ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಕೇಂದ್ರದಿಂದ ಎಕ್ಸೈಸ್ ಸುಂಕ ಇಳಿಕೆ; ರಾಜ್ಯಗಳೂ ಅನುಕರಿಸಿದರೆ ಉತ್ತಮ

Published : 22 ಮೇ 2022, 19:30 IST
ಫಾಲೋ ಮಾಡಿ
Comments

ಹಣದುಬ್ಬರ ಹೆಚ್ಚಳ ಎಂಬುದು ಈಗ ಅರ್ಥಶಾಸ್ತ್ರಜ್ಞರ ನಡುವಿನ ಚರ್ಚೆಗಳಲ್ಲಿ, ಪತ್ರಿಕೆಗಳ ವರದಿಗಳಲ್ಲಿ ಮಾತ್ರ ಉಲ್ಲೇಖವಾಗುವ ವಿಚಾರವಾಗಿ ಉಳಿದಿಲ್ಲ. ಅದು ಪ್ರತಿನಿತ್ಯದ ಜೀವನದಲ್ಲಿ ಅರಿವಿಗೆ ಬರುತ್ತಿದೆ. ಹಣದುಬ್ಬರದ ಬಿಸಿ ಎಷ್ಟಿದೆಯೆಂದರೆ, ಜನವರಿಯಿಂದ ಈಚೆಗೆ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟವನ್ನೂ ಮೀರಿ ನಿಂತಿದೆ. ಇದೇ ಕಾರಣಕ್ಕೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಈ ತಿಂಗಳ ಆರಂಭದಲ್ಲಿ ಹಠಾತ್ತನೆ ರೆಪೊ ದರವನ್ನು ಶೇಕಡ 0.40ರಷ್ಟು ಜಾಸ್ತಿ ಮಾಡಿತು.

ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸುವ ಹೊಣೆಯು ಆರ್‌ಬಿಐ ಮೇಲಿದೆ ಎಂಬುದು ನಿಜವಾದರೂ, ಹಣದುಬ್ಬರ ವಿರುದ್ಧದ ಯುದ್ಧವನ್ನು ಆರ್‌ಬಿಐ ಏಕಾಂಗಿಯಾಗಿ ನಡೆಸಲಾಗದು. ಅದಕ್ಕೆ ಸರ್ಕಾರಗಳ ನೆರವು ಬೇಕೇ ಬೇಕು. ಮೇ ತಿಂಗಳಲ್ಲಿ ರೆಪೊ ದರ ಏರಿಸುವ ಮೊದಲು ಆರ್‌ಬಿಐ, ‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ತಗ್ಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಲು ಯತ್ನಿಸಿತ್ತು’ ಎಂದು ವರದಿಯಾಗಿದೆ. ಅದು ಸಾಧ್ಯವಾಗದ ಕಾರಣ ರೆಪೊ ದರವನ್ನು ಹಠಾತ್ತನೆ ಜಾಸ್ತಿ ಮಾಡುವ ತೀರ್ಮಾನ ಕೈಗೊಂಡಿರಬಹುದು. ಮಾರ್ಚ್‌ 22ರಿಂದ 10 ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರಿಗೆ ತಲಾ ₹ 10ರಷ್ಟು ಹೆಚ್ಚಿಸಲಾಗಿತ್ತು.

‘ಎಕ್ಸೈಸ್ ಸುಂಕ ತಗ್ಗಿಸುವಂತೆ ಆರ್‌ಬಿಐ ಕೇಂದ್ರಕ್ಕೆ ಮನವಿ ಮಾಡಿಕೊಂಡಿತು, ಬೇಡಿಕೊಂಡಿತು, ಕಿವಿಮಾತು ಹೇಳಿತು. ಆದರೆ ಪ್ರತಿಕ್ರಿಯೆ ಸಿಗಲಿಲ್ಲ. ಇದೇ ರೀತಿ ಮಾಡುವಂತೆ ರಾಜ್ಯ ಸರ್ಕಾರಗಳನ್ನೂ ಕೇಳಿಕೊಂಡಿತು. ಆದರೆ ಪರಿಣಾಮ ಆಗಲಿಲ್ಲ’ ಎಂದು ಕೂಡ ವರದಿಯಾಗಿತ್ತು. ಈಗ ಕೇಂದ್ರವು ಮುಂದಡಿ ಇರಿಸಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ತಗ್ಗಿಸಿದೆ. ಇದು ಸ್ವಾಗತಾರ್ಹ. ಈ ಇಳಿಕೆಯ ಪರಿಣಾಮವಾಗಿ ಎಕ್ಸೈಸ್ ಸುಂಕದ ಮೊತ್ತವು ಕೋವಿಡ್‌ ಪೂರ್ವದ ಹಂತವನ್ನು ತಲುಪಿದೆ. ಚಿಲ್ಲರೆ ಹಣದುಬ್ಬರ ಹಾಗೂ ಸಗಟು ಹಣದುಬ್ಬರ ಪ್ರಮಾಣವು ದಾಖಲೆಯ ಮಟ್ಟದಲ್ಲಿ ಇರುವ ಈ ಸಂದರ್ಭದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಗ್ಗಿಸುವುದು ಅನಿವಾರ್ಯವಾಗಿತ್ತು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹವಾಗುವ ಮಾಸಿಕ ವರಮಾನದ ಮೊತ್ತವು ಹಿಂದಿನ ವರ್ಷದ ಜುಲೈನಿಂದ ₹ 1 ಲಕ್ಷ ಕೋಟಿಗಿಂತ ಹೆಚ್ಚಿನ ಮಟ್ಟದಲ್ಲಿಯೇ ಇದೆ. 2022ರ ಏಪ್ರಿಲ್‌ನಲ್ಲಿ ದಾಖಲೆಯ ₹ 1.68 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಜಿಎಸ್‌ಟಿ ವರಮಾನ ದಾಖಲೆಯ ಮಟ್ಟದಲ್ಲಿ ಇದ್ದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು ಎಂಬ ಆಗ್ರಹಕ್ಕೆ ಬಲವಾದ ನೆಲೆಗಟ್ಟನ್ನು ಒದಗಿಸಿಕೊಟ್ಟಿತ್ತು. ಅದಲ್ಲದೆ, ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿಯೇ ಬಹುಕಾಲ ಉಳಿದರೆ ದೇಶದ ಆರ್ಥಿಕ ಬೆಳವಣಿಗೆಯು ಮಂದವಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ದರವು ಪ್ರತೀ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆಯಾದರೂ, ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ನಂತರದಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಹೆಚ್ಚಾಗಿದೆ. ಭಾರತಕ್ಕೆ ರಷ್ಯಾ ರಿಯಾಯಿತಿ ದರದಲ್ಲಿ ತೈಲ ಪೂರೈಸುತ್ತಿದೆ. ಭಾರತಕ್ಕೆ ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ರಷ್ಯಾ ನಾಲ್ಕನೆಯ ಸ್ಥಾನಕ್ಕೆ ಏರಿದೆ ಎಂದು ಈಚಿನ ವರದಿಯೊಂದು ಹೇಳಿದೆ.

ರಷ್ಯಾದಿಂದ ಮಾರುಕಟ್ಟೆ ದರಕ್ಕಿಂತ ಕಡಿಮೆಗೆ ತೈಲ ಸಿಗುತ್ತಿರುವುದು ಕೂಡ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಬೇಕು ಎಂಬ ಆಗ್ರಹಕ್ಕೆ ಪುಷ್ಟಿ ನೀಡಿತ್ತು. ರಷ್ಯಾದಿಂದ ಎಷ್ಟು ಬೆಲೆಗೆ ಕಚ್ಚಾ ತೈಲ ಪೂರೈಕೆ ಆಗುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರವು ಬಹಿರಂಗಪಡಿಸಿಲ್ಲ. ಅಲ್ಲಿಂದ ಸಿಗುತ್ತಿರುವ ರಿಯಾಯಿತಿ ದರದ ತೈಲ ಕೂಡ ಕೇಂದ್ರಕ್ಕೆ ಈಗಿನ ತೀರ್ಮಾನ ಕೈಗೊಳ್ಳಲು ಒಂದು ಒತ್ತಾಸೆಯಾಗಿ ಕೆಲಸ ಮಾಡಿರುವ ಸಾಧ್ಯತೆ ಇದೆ. ಕೇಂದ್ರವು ಎಕ್ಸೈಸ್ ಸುಂಕ ಕಡಿತ ಮಾಡಿದ ನಂತರದಲ್ಲಿ ಮಹಾರಾಷ್ಟ್ರ, ಕೇರಳ, ಒಡಿಶಾ ಹಾಗೂ ರಾಜಸ್ಥಾನ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಇಳಿಕೆ ಮಾಡಿವೆ. ಆದರೆ, ಕರ್ನಾಟಕವು ಇದುವರೆಗೂ ಈ ವಿಚಾರವಾಗಿ ತೀರ್ಮಾನ ತೆಗೆದುಕೊಂಡಿಲ್ಲ. ರಾಜ್ಯ ಸರ್ಕಾರ ಕೂಡ ವ್ಯಾಟ್ ಇಳಿಕೆ ಮಾಡಿ, ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇನ್ನಷ್ಟು ತಗ್ಗುವಂತೆ ಮಾಡುವ ದಿಸೆಯಲ್ಲಿ ಆಲೋಚಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT