ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ವಿಧಾನಸಭೆ ಅಂಗೀಕರಿಸಿದ 10 ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಕಳುಹಿಸುವುದಕ್ಕಾಗಿ ತಡೆಹಿಡಿದಿರುವ ಕ್ರಮವು ಕಾನೂನುಬಾಹಿರ ಮತ್ತು ಲೋಪದಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಒಕ್ಕೂಟ ವ್ಯವಸ್ಥೆಯ ಮೌಲ್ಯ ಮತ್ತು ಸಂವಿಧಾನವೇ ಸರ್ವೋಚ್ಚ ಎಂಬುದನ್ನು ಎತ್ತಿಹಿಡಿದಿರುವ ಈ ತೀರ್ಪು ಒಂದು ಮೈಲಿಗಲ್ಲು. ತಾವು ಕಾನೂನು ಮತ್ತು ರಾಜ್ಯ ಸರ್ಕಾರಕ್ಕಿಂತ ಮಿಗಿಲು ಎಂಬ ರೀತಿಯಲ್ಲಿ ರಾಜ್ಯಪಾಲರು ಮಾತನಾಡಿದ್ದಾರೆ ಮತ್ತು ನಡೆದುಕೊಂಡಿದ್ದಾರೆ; ಇದು ರಾಜ್ಯಪಾಲ ಹುದ್ದೆಗೆ ತಕ್ಕದ್ದಲ್ಲದ ನಡವಳಿಕೆ ಎಂಬುದಕ್ಕೆ ಸುಪ್ರೀಂ ಕೋರ್ಟ್ನ ಮುದ್ರೆ ಬಿದ್ದಂತಾಗಿದೆ. ರವಿ ಅವರನ್ನು ಮತ್ತು ಅಸಾಂವಿಧಾನಿಕ ಹಾಗೂ ತೊಡಕು ಉಂಟುಮಾಡುವ ರೀತಿಯಲ್ಲಿ ನಡೆದುಕೊಂಡ ಇತರ ಕೆಲವು ರಾಜ್ಯಗಳ ರಾಜ್ಯಪಾಲರನ್ನು ಬೆಂಬಲಿಸಿದ ಕೇಂದ್ರ ಗೃಹ ಸಚಿವಾಲಯಕ್ಕೂ ಇದು ಅನ್ವಯವಾಗುತ್ತದೆ. ಸಂವಿಧಾನದ 142ನೇ ವಿಧಿ ಅಡಿಯಲ್ಲಿ ಇರುವ ವಿಶೇಷಾಧಿಕಾರ ಬಳಸಿರುವ ನ್ಯಾಯಾಲಯವು ಮಸೂದೆಗಳಿಗೆ ಸಂಬಂಧಿಸಿ ರವಿ ಅವರು ಕೈಗೊಂಡ ಎಲ್ಲ ನಿರ್ಧಾರಗಳನ್ನು ಬದಿಗೊತ್ತಿದೆ. ರಾಜ್ಯಪಾಲರಿಗೆ ಮರು ಸಲ್ಲಿಕೆಯಾದ ದಿನಾಂಕದಂದೇ ಈ 10 ಮಸೂದೆಗಳು ಅಂಗೀಕಾರವಾಗಿವೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಹೇಳಿದೆ. ಈ ಮೂಲಕ, ಸಂವಿಧಾನದ ಗಂಭೀರ ಉಲ್ಲಂಘನೆಯನ್ನು ಸರಿಪಡಿಸಿದೆ. ಅಸಾಧಾರಣ ಸನ್ನಿವೇಶಗಳಲ್ಲಿ ಅಸಾಧಾರಣವಾದ ಪರಿಹಾರಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ.

ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕಲು ಸಮಯದ ಗಡುವನ್ನು ನಿಗದಿ ಮಾಡುವ ಉತ್ತಮ ಕೆಲಸವನ್ನೂ ನ್ಯಾಯಾಲಯ ಮಾಡಿದೆ. ಮಸೂದೆಗೆ ಅಂಕಿತ ಹಾಕುವುದನ್ನು ತಡೆಹಿಡಿದು, ಅದನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಕಳುಹಿಸುವುದಿದ್ದರೆ ಅದಕ್ಕೂ ಒಂದು ತಿಂಗಳ ಗಡುವು ನಿಗದಿ ಮಾಡಲಾಗಿದೆ. ಮಸೂದೆಗೆ ಅಂಕಿತ ಹಾಕದಿರಲು ರಾಜ್ಯಪಾಲರು ತೀರ್ಮಾನಿಸಿದರೆ ಅದನ್ನು ಮೂರು ತಿಂಗಳೊಳಗೆ ಸದನಕ್ಕೆ ಮರಳಿಸಬೇಕು ಎಂದು ಕೋರ್ಟ್ ಹೇಳಿದೆ. ರಾಜ್ಯ ವಿಧಾನಸಭೆಯು ಮರುಪರಿಶೀಲನೆ ಬಳಿಕ ಎರಡನೆಯ ಬಾರಿಗೆ ರಾಜ್ಯಪಾಲರಿಗೆ ಮಸೂದೆಯನ್ನು ಕಳುಹಿಸಿಕೊಟ್ಟರೆ, ಅದಕ್ಕೆ ಒಂದು ತಿಂಗಳೊಳಗೆ ಅಂಕಿತ ಹಾಕಬೇಕು. ಈ ಗಡುವಿಗೆ ಬದ್ಧರಾಗದೇ ಇದ್ದರೆ ನ್ಯಾಯಾಲಯದ ಪರಿಶೀಲನೆಗೆ ಒಳಪಡ ಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ವಾಡಿಕೆಯಂತೆ ಮಾಡಬೇಕಾದ ಕೆಲಸಕ್ಕೆ ಕೂಡ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಗಿ ಬಂದದ್ದು ಮತ್ತು ಎಚ್ಚರಿಕೆ ಕೊಡಬೇಕಾಗಿ ಬಂದದ್ದು ವಿಷಾದನೀಯ ಸ್ಥಿತಿ. ರವಿ ಮತ್ತು ಇತರ ಕೆಲವು ರಾಜ್ಯಪಾಲರು ಸಂವಿಧಾನದ ಉಲ್ಲಂಘನೆಯನ್ನು ಪದೇ ಪದೇ ಮಾಡಿದ್ದಾರೆ. ರಾಜ್ಯಪಾಲರ ನಡವಳಿಕೆಗೆ ಸಂಬಂಧಿಸಿ ಹಲವು ಆದೇಶಗಳು, ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಕಿವಿಗೆ ಹಾಕಿಕೊಳ್ಳದ ಕಾರಣಕ್ಕೆ ನ್ಯಾಯಾಲಯವು ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಗಿ ಬಂದಿದೆ.

ಶಾಸನ ರೂಪಿಸುವ ವಿಚಾರದಲ್ಲಿ ಶಾಸನಸಭೆಗೆ ಹೆಚ್ಚಿನ ಅಧಿಕಾರ ಇರುತ್ತದೆಯೇ ವಿನಾ ಕೇಂದ್ರ ಸರ್ಕಾರ ನೇಮಕ ಮಾಡಿದ, ಚುನಾಯಿತರಲ್ಲದ ರಾಜ್ಯಪಾಲರಿಗೆ ಅಲ್ಲ. ಪರೋಕ್ಷ ಪರಮಾಧಿಕಾರ ಅಥವಾ ಸಂಪೂರ್ಣ ಪರಮಾಧಿಕಾರ ಎಂಬುದು ರಾಜ್ಯಪಾಲರಿಗೆ ಇಲ್ಲ ಎಂಬುದನ್ನು ನ್ಯಾಯಾಲಯವು ಹಲವು ಬಾರಿ ಹೇಳಿದೆ. ರಾಜ್ಯಪಾಲರು ‘ಸಂಸದೀಯ ಪ್ರಜಾಸತ್ತೆಯ ಸ್ಥಾಪಿತ ನಿಯಮಗಳನ್ನು ಗೌರವಿಸಬೇಕು; ಶಾಸನಗಳ ಮೂಲಕ ವ್ಯಕ್ತವಾಗುವ ಜನರ ಇಚ್ಛೆಯನ್ನು ಗೌರವಿಸಬೇಕು; ಮತ್ತು ಜನರಿಗೆ ಉತ್ತರದಾಯಿಯಾಗಿರುವ ಚುನಾಯಿತ ಸರ್ಕಾರವನ್ನು ಗೌರವಿಸಬೇಕು’ ಎಂದು ನ್ಯಾಯಾಲಯವು ಹೇಳಿದೆ. ಕೇಂದ್ರ ಸರ್ಕಾರದ ರಾಜಕೀಯ ಏಜೆಂಟ್ ರೀತಿ ನಡೆದುಕೊಂಡು ಸರ್ಕಾರದ ಅಧಿಕಾರವನ್ನು ಕಸಿದುಕೊಳ್ಳುವ ಅವಕಾಶ ರಾಜ್ಯಪಾಲರಿಗೆ ಇಲ್ಲ. ನ್ಯಾಯಾಲಯವು ಹೇಳಿರುವ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಎಲ್ಲ ರಾಜ್ಯಪಾಲರು ಅರ್ಥ ಮಾಡಿಕೊಳ್ಳಬೇಕು. ಒಕ್ಕೂಟ ತತ್ವಗಳು ಗಂಭೀರ ಅಪಾಯದಲ್ಲಿದ್ದ ಹೊತ್ತಿನಲ್ಲಿ ಅವುಗಳನ್ನು ರಕ್ಷಿಸುವ ಕೆಲಸವನ್ನು ನ್ಯಾಯಾಲಯವು ಮಾಡಿದೆ. ನ್ಯಾಯಾಲಯವು ಇಷ್ಟೊಂದು ಗಂಭೀರವಾಗಿ ದೋಷ ಹೊರಿಸಿದ ಬಳಿಕವೂ ತಮ್ಮ ಹುದ್ದೆಯಲ್ಲಿ ಮುಂದುವರಿಯಬೇಕೇ ಎಂಬುದರ ಕುರಿತು ರಾಜ್ಯಪಾಲ ರವಿ ಅವರು ಯೋಚಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.