ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅನ್‌ಲಾಕ್‌ ಸ್ಥಿತಿ: ಭಯ ಅನಗತ್ಯ, ಜಾಗರೂಕತೆ ಇರಲಿ

Last Updated 8 ಜೂನ್ 2020, 2:20 IST
ಅಕ್ಷರ ಗಾತ್ರ

ಭಾರತದಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ನಡುವೆ, ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ಜನರ ಸಂಚಾರ, ಚಟುವಟಿಕೆಗಳ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಸರ್ಕಾರಗಳು ಕಡಿಮೆ ಮಾಡುತ್ತಾ ಬಂದಿವೆ. ಈಗ ದೇಶವು ಲಾಕ್‌ಡೌನ್‌ ಸ್ಥಿತಿಯಿಂದ ಅನ್‌ಲಾಕ್‌ (ನಿರ್ಬಂಧಗಳನ್ನು ತೆರವು ಮಾಡುವ ಪ್ರಕ್ರಿಯೆ) ಸ್ಥಿತಿಯತ್ತ ಹೊರಳಿಕೊಳ್ಳುತ್ತಿದೆ. ‘ಜನರ ಜೀವ ಮತ್ತು ಜೀವನೋಪಾಯ’ ಇವೆರಡನ್ನೂ ಕಾಪಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಾಣುವಿನ ವಿಚಾರವಾಗಿ ಮಾತನಾಡುವಾಗ ಹಿಂದೊಮ್ಮೆ ಹೇಳಿದ್ದರು.

ಆರ್ಥಿಕ ಸ್ಥಿತಿ ತಲುಪಿರುವ ಹಂತವನ್ನು ಗಮನಿಸಿದವರಿಗೆ, ಜನರ ಜೀವನೋಪಾಯಕ್ಕೆ ಎದುರಾಗಿರುವ ಗಂಭೀರ ಅಪಾಯವನ್ನು ಅರಿತವರಿಗೆ ದೇಶ ಅನ್‌ಲಾಕ್‌ ಸ್ಥಿತಿಯತ್ತ ಹೊರಳಿಕೊಳ್ಳುತ್ತಿರುವುದು ಸಮರ್ಥನೀಯ ಎಂಬುದು ಅರ್ಥವಾಗುತ್ತದೆ. ಸೋಮವಾರದಿಂದ ಕರ್ನಾಟಕದಲ್ಲಿ ಮಾಲ್‌ಗಳು ಬಾಗಿಲು ತೆರೆಯಲಿವೆ. ಧಾರ್ಮಿಕ ಕೇಂದ್ರಗಳಿಗೆ ಭಕ್ತರ ಭೇಟಿಗೆ ಅವಕಾಶ ಸಿಗಲಿದೆ. ಮಾಲ್‌ಗಳ ಪುನರಾರಂಭವು ಬೇರೆ ಕೆಲವು ರಾಜ್ಯಗಳಲ್ಲೂ ಆಗಲಿದೆ. ಅಂದರೆ, ಇನ್ನು ಮುಂದೆ ಜನರ ಸಂಚಾರ ಹಾಗೂ ಒಬ್ಬರು ಇನ್ನೊಬ್ಬರ ಜೊತೆ ಸಂಪರ್ಕಕ್ಕೆ ಬರುವುದು ತೀವ್ರಗತಿಯಲ್ಲಿ ಹೆಚ್ಚಲಿದೆ. ಅದರ ಪರಿಣಾಮ ಎಂಬಂತೆ, ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಕೂಡ ಹೆಚ್ಚಲಿದೆ. ಔಷಧ ಅಥವಾ ಲಸಿಕೆ ಸಿಗುವವರೆಗೆ ಈ ವೈರಾಣು ಹಾಗೂ ಇದು ಉಂಟುಮಾಡುವ ಕಾಯಿಲೆಯ ಜೊತೆ ಬದುಕುವುದು ಅನಿವಾರ್ಯ. ಅನ್‌ಲಾಕ್‌ ಸ್ಥಿತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಅಪಾಯವೂ ಇದೆ. ಹಾಗಾಗಿ, ಸೋಂಕು ಹರಡುವಿಕೆ ತಡೆಯುವ ಎಚ್ಚರಿಕೆ ಸದಾ ಇರಬೇಕು.

ಲಾಕ್‌ಡೌನ್‌ ಸ್ಥಿತಿಯಿಂದ ಕೊರೊನಾಪೂರ್ವ ಸ್ಥಿತಿಗೆ ಹೆಜ್ಜೆ ಹಾಕುವುದು ಹಂತ ಹಂತವಾಗಿ ನಡೆಯುವ ಪ್ರಕ್ರಿಯೆ. ಇದು ತಕ್ಷಣಕ್ಕೆ ಆಗುವಂಥದ್ದಲ್ಲ. ಆದರೆ, ವೈರಾಣುವಿಗೆ ಹೆದರಿ ಮನೆಯಿಂದ ಹೊರಗೇ ಬಾರದೆ ಇರಬೇಕು ಎಂಬ ಸ್ಥಿತಿ ಕೂಡ ಇಲ್ಲ. ಈಗಿನ ಹಂತದಲ್ಲಿ, ನಾಗರಿಕ ಸಮಾಜ ಇನ್ನಷ್ಟು ಹೆಚ್ಚು ಜಾಗರೂಕವಾಗಿ ವರ್ತಿಸಬೇಕು. ಮಾಸ್ಕ್‌ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ವೈಯಕ್ತಿಕ ಶುಚಿತ್ವ ಪಾಲನೆ ವ್ರತದಂತೆ ನಡೆಯಬೇಕು. ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವುದನ್ನು ಮರೆಯುವಂತಿಲ್ಲ. ವೈದ್ಯರು, ತಜ್ಞರು ನೀಡುವ ಸಲಹೆಗಳನ್ನು ಪಾಲಿಸುತ್ತ ದೇಶದ ಆರ್ಥಿಕ ಯಂತ್ರಕ್ಕೆ ಮರುಚಾಲನೆ ನೀಡುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬಹುದು. ಅಂಕಿ–ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೋವಿಡ್–19 ಕಾಯಿಲೆಯು ಎಲ್ಲರಿಗೂ ಮಾರಣಾಂತಿಕ ಅಲ್ಲ ಎಂಬುದು ಗೊತ್ತಾಗುತ್ತದೆ. ಇದಕ್ಕೆ ಪೂರಕವಾಗಿ, ದೇಶದಲ್ಲಿ ಸೋಂಕಿಗೆ ತುತ್ತಾದವರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಮನೆಗೆ ಮರಳುತ್ತಿರುವ ಪ್ರಮಾಣ ಕೂಡ ಹೆಚ್ಚುತ್ತಿದೆ. ಇದು ಈ ಕಾಯಿಲೆಗೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಇರುವ ಭಯವನ್ನು ಕಡಿಮೆ ಮಾಡಲು ನೆರವಿಗೆ ಬರುತ್ತದೆ.

ಜನರಲ್ಲಿನ ಭಯ ತಗ್ಗಿದರೆ ಅವರು ಮನೆಯಿಂದ ಹೊರಗೆ ಬರುವುದೂ ಹೆಚ್ಚಬಹುದು. ಅದರಿಂದ ಆರ್ಥಿಕ ಚಟುವಟಿಕೆಗಳಿಗೆ ಇನ್ನಷ್ಟು ವೇಗ ಸಿಗಬಹುದು. ತಜ್ಞರು ಹೇಳಿರುವ ಸೂಚನೆಗಳನ್ನು ಪಾಲಿಸುತ್ತ ‘ಜೀವ’ ಕಾಪಾಡಿಕೊಳ್ಳುವುದರ ಜೊತೆಯಲ್ಲೇ, ಆರ್ಥಿಕ ಚಟುವಟಿಕೆಗಳ ಭಾಗವಾಗಿ ‘ಜೀವನೋಪಾಯ’ ಕಾಪಾಡಿಕೊಳ್ಳುವ ಕೆಲಸವೂ ಆಗ ಸಾಧ್ಯವಾಗುತ್ತದೆ. ಲಾಕ್‌ಡೌನ್‌ ನಿಯಮಗಳನ್ನು ಹಂತ ಹಂತವಾಗಿ ಸಡಿಲ ಮಾಡುತ್ತಿರುವುದರ ಹಿಂದಿನ ಉದ್ದೇಶ ಕೂಡ ಇದೇ. ಒಂಬತ್ತು ವಾರಗಳ ಅವಧಿಯ ಲಾಕ್‌ಡೌನ್‌, ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಬಲವಾದ ಪೆಟ್ಟು ನೀಡಿದೆ. ಅದರ ಪ್ರಮಾಣ ಏನು ಎಂಬುದರ ಅಂಕಿ–ಅಂಶಗಳು ಇನ್ನಷ್ಟೇ ಹೊರಬೀಳಬೇಕಿವೆ. ಆದರೆ, ಇಂತಹ ಸ್ಥಿತಿಯನ್ನೇ ಮುಂದುವರಿಸಿಕೊಂಡು ಹೋಗುವುದಕ್ಕೆ ಸಮರ್ಥನೆಗಳು ಇರಲಿಲ್ಲ. ಕೋವಿಡ್–19 ಕುರಿತ ಅನಗತ್ಯ ಭಯವನ್ನು ತೊರೆದು, ಅಗತ್ಯ ಜಾಗರೂಕತೆಗಳನ್ನು ಪಾಲಿಸುತ್ತ, ಅರ್ಥ ವ್ಯವಸ್ಥೆಯನ್ನು ಪುನಃ ಕಟ್ಟಬೇಕಿರುವ ಸಂದರ್ಭ ಇದು. ಇದು ಆದಾಗ ಮಾತ್ರ ಜೀವ ಹಾಗೂ ಜೀವನೋಪಾಯ ಕಾಪಾಡಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT