ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ರೈತರ ಹಿತರಕ್ಷಣೆಗೂ ಇರಲಿ ಆದ್ಯತೆ

Published 2 ಸೆಪ್ಟೆಂಬರ್ 2023, 1:47 IST
Last Updated 2 ಸೆಪ್ಟೆಂಬರ್ 2023, 1:47 IST
ಅಕ್ಷರ ಗಾತ್ರ

ದಿನಬಳಕೆಯ ಆಹಾರ ವಸ್ತುಗಳ ದರ ಏರಿಕೆಯ ಪರಿಣಾಮವಾಗಿ ಆಹಾರ ಹಣದುಬ್ಬರವು ಜುಲೈನಲ್ಲಿ ಶೇಕಡ 11.5ರಷ್ಟನ್ನು ತಲುಪಿತ್ತು. ಅಗತ್ಯ ವಸ್ತುಗಳ ದರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಕೆಲವು ದಿನಗಳಿಂದ ಈಚೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಮುಂದಿನ ಕೆಲವು ತಿಂಗಳುಗಳವರೆಗೂ ಆಹಾರ ವಸ್ತುಗಳ ದರ ಏರುಗತಿಯಲ್ಲೇ ಸಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಗಳಿವೆ. ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಮತ್ತು ಎಲ್‌ ನಿನೊ ಚಂಡಮಾರುತದ ಸಂಭವನೀಯ ದುಷ್ಪರಿಣಾಮಗಳಿಂದ ಮುಂಗಾರು ಮತ್ತು ಹಿಂಗಾರಿನ ಬೆಳೆಗಳು ವಿಫಲವಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆಯು ಅಗತ್ಯ ವಸ್ತುಗಳ ದರ ಏರಿಕೆಗೆ ಕಾರಣವಾಗಲಿದೆ. ದರ ಏರಿಕೆಯನ್ನು ನಿಯಂತ್ರಿಸದೇ ಇದ್ದರೆ ಮುಂಬರುವ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಹಿನ್ನಡೆ ಉಂಟಾಗಬಹುದು ಎಂಬ ಆತಂಕ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನು ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಬೆಲೆ ಏರಿಕೆ ನಿಯಂತ್ರಣವನ್ನು ಅತ್ಯಂತ ತುರ್ತು ಕೆಲಸ ಎಂದು ಭಾವಿಸಿ ಸರ್ಕಾರವು ಕಾರ್ಯಪ್ರವೃತ್ತವಾಗಿದೆ. ಇಂತಹ ಬಹುತೇಕ ಕ್ರಮಗಳು ಮಾರುಕಟ್ಟೆ ಮಧ್ಯಪ್ರವೇಶದ ಮಾದರಿಯಲ್ಲಿದ್ದು, ಅಗತ್ಯ ಇರುವಷ್ಟು ಆಹಾರ ವಸ್ತುಗಳ ಪೂರೈಕೆ ಮತ್ತು ಅವುಗಳ ಬೆಲೆ ನಿಯಂತ್ರಣಕ್ಕೆ ಪೂರಕವಾಗಿವೆ. ಈ ಪ್ರಕ್ರಿಯೆಯಲ್ಲಿ ಸರ್ಕಾರವು ಕೈಗೊಂಡಿರುವ ಬಹುತೇಕ ಕ್ರಮಗಳು ಆಹಾರ ವಸ್ತುಗಳನ್ನು ಉತ್ಪಾದಿಸುವ ರೈತರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ.

ಈರುಳ್ಳಿ ರಫ್ತಿನ ಮೇಲೆ ಶೇಕಡ 40ರಷ್ಟು ಸುಂಕ ವಿಧಿಸಿರುವ ಕೇಂದ್ರ ಸರ್ಕಾರವು ಅದನ್ನು ಡಿಸೆಂಬರ್‌ವರೆಗೂ ಮುಂದುವರಿಸಲಿದೆ. ಬಾಸ್ಮತಿಯೇತರ ಅಕ್ಕಿ ರಫ್ತನ್ನು  ನಿಷೇಧಿಸಲಾಗಿದೆ. ಬಾಸ್ಮತಿ ಹೆಸರಿನಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿ ರಫ್ತಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಬೇಳೆ ಕಾಳುಗಳು ಮತ್ತು ಗೋಧಿಯ ದಾಸ್ತಾನಿನ ಮೇಲೆ ಜೂನ್‌ನಿಂದಲೇ ಮಿತಿ ಹೇರಲಾಗಿದೆ. ಈರುಳ್ಳಿಯ ಕಾಪು ದಾಸ್ತಾನಿನ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಈರುಳ್ಳಿ ಬೆಲೆ ಏರಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಖುಷಿಯಲ್ಲಿದ್ದ ಈರುಳ್ಳಿ ಬೆಳೆಗಾರರು ಮತ್ತು ವರ್ತಕರು, ಸರ್ಕಾರದ ಕ್ರಮಗಳಿಂದ ದರ ಕುಸಿಯಬಹುದು ಎಂಬ ಭೀತಿಯಲ್ಲಿದ್ದಾರೆ. ಈ ಕಾರಣದಿದಂದಾಗಿಯೇ ಸರ್ಕಾರದ ತೀರ್ಮಾನಗಳ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಕುಚ್ಚಿಲಕ್ಕಿಯ ರಫ್ತಿನ ಮೇಲೆ ಶೇ 20ರಷ್ಟು ರಫ್ತು ತೆರಿಗೆ ಹೇರಲಾಗಿದೆ. 2021–22ರಲ್ಲಿ ಅಕ್ಕಿ ರಫ್ತಿನಲ್ಲಿ ಶೇ 30ರಷ್ಟು ಕುಚ್ಚಿಲಕ್ಕಿಯೇ ಇತ್ತು. ಇದೇ ಅವಧಿಯಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತಿನ ಪ್ರಮಾಣವು ಶೇ 30ರಷ್ಟಿತ್ತು. ದೇಶದ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಉದ್ಭವಿಸುವುದನ್ನು ತಡೆಯುವುದು ಮತ್ತು ಬೆಲೆ ಏರಿಕೆ ನಿಯಂತ್ರಿಸುವುದು ಈ ಕ್ರಮಗಳ ಹಿಂದಿನ ಉದ್ದೇಶ.

ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕಾಗಿಯೇ ಕೈಗೊಂಡಿರುವ ಈ ಕ್ರಮಗಳು ರೈತರ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಲಿವೆ ಮತ್ತು ಅವರ ಆದಾಯ ಕುಸಿತಕ್ಕೂ ಕಾರಣವಾಗುವ ಅಪಾಯವಿದೆ. ಕೃಷಿ ಅತ್ಯಂತ ಕಡಿಮೆ ಲಾಭವಿರುವ ವೃತ್ತಿ. ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಸರ್ಕಾರದ ಕಡೆಯಿಂದ ಹೆಚ್ಚಿನ ನೆರವು ದೊರಕುತ್ತಿಲ್ಲ. ಸಾಮಾನ್ಯವಾಗಿ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯನ್ನು ಪಡೆಯುತ್ತಿಲ್ಲ. ಲಾಭದ ಬಹುಪಾಲು ಮಧ್ಯವರ್ತಿಗಳ ಪಾಲಾಗುತ್ತಿದೆ. ಸಂಘಟಿತರಾಗಿ ಸರ್ಕಾರದ ವಿರುದ್ಧ ಅಭಿಪ್ರಾಯ ರೂಪಿಸಬಲ್ಲ ಶಕ್ತಿ ಹೊಂದಿರುವ ಗ್ರಾಹಕರಿಗೆ ಬೆಲೆ ಏರಿಕೆಯಿಂದ ಆಗುವ ತೊಂದರೆಗಳ ಕುರಿತು ಸರ್ಕಾರ ಕಾಳಜಿ ತೋರಿದೆ. ಆದರೆ, ಕೃತಕವಾಗಿ ಕೃಷಿ ಉತ್ಪನ್ನಗಳ ಬೆಲೆ ಕುಸಿಯುವಂತೆ ಮಾಡಿದಾಗ ರೈತರು ನಷ್ಟ ಅನುಭವಿಸುತ್ತಾರೆ ಎಂಬುದು ವಾಸ್ತವ. ಈ ಬಗೆಯ ನಿರ್ಬಂಧಗಳು ಗ್ರಾಮೀಣ ಪ್ರದೇಶದ ಬೇಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆಯು ಕೈಗಾರಿಕೆ ಮತ್ತು ವ್ಯಾಪಾರ ವಹಿವಾಟಿನ ಹಲವು ವಿಭಾಗಗಳಿಗೆ ಪೂರಕವಾದುದು. ಈ ನಿರ್ಬಂಧಗಳಿಂದ ಆ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಆಗುತ್ತದೆ. ಈ ಬಾರಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು ಗ್ರಾಹಕರಿಗಷ್ಟೇ ಅನುಕೂಲಕರವಾಗಿವೆ. ಇಂತಹ ವಿಚಾರಗಳಲ್ಲಿ ರೈತರು ಮತ್ತು ಗ್ರಾಹಕರು ಇಬ್ಬರ ಹಿತವನ್ನೂ ರಕ್ಷಿಸುವಂತಹ ಸಮತೋಲನದ ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯ. ನಿರ್ಬಂಧಗಳನ್ನು ಹೇರುವ ಮೂಲಕ ರಫ್ತು ಒಪ್ಪಂದಗಳನ್ನು ಮುರಿಯುವುದು ಕೂಡ ‘ನಂಬಿಕೆಯ ರಫ್ತುದಾರ’ ಎಂಬ ದೇಶದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ. ಈ ಬಗ್ಗೆಯೂ ಎಚ್ಚರಿಕೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT