ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಕೋವಿಡ್‌ಗೆ ಲಸಿಕೆ: ಆತುರ ಸಲ್ಲದು, ಜನರ ಜೀವವೇ ಎಲ್ಲಕ್ಕಿಂತ ಮುಖ್ಯ

ವಿಜ್ಞಾನಿಗಳ ಆಕ್ಷೇಪ ಅರ್ಥಮಾಡಿಕೊಳ್ಳಿ
Last Updated 8 ಜುಲೈ 2020, 1:25 IST
ಅಕ್ಷರ ಗಾತ್ರ

ವೈದ್ಯ ವಿಜ್ಞಾನದ ಅಂಕೆಗೆ ಸಿಗದ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಜಗತ್ತಿನಾದ್ಯಂತ ಒಂದು ಕೋಟಿಯನ್ನು ಆಗಲೇ ಮೀರಿದೆ. ಸಾವಿನ ಸಂಖ್ಯೆ 5.4 ಲಕ್ಷದಷ್ಟಾಗಿದೆ. ಹಿರಿಯ ನಾಗರಿಕರು, ಮಧುಮೇಹ ಸ್ಥಿತಿ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಹೊಂದಿರುವವರಿಗೆ ಈ ರೋಗವು ಹೆಚ್ಚು ಅಪಾಯಕಾರಿ ಆಗಬಲ್ಲದು.

ಕೊರೊನಾ ವೈರಾಣುವು ಒಬ್ಬರಿಂದ ಇನ್ನೊಬ್ಬರಿಗೆ ಅತ್ಯಂತ ವೇಗವಾಗಿ ಹರಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿಯೇ ಜಗತ್ತಿನ ಪ್ರಮುಖ ಔಷಧ ಕಂಪನಿಗಳೆಲ್ಲವೂ ಈ ಸೋಂಕಿಗೆ ಲಸಿಕೆ ಮತ್ತು ಔಷಧ ಕಂಡು ಹಿಡಿಯುವ ಪ್ರಯತ್ನವನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿವೆ. 140 ಸಂಭಾವ್ಯ ಲಸಿಕೆಗಳ (ವ್ಯಾಕ್ಸಿನ್‌ ಕ್ಯಾಂಡಿಡೇಟ್‌) ಪೈಕಿ 11, ಮನುಷ್ಯನ ಮೇಲೆ ಪ್ರಯೋಗ ನಡೆಸುವ ಹಂತಕ್ಕೆ ಬಂದಿವೆ. ಅವುಗಳಲ್ಲಿ, ಭಾರತದ ಕಂಪನಿಗಳು ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ ಮತ್ತು ಝೈಕೋವ್‌–ಡಿ ಕೂಡ ಸೇರಿವೆ. ಭಾರತದಲ್ಲಿ ಈ ಪ್ರಯೋಗ ನಡೆಸಲು ಬೆಳಗಾವಿಯ ಜೀವನ್‌ರೇಖಾ ಆಸ್ಪತ್ರೆ ಸೇರಿ ಒಟ್ಟು 12 ಆಸ್ಪತ್ರೆಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಆಯ್ಕೆ ಮಾಡಿದೆ. ಮನುಷ್ಯರ ಮೇಲಿನ ಪ್ರಯೋಗಗಳನ್ನು 42 ದಿನಗಳಲ್ಲಿ ಮುಗಿಸಿ, ಆಗಸ್ಟ್‌ 15ರ ಹೊತ್ತಿಗೆ ಸಾರ್ವಜನಿಕ ಬಳಕೆಗೆ ಲಸಿಕೆ ಸಿದ್ಧವಾಗಬೇಕು ಎಂದು ಐಸಿಎಂಆರ್‌ ತಾಕೀತು ಮಾಡಿತ್ತು. ಇದು ಸಾರ್ವಜನಿಕ ಆರೋಗ್ಯ ಪರಿಣತರು ಮತ್ತು ವಿಜ್ಞಾನಿಗಳ ಆಕ್ಷೇಪಕ್ಕೆ ಕಾರಣವಾಗಿದೆ. ಕೊವ್ಯಾಕ್ಸಿನ್‌ನ ಹಂತ–1 ಮತ್ತು ಹಂತ–2ರ ಪರೀಕ್ಷೆಗಳನ್ನು ಆತುರಾತುರವಾಗಿ ಮುಗಿಸಲು ಒತ್ತಡ ಹಾಕಿದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಐಸಿಎಂಆರ್‌ ಸ್ಪಷ್ಟನೆಯನ್ನೂ ನೀಡಿದೆ. ಲಸಿಕೆ ಅಭಿವೃದ್ಧಿಯ ವಿಚಾರದಲ್ಲಿ ಅಧಿಕಾರಶಾಹಿ ವರ್ತನೆಯು ವಿಳಂಬ ಉಂಟು ಮಾಡಬಹುದು ಎಂಬುದೇ ಈ ರೀತಿ ಗಡುವು ನೀಡಲು ಕಾರಣ ಎಂದು ಹೇಳಿದೆ. ಲಸಿಕೆ‍ಪರೀಕ್ಷೆ ಪೂರ್ಣಗೊಳ್ಳಲು ನಿಗದಿ ಮಾಡಿದ ದಿನಾಂಕ, ಬಳಿಕ ನೀಡಿದ ಸ್ಪಷ್ಟೀಕರಣಗಳೆರಡೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಕೋವಿಡ್‌–19ಕ್ಕೆ ಅತ್ಯಂತ ಬೇಗ ಲಸಿಕೆ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ವಿಚಾರದಲ್ಲಿ ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದರು’ ಎಂಬ ರೀತಿಯಲ್ಲಿ ಐಸಿಎಂಆರ್‌ ವರ್ತಿಸಬಾರದು. ಲಸಿಕೆ ಅಭಿವೃದ್ಧಿ ಎಂಬುದು ವೈದ್ಯ ವಿಜ್ಞಾನಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ ಎಂಬುದಕ್ಕೆ ಈಗಿನ ಬೆಳವಣಿಗೆಯು ಬೆಳಕು ಚೆಲ್ಲಿದೆ. ಮೊದಲ ಲಸಿಕೆ ಭಾರತದಿಂದಲೇ ಬರಲಿ ಎಂಬ ಬಯಕೆ ಈ ದೇಶದ ಎಲ್ಲರಲ್ಲಿಯೂ ಇದೆ. ಈಗ ಸಿದ್ಧವಾಗುವ ಲಸಿಕೆಯ ಮಾರಾಟದ ಮೂಲಕಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವು ದೊಡ್ಡ ಲಾಭ ಪಡೆಯುವುದು ಸಾಧ್ಯವಿದೆ. ಸ್ವಾತಂತ್ರ್ಯ ದಿನದಂದು ಈ ಲಸಿಕೆಯು ಅನಾವರಣಗೊಂಡರೆಅದರಲ್ಲಿ ರಾಜಕೀಯ ಲಾಭ ಇದೆ ಎಂದು ಯಾರಾದರೂ ಭಾವಿಸಿದರೆ ಅದನ್ನು ಅಲ್ಲಗಳೆಯುವುದು ಕಷ್ಟ. ಆದರೆ, ಲಸಿಕೆಯ ಪರೀಕ್ಷೆ ಎಂಬುದು ತರಾತುರಿಯ ವ್ಯವಹಾರ ಅಲ್ಲ. ಲಸಿಕೆಯೊಂದು ಅಭಿವೃದ್ಧಿಯಾಗುವ ಮುನ್ನವೇ ಅದನ್ನು ವಾಣಿಜ್ಯ ಅಥವಾ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗುವುದು ಸರಿಯಾದ ನಡವಳಿಕೆಯೂ ಅಲ್ಲ. ಲಸಿಕೆಯ ವಿಚಾರದಲ್ಲಿ ಈ ರೀತಿಯ ಆತುರವನ್ನು ಹಿಂದೆಂದೂ ಯಾರೂ ತೋರಿದ್ದೂ ಇಲ್ಲ. ಯಾಕೆಂದರೆ, ಇದು ಜನರ ಜೀವದ ಪ್ರಶ್ನೆ. ಮೊದಲ ಹಂತದಲ್ಲಿ ಕೆಲವೇ ಮಂದಿಯ ಮೇಲೆ ಮತ್ತು ನಂತರದ ಹಂತದಲ್ಲಿ ದೊಡ್ಡ ಗುಂಪಿನ ಮೇಲೆ ಲಸಿಕೆಯನ್ನು ಪ್ರಯೋಗಿಸಬೇಕು. ಲಸಿಕೆಯ ಬಳಕೆಯಿಂದ ಯಾವುದೇ ಅಪಾಯ ಇಲ್ಲ ಮತ್ತು ಅದು ಸೋಂಕು ತಡೆಗೆ ಪರಿಣಾಮಕಾರಿ ಎಂಬುದು ಅನುಮಾನಕ್ಕೆ ಎಡೆ ಇಲ್ಲದ ರೀತಿಯಲ್ಲಿ ಸಾಬೀತಾಗಬೇಕು. ಸಮಯದ ಗಡುವು ನೀಡಿ ವಿಜ್ಞಾನಿಗಳು ಮತ್ತು ಸಂಶೋಧಕರ ಮೇಲೆ ಒತ್ತಡ ಹಾಕಿ ಸಿದ್ಧಪಡಿಸಿದ ಲಸಿಕೆಯು ಪರಿಪೂರ್ಣವಾಗಬಹುದು ಎಂಬ ಯಾವ ಖಾತರಿಯೂ ಇಲ್ಲ. ಸೋಂಕಿಗಿಂತ ಲಸಿಕೆಯೇ ಹೆಚ್ಚು ಅಪಾಯಕಾರಿ ಎನಿಸುವ ದುರಂತಕ್ಕೆ ಇದು ಕಾರಣವೂ ಆಗಬಹುದು. ದೇಶದ ವೈದ್ಯಕೀಯ ಸಂಶೋಧನೆಗಳ ಮಾರ್ಗದರ್ಶಕ ಸ್ಥಾನದಲ್ಲಿರುವ ಐಸಿಎಂಆರ್,‌ ಇಂತಹ ಮಹತ್ವದ ಅಂಶಗಳನ್ನು ಕಡೆಗಣಿಸಿದರೆ, ಅದರ ವಿಶ್ವಾಸಾರ್ಹತೆಗೇ ಕುಂದು ಉಂಟಾಗುತ್ತದೆ. ಕೋವಿಡ್‌ನಂತಹ ಪಿಡುಗಿನ ವಿಚಾರದಲ್ಲಿ ಜನರ ಆರೋಗ್ಯ ರಕ್ಷಣೆಯಷ್ಟೇ ಮುಖ್ಯವಾಗಬೇಕು. ರಾಜಕೀಯ, ವ್ಯಾಪಾರ ಎಲ್ಲವಕ್ಕೂ ನಂತರದ ಸ್ಥಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT