ಬೀದಿ ನಾಯಿಗಳಿಗೆ ಪ್ರತಿ ದಿನ ಪೌಷ್ಟಿಕ ಆಹಾರ ನೀಡಲು ₹2.88 ಕೋಟಿ ವೆಚ್ಚದ ಯೋಜನೆಯೊಂದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿದೆ. ಪಾಲಿಕೆಯ ಯೋಜನೆ ಮೇಲ್ನೋಟಕ್ಕೆ ಮಾನವೀಯ ಅಂತಃಕರಣದ ಅಭಿವ್ಯಕ್ತಿಯಂತಿದೆ. ಆದರೆ, ಮಹಾನಗರದ ನಾಗರಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿಸುವ ಪಾಲಿಕೆಯ ಪ್ರಾಣಿದಯೆ ಅನುಮಾನಕ್ಕೆ ಆಸ್ಪದ ಕಲ್ಪಿಸುವಂತಿದೆ. ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದಾಗದೆ ಹೋದುದರಿಂದ, ಪಾಲಿಕೆಯೇ ಆಹಾರ ಪೂರೈಸಲಿದೆ ಎಂದು ಬಿಬಿಎಂಪಿಯ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತರು ಹೇಳಿದ್ದಾರೆ. ಅವರ ಮಾತು, ಸಮುದಾಯದ ಸಂವೇದನೆಯನ್ನು ಅವಮಾನಿಸುವಂತಿದೆ ಹಾಗೂ ಪಾಲಿಕೆಗೆ ತಾನು ಮಾಡಬೇಕಾದುದರ ಕುರಿತು ಉಂಟಾಗಿರುವ ಮರೆವೆಯನ್ನು ಸಂಕೇತಿಸುವಂತಿದೆ. ಬೆಂಗಳೂರಿನ ನಾಗರಿಕರ ಪ್ರೀತಿ ಮತ್ತು ಕಾಳಜಿಯಿಂದಲೇ ಪ್ರತಿ ಬಡಾವಣೆಯಲ್ಲೂ ನೂರಾರು ಬೀದಿ ನಾಯಿಗಳು ಈವರೆಗೂ ಜೀವವುಳಿಸಿಕೊಂಡಿವೆ. ಉದ್ಯಾನಗಳಲ್ಲಿ ಬೀದಿ ನಾಯಿಗಳಿಗೆ ಬಿಸ್ಕತ್ತು ನೀಡುವ ಸಹೃದಯರು ಹಾಗೂ ತಮ್ಮ ಮನೆಗಳ ಸುತ್ತಮುತ್ತ ಓಡಾಡಿಕೊಂಡಿರುವ ನಾಯಿಗಳಿಗೆ ಊಟ ನೀಡುವ ಗೃಹಿಣಿಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬೀದಿ ನಾಯಿಗಳೂ ಸೇರಿದಂತೆ ಪ್ರಾಣಿಗಳ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುವ ಸಾಕಷ್ಟು ಸಂಸ್ಥೆಗಳೂ, ಸ್ವಯಂ ಸೇವಕರೂ ಇದ್ದಾರೆ. ಅವರ ಮೂಲಕ ಬೀದಿ ನಾಯಿಗಳ ಹಿತಾಸಕ್ತಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲು ಬಿಬಿಎಂಪಿ ಮುಂದಾಗಬಹುದಿತ್ತು. ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದರಲ್ಲಿ ಹಾಗೂ ಆಕ್ರಮಣಶೀಲವಾಗಿ ವರ್ತಿಸುವ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವಲ್ಲಿ ವಿಫಲವಾಗಿರುವ ಪಾಲಿಕೆಗೆ ಇದ್ದಕ್ಕಿದ್ದಂತೆ ಪ್ರಾಣಿಪ್ರೀತಿ ಉಂಟಾಗಿರುವುದು ಅಚ್ಚರಿ ಹುಟ್ಟಿಸುವಂತಿದೆ. ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಆಹಾರ ನೀಡುವ ಕಾರ್ಯಕ್ರಮ ಅನುಷ್ಠಾನ ಗೊಳ್ಳುವುದು ಎನ್ನುವ ಪಾಲಿಕೆಯ ಮಾತಿನಲ್ಲಿ, ಕೋಳಿ ಮಾಂಸವನ್ನೊಳಗೊಂಡ ಊಟ ನೀಡುವ ಮೂಲಕ ನಾಯಿಗಳ ಆಕ್ರಮಣಶೀಲತೆಯನ್ನು ಕಡಿಮೆ ಮಾಡುವ ಇಂಗಿತ ಇರುವಂತಿದೆ. ನಾಯಿಗಳ ಸ್ವಭಾವಕ್ಕೂ ಊಟ ನೀಡುವುದಕ್ಕೂ ಸಂಬಂಧ ಕಲ್ಪಿಸಲು ಹೊರಟಿರುವ ಪಾಲಿಕೆ, ತನ್ನ ಅಭಿಪ್ರಾಯಕ್ಕೆ ಇರುವ ವೈಜ್ಞಾನಿಕ ಅಧ್ಯಯನಗಳನ್ನು ಸಾರ್ವಜನಿಕರ ಮುಂದಿಡಬೇಕಾಗಿದೆ.

ಬೀದಿ ನಾಯಿಗಳನ್ನು ಅಂತಃಕರಣದಿಂದ ನೋಡುವುದರಲ್ಲಿ ಯಾರಿಗೂ ತಕರಾರು ಇರಲಾರದು. ಆದರೆ, ಜನರ ತೆರಿಗೆ ಹಣದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅಂಗಸಂಸ್ಥೆಗಳ ಆದ್ಯತೆ ಮನುಷ್ಯರು ಆಗಿರಬೇಕೇ ಹೊರತು ಪ್ರಾಣಿಗಳಲ್ಲ. ಸರ್ಕಾರದ ಹಲವು ಯೋಜನೆಗಳ ನಡುವೆಯೂ, ಹಸಿವು ಹಾಗೂ ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿರುವ ದೊಡ್ಡ ಸಮುದಾಯ ನಗರದಲ್ಲಿದೆ. ಅವರ ಅಳಲಿಗೆ ಓಗೊಡದೆ, ಬೀದಿ ನಾಯಿಗಳ ಬಗ್ಗೆ ಯೋಚಿಸುವುದು ಅಸಹಜ ಹಾಗೂ ಅಗ್ಗದ ಜನಪ್ರಿಯ ಚಿಂತನೆ. ಇಂದಿರಾ ಕ್ಯಾಂಟೀನ್ಗಳ ಉಸ್ತುವಾರಿಯನ್ನು ಸಮರ್ಪಕವಾಗಿ ನಡೆಸುವ ಇಚ್ಛಾಶಕ್ತಿ ಪ್ರದರ್ಶಿಸದ ಪಾಲಿಕೆ, ಬೀದಿನಾಯಿಗಳಿಗೆ ಅನ್ನ ಹಾಗೂ ಕೋಳಿ ಮಾಂಸವನ್ನೊಳಗೊಂಡ ಪೌಷ್ಟಿಕ ಆಹಾರ ಕೊಡಲು ಮುಂದಾಗಿದೆ. ಈ ಯೋಜನೆಯಲ್ಲಿನ ಬದ್ಧತೆ ಹಾಗೂ ಪ್ರಾಮಾಣಿಕತೆ ಪ್ರಶ್ನಾರ್ಹ. ನಾಯಿಗಳ ಆಹಾರ ತಯಾರಿಕೆಗೆ ಕರೆದಿರುವ ಟೆಂಡರ್ನಲ್ಲಿ, ಕೃತಕ ಬಣ್ಣ ಬಳಸಬಾರದು ಹಾಗೂ ತಾಜಾತನದಿಂದ ಕೂಡಿರುವ ಸ್ವಚ್ಛ ಆಹಾರ ತಯಾರಿಸಬೇಕು ಎನ್ನುವ ಷರತ್ತು ಗಳನ್ನು ವಿಧಿಸಲಾಗಿದೆ. ತಯಾರಿಸಿದ ಊಟವನ್ನು ಸತತ ಎರಡು ದಿನ ಬೀದಿ ನಾಯಿಗಳು ತಿನ್ನದಿದ್ದರೆ, ಆಹಾರವನ್ನು ಬದಲಿಸಬೇಕು ಎಂದೂ ಹೇಳಲಾಗಿದೆ. ನಾಯಿಗಳ ಬಗೆಗಿನ ಈ ಕಾಳಜಿ ಸಮಾಜದ ಕಟ್ಟಕಡೆಯ ಮನುಷ್ಯನ ಬಗ್ಗೆ ಪಾಲಿಕೆಗೆ ಇದ್ದಿದ್ದರೆ ಬೆಂಗಳೂರಿನ ಪರಿಸ್ಥಿತಿ ಈಗಿರುವುದಕ್ಕಿಂತಲೂ ಉತ್ತಮವಾಗಿರುತ್ತಿತ್ತು. ಪಾದಚಾರಿ ಮಾರ್ಗಗಳೇ ಇಲ್ಲದ ಹಾಗೂ ಇರುವ ಪಾದಚಾರಿ ಮಾರ್ಗಗಳು ಕಿತ್ತುಹೋಗಿರುವ ರಸ್ತೆಗಳಲ್ಲಿ ಪಾದಚಾರಿಗಳು ಆತಂಕದಿಂದ ಸಂಚರಿಸುವಂತಾಗಿದೆ. ತೆರೆದ ಮ್ಯಾನ್ಹೋಲ್ಗಳಿಂದ ಕೊಳಕುನೀರು ರಸ್ತೆಯ ಮೇಲೆ ಹರಿಯುವುದು ಸಾಮಾನ್ಯ ಎನ್ನುವಂತಾಗಿದೆ. ಹೈಕೋರ್ಟ್ ತಪರಾಕಿಯ ನಂತರವೂ, ಗುಂಡಿಮುಕ್ತ ರಸ್ತೆಗಳು ತನ್ನ ವರ್ಚಸ್ಸಿಗೆ ಧಕ್ಕೆ ಎನ್ನುವ ಪಾಲಿಕೆಯ ನಂಬಿಕೆಯಲ್ಲಿ ಹೆಚ್ಚು ಬದಲಾವಣೆ ಆದಂತಿಲ್ಲ. ಮಳೆ ಬಂದಾಗ ಕೆಲವು ಬಡಾವಣೆಗಳ ನಾಗರಿಕರು ನಿದ್ದೆಗೆಡುವುದೂ ಅನಿವಾರ್ಯ ಎನ್ನುವಂತಾಗಿದೆ. ಹೀಗೆ, ಜ್ವಲಂತ ನಾಗರಿಕ ಸಮಸ್ಯೆಗಳ ನಡುವೆಯೂ ಬೀದಿನಾಯಿಗಳಿಗೆ ಪೌಷ್ಟಿಕ ಆಹಾರ ಕೊಡುವ ಬಗ್ಗೆ ಪಾಲಿಕೆ ಯೋಚಿಸುತ್ತ ದೆಂದರೆ, ಅದು ಮನುಷ್ಯಮಾತ್ರರನ್ನು ಮೀರಿದ ದೈವಿಕ ಮನಃಸ್ಥಿತಿಯನ್ನು ಸಿದ್ಧಿಸಿಕೊಂಡಿರ ಬೇಕು ಇಲ್ಲವೇ ನಾಗರಿಕರನ್ನು ಬೀದಿನಾಯಿಗಳಿಗಿಂತಲೂ ಕನಿಷ್ಠ ಎಂದು ಭಾವಿಸಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.