ಗುರುವಾರ , ಜೂನ್ 24, 2021
30 °C

ಕಡಲತೀರದಲ್ಲಿ ತೀರದ ಸಂಕಟ: ಬದುಕಿನ ಸುಭದ್ರತೆಗೆ ಬೇಕು ಮುನ್ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುರ್ಭಿಕ್ಷದಲ್ಲಿ ಅಧಿಕ ಮಾಸ ಎಂಬಂತೆ ಕೋವಿಡ್‌ ಕಾಳ್ಗಿಚ್ಚಿನ ಮಧ್ಯೆ ಚಂಡಮಾರುತವೂ ರಾಜ್ಯದ ಕರಾವಳಿಯ ಮೂರೂ ಜಿಲ್ಲೆಗಳಿಗೆ ಬಂದೆರಗಿದೆ. ಕೇರಳದಲ್ಲಿ ವ್ಯಾಪಕ ಅನಾಹುತಗಳನ್ನು ಸೃಷ್ಟಿಸಿದ ‘ತೌತೆ’ ಚಂಡಮಾರುತವು ಕಡಲತೀರಕ್ಕೆ ಸಮಾನಾಂತರವಾಗಿ ಸಾಗುತ್ತಿದ್ದು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್‌ ಗಡಿಯವರೆಗೂ ಸಂಕಷ್ಟಗಳ ಬಿರುಗಾಳಿಯನ್ನೇ ಸೃಷ್ಟಿಸುತ್ತ ಹೋಗುತ್ತಿದೆ. ಜಡಿಮಳೆ, ಬಿರುಸಿನ ಗಾಳಿ, ಗಿಡಮರಗಳ ಪಲ್ಟಿ, ವಿದ್ಯುತ್‌ ವೈಫಲ್ಯವೇ ಮುಂತಾದ ಆಘಾತಗಳ ಜೊತೆಗೆ ಈಗಂತೂ ಸಾಂಕ್ರಾಮಿಕದ ತೀವ್ರತೆಯೂ ಹೆಚ್ಚಿರುವುದರಿಂದ ನೆರವಿಗೆ ಧಾವಿಸುವ ವ್ಯವಸ್ಥೆಗೂ ಏನೆಲ್ಲ ಅಡಚಣೆಗಳು ಎದುರಾಗಿವೆ. ಇಂಥ ಕಷ್ಟದ ಸಂದರ್ಭಗಳಲ್ಲಿ ತುರ್ತು ಸಹಾಯಕ್ಕೆ ಬರಬೇಕಾದ ‘ಕರಾವಳಿ ಕಾವಲು ಪಡೆ’ ಕೂಡ ತನ್ನ ದೋಣಿಗಳನ್ನಾಗಲೀ ವಿಮಾನಗಳನ್ನಾಗಲೀ ಹೊರಡಿಸಲಾಗದಷ್ಟು ತೀವ್ರ ಗಾಳಿ ಬೀಸುತ್ತಿರುತ್ತದೆ. ಇವೆಲ್ಲವೂ ಸೇರಿ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಅಷ್ಟೇ ಅಲ್ಲ, ಅದರೊಂದಿಗೆ ಕೈಜೋಡಿಸಬೇಕಾದ ಮೂರೂ ಜಿಲ್ಲೆಗಳ ಆಡಳಿತ ಯಂತ್ರಕ್ಕೂ ಕಠಿಣ ಸವಾಲು ಎದುರಾಗಿದೆ. ನಿರಂತರ ಗಾಳಿ ಹಾಗೂ ಜಡಿಮಳೆಯಿಂದಾಗಿ ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಆಸ್ತಿಪಾಸ್ತಿಯ ಗಣನೀಯ ನಷ್ಟ ವರದಿಯಾಗುತ್ತಿದೆ. ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕುಸಿದಿದ್ದು, ಕಡಲ ಕೊರೆತ ಪ್ರಕರಣಗಳೂ ಹೆಚ್ಚಾಗಿವೆ. ಲಾಕ್‌ಡೌನ್‌ನಿಂದಾಗಿ ದುಡಿಮೆಯ ಅವಕಾಶಗಳನ್ನೇ ಕಳೆದುಕೊಂಡಿರುವ ಶ್ರಮಿಕರ ಪಡಿಪಾಟಲು ಹೇಳತೀರದಷ್ಟಾಗಿದೆ. ಕಂದಾಯ ಸಚಿವರೇನೊ ‘ಹಣಕಾಸಿನ ತೊಂದರೆ ಇಲ್ಲ’ ಎಂದಿದ್ದಾರೆ. ಇಂಥ ಸಂದರ್ಭಗಳಲ್ಲಿ ಪರಿಹಾರ ರೂಪದಲ್ಲಿ ಹಣಕಾಸಿನ ವಿತರಣೆಯೂ ಆಗಬೇಕು. ಅದಕ್ಕಿಂತ ಹೆಚ್ಚಾಗಿ ಸಂಕಟ ನಿವಾರಣೆಯ ಸಮರತಂತ್ರ, ಚುರುಕಿನ ಕಾರ್ಯಾಚರಣೆ ಹಾಗೂ ಸ್ಥಳೀಯ ನಾಗರಿಕರನ್ನು ಪರಿಹಾರದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕೌಶಲಗಳೇ ಮುಖ್ಯವಾಗುತ್ತವೆ. ಇದ್ದುದರಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸ್ವಯಂಸೇವಾ ಸಂಘಟನೆಗಳು ಹಾಗೂ ಮೀನುಗಾರರ ಸಂಘಗಳು ಕ್ರಿಯಾಶೀಲವಾಗಿದ್ದು ಸಂಕಷ್ಟ ಬಂದಾಗಲೆಲ್ಲ ಧಾವಿಸಿ ಬರುತ್ತವೆ. ಮತಭೇದ, ಜಾತಿಭೇದ, ವೃತ್ತಿಭೇದ ಮರೆತು ಎಲ್ಲರೂ ಒಂದಾಗಿ ನೆರವಿನ ಹಸ್ತ ಚಾಚುವ ಇಂಥ ಸದ್ಭಾವನೆಯು ಹಿಂದೆ ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗಿದೆ. ಕಷ್ಟದಲ್ಲಿದ್ದವರನ್ನು ಮೇಲಕ್ಕೆತ್ತುವ ಈ ಮಾನವೀಯ ಸಂವೇದನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ವಿವೇಕವನ್ನು ಜಿಲ್ಲಾಡಳಿತಗಳು ಪ್ರದರ್ಶಿಸಬೇಕಾಗಿದೆ.

ಈಚಿನ ವರ್ಷಗಳಲ್ಲಿ ಹವಾಮಾನ ಮುನ್ಸೂಚನೆ ಸಾಕಷ್ಟು ನಿಖರವಾಗುತ್ತಿದೆ, ಮಾಹಿತಿ ಜಾಲವೂ ವ್ಯಾಪಕವಾಗಿ ವಿಸ್ತರಿಸಿರುವುದರಿಂದ ಚಂಡಮಾರುತದಂಥ ‘ನಿರೀಕ್ಷಿತ ಅವಘಡ’ಗಳಲ್ಲಿ ಸಾವುನೋವಿನ ಸಂಖ್ಯೆ ಗಣನೀಯವಾಗಿ ತಗ್ಗಿದೆ ನಿಜ. ಆದರೂ ಆಧುನಿಕ ಮಾನವನ ತಾಂತ್ರಿಕ ಜಾಣ್ಮೆಗೆ ಸವಾಲು ಹಾಕುವಂತೆ ಚಂಡಮಾರುತಗಳ ಆವರ್ತನ ಸಂಖ್ಯೆ ಹಾಗೂ ತೀವ್ರತೆ ಎರಡೂ ಹೆಚ್ಚುತ್ತಿವೆ. ಬಂಗಾಳ ಉಪಸಾಗರಕ್ಕೆ ಹೋಲಿಸಿದರೆ ಅರಬ್ಬೀ ಸಮುದ್ರದಲ್ಲಿ ಚಂಡಮಾರುತಗಳೇ ಇಲ್ಲವೆನ್ನುವಷ್ಟು ಅಪರೂಪವಾಗಿತ್ತು. ಈಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ ಏರಿಕೆಯ ಫಲವಾಗಿ ಸಮುದ್ರದ ಮೇಲ್ಪಾತಳಿಯ ಉಷ್ಣತೆಯೂ ಹೆಚ್ಚುತ್ತಿದೆ. ಹವಾಮಾನ ಇಲಾಖೆಯ ದಾಖಲೆಗಳ ಪ್ರಕಾರ, ಕಳೆದ ಮೂವತ್ತು ವರ್ಷಗಳ ಸರಾಸರಿ ಉಷ್ಣತೆಗಿಂತ 2018ರಿಂದ ಈಚೆಗೆ ಅರಬ್ಬೀ ಸಮುದ್ರದ ಉಷ್ಣತೆ 0.35 ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಅದರ ದುಷ್ಫಲದಿಂದಾಗಿ ಆಸ್ತಿಪಾಸ್ತಿ ನಷ್ಟ, ವಾಣಿಜ್ಯ ವ್ಯವಹಾರಗಳ ನಷ್ಟ, ದುಡಿಮೆಯ ದಿನಗಳ ನಷ್ಟವನ್ನು ಎಲ್ಲರೂ ಎದುರಿಸಬೇಕಾಗಿ ಬಂದಿದೆ. ಅದರಲ್ಲೂ ದುರ್ಬಲರ ಸಂಕಷ್ಟಗಳ ಪ್ರಮಾಣವೇ ಹೆಚ್ಚುತ್ತಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರವೇನೋ ಇಂಥ ದಿನಗಳಲ್ಲಿ ತ್ವರಿತವಾಗಿಯೇ ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ಏರ್ಪಡಿಸುತ್ತದೆ. ಆದರೆ ಈ ಬಗೆಯ ನೆರವು ತತ್ಕಾಲಕ್ಕಷ್ಟೇ ಸೀಮಿತವಾಗಿದ್ದು, ದೀರ್ಘಕಾಲೀನ ಸಮಸ್ಯೆ ಮಾತ್ರ ಶಾಶ್ವತವಾಗಿ ಉಳಿದ ಅದೆಷ್ಟೊ ಉದಾಹರಣೆಗಳಿವೆ. 2019ರಲ್ಲಿ ಗಂಗಾವಳಿಯಲ್ಲಿ ಮಹಾಪೂರದಿಂದ ಮನೆ ಕಳೆದುಕೊಂಡವರಿಗೆ ಪೂರ್ಣ ಪ್ರಮಾಣದ ಪರಿಹಾರ ಈಗಲೂ ಸಿಕ್ಕಿಲ್ಲ. ಕರಾವಳಿಯ ಅನೇಕ ನಗರ– ಪಟ್ಟಣಗಳಲ್ಲಿ ಹೊರಚರಂಡಿ ವ್ಯವಸ್ಥೆ ಓಬೀರಾಯನ ಕಾಲದ್ದೇ ಇದೆ. ಉಡುಪಿಯಲ್ಲಿ ಸಾಮಾನ್ಯ ಮಳೆಯಲ್ಲೂ ಪ್ರವಾಹ ಉಕ್ಕಿ ಸಮುದ್ರ ತೀರದಲ್ಲಿ ತ್ಯಾಜ್ಯಗಳ ಮಹಾಪೂರ ವರ್ಷಗಟ್ಟಲೆ ಶೇಖರವಾಗಿರುತ್ತದೆ. ಸುಂಟರಗಾಳಿ, ಜಡಿಮಳೆ, ನೆರೆ, ಭೂಕುಸಿತದಂಥ ಹವಾಮಾನ ಸಂಬಂಧಿ ಸಂಕಟಗಳು ವರ್ಷವರ್ಷವೂ ಹೆಚ್ಚಲಿರುವುದರಿಂದ ಕರಾವಳಿಯ ಸೂಕ್ಷ್ಮ ಪರಿಸರವನ್ನು ಸುಭದ್ರಗೊಳಿಸುವ ಕೆಲಸಗಳು ಸಮರೋಪಾದಿಯಲ್ಲಿ ನಡೆಯಬೇಕಿತ್ತು. ಆದರೆ ಅದಕ್ಕೆ ತದ್ವಿರುದ್ಧವಾಗಿ, ಯುದ್ಧತೀವ್ರತೆಯಲ್ಲಿ ಕಟ್ಟಡ ನಿರ್ಮಾಣ, ಮೂಲಸೌಕರ್ಯಗಳ ಹೆಸರಿನಲ್ಲಿ ಅಸ್ಥಿರ ಯೋಜನೆಗಳು ದಾಂಗುಡಿ ಇಡುತ್ತಿವೆ. ಪ್ರಕೃತಿ ವಿಕೋಪಗಳಿಗಿಂತ ಅಭಿವೃದ್ಧಿಯ ಹಪಾಪಿಯ ದುಷ್ಫಲಗಳನ್ನೇ ನಾವು ಹೆಚ್ಚುಹೆಚ್ಚಾಗಿ ಎದುರಿಸಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು