ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳ ಸುರಕ್ಷೆಗೆ ದೊರೆಯಲಿ ಒತ್ತು

Last Updated 26 ಮೇ 2020, 19:45 IST
ಅಕ್ಷರ ಗಾತ್ರ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಈ ಬಾರಿ ನಡೆಸುವ ಇಲ್ಲವೇ ನಡೆಸದಿರುವ ನಿರ್ಧಾರ ಸರ್ಕಾರದ ಪಾಲಿಗೆ ಪರೀಕ್ಷೆಯಾಗಿ ಪರಿಣಮಿಸಿದೆ. ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ವಿಧಿಸಲಾದ ಲಾಕ್‌ಡೌನ್‌ನಿಂದ, ಮಾರ್ಚ್‌ನಲ್ಲಿ ನಡೆಯಬೇಕಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ಲಾಕ್‌ಡೌನ್ ನಿರ್ಬಂಧಗಳು ತೆರವುಗೊಂಡಿರುವುದರಿಂದ, ಜೂನ್ 25ರಿಂದ ಪರೀಕ್ಷೆಯನ್ನು ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ, ಜೂನ್‌ನಲ್ಲಿ ಪರೀಕ್ಷೆಯನ್ನು ನಡೆಸುವುದರಿಂದ ವಿದ್ಯಾರ್ಥಿಗಳನ್ನು ಸೋಂಕು ಭೀತಿಗೆ ಒಡ್ಡಿದಂತಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೇ ರದ್ದುಪಡಿಸಬೇಕೆಂದು ಕೆಲವು ಶಿಕ್ಷಣ ತಜ್ಞರು ಹಾಗೂ ಸಂಘಟನೆಗಳ ಮುಖ್ಯಸ್ಥರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷೆಯನ್ನು ನಡೆಸದಿರುವುದೇ ಒಳ್ಳೆಯದು. ಪರೀಕ್ಷೆ ಇಲ್ಲದೆಯೇ ಎಲ್ಲ ಮಕ್ಕಳಿಗೂ ಉತ್ತೀರ್ಣತೆಯ ಪ್ರಮಾಣಪತ್ರ ನೀಡಬೇಕು. ಕೋವಿಡ್–19ರ ಸಂಕಷ್ಟದ ಸಂದರ್ಭದಲ್ಲಿ ಕೈಗೊಳ್ಳುವ ಈ ನಿರ್ಣಾಯಕ ತೀರ್ಮಾನದಿಂದಾಗಿ ಲಕ್ಷಾಂತರ ಪಾಲಕರು ಮತ್ತು ವಿದ್ಯಾರ್ಥಿಗಳು ಆತಂಕದಿಂದ ಹೊರಬರುವುದು ಸಾಧ್ಯ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಪರೀಕ್ಷೆಯನ್ನು ರದ್ದುಪಡಿಸುವುದರಿಂದ ಅಪಾರ ಜೀವ ಹಾಗೂ ಆರ್ಥಿಕ ವೆಚ್ಚ ಉಳಿಸಬಹುದು ಎಂದು, ಮುಖ್ಯಮಂತ್ರಿಗೆ ಪತ್ರ ಬರೆದಿರುವವರು ಅಭಿಪ್ರಾಯಪಟ್ಟಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಬಾರದು ಎನ್ನುವ ಚರ್ಚೆಯು ಈ ಪತ್ರದಿಂದಾಗಿ ಮತ್ತೆ ಚಾಲ್ತಿಗೆ ಬಂದಿದೆ. ಪರೀಕ್ಷೆ ನಡೆಯುವುದು ಬೇಡ ಎನ್ನುವ ಅಭಿಪ್ರಾಯದೊಂದಿಗೆ, ಪರೀಕ್ಷೆಯನ್ನು ನಡೆಸುವ ಕುರಿತಂತೆ ಶಿಕ್ಷಣ ಇಲಾಖೆಯು ತಕ್ಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದನ್ನು ಗಮನಿಸಬೇಕು. ಬಹಳಷ್ಟು ಸಮಾಲೋಚನೆ ನಡೆಸಿದ ನಂತರವೇ ಪರೀಕ್ಷೆಯನ್ನು ನಡೆಸುವ ತೀರ್ಮಾನಕ್ಕೆ ಇಲಾಖೆ ಬಂದಿದೆ. ‘ಚಂದನ’ ವಾಹಿನಿಯ ಮೂಲಕ ಪುನರ್‌ಮನನ ತರಗತಿಗಳನ್ನು ಏರ್ಪಡಿಸಲಾಗಿದೆ. ಮುದ್ರಿತ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಯಾವಾಗ ಬೇಕಾದರೂ ನೋಡಲು ಅವಕಾಶವಾಗುವಂತೆ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ‘ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸಲಾಗುವುದೇ ವಿನಾ, ಪ್ರತಿಷ್ಠೆಗಾಗಿ ಅಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಕ್ಕಳ ಮುಂದಿನ ಓದಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಮುಖ ಮಾನದಂಡವಾಗಿರುವುದರಿಂದ ಪರೀಕ್ಷೆ ನಡೆಸುವುದು ಅನಿವಾರ್ಯ ಎನ್ನುವುದು ಅವರ ಅನಿಸಿಕೆ.

ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಿ, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪರೀಕ್ಷೆ ನಡೆಸುವುದಾಗಿಯೂ ಸಚಿವರು ಹೇಳಿದ್ದಾರೆ. ವಲಸೆ ಕಾರ್ಮಿಕರ ಮಕ್ಕಳು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಅವರು ವಾಸವಾಗಿರುವ ಸ್ಥಳಗಳಿಗೆ ಸಮೀಪವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷೆಯನ್ನು ನಡೆಸಬಾರದು ಎಂದು ಹೇಳುತ್ತಿರುವವರು ವ್ಯಕ್ತಪಡಿಸಿರುವ ಆತಂಕ ಕಡೆಗಣಿಸುವಂತಹದ್ದಲ್ಲ. ಮಕ್ಕಳ ಜೀವದ ಕುರಿತ ಸಮಾಜದ ಕಾಳಜಿಯನ್ನು ಅವರು ಪ್ರತಿನಿಧಿಸಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಾಗೂ ಜೂನ್ ಕೊನೆಯ ವೇಳೆಗೆ ಸೋಂಕಿನ ಪ್ರಮಾಣ ತಾರಕಕ್ಕೇರಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಯ ಬಗ್ಗೆ ಮತ್ತೆ ಮತ್ತೆ ಯೋಚಿಸುವುದು ಅಗತ್ಯವಾಗಿದೆ. ಆದರೆ, ಸಂಭಾವ್ಯ ಅಪಾಯದ ಹಿನ್ನೆಲೆಯಲ್ಲಿ, ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಎನ್ನಬಹುದಾದ ಪರೀಕ್ಷೆಯನ್ನೇ ರದ್ದು ಮಾಡುವುದು ಸಮಸ್ಯೆಗೆ ಪರಿಹಾರವಾಗಲಾರದು. ಕೊರೊನಾ ವಿರುದ್ಧದ ನಮ್ಮ ಹೋರಾಟ ‘ಹೊಂದಿಕೊಂಡು ಬಾಳುವುದು ಅಗತ್ಯ’ ಎನ್ನುವ ನಿಲುವಿಗೆ ತಲುಪಿಬಿಟ್ಟಿದೆ. ಈ ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಹೊರತುಪಡಿಸುವುದು ಸಾಧ್ಯವಿಲ್ಲ. ಅಲ್ಲದೆ, ಒಮ್ಮೆ ಪರೀಕ್ಷೆಯನ್ನು ರದ್ದುಪಡಿಸಿದರೆ ಅದೊಂದು ಮಾದರಿಯಾಗಿ ಮತ್ತೆ ಮತ್ತೆ ಎದುರಾಗುವ ಸಾಧ್ಯತೆ ಇದ್ದೇ ಇರುತ್ತದೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಗಂಭೀರ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಪರೀಕ್ಷೆ ನಡೆಸಬೇಕೇ ಅಥವಾ ಬೇಡವೇ ಎಂದು ಚರ್ಚಿಸುವುದರಿಂದ ಮಕ್ಕಳು- ಪೋಷಕರಲ್ಲಿ ವೃಥಾ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿದಂತಾಗುತ್ತದೆ. ಹಾಗಾಗಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ನಡುವೆ ಪರೀಕ್ಷೆಯನ್ನು ನಡೆಸುವುದು ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಆಯ್ಕೆ. ವಿದ್ಯಾರ್ಥಿಗಳ ಸುರಕ್ಷೆಯ ಬಗ್ಗೆ ಯಾವ ರಾಜಿಯನ್ನೂ ಮಾಡಿಕೊಳ್ಳದೆ ಪರೀಕ್ಷೆ ನಡೆಯುವಂತೆ ಆಗಬೇಕು. ಈ ಪರೀಕ್ಷೆಯು ಕೊರೊನಾ ವಿರುದ್ಧ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ಸಮಾಜದಲ್ಲಿ ಸಂಕಲ್ಪಶಕ್ತಿಯನ್ನು ಮೂಡಿಸುವ ದೃಷ್ಟಿಯಿಂದಲೂ ಮಹತ್ವವಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT