲು ಸಮರ್ಥ ವ್ಯವಸ್ಥೆಯೊಂದನ್ನು ರೂಪಿಸಬೇಕು. ಶಾಲಾ ಆಡಳಿತ ಮಂಡಳಿಗಳಿಂದ ಪೋಷಕರು ಕಿರುಕುಳಕ್ಕೆ ಒಳಗಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾರ್ಗವನ್ನೂ ಕಂಡುಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು