ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆಹಾರದ ಪೋಲು ತಡೆಯಲು ಎಲ್ಲರೂ ಕೈ ಜೋಡಿಸೋಣ

Last Updated 16 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಅಮೂಲ್ಯವಾದ ಆಹಾರವನ್ನು ಯಾವುದೇ ರೀತಿಯಲ್ಲಿ ಪೋಲು ಮಾಡದಂತೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಇದು ಮನೆಯಿಂದಲೇ ಮೊದಲಾಗಬೇಕು.

ಮನುಕುಲವನ್ನು ಒಂದೆಡೆ ಹಸಿವು ಮತ್ತು ಅಪೌಷ್ಟಿಕತೆ ಕಾಡುತ್ತಿದೆ. ಮತ್ತೊಂದೆಡೆ ಆಹಾರದ ಪೋಲು ಎಗ್ಗಿಲ್ಲದೆ ಆಗುತ್ತಿದೆ. ಆಹಾರ ಪೋಲಾಗುವುದನ್ನು ತಪ್ಪಿಸಿ, ಅದನ್ನು ಅಗತ್ಯ ಇರುವವರಿಗೆ ತಲುಪಿಸಿದರೆ ಹಸಿವು ಮತ್ತು ಅಪೌಷ್ಟಿಕತೆಯಂತಹ ಗಂಭೀರ ಸಮಸ್ಯೆಗಳನ್ನು ತಕ್ಕಮಟ್ಟಿಗಾದರೂ ನಿವಾರಿಸಬಹುದು. ಆದರೆ, ಅದು ಸಾಧ್ಯವಾಗುತ್ತಿಲ್ಲ ಎಂಬುದು ಕಳವಳಪಡಬೇಕಾದ ಸಂಗತಿ. ವಿಶ್ವಸಂಸ್ಥೆಯ ಆಹಾರ ಪೋಲು ಸೂಚ್ಯಂಕ–2021ರ ವರದಿ ಕಳೆದ ವಾರ ಬಿಡುಗಡೆಯಾಗಿದೆ. ಈ ವರದಿಯ ಮುಖ್ಯಾಂಶಗಳತ್ತ ಕಣ್ಣಾಡಿಸಿದರೆ ಪೋಲಾಗುತ್ತಿರುವ ಆಹಾರದ ಅಗಾಧತೆ ಮನವರಿಕೆ ಯಾಗುತ್ತದೆ. ಪೋಲು ಮಾಡುವ ಪ್ರವೃತ್ತಿಗೆ ಗಡಿಗಳ ಹಂಗಿಲ್ಲ. ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಇದರ ಇರುವಿಕೆಯು ಜಗತ್ತಿನ ಎಲ್ಲೆಡೆ ಕಾಣಸಿಗುತ್ತದೆ. 2019ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ. ಇದರಲ್ಲಿ ಶೇಕಡ 61ರ‌ಷ್ಟು ಆಹಾರ ಪೋಲು ಮನೆಗಳಲ್ಲೇ ಆಗಿದೆ. ಆಹಾರ ತಯಾರಿಕಾ ಉದ್ದಿಮೆಗಳಿಂದ ಶೇ 26ರಷ್ಟು ಪೋಲಾಗುತ್ತಿದೆ ಎಂದು ವರದಿ ತಿಳಿಸಿದೆ. ಜಾಗತಿಕವಾಗಿ ಉತ್ಪಾದಿಸಲಾಗುವ ಒಟ್ಟು ಆಹಾರ ಪದಾರ್ಥಗಳಲ್ಲಿ ಶೇ 17ರಷ್ಟು ಪೋಲಾಗುತ್ತಿದೆ. ವಿಪರ್ಯಾಸದ ಸಂಗತಿ ಎಂದರೆ, 2019ರಲ್ಲಿ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ. ಕೋವಿಡ್‌–19 ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.ಆಹಾರದ ಪೋಲು ವಿಚಾರದಲ್ಲಿ ಭಾರತವನ್ನು ಸಮಗ್ರ ಮಾಹಿತಿ ಲಭ್ಯವಿಲ್ಲದ ದೇಶಗಳ ಸಾಲಿನಲ್ಲಿ ಸೇರಿಸಲಾಗಿದೆ. ಈ ಅಧ್ಯಯನಕ್ಕೆ ನಮ್ಮ ದೇಶದ ಕೆಲವೇ ನಗರಗಳು ಒಳಗೊಂಡಿವೆ. ಭಾರತದಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಕುರಿತ ಮಾಹಿತಿ ಮಾತ್ರ ಈ ವರದಿಯಲ್ಲಿ ಅಡಕವಾಗಿದೆ. ನಮ್ಮ ದೇಶದಲ್ಲಿ ವಾರ್ಷಿಕ ತಲಾವಾರು ಆಹಾರ ಪೋಲಿನ ಪ್ರಮಾಣ 50 ಕೆ.ಜಿ.ಯಷ್ಟು ಎಂದು ಅಂದಾಜಿಸಲಾಗಿದೆ. ಈ ಪ್ರಮಾಣವು ಅಮೆರಿಕ ಮತ್ತು ಚೀನಾದಲ್ಲಿ ಆಗುತ್ತಿರುವ ಪೋಲಿನ ಪ್ರಮಾಣಕ್ಕಿಂತ ಕಡಿಮೆ. ಇದನ್ನು ಆಹಾರದ ಸಮರ್ಪಕ ಬಳಕೆಯ ನೆಲೆಯಲ್ಲಿ ನೋಡುವುದಕ್ಕಿಂತ ಆಹಾರದ ಲಭ್ಯತೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ತುಲನಾತ್ಮಕವಾಗಿ ಲಭ್ಯತೆಯ ಪ್ರಮಾಣ ನಮ್ಮಲ್ಲಿ ಕಡಿಮೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಆಹಾರ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಈ ನಂಬಿಕೆಯಲ್ಲಿ ಹುರುಳಿಲ್ಲ ಎಂದು ವರದಿ ತಿಳಿಸಿದೆ. ಹಾಗೆ ನೋಡಿದರೆ, ಈ ಸಮಸ್ಯೆಯ ತೀವ್ರತೆಯು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಹೆಚ್ಚು ಎಂದು ಕೆಲವು ಅಧ್ಯಯನಗಳು ಸಾರಿವೆ. ಜಗತ್ತು ತನಗೆ ಬೇಕಾದುದಕ್ಕಿಂತ ಎರಡು ಪಟ್ಟು ಹೆಚ್ಚು ಆಹಾರವನ್ನು ಉತ್ಪಾದಿಸುತ್ತಿದೆ. ಆದರೆ, ಪೋಲಾಗುವ ಪ್ರಮಾಣವೂ ಅಧಿಕವಾಗಿರುವುದರಿಂದ ಹಸಿದ ಹೊಟ್ಟೆಗೆ ಆಹಾರ ಸಿಗುತ್ತಿಲ್ಲ ಎಂಬುದು ಅತ್ಯಂತ ವಿಷಾದದ ಸಂಗತಿ. ಹೊಲ, ಕಣಜ, ಮಾರುಕಟ್ಟೆ, ಗೋದಾಮು, ಸಂಸ್ಕರಣಾ ಘಟಕ ಮೊದಲಾದ ಹಂತಗಳನ್ನು ದಾಟಿ ಮಾರಾಟ ಮಳಿಗೆ ತಲುಪುವವರೆಗೂ ಮತ್ತು ಅಲ್ಲಿಂದ ಅಂತಿಮವಾಗಿ ಅಡುಗೆ ಮನೆ ಸೇರುವವರೆಗೂ ಪೋಲು ಒಂದಲ್ಲ ಒಂದು ರೂಪದಲ್ಲಿ ಆಗುತ್ತಲೇ ಇರುತ್ತದೆ. ಕೆಲವು ಹಣ್ಣು–ತರಕಾರಿಗಳು ಬೇಗ ಕೊಳೆತುಹೋಗುತ್ತವೆ.ಸಾಗಣೆ, ದಾಸ್ತಾನಿಗೆ ಬೇಕಾದ ಮೂಲ ಸೌಕರ್ಯ ಹೆಚ್ಚಿಸುವ ಕಡೆ ಸರ್ಕಾರಗಳು ಗಮನ ಹರಿಸಬೇಕು. ಅಗತ್ಯ ಪ್ರಮಾಣದಲ್ಲಿ ಶೀತಲೀಕರಣ ಘಟಕಗಳನ್ನು ಸ್ಥಾಪಿಸಬೇಕು. ಸಂಸ್ಕರಣೆ, ಪ್ಯಾಕೇಜ್‌ಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು.ನಮ್ಮಲ್ಲಿಗೋದಾಮುಗಳು ಮಳೆ ಬಂದಾಗ ಸೋರುತ್ತವೆ. ಆಹಾರಧಾನ್ಯ ಗಳ ಅಸಮರ್ಪಕ ಸಂಗ್ರಹದ ಜೊತೆಗೆ ವಿತರಣಾ ವ್ಯವಸ್ಥೆಯಲ್ಲಿನ ದೋಷಗಳೂ ಸೇರಿಕೊಂಡು, ಸಾರ್ವಜನಿಕ ಪಡಿತರ ವ್ಯವಸ್ಥೆಯ ಯೋಜನೆಗಳು ಅರ್ಹರನ್ನು ಪರಿಣಾಮಕಾರಿಯಾಗಿ ತಲುಪುವಲ್ಲಿ ವಿಫಲವಾಗಿವೆ. ಈ ನ್ಯೂನತೆಗಳನ್ನು ಸರಿಪಡಿಸಬೇಕು.ಪೋಲು ತಡೆಯುವಲ್ಲಿ ಜನಜಾಗೃತಿಯ ಪಾತ್ರ ದೊಡ್ಡದು.ಆಹಾರ ಅಮೂಲ್ಯ. ಅದನ್ನು ಯಾವುದೇ ರೀತಿಯಲ್ಲಿ ಪೋಲು ಮಾಡಬಾರದು ಎಂದು ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಇದು ಮನೆಯಿಂದಲೇ ಮೊದಲಾಗಬೇಕು. ಅರಿವಿನ ತಳವನ್ನು ಶಾಲಾ ಹಂತದಲ್ಲಿ ಗಟ್ಟಿಗೊಳಿಸಬೇಕು. ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ 107 ದೇಶಗಳ ಪೈಕಿ ಭಾರತ 94ನೇ ಸ್ಥಾನದಲ್ಲಿದೆ. ಶೇ 14ರಷ್ಟು ಭಾರತೀಯರು ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ವರದಿಗಳಿವೆ. ಈ ಅಂಶಗಳು ನಮ್ಮ ಕಣ್ಣು ತೆರೆಸಬೇಕಿದೆ. ಆಹಾರ ಪೋಲು ತಗ್ಗಿಸುವುದರಿಂದ ಹಸಿರುಮನೆ ಅನಿಲ ಬಿಡುಗಡೆ ಪ್ರಮಾಣ ತಗ್ಗಿಸಬಹುದು. ಪರಿಸರದ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಬಹುದು. ನೀರು, ಇಂಧನ, ಶ್ರಮ ಉಳಿಸಬಹುದು. ಹೀಗಾಗಿ ಆಹಾರದ ಪೋಲು ತಪ್ಪಿಸುವುದು ಆಂದೋಲನದ ರೂಪ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT