ಭಾರತ ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿಚಿಲುಮೆಗಳಲ್ಲಿ ಒಂದಾಗಿದ್ದ ‘ವಂದೇ ಮಾತರಂ’ ಗೀತೆಯ ಬಗ್ಗೆ ಸಂಸತ್ನಲ್ಲಿ ನಡೆದಿರುವ ಚರ್ಚೆ, ಚಾರಿತ್ರಿಕ ಗೀತೆಯ ಮಹತ್ವವನ್ನು ಕುಗ್ಗಿಸುವ ರಾಜಕೀಯ ಪ್ರೇರಿತ ಗದ್ದಲವಾಗಿದೆ. ಈ ಗದ್ದಲದ ಕೇಂದ್ರದಲ್ಲಿ ಸ್ವತಃ ಪ್ರಧಾನಿ ಹಾಗೂ ಗೃಹ ಸಚಿವರು ಇರುವುದು ದುರದೃಷ್ಟಕರ. ಬಂಕಿಮಚಂದ್ರ ಚಟರ್ಜಿ ಅವರ ‘ವಂದೇ ಮಾತರಂ’ ರಚನೆಗೆ ಒಂದುನೂರಾ ಐವತ್ತು ವರ್ಷಗಳು ತುಂಬಿರುವ ಸಂಭ್ರಮಾಚರಣೆ ದೇಶದಲ್ಲಿ ನಡೆಯುತ್ತಿದೆ. ಈ ಸಂಭ್ರಮದಲ್ಲಿ ಕೇಂದ್ರ ಸರ್ಕಾರವೂ ಭಾಗಿಯಾಗಿದೆ. ಸ್ವಾತಂತ್ರ್ಯದ ಸ್ಫೂರ್ತಿ ಹಾಗೂ ದೇಶಪ್ರೇಮದ ಸಂಕೇತವಾಗಿದ್ದ ಗೀತೆಯನ್ನು ಗೌರವಿಸುವುದು ಹಾಗೂ ಸಂಭ್ರಮಿಸುವುದು ಸರಿಯಾದ ನಡೆಯೇ ಆಗಿದೆ. ಆದರೆ, ಇತಿಹಾಸದ ಸಂಗತಿಗಳನ್ನು ವರ್ತಮಾನದಲ್ಲಿ ರಾಜಕಾರಣದ ಅನುಕೂಲಕ್ಕೆ ತಕ್ಕಂತೆ ವಿಶ್ಲೇಷಿಸುವ ಪ್ರಯತ್ನ ‘ವಂದೇ ಮಾತರಂ’ ಬಗೆಗಿನ ಅಭಿಮಾನದ ಪ್ರಾಮಾಣಿಕತೆಯ ಬಗ್ಗೆ ಅನುಮಾನ ಮೂಡಿಸುವಂತಿದೆ. ‘ಸಾಮಾಜಿಕ ಸಾಮರಸ್ಯದ ನೆಪದಲ್ಲಿ ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಗೀತೆಯನ್ನು ತುಂಡು ತುಂಡಾಗಿಸಿದೆ. ಈಗಲೂ ಓಲೈಕೆಯ ರಾಜಕಾರಣದಲ್ಲಿ ತೊಡಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ವಂದೇ ಮಾತರಂ ವಿರೋಧಿಸಿ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಲಖನೌದಲ್ಲಿ 1937ರಲ್ಲಿ ಪ್ರತಿಭಟನೆ ನಡೆಸಿತ್ತು. ಆ ಪ್ರತಿಭಟನೆಯನ್ನು ವಿರೋಧಿಸುವ ಬದಲು, ಗೀತೆಯನ್ನು ಪರಿಶೀಲಿಸಲು ಕಾಂಗ್ರೆಸ್ ಹಾಗೂ ಜವಾಹರಲಾಲ್ ನೆಹರೂ ಮುಂದಾಗಿದ್ದರು ಎಂದೂ ದೂರಿದ್ದಾರೆ. ‘ವಂದೇ ಮಾತರಂ’ ಗೀತೆಗೆ ಮತೀಯ ರಾಜಕಾರಣದ ಸ್ಪರ್ಶ ನೀಡುವ ಈ ಪ್ರಯತ್ನ ದುರದೃಷ್ಟಕರ ಹಾಗೂ ಒಂಬತ್ತು ದಶಕಗಳ ಹಿಂದಿನ ವಿದ್ಯಮಾನಗಳು ಈಗ ಇದ್ದಕ್ಕಿದ್ದಂತೆ ಚಾರಿತ್ರಿಕ ಪ್ರಮಾದವಾಗಿ ಕಾಣಿಸುತ್ತಿರುವುದು ಆಶ್ಚರ್ಯಕರ.
.ಸಂಪಾದಕೀಯ Podcast: ವಂದೇ ಮಾತರಂ ಸ್ಫೂರ್ತಿಗೀತೆಗೆ ರಾಜಕೀಯದ ಕೊಳಕು ತಾಗದಿರಲಿ.
‘ವಂದೇ ಮಾತರಂ’ ಗೀತೆಗೆ ಕಾಂಗ್ರೆಸ್ ಹಾಗೂ ಜವಾಹರಲಾಲ್ ನೆಹರೂ ಅವರು ಅನ್ಯಾಯ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಇತಿಹಾಸವನ್ನು ನಿರ್ಮಮಕಾರದಿಂದ ನೋಡುವ ಮನೋಧರ್ಮ ಕಾಣೆಯಾಗಿದೆ ಹಾಗೂ ಚರಿತ್ರೆಯ ಸಂಗತಿಗಳನ್ನು ಅನುಕೂಲಸಿಂಧು ರಾಜಕಾರಣಕ್ಕೆ ಬಳಸಿಕೊಳ್ಳುವ ತಂತ್ರಗಾರಿಕೆ ಸ್ಪಷ್ಟವಾಗಿದೆ. ಇತಿಹಾಸದ ಸಂಗತಿಗಳನ್ನು ಅಂದಿನ ಅಗತ್ಯಗಳ ಪರಿಪ್ರೇಕ್ಷ್ಯದಲ್ಲಿ ಗ್ರಹಿಸದೆ ವಿಶ್ಲೇಷಿಸುವ ಪ್ರಯತ್ನ ಸಾಮಾಜಿಕ ಹಿತಕ್ಕೆ ಅಪಾಯಕಾರಿ ಆಗಬಲ್ಲದು. ಗಾಂಧೀಜಿ, ನೆಹರೂ ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ಅನೇಕ ನಾಯಕರು ‘ವಂದೇ ಮಾತರಂ’ ಗೀತೆಯ ಮಹತ್ವವನ್ನು ಗುರ್ತಿಸಿದ್ದರು ಹಾಗೂ ಗೌರವಿಸಿದ್ದರು. ಆದರೆ, ವಿಗ್ರಹಾರಾಧನೆಯನ್ನು ಪ್ರೋತ್ಸಾಹಿಸುತ್ತದೆ ಹಾಗೂ ದೇಶಪ್ರೇಮದ ಹೆಸರಿನಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತದೆ ಎನ್ನುವ ಕಾರಣಕ್ಕಾಗಿ, ಮುಸ್ಲಿಮರು ಈ ಗೀತೆಯನ್ನು ಹಾಡಕೂಡದು ಎಂದು ಮುಸ್ಲಿಂ ಲೀಗ್ ಠರಾವು ಮಂಡಿಸಿತ್ತು. ಹಿಂದೂಗಳಲ್ಲದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಾರ್ವಜನಿಕವಾಗಿ ‘ವಂದೇ ಮಾತರಂ’ ಹಾಡುವುದು ಮುಜುಗರ ಉಂಟುಮಾಡುತ್ತದೆ ಎನ್ನುವುದನ್ನು ಹಿಂದೂ ನಾಯಕರೂ ಒಪ್ಪಿಕೊಂಡಿದ್ದರ ಫಲಿತವಾಗಿಯೇ, ಸಾರ್ವಜನಿಕ ಸಭೆ–ಸಮಾರಂಭಗಳಲ್ಲಿ ಈ ಗೀತೆಯ ಮೊದಲ ಎರಡು ಭಾಗಗಳನ್ನು ಹಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯ ಮಾಡುವ ಬಗ್ಗೆ ಗಾಂಧೀಜಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಘಟನೆಗಳನ್ನು, ಏಳೂವರೆ ದಶಕಗಳ ನಂತರ ಸರಿಯೋ ತಪ್ಪೋ ಎಂದು ಸ್ವಾತಂತ್ರ್ಯದ ಫಲಾನುಭವಿಗಳು ನಿರ್ಣಯಿಸಲು ಹೊರಡುವುದು ಹಾಗೂ ಗೀತೆಯೊಂದರ ಪರಿಷ್ಕರಣೆಯನ್ನು ದೇಶಪ್ರೇಮದ ಮಾನದಂಡವಾಗಿ ನೋಡುವುದು ಚೋದ್ಯದಂತೆ ಕಾಣಿಸುತ್ತದೆ. ಈ ಪ್ರಯತ್ನ, ಅಂದಿನ ಸೈರಣೆ ಹಾಗೂ ಬಹುತ್ವದ ಬಗೆಗಿನ ಗೌರವ ಈಗ ಅಪ್ರಸ್ತುತ ಆಗಿರುವುದನ್ನು ಸೂಚಿಸುವಂತಿದೆ.

ನಾಗರಿಕ ಸಮಸ್ಯೆಗಳ ಅರ್ಥಪೂರ್ಣ ಚರ್ಚೆಗೆ ವೇದಿಕೆಯಾಗಬೇಕಾದ ಸಂಸತ್ನ ಕಲಾಪಗಳು ಇತ್ತೀಚಿನ ವರ್ಷಗಳಲ್ಲಿ ಅನಗತ್ಯ ಗದ್ದಲಗಳಲ್ಲಿ ಕೊನೆಗೊಳ್ಳುತ್ತಿವೆ. ಚರ್ಚೆಗಳನ್ನು ರಚನಾತ್ಮಕವಾಗಿ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕಾದ ಸರ್ಕಾರವೇ ಅನಗತ್ಯ ಚರ್ಚೆಗಳಲ್ಲಿ ಕಲಾಪವನ್ನು ವ್ಯರ್ಥಗೊಳಿಸುತ್ತಿದೆ; ಆ ಮೂಲಕ ನಾಗರಿಕರ ತೆರಿಗೆ ಹಣದ ದುರುಪಯೋಗಕ್ಕೆ ಅವಕಾಶ ಕಲ್ಪಿಸುತ್ತಿದೆ. ಪ್ರಸಕ್ತ ಅಧಿವೇಶನದಲ್ಲಿ ಮಹತ್ವದ ಮಸೂದೆಗಳ ಮಂಡನೆ ಆಗಬೇಕಾಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿವಾದದ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ರೂಪಾಯಿ ಮೌಲ್ಯ ಕುಸಿತ, ದೆಹಲಿಯಲ್ಲಿನ ವಾಯುಮಾಲಿನ್ಯ, ರಾಷ್ಟ್ರೀಯ ಸುರಕ್ಷತೆ ಹಾಗೂ ವಿದೇಶಾಂಗ ನೀತಿ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ದೇಶ ಹಾಗೂ ದೇಶೀಯರ ಹಿತಕ್ಕೆ ಅಗತ್ಯವಾದ ಸಂಗತಿಗಳ ಚರ್ಚೆ ನಡೆಸಬೇಕಾದ ನಾಯಕರು, ‘ವಂದೇ ಮಾತರಂ’ ಗೀತೆಯನ್ನು ಜಗ್ಗಾಡುವ ಮೂಲಕ ಕಲಾಪದ ಅಮೂಲ್ಯ ಸಮಯವನ್ನು ಹಾಳುಮಾಡುತ್ತಿದ್ದಾರೆ; ಇದು ಮತದಾರರಿಗೆ ಉತ್ತರದಾಯಿಯಾದ ನಡವಳಿಕೆಯಲ್ಲ. ದೇಶದ ಹೆಮ್ಮೆಯ ಗೀತೆಯೊಂದನ್ನು ವಿಭಜಕ ರಾಜಕಾರಣಕ್ಕೆ ಬಳಸುವುದೂ ಸರಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.