ಅಸಹಿಷ್ಣುತೆಯ ಕೆಟ್ಟ ಪ್ರದರ್ಶನ ಆತಂಕಕಾರಿ ಬೆಳವಣಿಗೆ

7

ಅಸಹಿಷ್ಣುತೆಯ ಕೆಟ್ಟ ಪ್ರದರ್ಶನ ಆತಂಕಕಾರಿ ಬೆಳವಣಿಗೆ

Published:
Updated:

ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಟಿ.ಎಂ. ಕೃಷ್ಣ ಅವರ ಕಾರ್ಯಕ್ರಮವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕಡೆ ಗಳಿಗೆಯಲ್ಲಿ ರದ್ದುಪಡಿಸಿದ ರೀತಿಯು ಒಂದು ಕೆಟ್ಟ ಬೆಳವಣಿಗೆಯ ಸೂಚಕ. ಸ್ಪಿಕ್ ಮೆಕೆ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಎಎಐ ಪ್ರಾಯೋಜಿಸಿತ್ತು.

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆಗಳನ್ನು ಮಾಡಿರುವ ಕೃಷ್ಣ ಅವರನ್ನು ಸಂಗೀತ ಕಾರ್ಯಕ್ರಮಕ್ಕೆ ಹೇಗೆ ಆಹ್ವಾನಿಸುತ್ತೀರಿ? ಎಂಬಂತಹ ಆಗ್ರಹಗಳನ್ನು ಅಂತರ್ಜಾಲದಲ್ಲಿ ಹರಿಯಬಿಡಲಾಗಿತ್ತು. ಅದರಲ್ಲೂ ಕೃಷ್ಣ ಅವರನ್ನು ‘ಅರ್ಬನ್ ನಕ್ಸಲ್’ ಎಂದು ಕರೆದು ಟ್ರಾಲ್ ಮಾಡಿದ ರೀತಿಯಂತೂ ಖಂಡನೀಯ. ಜೀಸಸ್ ಹಾಗೂ ಅಲ್ಲಾಹ್ ಬಗ್ಗೆ ಹಾಡುವಂತಹ ಭಾರತ ವಿರೋಧಿ ಸಂಗೀತಗಾರರನ್ನು ಆಹ್ವಾನಿಸಲು ಸಾರ್ವಜನಿಕ ಹಣವನ್ನು ಬಳಸಲಾಗುತ್ತಿದೆ ಎಂದೂ ಸಾಮಾಜಿಕ ಮಾಧ್ಯಮಗಳಲ್ಲಿ ದೂಷಿಸಲಾಗಿತ್ತು.

ಆದರೆ ಈ ಜಾಲತಾಣಗಳ ಟ್ರಾಲ್‍ಗಳು ಸರ್ಕಾರದ ಸಂಸ್ಥೆಯೊಂದರ ಮೇಲೂ ಪ್ರಭಾವ ಬೀರಬಹುದು ಎಂಬುದು ಅಚ್ಚರಿಯ ಸಂಗತಿ. ಹೀಗಾಗಿಯೇ ಕುಂಟು ನೆಪ ಒಡ್ಡಿ ಕಾರ್ಯಕ್ರಮ ಮುಂದೂಡಿರುವುದಾಗಿ ಎಎಐ ಪ್ರಕಟಿಸಿದ್ದು ಸಹಜವಾಗಿಯೇ ವಿವಾದದ ರೂಪ ತಳೆಯಿತು. ಮುಂದೂಡಿದ ಕಾರ್ಯಕ್ರಮವನ್ನು ಮತ್ತೆ ಯಾವ ದಿನ ನಡೆಸಲಾಗುತ್ತದೆ ಎಂಬ ಬಗ್ಗೆ ಎಎಐ ಸ್ಪಷ್ಟನೆಯನ್ನೇನೂ ನೀಡಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇರುವವರನ್ನು ಕಂಗೆಡಿಸುವಂತಹ ನಡೆ ಇದು ಎಂಬುದು ಸಹಜವೇ. ಸಾಮಾಜಿಕ ಮಾಧ್ಯಮಗಳ ಟ್ರಾಲ್‌ಗಳಿಗೆ ಎಎಐ ಮಣಿಯುವಂತಾದದ್ದು ಆತಂಕಕಾರಿ ಬೆಳವಣಿಗೆ.

ಆದರೆ ದೆಹಲಿಯಲ್ಲಿ ಎಎಐ ಪ್ರಾಯೋಜಿತ ಕಾರ್ಯಕ್ರಮ ನಡೆಯಬೇಕಿದ್ದ ದಿನಾಂಕದಂದೇ ಕೃಷ್ಣ ಅವರ ಕಛೇರಿಯನ್ನು ಆಯೋಜಿಸಲು ದೆಹಲಿ ಸರ್ಕಾರ ಮುಂದಾಗಿ ನಂತರ ಕಚೇರಿ ಯಶಸ್ವಿಯಾಗಿ ನಡೆದಿರುವುದು ಸಮಾಧಾನಕರ. ಕೃಷ್ಣ ಅವರಿಗೆ ಬೆಂಬಲ ನೀಡಲಿಕ್ಕಾಗಿಯೇ ಅನೇಕ ಮಂದಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು ಎಂಬುದೂ ವಿಶ್ವಾಸ ತುಂಬುವಂತಹದ್ದು. ‘ನಿಮ್ಮ ಹಾಜರಿಯೇ ದೊಡ್ಡದ್ದನ್ನು ಹೇಳುತ್ತದೆ.‌‌ ನೀವು ಹಿಂದೂ, ಮುಸ್ಲಿಂ, ಕ್ರೈಸ್ತ, ತಮಿಳರು, ಮಲಯಾಳಿ, ಗುಜರಾತಿ... ಯಾರಾದರಾಗಿರಲಿ ಈ ರಾಷ್ಟ್ರ ಎಲ್ಲರಿಗೂ ಸೇರಿದ್ದು… ಇಷ್ಟು ಭಾಷೆಗಳು ಹಾಗೂ ಇಷ್ಟೊಂದು ವೈವಿಧ್ಯ ಇರುವ ರಾಷ್ಟ್ರ ಇನ್ನೊಂದಿಲ್ಲ. ಇದನ್ನು ನಾವು ಸಂರಕ್ಷಿಸಬೇಕಾದುದು ಅಗತ್ಯ’ ಎಂದು ಕಾರ್ಯಕ್ರಮಕ್ಕೆ ಬಂದ ಜನರನ್ನುದ್ದೇಶಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ ಮಾತು ಸರಿಯಾದದ್ದು.

ಸುಮಾರು 600 ವರ್ಷಗಳಷ್ಟು ಹಳೆಯದಾದ ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಹಾಡುಗಾರ ಟಿ.ಎಂ. ಕೃಷ್ಣ. ಸಂಸ್ಕೃತಿಯಲ್ಲಿ ಸಾಮಾಜಿಕ ಒಳಗೊಳ್ಳುವಿಕೆ ತರಲು ಯತ್ನಿಸಿದ ಕೃಷ್ಣ ಅವರು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು. ರಾಷ್ಟ್ರೀಯ ಏಕತೆಗಾಗಿ 2015ರಲ್ಲಿ ಇಂದಿರಾ ಗಾಂಧಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಕೃಷ್ಣ ಅವರು ದೊಡ್ಡ ಹಾಡುಗಾರರು ಮಾತ್ರವಲ್ಲ, ಸಾಮಾಜಿಕ ವಿಚಾರಗಳು ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಕಾಳಜಿಯನ್ನೂ ಹೊಂದಿದ ಪ್ರಜ್ಞಾವಂತರು. ಜಾತಿ ಸಂಘರ್ಷ, ಸಂಕುಚಿತ ರಾಷ್ಟ್ರೀಯವಾದದಂತಹ ಅಪಾಯಗಳ ಬಗ್ಗೆ ನಿರರ್ಗಳವಾಗಿ ವಾದಗಳನ್ನು ಮಂಡಿಸಬಲ್ಲವರು ಕೃಷ್ಣ. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರ ಬಳಿಗೆ ಒಯ್ಯಲು ಯತ್ನಿಸಿದವರು ಅವರು. ಮೂಲಭೂತವಾದದ ಅಪಾಯಗಳ ಬಗ್ಗೆ ತಮ್ಮ ಸಾರ್ವಜನಿಕ ಭಾಷಣಗಳು ಹಾಗೂ ಬರಹಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಹಿಂದುತ್ವದ ವಿರುದ್ಧದ ಅವರ ನಿಲುವುಗಳು ಹಾಗೂ ಪ್ರಭುತ್ವದ ವಿರುದ್ಧದ ಅವರ ಮಾತುಗಳೇ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧದ ನಿಂದನೆಗಳಿಗೆ ಕಾರಣವಾಗಿವೆ ಎಂಬುದು ಸ್ಪಷ್ಟ. ಆದರೆ, ವಿವೇಚನಾಯುಕ್ತವಾಗಿ ಮಾತನಾಡುವ ಸಂಗೀತ ಕಲಾವಿದರನ್ನು ಸಮಾಜವಿರೋಧಿ ಎಂಬಂತೆ ಬಣ್ಣಿಸುವುದು, ನಾವು ಬದುಕುತ್ತಿರುವ ಕಾಲದಲ್ಲಿ ವ್ಯಕ್ತವಾಗುತ್ತಿರುವ ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತದೆ. ಈ ಬಗೆಯ ಅತಿರೇಕದ ಅಸಹಿಷ್ಣುತೆಗೆ ಅಂತ್ಯ ಹಾಡದಿದ್ದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ತುಳಿತಕ್ಕೊಳಗಾಗುತ್ತವೆ ಎಂಬ ಬಗ್ಗೆ ನಮಗೆ ಎಚ್ಚರ ಇರಬೇಕು.

ಇತ್ತೀಚೆಗಷ್ಟೇ ಅಹಮದಾಬಾದ್ ವಿಶ್ವವಿದ್ಯಾಲಯದಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಪ್ರೊಫೆಸರ್ ಆಗಿ ನೇಮಕಗೊಳ್ಳುವುದನ್ನು ತಡೆಯುವಲ್ಲಿ ಹಿಂದುತ್ವವಾದಿಗಳು ಯಶಸ್ವಿಯಾಗಿದ್ದರು ಎಂಬುದನ್ನು ಸ್ಮರಿಸಬಹುದು. ಪ್ರತಿರೋಧ ಹಾಗೂ ಭಿನ್ನ ಧ್ವನಿಗಳು ಪ್ರಜಾಪ್ರಭುತ್ವದ ಜೀವಂತಿಕೆಯ ಲಕ್ಷಣ. ಆದರೆ ಈ ಪ್ರತಿರೋಧವನ್ನು ಈಗಿನ ಸರ್ಕಾರ ಸಹಿಸಿಕೊಳ್ಳದೆ ಹತ್ತಿಕ್ಕುತ್ತಿರುವುದು ಆತಂಕಕಾರಿ ವಿದ್ಯಮಾನ. ಸಂಗೀತದಂತಹ ಪ್ರದರ್ಶಕ ಕಲೆಯ ಪ್ರಖ್ಯಾತ ಹಾಡುಗಾರರ ಕಾರ್ಯಕ್ರಮಕ್ಕೂ ತಡೆ ಒಡ್ಡುವುದು ಪ್ರಭುತ್ವಕ್ಕೆ ಸಾಧ್ಯವಾಗುತ್ತದೆ ಎಂದರೆ ಅದು ಅನಾಗರಿಕ ಸಮಾಜದ ಲಕ್ಷಣ.

ಬರಹ ಇಷ್ಟವಾಯಿತೆ?

 • 43

  Happy
 • 2

  Amused
 • 2

  Sad
 • 3

  Frustrated
 • 6

  Angry

Comments:

0 comments

Write the first review for this !