ಬುಧವಾರ, ಮಾರ್ಚ್ 29, 2023
32 °C

ಸಂಪಾದಕೀಯ: ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್, ವೈಫಲ್ಯ ಕಲಿಸುವುದೇ ಪಾಠ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಈ ಸಲದ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಭಾರತ ತಂಡವು ನಾಲ್ಕರ ಘಟ್ಟ ಪ್ರವೇಶಿಸಲೂ ಸಾಧ್ಯವಾಗದೆ ಹೊರಬಿದ್ದಿದೆ. ಸೋಲು ಮತ್ತು ಗೆಲುವು ಆಟದ ಅವಿಭಾಜ್ಯ ಅಂಗ. ಆದರೆ ಸಾಮರ್ಥ್ಯಕ್ಕೆ ತಕ್ಕಂತೆ ಹೋರಾಟ ಮಾಡದೇ ಸೋಲುವುದನ್ನು ಶರಣಾಗತಿ ಎನ್ನಬಹುದು. ಅಂತಹ ಸೋಲನ್ನು ಭಾರತ ತಂಡ ಈ ಬಾರಿ ಅನುಭವಿಸಿದೆ. ಸೂಪರ್ 12ರ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ದಿಟ್ಟ ಹೋರಾಟ ನಡೆಸುವಲ್ಲಿ ತಂಡ ವಿಫಲವಾಗಿತ್ತು. ಆಟಗಾರರ ಹಾವಭಾವಗಳಲ್ಲಿ ಗೆಲುವಿನ ತುಡಿತ, ಛಲ ಕಾಣಲೇ ಇಲ್ಲ. ತಂಡವು ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಅವಕಾಶ ಕಳೆದುಕೊಳ್ಳುವುದು ಆಗಲೇ ಬಹುತೇಕ ಖಚಿತವಾಗಿತ್ತು. ಭಾನುವಾರ ಅಫ್ಗಾನಿಸ್ತಾನ ತಂಡವು ನ್ಯೂಜಿಲೆಂಡ್ ಎದುರು ಸೋತ ನಂತರ ಇದ್ದ ಸಣ್ಣ ಆಸೆಯೂ ಕಮರಿತು.  ಒಂಬತ್ತು ವರ್ಷಗಳ ನಂತರ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲೂ ಸಾಧ್ಯವಾಗದೆ ನಿರಾಶೆ ಅನುಭವಿಸಿದೆ. ವ್ಯಾಪಕ ಟೀಕೆಗಳಿಗೆ ಗುರಿಯಾಗಿರುವ ತಂಡವು ಸಮಜಾಯಿಷಿ ಕೊಡಲು ವಿಧವಿಧವಾಗಿ ಪ್ರಯತ್ನಿಸುತ್ತಿದೆ. ಕಳೆದ ಆರು ತಿಂಗಳುಗಳಿಂದ ಆಟಗಾರರು ಮನೆಯಿಂದ ದೂರ ಇದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಮತ್ತು ವಿಶ್ವಕಪ್ ಟೂರ್ನಿ ನಡುವೆ ಬಿಡುವು ಇರಲಿಲ್ಲ. ಟಾಸ್ ಗೆದ್ದವರಿಗೆ ಪಂದ್ಯ ಗೆಲ್ಲುವ ಅವಕಾಶ ಹೆಚ್ಚು ಸಿಕ್ಕಿದೆ. ಜೀವ ಸುರಕ್ಷಾ ವಲಯದ (ಬಯೋಬಬಲ್) ಕಟ್ಟಲೆಗಳಲ್ಲಿ ಬಹುಕಾಲದಿಂದ ವಾಸವಿರುವುದರಿಂದ ಆಗಿರುವ ದಣಿವು ಉತ್ತಮ ಸಾಮರ್ಥ್ಯ ತೋರದೇ ಇರುವುದಕ್ಕೆ ಕಾರಣ ಎಂದು ತಂಡದ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹೇಳಿದ್ದಾರೆ. ಆದರೆ, ಇವೆಲ್ಲವೂ ಭಾರತದ ಆಟಗಾರರ ಮೇಲಷ್ಟೇ ಪರಿಣಾಮ ಬೀರಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಐಪಿಎಲ್ ಸೇರಿದಂತೆ ಬೇರೆ ಬೇರೆ ಟೂರ್ನಿಗಳಲ್ಲಿ ಆಡಿದ ಆಟಗಾರರು ಇರುವ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದು ಹೇಗೆ? 

ಐಪಿಎಲ್ ಮತ್ತು ವಿಶ್ವಕಪ್ ಟೂರ್ನಿಗಳೆರಡಕ್ಕೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ಆತಿಥ್ಯ ವಹಿಸಿದೆ. ಆದ್ದರಿಂದ ಎರಡೂ ಟೂರ್ನಿಗಳ ಆಯೋಜನೆಯ ಕುರಿತು ಸರಿಯಾದ ಯೋಜನೆ ರೂಪಿಸುವ ಹೊಣೆ ಮಂಡಳಿಯದ್ದೇ ಆಗಿತ್ತು. ಆದರೆ ಹಣದ ಹೊಳೆ ಹರಿಸುವ ಐಪಿಎಲ್‌ಗೇ ಆದ್ಯತೆ ಕೊಟ್ಟಿದ್ದನ್ನು ಕಪಿಲ್ ದೇವ್ ಸೇರಿದಂತೆ ಹಲವರು ಟೀಕಿಸಿದ್ದಾರೆ. ಒಂದೂವರೆ ವರ್ಷದಿಂದ ಆಟಗಾರರಿಗೆ ಬಯೋಬಬಲ್ ವ್ಯವಸ್ಥೆ ರೂಢಿಯಾಗಿದೆ. ಕುಟುಂಬದೊಂದಿಗೆ ಪ್ರಯಾಣ ಮಾಡುವ ಅವಕಾಶವನ್ನೂ ಆಯೋಜಕರು ಆಟಗಾರರಿಗೆ ನೀಡಿದ್ದರು. ಆದ್ದರಿಂದ ಬೇರೆಲ್ಲ ಕಾರಣಗಳಿಗಿಂತ ಸೋಲಿಗೆ ಪ್ರಮುಖವಾಗಿ ಆಡುವ ಹನ್ನೊಂದರ ಬಳಗದ ಆಯ್ಕೆಯಲ್ಲಿ ಆಗಿರುವ ಲೋಪವೇ ಪ್ರಮುಖವಾಗಿದೆ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಎರಡೂ ಪ್ರಬಲ ತಂಡಗಳ ಎದುರು ಹೊಸಪ್ರತಿಭೆ ವರುಣ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸಿದ್ದು ಲೋಪ. ಅನುಭವಿ ಆರ್. ಅಶ್ವಿನ್ ಮತ್ತು ಪ್ರತಿಭಾವಂತ ಸ್ಪಿನ್ನರ್ ರಾಹುಲ್ ಚಾಹರ್ ಅವರನ್ನು ಬೆಂಚ್‌ನಲ್ಲಿ ಕೂರಿಸಿ ಅನನುಭವಿ ವರುಣ್‌ಗೆ ಅವಕಾಶ ಕೊಟ್ಟಿದ್ದು ಟೀಕೆಗಳಿಗೆ ಕಾರಣವಾಯಿತು. ಅಲ್ಲದೇ ಟಿ20 ಕ್ರಿಕೆಟ್ ಮಾದರಿಯ ಪರಿಣತ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲವೆನ್ನುವುದು ಸೋಜಿಗ. ಐಪಿಎಲ್ ಟೂರ್ನಿಯ 14ನೇ ಆವೃತ್ತಿಯಲ್ಲಿ ಉತ್ತಮವಾಗಿ ಆಡಿದ್ದ ಚಾಹಲ್ ಅವರತ್ತ ಆಯ್ಕೆ ಸಮಿತಿ ಹೊರಳಿ ನೋಡಲಿಲ್ಲ. ಕೆಲಕಾಲದಿಂದ ಫಿಟ್‌ನೆಸ್‌ ಇಲ್ಲದೇ ಪರದಾಡುತ್ತಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಪದೇ ಪದೇ ಅವಕಾಶ ಕೊಟ್ಟಿರುವ ಬಗ್ಗೆಯೂ ತಂಡದ ವ್ಯವಸ್ಥಾಪಕರು ಉತ್ತರ ಕೊಡಬೇಕು. ಅವರು ಬೌಲಿಂಗ್ ಮಾಡಲು ಅಸಮರ್ಥರಾಗಿದ್ದು ಬ್ಯಾಟಿಂಗ್‌ನಲ್ಲಿಯೂ ಫಾರ್ಮ್‌ನಲ್ಲಿರಲಿಲ್ಲ. ಅವರಿಗಿಂತ ಸಮರ್ಥರಾಗಿರುವವರು ತಂಡದಲ್ಲಿದ್ದರೂ ಹಾರ್ದಿಕ್‌ಗೇ ಅವಕಾಶ ನೀಡಲಾಗಿತ್ತು. ಅವರು ವಿಫಲರಾದರು. ಇವೆಲ್ಲದರ ಪರಿಣಾಮವಾಗಿ ಐಸಿಸಿ ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿಯೇ ಪಾಕಿಸ್ತಾನದ ಎದುರು ಮೊದಲ ಬಾರಿ ಸೋಲು
ಅನುಭವಿಸಬೇಕಾಯಿತು.

ಇನ್ನೊಂದೆಡೆ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮೊದಲೇ ತಾವು ಭಾರತ ಟಿ20 ಕ್ರಿಕೆಟ್ ತಂಡದ ನಾಯಕತ್ವ ಬಿಡುವುದಾಗಿ ವಿರಾಟ್ ಕೊಹ್ಲಿ ‍ಘೋಷಿಸಿದ್ದರು. ಈ ಟೂರ್ನಿಯ ನಂತರ ಮುಖ್ಯ ಕೋಚ್ ಹುದ್ದೆಯಿಂದ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಅವರು ನಿರ್ಗಮಿಸುತ್ತಿರುವುದನ್ನು ಕೂಡ ಪ್ರಕಟಿಸಲಾಗಿತ್ತು. ಇದರಿಂದಾಗಿ ತಂಡದಲ್ಲಿ ಅಸಮತೋಲನ ಮೂಡಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇದಲ್ಲದೇ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ನೇಮಕ ಮಾಡಿ ಬಿಸಿಸಿಐ ಅಚ್ಚರಿ ಮೂಡಿಸಿತ್ತು. ರವಿಶಾಸ್ತ್ರಿಯಂತಹ ದಿಗ್ಗಜ ಆಟಗಾರ ಕೋಚ್ ಆಗಿದ್ದರೂ ಧೋನಿಯನ್ನು ಮೆಂಟರ್ ಆಗಿ ಮಾಡಿದ್ದು ಸೋಜಿಗ. ಅಷ್ಟಕ್ಕೂ ಅವರಿಗೆ ಸಿಕ್ಕಿದ್ದು ಅಲ್ಪಸಮಯ ಮಾತ್ರ. ಧೋನಿ ಭಾರತ ಕ್ರಿಕೆಟ್‌ನ ಯಶಸ್ವಿ ಮತ್ತು ಚಾಣಾಕ್ಷ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಮುಂದಾಳತ್ವದಲ್ಲಿ ತಂಡವು 2007ರ  ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. 2014ರಲ್ಲಿ ರನ್ನರ್ಸ್ ಅಪ್ ಮತ್ತು 2016ರಲ್ಲಿ ಸೆಮಿಫೈನಲ್ ತಲುಪಿತ್ತು. ಕೊಹ್ಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. 2014ರಲ್ಲಿ ಟೆಸ್ಟ್ ತಂಡ ಮತ್ತು 2017ರಲ್ಲಿ ಸೀಮಿತ ಓವರ್‌ಗಳ ತಂಡಕ್ಕೆ ವಿರಾಟ್ ನಾಯಕರಾದ ನಂತರ ತಂಡವು ಒಂದೂ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿಲ್ಲ. ಚಾಂಪಿಯನ್ಸ್ ಟ್ರೋಫಿ, ಏಕದಿನ ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಟೂರ್ನಿಗಳಲ್ಲಿ ಅನುಭವಿಸಿದ್ದ ವೈಫಲ್ಯಗಳಿಂದ ಪಾಠ ಕಲಿಯದ ತಂಡವು ಈ ಬಾರಿಯೂ ದಂಡ ತೆತ್ತಿತು. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ನಾಯಕತ್ವ ಇರುವುದಿಲ್ಲ. ನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾ ಹೆಸರು ಬಲವಾಗಿ ಕೇಳಿಬಂದಿದೆ. ನಾಯಕರು ಯಾರೇ ಆಗಲಿ, ಮುಖ್ಯ ಕೋಚ್ ದ್ರಾವಿಡ್ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಬೀಳುವುದು ಖಚಿತ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು