ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಪಿಎ ಕಾಯ್ದೆಗೆ ತಿದ್ದುಪಡಿ ದುರ್ಬಳಕೆಯ ಅವಕಾಶ ತಪ್ಪಿಸಿ

Last Updated 29 ಜುಲೈ 2019, 2:06 IST
ಅಕ್ಷರ ಗಾತ್ರ

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಗೆ (ಯುಎಪಿಎ) ಕೆಲವು ತಿದ್ದುಪಡಿಗಳನ್ನು ತರುವ ಮಸೂದೆಯೊಂದಕ್ಕೆ ಲೋಕಸಭೆಯು ಕಳೆದ ವಾರ ಅನುಮೋದನೆ ನೀಡಿದೆ. 1967ರ ಈ ಕಾಯ್ದೆಗೆ ಹಿಂದೆ ಮೂರು ಬಾರಿ– ಅಂದರೆ, 2004, 2008 ಮತ್ತು 2013ರಲ್ಲಿ– ಕೆಲವು ತಿದ್ದುಪಡಿಗಳು ಆಗಿವೆ. ಭಯೋತ್ಪಾದನೆ ಅಂದರೆ ದೇಶದ ವಿರುದ್ಧ ಸಾರುವ ಯುದ್ಧವೇ ಸರಿ. ದೇಶದ ಎಲ್ಲರ ಜೀವವನ್ನು ರಕ್ಷಿಸುವ ಹೊಣೆ ಸರ್ಕಾರಗಳ ಮೇಲೆ ಇರುತ್ತದೆಯಾದ ಕಾರಣ, ಇಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಿದ್ದರೂ, ಲೋಕಸಭೆಯ ಅನುಮೋದನೆ ಪಡೆದಿರುವ ಮಸೂದೆಯಲ್ಲಿನ ಅಂಶಗಳನ್ನು ಅನುಮಾನದ ಕಣ್ಣಿನಿಂದ ನೋಡಲೇಬೇಕಾದ ಪರಿಸ್ಥಿತಿ ಎದುರಾಗಿದೆ. ‘ವ್ಯಕ್ತಿ’ಗಳನ್ನು ಕೂಡ ‘ಭಯೋತ್ಪಾದಕ’ ಎಂದು ಘೋಷಿಸುವ ಅಧಿಕಾರವನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡುತ್ತದೆ ಈ ಮಸೂದೆ. ಇದುವರೆಗೆ ‘ಸಂಘಟನೆ’ಗಳನ್ನು ಮಾತ್ರ ‘ಭಯೋತ್ಪಾದಕ ಸಂಘಟನೆ’ಗಳು ಎಂದು ಘೋಷಿಸಲು ಅವಕಾಶ ಇತ್ತು. ವ್ಯಕ್ತಿಯೊಬ್ಬನನ್ನು ‘ಭಯೋತ್ಪಾದಕ’ ಎಂದು ಘೋಷಿಸುವಂತೆ ಭದ್ರತಾ ಸಂಸ್ಥೆಗಳಿಂದ ಸಚಿವಾಲಯಕ್ಕೆ ಮನವಿ ಬರಬೇಕು. ಹಾಗೆ ಘೋಷಿಸುವಂತೆ ಸಲ್ಲಿಸಿದ ಮನವಿಯ ಜೊತೆ ವ್ಯಕ್ತಿಯ ವಿರುದ್ಧ ವಿಶ್ವಾಸಾರ್ಹ ಸಾಕ್ಷ್ಯಗಳನ್ನೂ ಒದಗಿಸಬೇಕಾಗುತ್ತದೆ. ಆ ಸಾಕ್ಷ್ಯಗಳನ್ನು ಸಚಿವಾಲಯವು ಬೇರೆ ಭದ್ರತಾ ಸಂಸ್ಥೆಗಳಿಂದ ಪಡೆದ ಸಾಕ್ಷ್ಯಗಳ ಜೊತೆ ತಾಳೆ ಮಾಡಿ ನೋಡುತ್ತದೆ. ಸಾಕ್ಷ್ಯಗಳು ಸಮರ್ಪಕವಾಗಿದ್ದರೆ, ಆ ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಸಚಿವಾಲಯವೇ ಘೋಷಿಸುತ್ತದೆ. ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಪ್ರಕ್ರಿಯೆಯೇ ಮಸೂದೆಯ ಅಪಾಯಗಳನ್ನು ಸ್ಪಷ್ಟವಾಗಿ ಹೇಳುತ್ತದೆ. ನ್ಯಾಯಾಲಯಗಳು ಒಬ್ಬ ವ್ಯಕ್ತಿಯನ್ನು ದೋಷಿ ಅಥವಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದವ ಎಂದು ತೀರ್ಮಾನ ಮಾಡುವ ಮೊದಲೇ, ಕೇಂದ್ರ ಸರ್ಕಾರದ ಸಚಿವಾಲಯವೊಂದರ ಅಧಿಕಾರಿಗಳಿಗೆ ಆತನನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅವಕಾಶ ನೀಡಿರುವುದು ಮಸೂದೆಯಲ್ಲಿನ ಲೋಪ. ಈ ಅಂಶ ಮುಂದೊಂದು ದಿನ ನ್ಯಾಯಾಂಗದ ಪರಿ ಶೀಲನೆಗೆ ಒಳಪಟ್ಟು, ಅಸಿಂಧುವಾಗಬಹುದು. ಹಾಗೆಯೇ, ಈ ಅಂಶವು ಅಧಿಕಾರಸ್ಥರಿಂದ ದುರ್ಬಳಕೆ ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಇದು, ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡುವವರ ವಿರುದ್ಧ ಹೆಚ್ಚೆಚ್ಚು ಬಳಕೆಯಾಗಬಹುದು ಎಂಬ ಆತಂಕ ಈಗಾಗಲೇ ಕೆಲವು ವಲಯಗಳಿಂದ ವ್ಯಕ್ತವಾಗಿದೆ. ಅಲ್ಲದೆ, ರಾಜಕೀಯ ಪ್ರತಿಸ್ಪರ್ಧಿಗಳು, ಸೈದ್ಧಾಂತಿಕ ನೆಲೆಯಲ್ಲಿ ಸರ್ಕಾರವನ್ನು ಟೀಕಿಸುವವರು ಮುಂತಾದವರ ವಿರುದ್ಧವೂ ಇದು ದುರ್ಬಳಕೆ ಆಗುವ ಸಾಧ್ಯತೆ ಇದೆ.ವ್ಯಕ್ತಿಯೊಬ್ಬ ‘ಭಯೋತ್ಪಾದಕ’ ಎಂದು ಘೋಷಿತನಾದಲ್ಲಿ, ಅದನ್ನು ಪ್ರಶ್ನಿಸಿ ಆತ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಬಹುದು. ವ್ಯಕ್ತಿಯಿಂದ ಮನವಿ ಬಂದ ನಂತರ ಸಚಿವಾಲಯವು ಅದನ್ನು 45 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಎಂಬ ಅಂಶ ಮಸೂದೆಯಲ್ಲಿದೆ. ಇದು ಕೂಡ ನ್ಯಾಯಾಂಗದ ಪರಿಶೀಲನೆಗೆ ಒಳಗಾಗಬಹುದು. ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಿದ ಸಚಿವಾಲಯವೇ, ‘ನಾನು ಭಯೋತ್ಪಾದಕ ಅಲ್ಲ’ ಎಂದು ಆತ ಸಲ್ಲಿಸಬಹುದಾದ ಅರ್ಜಿಯನ್ನು ಪರಿಶೀಲಿಸುವುದರಲ್ಲಿ ಅರ್ಥವಿಲ್ಲ. ಆ ಪ್ರಕ್ರಿಯೆಗೆ ಮೇಲ್ಮನವಿ ಪ್ರಾಧಿಕಾರವೊಂದು ಇರಬೇಕಾಗು ತ್ತದೆ. ಸಚಿವಾಲಯದ ತೀರ್ಮಾನ ತೃಪ್ತಿ ತಾರದಿದ್ದರೆ ವ್ಯಕ್ತಿಯು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಇರುವ ತ್ರಿಸದಸ್ಯ ಸಮಿತಿಯ ಎದುರು ಮನವಿ ಸಲ್ಲಿಸಬಹುದು. ಆದರೆ ಆ ಸಮಿತಿಯನ್ನು ನೇಮಿಸುವ ಅಧಿಕಾರವನ್ನು ಕೂಡ ಗೃಹ ಸಚಿವಾಲಯಕ್ಕೇ ನೀಡಲಾಗಿದೆ. ಈ ಮಸೂದೆಯಲ್ಲಿನ ಇಂತಹ ಅಂಶಗಳು ಸಹಜ ನ್ಯಾಯದ ತತ್ವಗಳಿಗೆ ಅನುಗುಣವಾಗಿರುವಂತೆ ಕಾಣಿಸುತ್ತಿಲ್ಲ.

ವ್ಯಕ್ತಿಯನ್ನು ‘ಭಯೋತ್ಪಾದಕ’ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಘೋಷಿಸುವಾಗ ಅಧಿಕಾರಿಗಳ ಕಡೆಯಿಂದ ತಪ್ಪಾದಲ್ಲಿ, ತಪ್ಪು ಮಾಡಿದ ಅಧಿಕಾರಿಗೆ ಶಿಕ್ಷೆ ಏನು ಎಂಬುದು ಸ್ಪಷ್ಟವಾಗಿಲ್ಲ. ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಿದ ನಂತರ ಆತನನ್ನು ಬಂಧಿಸಲಾಗುತ್ತದೆಯೋ ಅಥವಾ ಆತನ ಚಲನವಲನಗಳ ಮೇಲೆ ಕಣ್ಣಿಡಲಾಗುತ್ತದೆಯೋ ಎಂಬುದೂ ಸ್ಪಷ್ಟವಾಗಿಲ್ಲ. ಇದು ಕೂಡ ಈ ಮಸೂದೆಯಲ್ಲಿನ ಗಂಭೀರ ಲೋಪಗಳಲ್ಲಿ ಒಂದು. ‘ಭಯೋತ್ಪಾದಕ’ ಎಂದು ಯಾವುದೇ ವ್ಯಕ್ತಿಯನ್ನು ತಪ್ಪಾಗಿ ಘೋಷಿಸಿದಲ್ಲಿ, ಆ ವ್ಯಕ್ತಿ ನಾಗರಿಕ ಸಮಾಜದಲ್ಲಿ ತಲೆ ಎತ್ತಲು ಸಾಧ್ಯವಿಲ್ಲ. ಆತ ತನ್ನ ಉದ್ಯೋಗ ಕಳೆದುಕೊಳ್ಳಬೇಕಾಗಬಹುದು. ಆತನ ಕುಟುಂಬ ಸಾರ್ವಜನಿಕವಾಗಿ ಅವಮಾನಕ್ಕೆ ಗುರಿಯಾಗಬಹುದು. ಮುಂದೊಂದು ದಿನ ಆತ ‘ಭಯೋತ್ಪಾದಕ’ ಅಲ್ಲ ಎಂದು ಸಾಬೀತಾದರೂ, ವ್ಯಕ್ತಿಗೆ ಅಂಟಿದ ಕಳಂಕ ಸುಲಭಕ್ಕೆ ತೊಳೆದುಹೋಗುವುದಿಲ್ಲ. ಭಯೋತ್ಪಾದನೆಯನ್ನು ಎಳ್ಳಷ್ಟೂ ಸಹಿಸಿಕೊಳ್ಳಬಾರದು ಎಂಬ ಆಶಯವನ್ನು ಕೇಂದ್ರ ಸರ್ಕಾರ ಹೊಂದಿರುವುದು ಸಮಂಜಸವೇ ಆಗಿದ್ದರೂ, ವ್ಯಕ್ತಿಯ ಘನತೆಯನ್ನು ಕಾಯುವ ಹೊಣೆ ಕೂಡ ತನ್ನ ಮೇಲಿದೆ ಎಂಬುದನ್ನು ಸರ್ಕಾರ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT