ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ನೀರಿನ ಸಮಸ್ಯೆ: ನಿರ್ಲಕ್ಷ್ಯ ಸಲ್ಲ; ಗ್ರಾಮಗಳ ಕಡೆಗೆ ಗಮನಹರಿಸಿ

Last Updated 18 ಏಪ್ರಿಲ್ 2020, 1:18 IST
ಅಕ್ಷರ ಗಾತ್ರ

ಈ ಸಲದ ಬೇಸಿಗೆಯಂತಹ ವಿಷಮ ಸನ್ನಿವೇಶವನ್ನು ನಮ್ಮ ರಾಜ್ಯ ಪ್ರಾಯಶಃ ಹಿಂದೆಂದೂ ಕಂಡ ನಿದರ್ಶನ ಇಲ್ಲ. ಕೊರೊನಾ ವೈರಾಣುವಿ‌ನ ಅಟಾಟೋಪ ಒಂದೆಡೆಯಾದರೆ, ದಿಗ್ಬಂಧನದಿಂದ ಉಂಟಾದ ಉದ್ಯೋಗ ನಷ್ಟದ ಜತೆಜತೆಗೆ ಅದು ತಂದೊಡ್ಡಿರುವ ಆರ್ಥಿಕ ಸಂಕಷ್ಟ ಇನ್ನೊಂದೆಡೆ. ಸೋಂಕಿನ ವಿರುದ್ಧದ ಹೋರಾಟದತ್ತ ಆಡಳಿತ ವ್ಯವಸ್ಥೆಯು ತನ್ನೆಲ್ಲ ಗಮನವನ್ನು ಕೇಂದ್ರೀಕರಿಸಿದೆ. ಇದು, ಅನಿವಾರ್ಯವೂ ಆಗಿದೆ. ಆದರೆ, ಕುಡಿಯುವ ನೀರಿನ ಕೊರತೆಯಂತಹ ಸಮಸ್ಯೆಗಳು ಗೌಣವಲ್ಲ. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟಿನ ವೇಳೆಯಲ್ಲೇ ನೀರಿನ ಅಭಾವದಂತಹ ಗಂಭೀರ ಸಮಸ್ಯೆ ಪ್ರತೀ ಬೇಸಿಗೆಯಂತೆ ಮತ್ತೆ ಕಾಡಲಾರಂಭಿಸಿದೆ. ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶವು ಅಂದಾಜು ಮಾಡಿರುವಂತೆ, ರಾಜ್ಯದ 2,600 ಜನವಸತಿ ಪ್ರದೇಶಗಳು ಸದ್ಯ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಸದಾ ಬರಪೀಡಿತ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಬಯಲುಸೀಮೆಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಶೇಕಡ 80ರಷ್ಟು ಕೆರೆಗಳು ಬತ್ತಿಹೋಗಿವೆ. ಸುಮಾರು ನೂರು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುವ ಸ್ಥಿತಿ ಈಗಾಗಲೇ ಬಂದೊದಗಿದೆ. ಕೊರೊನಾ ಸೋಂಕಿನಿಂದ ಸಂರಕ್ಷಿಸಿಕೊಳ್ಳುವ ಪ್ರಮುಖ ಮಾರ್ಗೋಪಾಯಗಳಲ್ಲಿ ಕೈಗಳನ್ನು ಆಗಾಗ ಶುದ್ಧ ನೀರಿನಲ್ಲಿ 20 ಸೆಕೆಂಡುಗಳವರೆಗೆ ತೊಳೆದುಕೊಳ್ಳುವುದೂ ಒಂದು. ತಜ್ಞರು ಮಾಡಿದ ಅಂದಾಜಿನ ಪ್ರಕಾರ, ಪ್ರತೀ ಸಲ ಹೀಗೆ ಕೈತೊಳೆಯಲು ಒಂದೂವರೆ ಲೀಟರ್‌ನಷ್ಟು ನೀರು ವ್ಯಯವಾಗುವುದಂತೆ. ವಿಪರ್ಯಾಸ ನೋಡಿ, ಆರೋಗ್ಯದ ಕುರಿತು ಕಾಳಜಿ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ಈ ರೀತಿಯ ನೀರಿನ ಬಳಕೆ ಹೆಚ್ಚಿದರೆ, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೂ ಕೊರತೆ. ಕುಡಿಯಲು ಶುದ್ಧ ನೀರು ಸಿಗದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀರಿನ ಕೊರತೆಯೂ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಕಾಡುತ್ತದೆ.

ಕಳೆದ ಹಿಂಗಾರಿನಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಕೆಲವು ಜಲಾಶಯಗಳಲ್ಲಿ ತಕ್ಕಮಟ್ಟಿಗೆ ನೀರಿನ ಲಭ್ಯತೆ ಉಂಟು. ಇದೇ ಸಮಾಧಾನದಲ್ಲಿ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಮೈಮರೆತು, ಬೇಸಿಗೆಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಂಡಂತೆ ಕಾಣುತ್ತಿಲ್ಲ. ಜೂನ್‌ವರೆಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗದಂತೆ, ಕೃಷಿ ಬೆಳೆಗಳು ಪೂರ್ತಿ ಒಣಗದಂತೆ ನೋಡಿಕೊಳ್ಳಲು ಕ್ರಿಯಾಯೋಜನೆಯನ್ನೂರೂಪಿಸಿಲ್ಲ. ದಶಕಗಳಿಂದ ನೂರಾರು ಗ್ರಾಮಗಳಿಗೆ ಪ್ರತೀ ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕವೇ ನೀರು ಪೂರೈಸುತ್ತಿದ್ದರೂಶಾಶ್ವತವಾದ ವ್ಯವಸ್ಥೆ ಮಾಡಬೇಕು ಎಂಬ ದೂರಾಲೋಚನೆಯು ಜಿಲ್ಲಾಡಳಿತಗಳಿಗೆ ಬಂದಂತಿಲ್ಲ. ವಿಪತ್ತು ನಿರ್ವಹಣಾ ಕೋಶದ ಸಮೀಕ್ಷೆಯ ಮೇಲೆ ಕಣ್ಣು ಹಾಯಿಸಿದರೆ, ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಏಳುವ ಲಕ್ಷಣಗಳು ಇಲ್ಲದಿಲ್ಲ. ರಾಜಧಾನಿ ಬೆಂಗಳೂರು ಕೂಡ ನೀರಿನ ಕೊರತೆಯ ಭೀತಿಯಿಂದ ಮುಕ್ತವಾಗಿಲ್ಲ. ನೀರಿನ ಸಮಸ್ಯೆಗೆ ಲಾಗಾಯ್ತಿನಿಂದಲೂ ತಾತ್ಕಾಲಿಕ ಪರಿಹಾರಗಳನ್ನೇ ಹುಡುಕುತ್ತಾ ಬಂದಿದ್ದರಿಂದ ಪ್ರತೀ ಬೇಸಿಗೆಯಲ್ಲೂ ಇದೇ ಸ್ಥಿತಿಯನ್ನು ಎದುರಿಸಬೇಕಿದೆ. ನಗರದ ನಾಗರಿಕರು, ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸಿದರೂ ಮಳೆನೀರು ಸಂಗ್ರಹದತ್ತ ಒಲವು ತೋರಿಲ್ಲ. ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸುವ ಪ್ರಕ್ರಿಯೆಯೂ ಮುಂದಕ್ಕೆ ಹೋಗಿಲ್ಲ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಂಪರ್ಕ ಜಾಲದಲ್ಲಿ ಆಗುತ್ತಿರುವ ದೊಡ್ಡ ಪ್ರಮಾಣದ ಪೋಲನ್ನು ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ. ಈ ಕೆಲಸಗಳು ಇನ್ನಾದರೂ ವೇಗ ಪಡೆಯಬೇಕಿದೆ. ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಪರಿಹಾರದ ಮಾರ್ಗೋಪಾಯಗಳನ್ನು ಹುಡುಕುತ್ತಲೇ ಸದ್ಯದ ಬಿಕ್ಕಟ್ಟನ್ನೂ ನಿವಾರಿಸುವುದು ಜಾಣನಡೆ. ಆ ಹೊಣೆ ಸರ್ಕಾರದ ಮೇಲಿದೆ. ಕೊರೊನಾ ವಿರುದ್ಧದ ಹೋರಾಟ ಎಷ್ಟು ಮುಖ್ಯವೋ ರಾಜ್ಯದ ಪ್ರತೀ ನಾಗರಿಕನಿಗೂ ಜೀವಜಲವನ್ನು ಒದಗಿಸುವುದೂ ಅಷ್ಟೇ ಮುಖ್ಯ. ಸಂಕಷ್ಟದ ಸಮಯದಲ್ಲಿ ಜನ ಕೂಡ ನೀರನ್ನು ಹಿತಮಿತವಾಗಿ ಬಳಸಬೇಕು. ಈ ಬಾರಿ ಸಕಾಲದಲ್ಲಿ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಆಶಾಭಾವ ಮೂಡಿಸಿದೆ. ಅದೇನೇ ಇರಲಿ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಗೆ ಶಾಶ್ವತ ಯೋಜನೆ ರೂಪಿಸುವುದು ಸರ್ಕಾರದ ಆದ್ಯತೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT