ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನರಭಕ್ಷಕ’ ಅವನಿ ಹತ್ಯೆಆಘಾತಕಾರಿ, ಖಂಡನೀಯ

Last Updated 5 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಯವತ್‌ಮಲ್‌ ಜಿಲ್ಲೆಯ ಬೊರಟಿ ಅರಣ್ಯ ಪ್ರದೇಶದಲ್ಲಿ ಸ್ವತಂತ್ರವಾಗಿ ಓಡಾಡುತ್ತಿದ್ದ ನರಭಕ್ಷಕ ಎನ್ನುವ ಹಣೆಪಟ್ಟಿ ಕಟ್ಟಿದ್ದ ಅವನಿ ಹೆಣ್ಣು ಹುಲಿಯನ್ನು ಅಲ್ಲಿನ ಅರಣ್ಯ ಇಲಾಖೆಯೇ ಶಾರ್ಪ್‌ಶೂಟರ್‌ ಮೂಲಕ ಗುಂಡಿಕ್ಕಿ ಕೊಲ್ಲಿಸಿದೆ. ಪಂಢರಕಾವಡಾ ಅರಣ್ಯ ಪ್ರದೇಶದ ಸುತ್ತಮುತ್ತಲ ನಿವಾಸಿಗಳಿಗೆ ಈ ಹುಲಿ ಎರಡು ವರ್ಷಗಳಿಂದ ಪ್ರಾಣಭೀತಿ ತರಿಸಿತ್ತು. ಸುಮಾರು 13 ಜನರನ್ನು ಕೊಂದಿತ್ತು ಎನ್ನುವ ಆರೋಪ ಅವನಿ ಮೇಲಿತ್ತು. ಹೀಗಾಗಿ ಗುಂಡಿಕ್ಕಿ ಕೊಲ್ಲುವಂತೆ ಸುಪ್ರೀಂ ಕೋರ್ಟ್‌ ಕಳೆದ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು. ಇದನ್ನು ಜಾರಿಗೆ ತರುವಲ್ಲಿ ಅತಿ ಉತ್ಸಾಹ ತೋರಿಸಿದ ಅಲ್ಲಿಯ ಅರಣ್ಯ ಸಚಿವ ಸುಧೀರ್‌ ಮುನಗಂಟಿವಾರ್‌, ಹತ್ಯೆ ಮಾಡಲು ಹೈದರಾಬಾದ್‌ ಮೂಲದ ಶಾರ್ಪ್‌ಶೂಟರ್‌ ಶಫತ್‌ ಅಲಿ ಖಾನ್‌ಗೆ ಅನುಮತಿ ನೀಡಿದ್ದರು.

ಈ ಅನುಮತಿ ಒಂದು ರೀತಿಯಲ್ಲಿ ಸು‍‍ಪಾರಿ ನೀಡಿದಂತೆ ಎಂದು ವನ್ಯಜೀವಿ ಪ್ರಿಯರು ಆನ್‌ಲೈನ್‌ ಮೂಲಕ ಮತ್ತು ಬಹಿರಂಗವಾಗಿಯೂ ವಿರೋಧ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಹುಲಿ ಪತ್ತೆಗೆ ನಾಯಿಗಳು, ಡ್ರೋನ್‌, ಟ್ರ್ಯಾಪ್‌ ಕ್ಯಾಮೆರಾ ಮತ್ತು ಶಾರ್ಪ್‌ಶೂಟರ್‌ಗಳನ್ನು ಬಳಸಲಾಗಿತ್ತು. ಕಾರ್ಯಾಚರಣೆಯಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಲಾಗಿತ್ತು. ಈ ಹೆಣ್ಣು ಹುಲಿಯನ್ನು ಆಕರ್ಷಿಸಲು ಮತ್ತೊಂದು ಹುಲಿಯ ಮೂತ್ರ ಮತ್ತು ಅಮೆರಿಕದಿಂದ ತರಿಸಿದ ಸುಗಂಧವನ್ನು ಸಹ ಸುರಿಯಲಾಗಿತ್ತು.

ನಿರೀಕ್ಷೆ ಹುಸಿಯಾಗದೆ ಶುಕ್ರವಾರ ರಾತ್ರಿ ಕಾಣಿಸಿಕೊಂಡ ಹುಲಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ಘಟನೆಗೆ ವನ್ಯಜೀವಿ ಪ್ರಿಯರು ದಿಗ್ಭ್ರಾಂತಿ ವ್ಯಕ್ತಪಡಿಸಿದ್ದರೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಕಡೆ ಕೇಂದ್ರ ಸರ್ಕಾರವೇ ಹುಲಿ ರಕ್ಷಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೆ, ಮತ್ತೊಂದು ಕಡೆ ಅವನಿಯನ್ನು ಹತ್ಯೆ ಮಾಡಿದ ಕ್ರಮವನ್ನು ಯಾವುದೇ ಕಾರಣದಿಂದ ಸಮರ್ಥಿಸಲು ಆಗದು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶವು ಸಹ ಪ್ರಶ್ನಾರ್ಹ.

ಸಂಸತ್ತಿನ ಅಂಗೀಕಾರದಿಂದ ಜಾರಿಗೆ ಬಂದಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಎಲ್ಲಾ ರೀತಿಯ ವನ್ಯಜೀವಿಗಳ ಹತ್ಯೆ ಶಿಕ್ಷಾರ್ಹ. ಭಾರತದಲ್ಲಿರುವ ಬಂಗಾಳದ ಹುಲಿಗಳ ಸಂಖ್ಯೆ 2,226 ಮಾತ್ರ. ವಿಶ್ವದಲ್ಲಿ ಈ ಸಂಖ್ಯೆ 3,890. ಭಾರತದಲ್ಲಿ ವರ್ಷಕ್ಕೆ ಸರಾಸರಿ 60 ಹುಲಿಗಳು ಸಾಯುತ್ತಿವೆ ಎನ್ನುವ ಮಾಹಿತಿಯಿದೆ. ಹುಲಿಯೊಂದಿದ್ದರೆ ಕಾಡು ಮತ್ತು ಕಾಡಿನಲ್ಲಿರುವ ಬಲಿ ಪ್ರಾಣಿಗಳ ಸಂಖ್ಯೆ ಆರೋಗ್ಯಪೂರ್ಣವಾಗಿದೆ ಎಂದರ್ಥ. ಇಂತಹ ಸ್ಥಿತಿಯಲ್ಲಿ ಅರಿವಳಿಕೆ ಹಾರಿಸಿ ಅವನಿಯನ್ನು ಸೆರೆಹಿಡಿಯಬಹುದಾಗಿತ್ತು. ಅದನ್ನು ಬಿಟ್ಟು ಕೊಲ್ಲುವಂತಹ ಕೆಟ್ಟ ಮನಸ್ಥಿತಿ ಮಹಾರಾಷ್ಟ್ರ ಸರ್ಕಾರಕ್ಕೆ ಬರಬಾರದಿತ್ತು. ಹುಲಿ ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ರಾತ್ರಿ ವೇಳೆ ನಡೆಸಬಾರದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ನಿಯಮ ರೂಪಿಸಿದೆ.

ಇಷ್ಟಿದ್ದರೂ ರಾತ್ರಿ ವೇಳೆ ಕಾರ್ಯಾಚರಣೆ ಮುಂದುವರೆಸಿದ್ದನ್ನು ಗಮನಿಸಿದರೆ ಅವನಿಯನ್ನು ಕೊಲ್ಲುವ ಏಕಮಾತ್ರ ಉದ್ದೇಶ ಸ್ಪಷ್ಟವಾಗಿ ಕಾಣುತ್ತದೆ. ಕಾರ್ಯಾಚರಣೆ ವೇಳೆ ಶಫತ್‌ ಅಲಿಯ ಮಗ ನವಾಬ್‌ ಅಲಿ ಹಾಜರಿ ವಿವಾದವನ್ನು ಹುಟ್ಟುಹಾಕಿದೆ. ಶಫತ್‌ ಮೇಲೆ ಚಿರತೆ, ಹುಲಿ, ಆನೆ, ಕಾಡುಹಂದಿ ಕೊಂದ ಹಾಗೂ ರಾಷ್ಟ್ರವಿರೋಧಿ ಶಕ್ತಿಗಳಿಗೆ ಬಂದೂಕು ನೀಡಿದ ಆರೋಪವಿದೆ ಎಂದು ಮೇನಕಾ ಕಿಡಿಕಾರಿದ್ದಾರೆ.

ಈ ಹುಲಿಗೆ 10 ತಿಂಗಳ ಎರಡು ಮರಿಗಳಿವೆ. ಇವು ಸ್ವತಂತ್ರವಾಗಿ ಜೀವಿಸಲು ಸಾಧ್ಯವಿಲ್ಲ. ಈ ಪ್ರಾಯದಲ್ಲಿ ತಾಯಿಯಿಂದ ಬೇಟೆಯಾಡುವುದನ್ನು ಹುಲಿಮರಿಗಳು ಪೂರ್ತಿ ಕಲಿತಿರುವುದಿಲ್ಲ. ಈ ಮರಿಗಳಿಗೆ ಸರ್ಕಾರ ಪುನರ್ವಸತಿ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಹುಲಿ ನರಭಕ್ಷಕ ಆದರೆ ಸೆರೆಹಿಡಿದು ಪುನರ್ವಸತಿ ಕಲ್ಪಿಸುವಂತಹ ನೀತಿ ಜಾರಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT