ಮಂಗಳವಾರ, ಮೇ 18, 2021
29 °C

ಅಂತರ್ಜಲ ಮಟ್ಟ ಕಾಪಾಡದಿದ್ದರೆ ಭವಿಷ್ಯದಲ್ಲಿ ಕಾದಿದೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಸುಮಾರು ನೂರು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಪಾತಾಳ ಕಂಡಿರುವುದು ಕಳವಳಕಾರಿ ವಿದ್ಯಮಾನ. ಹವಾಮಾನ ವೈಪರೀತ್ಯದ ಬಿಸಿ ರಾಜ್ಯಕ್ಕೂ ತಟ್ಟಿರುವುದು ಇದರಿಂದ ವೇದ್ಯ. ವಾಡಿಕೆಯಷ್ಟು ಮಳೆ ಆಗದ ಕಾರಣ, ಅಂತರ್ಜಲದ ಮೇಲಿನ ಅವಲಂಬನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆದು ಅಂತರ್ಜಲವನ್ನು ಪೋಲು ಮಾಡುತ್ತಿರುವ ಪ್ರವೃತ್ತಿ ಹೆಚ್ಚಿರುವುದೇ ಇಂದಿನ ದುಃಸ್ಥಿತಿಗೆ ಪ್ರಮುಖ ಕಾರಣ. ಸಂಚಿತ ಠೇವಣಿಯಂತೆ ತೀರಾ ಅನಿವಾರ್ಯ ಸನ್ನಿವೇಶದಲ್ಲಿ ಮಾತ್ರ ಬಳಕೆ ಮಾಡಬೇಕಿದ್ದ ಭೂಮಿಯ ಆಳದ ನೀರನ್ನು, ಭವಿಷ್ಯದ ಚಿಂತೆಯೇ ಇಲ್ಲದೆ ಮೊಗೆದು ದುರ್ಬಳಕೆ ಮಾಡುತ್ತಿರುವುದು ಬಲು ಅಪಾಯಕಾರಿ ಹೆಜ್ಜೆ. ಮುಂಗಾರಿನ ಪ್ರಮಾಣ ಈ ವರ್ಷವೂ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಈ ಸೂಚನೆ ನಿಜವಾದರೆ, ಬರದಿಂದ ತತ್ತರಿಸಿರುವ ರಾಜ್ಯದಲ್ಲಿ ನೀರಿನ ಸಮಸ್ಯೆ ಗಂಡಾಂತರಕಾರಿ ಹಂತ ತಲುಪಬಹುದು. ಅಂತರ್ಜಲ ಮಟ್ಟ ಹಲವು ವರ್ಷಗಳಿಂದ ನಿರಂತರವಾಗಿ ಕುಸಿಯುತ್ತಿದ್ದರೂ ಅದನ್ನು ತಡೆಯುವತ್ತ ರಾಜ್ಯ ಸರ್ಕಾರ ದೂರದೃಷ್ಟಿಯುಳ್ಳ ಯಾವ ಯೋಜನೆಯನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ ಎನ್ನುವುದು ಸುಸ್ಪಷ್ಟ. ಇಲ್ಲದಿದ್ದರೆ ಪರಿಸ್ಥಿತಿ ಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲಿಲ್ಲ. ಅಂತರ್ಜಲ ಮಟ್ಟ ಕುಸಿತಕ್ಕೆ ಮಳೆಯ ಕೊರತೆಯೊಂದೇ ಕಾರಣವಲ್ಲ. ಅವೈಜ್ಞಾನಿಕ ಬೆಳೆ ಪದ್ಧತಿ, ಆ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಅವ್ಯಾಹತವಾಗಿ ಕೊಳವೆಬಾವಿಗಳನ್ನು ಕೊರೆಸಿ, ಭೂಮಿಯ ಒಡಲನ್ನು ಬರಿದು ಮಾಡುವಂತಹ ಕೃತ್ಯವೂ ಇಂತಹ ಸನ್ನಿವೇಶ ಸೃಷ್ಟಿಯಾಗಲು ಒಂದು ಪ್ರಧಾನ ಕಾರಣ. ಅಂತರ್ಜಲ ಬಳಕೆ ವಿಚಾರದಲ್ಲಿ ಕೃಷಿ ಕ್ಷೇತ್ರದಷ್ಟೇ ನಗರೀಕರಣದ ಅತಿಯಾದ ದಾಹ ಮತ್ತು ಮಳೆ ನೀರು ಇಂಗಿಸುವ ಬಗ್ಗೆ ಜನರಲ್ಲಿರುವ ನಿರ್ಲಕ್ಷ್ಯವೂ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಳೆನೀರು ಸಂಗ್ರಹ ಕಡ್ಡಾಯದ ನಿಯಮವು ಕಾಗದದಲ್ಲಿ ಮಾತ್ರ ಇದೆ. ಅಲ್ಲದೆ, ನಗರಗಳಲ್ಲಿ ಮಳೆ ನೀರು ಇಂಗಿಸುವಂತಹ ವ್ಯವಸ್ಥೆ ಎಲ್ಲೂ ಇಲ್ಲ. ಎಲ್ಲಾ ನೀರು ಚರಂಡಿಗೆ ಹರಿದು ಹೋಗಿ ನೂರಾರು ಟಿಎಂಸಿ ಅಡಿಗಳಷ್ಟು ಜೀವಜಲ ವ್ಯರ್ಥವಾಗುತ್ತಿದೆ. 

ಮಳೆನೀರು ಸಂಗ್ರಹ, ಅಂತರ್ಜಲ ಸಂರಕ್ಷಣೆಯಂತಹ ವಿಚಾರಗಳಲ್ಲಿ ಜನಸಮುದಾಯದಲ್ಲಿ ಒಂದು ನೈತಿಕ ಪ್ರಜ್ಞೆಯೂ ಇಲ್ಲ. ಮಳೆನೀರು ಇಂಗಿಸುವುದು ನಮ್ಮ ಕರ್ತವ್ಯ ಎಂದು ಯಾರೂ ಪರಿಗಣಿಸುತ್ತಿಲ್ಲ. ಕೆರೆಗಳ ಬಫರ್‌ (ಮೀಸಲು) ವಲಯವನ್ನು ಪ್ರವಾಹ ತಡೆಯುವ ನೈಸರ್ಗಿಕ ಬೋಗುಣಿ ಎಂದೇ ಗುರುತಿಸಲಾಗುತ್ತದೆ. ಈ ಭೂಭಾಗಗಳು ಒಡಲಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತವೆ. ಕೆರೆಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸಬೇಕಾದ ರಾಜ್ಯ ಸರ್ಕಾರ ಕೂಡ ರಿಯಲ್‌ ಎಸ್ಟೇಟ್‌ ಕಂಪನಿಗಳ ಜತೆ ಸೇರಿಕೊಂಡು ಬಫರ್‌ ವಲಯವನ್ನು ಕಡಿಮೆ ಮಾಡುವಂತೆ ಈ ಹಿಂದೆ ಕಾನೂನುಸಮರ ನಡೆಸಿದ್ದು ಕುಚೋದ್ಯ. ಇಂತಹ ಪ್ರವೃತ್ತಿಗೆ ಮಂಗಳ ಹಾಡಬೇಕು. ಜಲಸಾಕ್ಷರತೆ ಮೂಡಿಸುವ ಕೆಲಸ ಪ್ರತೀ ಹಂತದಲ್ಲೂ ಆಗಬೇಕು. ಸ್ವಪ್ರೇರಣೆಯಿಂದ ಪಾರಂಪರಿಕವಾಗಿ ಜಲಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಬಹಳಷ್ಟು ಜನ ರಾಜ್ಯದಲ್ಲಿ ಇದ್ದಾರೆ. ಅಂತರ್ಜಲ ಕಾಪಾಡುವ ವಿಚಾರವಾಗಿ ಹಲವು ಸಮುದಾಯಗಳು, ಸಂಘಟನೆಗಳು, ಸಂಸ್ಥೆಗಳು  ಕೆಲಸ ಮಾಡುತ್ತಿವೆ. ಸಾಕಷ್ಟು ಮಾದರಿಗಳನ್ನೂ ರೂಪಿಸಿವೆ. ಆ ಮಾದರಿಗಳನ್ನು ಬೇರೆ ಬೇರೆ ಕಡೆ ಅಳವಡಿಸುವಂತೆ ಆಗಬೇಕು. ಹೊಲಗಳಲ್ಲಿ ಸಣ್ಣ ಸಣ್ಣ ಒಡ್ಡುಗಳನ್ನು ಹಾಕಿದರೂ ಅಪಾರ ಪ್ರಮಾಣದ ನೀರು ಪೋಲಾಗುವುದು ತಪ್ಪುತ್ತದೆ. ತ್ಯಾಜ್ಯ ನೀರನ್ನು ಸಂಸ್ಕರಿಸಿ, ಮರುಬಳಕೆ ಮಾಡುವುದು ಅಗತ್ಯವಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಸುಲಭದ ಹಾದಿಗಳು ಬೇಕಾದಷ್ಟಿವೆ. ಆ ಹಾದಿಯಲ್ಲಿ ನಡೆಯುವಂತಹ ಇಚ್ಛಾಶಕ್ತಿ ಬೇಕಷ್ಟೇ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು