ಶುಕ್ರವಾರ, ಸೆಪ್ಟೆಂಬರ್ 24, 2021
26 °C

ದೂರಸಂಪರ್ಕ ಉದ್ಯಮ: ದರಸಮರದ ‘ಅತಿ’ ಒಳ್ಳೆಯದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶವು ಆರ್ಥಿಕ ಸುಧಾರಣೆಗಳಿಗೆ ತೆರೆದುಕೊಂಡ ನಂತರದ ದಿನಗಳಲ್ಲಿ ವಿಮಾನಯಾನ ಉದ್ಯಮ ಹಾಗೂ ಮೊಬೈಲ್‌ ದೂರಸಂಪರ್ಕ ಕ್ಷೇತ್ರಗಳು ಉದ್ಯಮಿಗಳ ಪಾಲಿಗೆ ಅವಕಾಶಗಳ ಗಣಿಯನ್ನೇ ತೆರೆದಿಟ್ಟವು ಎಂಬ ಮಾತು ವಾಣಿಜ್ಯ ವಲಯದಲ್ಲಿ ಕೇಳಿಬಂದಿತ್ತು. ವಿಮಾನಯಾನ ಕ್ಷೇತ್ರದಲ್ಲಿ ಹಲವು ಖಾಸಗಿ ಕಂಪನಿಗಳು ಬಂಡವಾಳ ಹೂಡಿದವು. ಆದರೆ, ಕಾಲ ಸರಿದಂತೆ ಈ ಕ್ಷೇತ್ರದ ಕೆಲವು ಕಂಪನಿಗಳು ಸ್ಥಗಿತಗೊಂಡವು, ಕೆಲವು ಕಂಪನಿಗಳು ದೊಡ್ಡ ಕಂಪನಿಗಳ ಪಾಲಾದವು. ಈ ಬದಲಾವಣೆಗಳ ನಡುವೆ, ಭಾರತದ ಬ್ಯಾಂಕ್‌ಗಳು ಅನುಭವಿಸಿದ ಕಷ್ಟ–ನಷ್ಟಗಳು ಈಗ ಸಾರ್ವಜನಿಕರ ಅವಗಾಹನೆಗೆ ಲಭ್ಯವಿವೆ. ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಕಂಪನಿಗೆ ನೀಡಿರುವ ಸಾಲದ ವಸೂಲಿಗೆ ದೇಶದ ದೊಡ್ಡ ದೊಡ್ಡ ಬ್ಯಾಂಕ್‌ಗಳು ಇಂದಿಗೂ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿವೆ. ಈಗ, ಜೆಟ್‌ ಏರ್‌ವೇಸ್‌ ಕಂಪನಿ ಕೂಡ ಹಣಕಾಸಿನ ಮುಗ್ಗಟ್ಟು ಪರಿಹರಿಸಲಾಗದೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಅದರ ಭವಿಷ್ಯ ತೂಗುಯ್ಯಾಲೆಯಲ್ಲಿ ಇದೆ. ವಿಮಾನಯಾನ ಉದ್ಯಮದಲ್ಲಿ ಆದ ಪಲ್ಲಟಗಳನ್ನು ಗಮನಿಸಿದವರು ಈಗ ಭಾರತದ ದೂರಸಂಪರ್ಕ ಉದ್ಯಮದ ಬಗ್ಗೆ ಎಚ್ಚರಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಕಾಲ ಬಂದಿದೆ. ಭಾರತೀಯ ದೂರಸಂಪರ್ಕ ಕ್ಷೇತ್ರಕ್ಕೆ ಕೆಲವೇ ವರ್ಷಗಳ ಹಿಂದೆ ಪ್ರವೇಶಿಸಿದ ‘ರಿಲಯನ್ಸ್‌ ಜಿಯೊ’ ಈಗ 30 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಸುದ್ದಿ ಬಂದಿದೆ. ಒಂದು ಕಾಲದ ಮುಂಚೂಣಿ ಕಂಪನಿಯಾದ ಏರ್‌ಟೆಲ್‌ ಈಗ ಚಂದಾದಾರರ ಸಂಖ್ಯೆಯ ದೃಷ್ಟಿಯಿಂದ ಮೂರನೆಯ ಸ್ಥಾನಕ್ಕೆ ಕುಸಿದಿದ್ದು, 28 ಕೋಟಿ ಚಂದಾದಾರರು ಆ ಕಂಪನಿ ಜೊತೆಗಿದ್ದಾರೆ. ಒಂದಾಗಿರುವ ವೊಡಾಫೋನ್‌–ಐಡಿಯಾ ಕಂಪನಿಯು 40 ಕೋಟಿ ಚಂದಾದಾರರನ್ನು ಹೊಂದಿದೆ ಎಂದು ವರದಿಯಾಗಿದೆ.

ಈ ಮೂರೂ ಕಂಪನಿಗಳ ಆದಾಯದ ಮಟ್ಟ ಒಂದೇ ರೀತಿ ಇದೆ. ಜಿಯೊ ಕಂಪನಿಯ ಲಾಭದ ಪ್ರಮಾಣ ಸ್ವಲ್ಪಸ್ವಲ್ಪವಾಗಿ ಹೆಚ್ಚುತ್ತಿದ್ದು, ಏರ್‌ಟೆಲ್‌ ಮತ್ತು ವೊಡಾಫೋನ್‌–ಐಡಿಯಾ ಕಂಪನಿಗಳ ಲಾಭದ ಪ್ರಮಾಣ ತಗ್ಗುತ್ತಿದೆ. ದೂರದ ಪ್ರಯಾಣಕ್ಕಾಗಿ ವಿಮಾನ ಬಳಸುವವರ ಸಂಖ್ಯೆ ಹೆಚ್ಚಿದಂತೆಲ್ಲ ವಿಮಾನಯಾನ ಕಂಪನಿಗಳ ಲಾಭವೂ ಹೆಚ್ಚಬೇಕಿತ್ತು. ಆದರೆ, ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಾಹೋದ ಅವಧಿಯಲ್ಲೇ ಪ್ರಮುಖ ಕಂಪನಿಗಳು ನೆಲಕಚ್ಚಿದವು. ಇದಕ್ಕೆ ಒಂದು ಕಾರಣ, ತೀರಾ ಸ್ಪರ್ಧಾತ್ಮಕ ಎನ್ನಬಹುದಾದ ಟಿಕೆಟ್ ದರ ಎನ್ನುವ ಮಾತನ್ನು ವಾಣಿಜ್ಯೋದ್ಯಮ ಕ್ಷೇತ್ರದ ಪ್ರಮುಖರು ಹೇಳಿದ್ದಾರೆ. ಇಂಥದ್ದೇ ಮಾದರಿಯ ಸ್ಪರ್ಧೆ ಇಂದು ದೂರಸಂಪರ್ಕ ಕಂಪನಿಗಳ ನಡುವೆ ನಡೆದಿದೆ. ಜಿಯೊ ಪ್ರವೇಶದ ನಂತರ ಮೊಬೈಲ್‌ ಸೇವಾಶುಲ್ಕಗಳು ತೀರಾ ಅಗ್ಗವಾಗಿವೆ. ಕಡಿಮೆ ಸೇವಾಶುಲ್ಕದ ಜೊತೆಯಲ್ಲೇ, ಸ್ಮಾರ್ಟ್‌ ಫೋನ್‌ ಮಾರುಕಟ್ಟೆ ವಿಸ್ತರಣೆ ಕಂಡಿದ್ದರ ಪರಿಣಾಮವಾಗಿ ಭಾರತದಲ್ಲಿ ಇಂಟರ್ನೆಟ್‌ ಸಂಪರ್ಕ ಹೆಚ್ಚಾಗಿರುವುದು ಹೌದಾದರೂ, ದರಸಮರದ ಪರಿಣಾಮಗಳನ್ನು ಕೂಡ ಗಮನಿಸಬೇಕು. ವಿಮಾನಯಾನ ವಲಯದಲ್ಲಿ ಆದಂತೆಯೇ, ದೂರಸಂಪರ್ಕ ಕ್ಷೇತ್ರದಲ್ಲಿ ಕೂಡ ಕೆಲವು ಕಂಪನಿಗಳು ಈಗಾಗಲೇ ಸ್ಥಗಿತಗೊಂಡಿವೆ. ಒಂದೆರಡು ಕಂಪನಿಗಳು ವಿಲೀನಗೊಂಡಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕಂಪನಿ ನಷ್ಟದಲ್ಲಿರುವುದಾಗಿ ವರದಿಗಳು ಹೇಳುತ್ತಿವೆ. ಭಾರತದ ವಿವಿಧ ಬ್ಯಾಂಕುಗಳಿಂದ ಈ ವಲಯದ ಕಂಪನಿಗಳು ಪಡೆದಿರುವ ವಿವಿಧ ರೂಪದ ಸಾಲಗಳ ಮೊತ್ತ ₹ 4 ಲಕ್ಷ ಕೋಟಿಗಿಂತ ಹೆಚ್ಚು ಎಂಬ ವರದಿಗಳಿವೆ. ವಾಣಿಜ್ಯೋದ್ಯಮದಲ್ಲಿ ಭವಿಷ್ಯ ನುಡಿಯುವುದು ಸುಲಭವಲ್ಲ. ಆದರೆ, ದರಸಮರ ಎದುರಿಸಲಾಗದೆ ಯಾವುದೇ ಕಂಪನಿ ಸ್ಥಗಿತಗೊಂಡರೆ, ಬ್ಯಾಂಕ್‌ಗಳ ಮೇಲೆ ಸೃಷ್ಟಿಯಾಗುವ ಒತ್ತಡದ ಪ್ರಮಾಣ ಅಗಾಧವಾಗಿರುತ್ತದೆ ಎಂಬುದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹಾಗೂ ಸಂಬಂಧಪಟ್ಟ ಸಚಿವಾಲಯದ ಗಮನಕ್ಕೆ ಬಂದರೆ ಉತ್ತಮ. ಈಗ ನಡೆದಿರುವ ದರಸಮರ ಬಹುಕಾಲ ಮುಂದುವರಿಯುವುದು ದೇಶದ ಅರ್ಥವ್ಯವಸ್ಥೆಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಅದರ ಬದಲಿಗೆ ಕಂಪನಿಗಳು, ಕರೆ ಕಡಿತದಂತಹ ಸಮಸ್ಯೆಗಳನ್ನು ಬಗೆಹರಿಸುವತ್ತ, ಚಂದಾದಾರರಿಗೆ ನ್ಯಾಯಯುತ ಬೆಲೆಗೆ ಉತ್ತಮ 4–ಜಿ ಸೇವೆ ಒದಗಿಸುವತ್ತ, ನೆಟ್‌ವರ್ಕ್‌ ವ್ಯಾಪ್ತಿಯನ್ನು ಹಿಗ್ಗಿಸುವತ್ತ ಹೆಜ್ಜೆ ಇರಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು