ಮಹಾರಾಷ್ಟ್ರದ ಮಾಲ್ವಣ್‌ನ ರಾಜ್‌ಕೋಟ್ ಕೋಟೆಯಲ್ಲಿ ಸ್ಥಾಪಿಸಲಾಗಿದ್ದ ಛತ್ರಪತಿ ಶಿವಾಜಿಯ 35 ಅಡಿ ಎತ್ತರದ ಪ್ರತಿಮೆ ಉರುಳಿ ಬಿದ್ದಿದೆ. ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಸನಿಹದಲ್ಲಿರುವ ಕಾರಣ ಇದು ಅಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ನೌಕಾಪಡೆ ದಿನಾಚರಣೆಯ ಭಾಗವಾಗಿ ಭಾರತೀಯ ನೌಕಾಪಡೆಯ ಖರ್ಚಿನಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಈ ಪ್ರತಿಮೆಯ ನಿರ್ಮಾಣ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಡಿಸೆಂಬರ್ 4ರಂದು ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಅನಾವರಣಗೊಂಡು ವರ್ಷ ತುಂಬುವ ಮೊದಲೇ ಶಿವಾಜಿ ಪ್ರತಿಮೆ ಕುಸಿದಿದೆ. ಆರಂಭದಲ್ಲಿ, ಈ ದುರ್ಘಟನೆಗೆ ಯಾರು ಕಾರಣ ಎಂಬುದರ ಕುರಿತಂತೆ ನೌಕಾಪಡೆ ಮತ್ತು ಮಹಾರಾಷ್ಟ್ರ ಸರ್ಕಾರ ಪರಸ್ಪರ ಬೊಟ್ಟು ಮಾಡಿಕೊಂಡಿದ್ದವು.
ನಿರ್ವಹಣೆಯ ಹೊಣೆ ನೌಕಾಪಡೆಯದ್ದೇ ಆಗಿತ್ತು ಎಂದು ಲೋಕೋಪಯೋಗಿ ಇಲಾಖೆ ಹೇಳಿತ್ತು. ಪ್ರತಿಮೆಯ ನಿರ್ವಹಣೆಯ ಉಸ್ತುವಾರಿ ಸ್ಥಳೀಯಾಡಳಿತದ್ದು ಎಂದು ನೌಕಾಪಡೆ ಹೇಳಿತ್ತು. ಪ್ರತಿಮೆ ಶಿಥಿಲವಾಗಿದೆ; ನಟ್ಟು–ಬೋಲ್ಟ್‌ಗಳೆಲ್ಲ ತುಕ್ಕು ಹಿಡಿದಿವೆ ಎಂಬ ವಿವರಗಳುಳ್ಳ ಪತ್ರವನ್ನು ಲೋಕೋಪಯೋಗಿ ಇಲಾಖೆಯು ನೌಕಾಪಡೆಗೆ ಪ್ರತಿಮೆ ಉರುಳುವುದಕ್ಕೆ ಕೆಲವು ದಿನಗಳ ಮುಂಚೆ ಬರೆದಿತ್ತು. ಪ್ರತಿಮೆ ಇದ್ದ ಸ್ಥಳಕ್ಕೆ ಪ್ರತಿದಿನವೂ ಸಾವಿರಾರು ಜನರು ಭೇಟಿ ಕೊಡುತ್ತಾರೆ. ಹಾಗಿದ್ದರೂ ಅಷ್ಟೊಂದು ದೊಡ್ಡ ಪ್ರತಿಮೆ ಶಿಥಿಲವಾಗಿದೆ ಎಂಬುದು ತಿಳಿದ ಮೇಲೂ ಎರಡೂ ಕಡೆಯವರು ನಿರ್ಲಕ್ಷ್ಯ ಮಾಡಿರುವುದು ಅಕ್ಷಮ್ಯ.
ಪ್ರತಿಮೆ ನಿರ್ಮಾಣದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಪ್ರತಿಮೆ ನಿರ್ಮಿಸಿದ ಕಲಾವಿದ ಜಯದೇವ ಆಪ್ಟೆ ಅವರಿಗೆ ಇಷ್ಟೊಂದು ದೊಡ್ಡ ಪ್ರತಿಮೆ ನಿರ್ಮಿಸಿದ ಅನುಭವವೇ ಇಲ್ಲ. ಸಂಘ ಪರಿವಾರದ ಸಂಘಟನೆಗಳ ಜೊತೆ ಅವರಿಗೆ ಇರುವ ನಂಟಿನ ಕಾರಣಕ್ಕೆ ಪ್ರತಿಮೆ ನಿರ್ಮಾಣದ ಗುತ್ತಿಗೆ ನೀಡಲಾಗಿದೆ ಎಂದೂ ವಿರೋಧ ಪಕ್ಷಗಳು ಆರೋಪಿಸಿವೆ. ಈಗ, ಪ್ರತಿಮೆ ಕುಸಿದ ಕಾರಣದಿಂದ ಈ ಎಲ್ಲ ಆರೋಪಗಳಲ್ಲಿಯೂ ಹುರುಳು ಇದೆ ಎಂದೇ ಅನಿಸುತ್ತದೆ.
ಶಿವಾಜಿ ಎಂಬ ಹೆಸರು ಮಹಾರಾಷ್ಟ್ರದ ಮಟ್ಟಿಗೆ ಭಾವನಾತ್ಮಕವಾದುದು ಮತ್ತು ಬಹುದೊಡ್ಡ ಸಂಕೇತ. ವಿಧಾನಸಭೆ ಚುನಾವಣೆಯು ಹೊಸ್ತಿಲಲ್ಲಿಯೇ ಇರುವಾಗ ಯಾವ ಪಕ್ಷವೂ ಇಂತಹುದೊಂದು ವಿವಾದ
ವನ್ನು ಕೈಬಿಡುವುದಿಲ್ಲ. ಪ್ರತಿಮೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬುದಕ್ಕಿಂತ ಶಿವಾಜಿಗೆ ರಾಜ್ಯ ಸರ್ಕಾರವು ಅವಮಾನ ಮಾಡಿದೆ ಎಂದೇ ಬಿಂಬಿಸಲು ಉದ್ಧವ್ ಠಾಕ್ರೆ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಆಘಾಡಿ (ಎಂವಿಎ) ಪ್ರಯತ್ನಿಸುತ್ತಿದೆ. ಅದರಲ್ಲಿ ಸ್ವಲ್ಪಮಟ್ಟಿನ ಯಶಸ್ಸು ಕೂಡ ಈ ಮೈತ್ರಿಕೂಟಕ್ಕೆ ದೊರೆತಿದೆ. ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆ ಆಗಿತ್ತು. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪ್ರತಿಮೆ ಕುಸಿದಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಿ, ‘ಶಿವಾಜಿ ಮಹಾರಾಜ್ ಅಂದರೆ ನಮಗೆ ಒಬ್ಬ ರಾಜ ಮಾತ್ರ ಅಲ್ಲ, ದೇವರಿಗೆ ಸಮಾನ’ ಎಂದು ಆದ ಹಾನಿಯನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರು.
ಬಿಜೆಪಿ ರಾಜ್ಯದಾದ್ಯಂತ ಎಂವಿಎ ವಿರುದ್ಧ ಪ‍್ರತಿಭಟನೆಯನ್ನೂ ನಡೆಸಿತು. ಧರ್ಮ, ಜಾತಿ ನಡುವೆ ಬಿರುಕು ಮೂಡಿಸುವುದು, ಭಾವನಾತ್ಮಕತೆಯನ್ನು ಕೆಣಕಿ ಜನರು ಉನ್ಮಾದಗೊಳ್ಳುವಂತೆ ಮಾಡುವುದೇ ಈ ಕಾಲದ ರಾಜಕೀಯ ತಂತ್ರಗಾರಿಕೆ ಆಗಿಬಿಟ್ಟಿದೆ. ಬಿಜೆಪಿ ಹಿಂದಿನಿಂದಲೂ ಅದನ್ನು ಮಾಡುತ್ತಲೇ ಬಂದಿದೆ ಎಂಬುದು ಆ ಪಕ್ಷದ ಮೇಲೆ ಇರುವ ಬಹುದೊಡ್ಡ ಆರೋಪ. ಈ ಬಾರಿ ಅದೇ ತಂತ್ರವನ್ನು ಎಂವಿಎ ಬಿಜೆಪಿಯತ್ತಲೇ ತಿರುಗಿಸಿಬಿಟ್ಟಿದೆ. ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟ ಮಹಾಯುತಿಯಲ್ಲಿ ಬಿರುಕುಗಳೂ ಕಾಣಿಸಿಕೊಂಡಿವೆ. ಶಿವಸೇನಾದ ಮುಖಂಡ ಮತ್ತು ಸಚಿವ ತಾನಾಜಿ ಸಾವಂತ್ ಅವರ ಹೇಳಿಕೆಯೊಂದು ಎನ್‌ಸಿಪಿ ಮುಖಂಡರು ಕೆರಳುವಂತೆ ಮಾಡಿದೆ. ‘ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ನನಗೆ ಜೀವನ ಪರ್ಯಂತ ಹೊಂದಿಕೊಳ್ಳಲಾಗದು. ಸಚಿವ ಸಂಪುಟ ಸಭೆಯಲ್ಲಿ ಅವರ ಸಮೀಪ ಕೂರುತ್ತೇನೆ. ಆದರೆ ಹೊರಗೆ ಹೋದ ಮೇಲೆ ನನಗೆ ವಾಂತಿ ಬರುತ್ತದೆ’ ಎಂದು ಅವರು ಹೇಳಿದ್ದಾರೆ. ಹೀಗೆ, ಮಹಾಯುತಿಗೆ ಏಟಿನ ಮೇಲೆ ಏಟು ಬೀಳುತ್ತಲೇ ಇದೆ. ಹಾಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿ, ಜನಪರ ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆ ಇಲ್ಲ. ಬದಲಿಗೆ ಎರಡೂ ಮೈತ್ರಿಕೂಟಗಳು ಭಾವನಾತ್ಮಕತೆಯನ್ನು ಕೆದಕಿ ಚುನಾವಣೆ ಎದುರಿಸಲಿವೆ ಎಂಬುದರ ಸ್ಪಷ್ಟ ಕುರುಹುಗಳು ಈಗಲೇ ನಮ್ಮ ಮುಂದೆ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.