ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ವೈದ್ಯರ ನಿರ್ಲಕ್ಷ್ಯದಿಂದ ಮೂವರ ಸಾವು: ವ್ಯವಸ್ಥೆಗೆ ಬೇಕಿದೆ ಚಿಕಿತ್ಸೆ

Published 27 ಫೆಬ್ರುವರಿ 2024, 23:30 IST
Last Updated 27 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಮೂವರು ಮಹಿಳೆಯರು ಮರಣ‌ ಹೊಂದಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನಲ್ಲಿ ನಡೆದಿದೆ. ಇದು ನಮ್ಮ ಆರೋಗ್ಯ ವ್ಯವಸ್ಥೆಯ ಹೊಣೆಗೇಡಿತನ ಮತ್ತು ವೈಫಲ್ಯಕ್ಕೆ ಕೈಗನ್ನಡಿಯಾಗಿದೆ. ಸರ್ವಪ್ರಯತ್ನಗಳನ್ನೂ ಮಾಡಿ ರೋಗಿಯ ಜೀವ ಉಳಿಸುವುದು ಆರೋಗ್ಯ ಸಿಬ್ಬಂದಿಯ ಕರ್ತವ್ಯ. ಅಂತಹ ಬದ್ಧತೆಯುಳ್ಳ ವೈದ್ಯರಿಗೆ ನಮ್ಮಲ್ಲಿ ಕೊರತೆ ಇಲ್ಲ. ಆದರೆ, ಕೆಲವರು ಇದಕ್ಕೆ ಅಪವಾದವೆಂಬಂತೆ ನಡೆದುಕೊಳ್ಳುವುದು ಇಡೀ ವೈದ್ಯಸಮೂಹವನ್ನು,ವ್ಯವಸ್ಥೆಯನ್ನು ಅಪನಂಬಿಕೆಗೆ ದೂಡುತ್ತದೆ. ಇದು ತಪ್ಪಬೇಕಾದರೆ ಆರೋಗ್ಯ ವ್ಯವಸ್ಥೆಯು ಪರಿಣಾಮಕಾರಿ ಶುಶ್ರೂಷೆ ನೀಡುವ, ಜತೆಗೆ ಜನಸ್ನೇಹಿಯಾಗುವ ಮೂಲಕ ಜನರ ವಿಶ್ವಾಸ ಗಳಿಸುವ ದಿಸೆಯಲ್ಲಿ ಸುಧಾರಣೆ ಆಗಬೇಕಿದೆ.

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಹಾಗೂ ಜಿಲ್ಲಾ ಕೇಂದ್ರ ತುಮಕೂರಿನಿಂದ 120 ಕಿ.ಮೀ. ದೂರದಲ್ಲಿರುವ ಪಾವಗಡದಂತಹ ಪ್ರದೇಶಗಳ ಜನರಿಗೆ ತಮ್ಮ ಆರೋಗ್ಯದಲ್ಲಿ ಏರುಪೇರಾದಾಗ ಸರ್ಕಾರಿ ಆಸ್ಪತ್ರೆಯೇ ಬಹುಮಟ್ಟಿಗೆ ಆಸರೆಯಾಗಿರುತ್ತದೆ. ಅಲ್ಲಿನ ವೈದ್ಯರು, ಶುಶ್ರೂಷಕರು ಜೀವರಕ್ಷಕರಾಗಿ  ಕಾಣುತ್ತಾರೆ. ಸಿಸೇರಿಯನ್ ಹೆರಿಗೆ ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಏಳು ಮಹಿಳೆಯರಿಗೆ ಈ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ಇಬ್ಬರನ್ನು ಮನೆಗೆ ಕಳುಹಿಸಲಾಗಿತ್ತು.
ಐವರಿಗೆ ಹೊಟ್ಟೆನೋವು ಮತ್ತು ಎದೆನೋವು ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಅವರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.


ಈ ದಾರುಣ ಪ್ರಕರಣದ ಬಗ್ಗೆ ವರದಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ, ‘ಶಸ್ತ್ರಚಿಕಿತ್ಸೆ ನಂತರ ಸೋಂಕು ಹರಡಿದ್ದು ಸಾವಿಗೆ ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ, ಕರ್ತವ್ಯಲೋಪ, ಬೇಜವಾಬ್ದಾರಿಯೇ ಈ ಸಾವಿಗೆ ಕಾರಣ’ ಎಂದು ಹೇಳಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಒಬ್ಬ ವೈದ್ಯ ಸೇರಿದಂತೆ ಮೂವರು ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ, ಜತೆಗೆ ಕಾಯಂ ಸೇವಾನಿರತ ಒಬ್ಬ ವೈದ್ಯ, ಇಬ್ಬರು ಶುಶ್ರೂಷಕರನ್ನು ಅಮಾನತು ಮಾಡಲಾಗಿದೆ. ಸೇವೆಯಿಂದ ವಜಾ ಮಾಡುವುದು ಹಾಗೂ ಅಮಾನತುಗೊಳಿಸುವ ಶಿಕ್ಷೆಯು ಈ ರೀತಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ನಡೆಗೆ ಶಾಶ್ವತ ಪರಿಹಾರವಲ್ಲ ಅಥವಾ ಈ ರೀತಿಯ ಕ್ರಮಗಳಿಂದ ಉಳಿದ ಅಧಿಕಾರಿಗಳು, ನೌಕರರು ಎಚ್ಚೆತ್ತುಕೊಳ್ಳುತ್ತಾರೆ ಎಂದೂ ಭಾವಿಸುವಂತಿಲ್ಲ.

ಖರೀದಿಯಲ್ಲಿ ಭ್ರಷ್ಟಾಚಾರ, ವರ್ಗಾವಣೆಯಲ್ಲಿ ಲಂಚ, ದುರಾಸೆಯಿಂದಾಗಿ ಸರ್ಕಾರದ ಎಲ್ಲ ಇಲಾಖೆಗಳೂ ಕೆಟ್ಟುಹೋಗಿರುವಂತೆ ಆರೋಗ್ಯ ಇಲಾಖೆಯೂ ಹದಗೆಟ್ಟಿದೆ. ಸುಧಾರಣೆಯು ಮೇಲಿನಿಂದ ಆಗದೇಹೋದರೆ ಕೆಳಹಂತದವರನ್ನು ದೂರಿ ಏನೂ ಪ್ರಯೋಜನವಾಗದು. ಅದರಲ್ಲೂ ಗ್ರಾಮೀಣ ಪ್ರದೇಶದ ಬಡವರು, ಮಧ್ಯಮವರ್ಗದವರು, ಮುಖ್ಯವಾಗಿ ಮಹಿಳೆಯರು ತಮ್ಮ ಆರೋಗ್ಯ ಕೈಕೊಟ್ಟಾಗ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿರುತ್ತಾರೆ. ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳು ಬಡ–ಮಧ್ಯಮವರ್ಗದವರ ಪಾಲಿಗೆ ಕೈಗೆಟಕುವ ಸ್ಥಿತಿಯಲ್ಲಿ ಇಲ್ಲ. ವಿವಿಧ ಪರೀಕ್ಷೆಗಳ ಹೆಸರಿನಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿರುವುದು ರಹಸ್ಯವೇನೂ ಅಲ್ಲ. ಈ ಬಗ್ಗೆ ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಹಲವು ದೂರುಗಳು ಬಂದಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯು ದುಬಾರಿಯಾಗಿ ಪರಿಣಮಿಸಿರುವುದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರಿಗೆ ಗೊತ್ತಿಲ್ಲವೆಂದಲ್ಲ. ‍ಪರಿಸ್ಥಿತಿ ಹೀಗಿರುವಾಗ, ಸರ್ಕಾರಿ ಆಸ್ಪತ್ರೆಗಳನ್ನು ಸುಸ್ಥಿತಿಯಲ್ಲಿಡುವ, ಅವುಗಳ ಆರೋಗ್ಯ ಸುಧಾರಣೆ ಮಾಡುವ ದಿಟ್ಟ ಹೆಜ್ಜೆಯನ್ನು ಸರ್ಕಾರ ಇಡಲೇಬೇಕಿದೆ. ರಾಜ್ಯದಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ 2,844 ಆಸ್ಪತ್ರೆಗಳಿವೆ. ಮಂಜೂರಾದ 6,563 ವೈದ್ಯರ ಹುದ್ದೆಗಳಿವೆ. ಈ ಪೈಕಿ 2,269 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಸಿಬ್ಬಂದಿ ಪೈಕಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡವರೇ ಹೆಚ್ಚು ಮಂದಿ ಇದ್ದಾರೆ. ಹೀಗೆ, ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡವರು ತಪ್ಪು ಎಸಗಿದಾಗ, ಕರ್ತವ್ಯದಲ್ಲಿ ಅಸಡ್ಡೆ ತೋರಿದಾಗ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ದಾರಿಗಳು ಅತ್ಯಲ್ಪ. ಸರ್ಕಾರಿ ನೌಕರರಾದರೆ, ಹಲವು ರೀತಿಯ ಕ್ರಮಗಳಿಗೆ ಅವರನ್ನು ಗುರಿಪಡಿಸುವ ಅವಕಾಶ ಇರುತ್ತದೆ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು, ಜನರಲ್‌ ಫಿಜಿಷಿಯನ್, ಮೂಳೆತಜ್ಞರು ಇಂತಹ ಹುದ್ದೆಗಳಿಗಾದರೂ ಕಾಯಂ ಆಗಿ ನೇಮಕ ಮಾಡಿಕೊಳ್ಳಬೇಕಿದೆ.

ಆಗಮಾತ್ರ, ರೋಗಿಗಳ ಜೀವಕ್ಕೆ ಖಾತರಿ ನೀಡಲು ಸಾಧ್ಯ. ತಮ್ಮದು ಬಡವರ, ಆರ್ಥಿಕವಾಗಿ ಹಿಂದುಳಿದವರ, ಮಹಿಳೆಯರ ಪರ ಸರ್ಕಾರ ಎಂದು ಹೇಳಿಕೊಂಡರಷ್ಟೇ ಸಾಲದು. ಈ ಸಮುದಾಯಗಳ ಅಗತ್ಯಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ಪೂರೈಸುವ ಕೆಲಸವನ್ನೂ ಮಾಡಬೇಕು. ‘ಗ್ಯಾರಂಟಿ’ ಹೆಸರಿನಲ್ಲಿ ಯೋಜನೆಗಳನ್ನು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಾ ಆರೋಗ್ಯದ ‘ಗ್ಯಾರಂಟಿ’ ಕೊಡುವುದನ್ನೇ ಮರೆತರೆ ಜೀವ ಹೇಗೆ ಉಳಿದೀತು? ವೈದ್ಯರ ನಿರ್ಲಕ್ಷ್ಯ ಹಾಗೂ ಸೌಕರ್ಯದ ಕೊರತೆಯಿಂದ ಯಾರೊಬ್ಬರೂ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳಬಾರದು. ಅಂತಹ ವಾತಾವರಣ ಸೃಷ್ಟಿಯಾದರಷ್ಟೇ ‘ಕರ್ನಾಟಕ ಮಾದರಿ’ ಎಂಬ ಘೋಷಣೆ ಸಾರ್ಥಕವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT