ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್: ನಾಯಕತ್ವ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಬಹುದೇ?

Last Updated 13 ಆಗಸ್ಟ್ 2019, 18:57 IST
ಅಕ್ಷರ ಗಾತ್ರ

134 ವರ್ಷಗಳ ಇತಿಹಾಸವುಳ್ಳ ರಾಜಕೀಯ ಪಕ್ಷವೊಂದು ತನ್ನ ರಾಷ್ಟ್ರೀಯ ಅಧ್ಯಕ್ಷರನ್ನು ಆರಿಸಲು ಕಷ್ಟಪಡಬೇಕಾಗಿ ಬಂದಿದೆ ಎನ್ನುವುದೇ ವಿಪರ್ಯಾಸದ ಸಂಗತಿ. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿಯು ಕೊನೆಗೂ ಪಕ್ಷದ ಮಧ್ಯಂತರ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿಯವರನ್ನು ಆಯ್ಕೆ ಮಾಡಿದೆ. ಇದು, ಎಲ್ಲರಿಗೂ ಸಮ್ಮತಿಯಾಗುವಂತೆ ನಡೆದ ಸಹಜ ಆಯ್ಕೆಯಲ್ಲ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಎರಡು ವರ್ಷಗಳಿಂದ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿ, ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಟ್ಟ ಬಳಿಕ, ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಯಲು ರಾಹುಲ್‌ ಗಾಂಧಿ ಒಪ್ಪದಿದ್ದಾಗ ಬೇರೆ ಆಯ್ಕೆಯ ಪ್ರಶ್ನೆ ಬಂದಿದೆ.

ರಾಹುಲ್‌ ಅಲ್ಲದಿದ್ದರೆ ಪ್ರಿಯಾಂಕಾ ಗಾಂಧಿ ವಾದ್ರಾ ಅಧ್ಯಕ್ಷರಾಗಬೇಕು ಎನ್ನುವ ಒತ್ತಾಯ ಬಂದರೂ ಪ್ರಿಯಾಂಕಾ ಒಪ್ಪಿಲ್ಲ. ಬೇರೆ ದಾರಿಯಿಲ್ಲ ಎನ್ನುವಂತೆ ಹಿರಿಯ ನಾಯಕರು ಒತ್ತಡ ಹೇರಿದ ಬಳಿಕ, ಸೋನಿಯಾ ಅವರು ಆ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ. ಶತಮಾನದ ಇತಿಹಾಸವಿರುವ ಪಕ್ಷವೊಂದನ್ನು ಮುನ್ನಡೆಸಲು ಒಂದು ಕುಟುಂಬದ ಮೂವರು ಸದಸ್ಯರನ್ನು ಬಿಟ್ಟರೆ ಇನ್ನೊಬ್ಬ ನಾಯಕರಿಲ್ಲ ಎನ್ನುವುದು ನಿಜಕ್ಕೂ ಶೋಚನೀಯ ಸಂಗತಿಯೇ ಸರಿ. ಲೋಕಸಭಾ ಚುನಾವಣೆಯ ದಯನೀಯ ಪರಾಭವದ ಬಳಿಕ, ಪಕ್ಷಕ್ಕೆ ಹೊಸ ಚೈತನ್ಯ ತುಂಬಲು ಹೊಸ ನಾಯಕತ್ವ ಬೇಕು ಎಂಬ ಬಗ್ಗೆ ಪಕ್ಷದೊಳಗೇ ಚರ್ಚೆ ನಡೆದಿತ್ತು. ನೆಹರೂ–ಗಾಂಧಿ ಕುಟುಂಬದ ಹೊರತಾದ ಅನುಭವಿ
ಗಳ ಜೊತೆಗೆ ಹಲವು ಯುವನಾಯಕರ ಹೆಸರುಗಳೂ ಮುಂಚೂಣಿಗೆ ಬಂದಿದ್ದವು. ಆದರೆ ಅವರಲ್ಲಿ ಯಾರ ಹೆಸರೂ ಅಂತಿಮಗೊಳ್ಳದೆ ಎರಡು ಹೆಜ್ಜೆ ಹಿಂದಕ್ಕೆ ಹೋಗಿ ಪಕ್ಷವು ಮತ್ತೆ ಸೋನಿಯಾ ಅವರ ನಾಯಕತ್ವವನ್ನೇ ಅಪ್ಪಿಕೊಂಡಿದೆ. ಈ ಮಹತ್ತರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಅವರ ಆರೋಗ್ಯ ಎಷ್ಟರಮಟ್ಟಿಗೆ ಅನುವು ಮಾಡಿಕೊಡುತ್ತದೋ ಗೊತ್ತಿಲ್ಲ.

ಪಕ್ಷದಲ್ಲಿ ಹೊಸ ಮತ್ತು ಹಳೆ ತಲೆಮಾರಿನ ನಾಯಕರ ನಡುವಣ ತಿಕ್ಕಾಟವನ್ನು ತಪ್ಪಿಸಲು ಈ ಮಧ್ಯಂತರ ವ್ಯವಸ್ಥೆಗೆ ಸೋನಿಯಾ ಅನಿವಾರ್ಯವಾಗಿ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆಯ ಬಳಿಕ ಹಲವು ಸ್ತರದ ನಾಯಕರು ಪಕ್ಷ ತ್ಯಜಿಸಿ ಹೋಗಿದ್ದಾರೆ ಎನ್ನುವುದು ವಾಸ್ತವ. ದೇಶದ ಎಲ್ಲ ರಾಜ್ಯಗಳಲ್ಲಿ ಕಾರ್ಯಕರ್ತರ ಪಡೆಯನ್ನು ಹೊಂದಿದ್ದರೂ, ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಹತಾಶರಾಗಿರುವ ವಸ್ತುಸ್ಥಿತಿಯನ್ನು ಗಮನಿಸಬೇಕಾಗುತ್ತದೆ. ಎರಡು ದಶಕಗಳ ಹಿಂದೆ ಸೋನಿಯಾ ಗಾಂಧಿಯವರು ಮೊದಲ ಬಾರಿಗೆ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ರಾಜಕೀಯ ಪರಿಸ್ಥಿತಿ ಬೇರೆಯಾಗಿತ್ತು. ಈಗ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸತತ ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದು ದೇಶದ ಯುವಜನರನ್ನು ತನ್ನ ರಾಜಕೀಯ ವಿಚಾರಧಾರೆಯತ್ತ ಸೆಳೆಯುವಲ್ಲಿ ಯಶಸ್ಸು ಕಂಡಿದೆ. ಆಕ್ರಮಣಕಾರಿ ನಾಯಕತ್ವ, ಅಗಾಧ ಸಂಪನ್ಮೂಲದ ಬಳಕೆ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಭಾರಿ ಬೆಂಬಲ ಆ ಪಕ್ಷಕ್ಕಿದೆ. ಬಿಜೆಪಿಗೆ ಹೋಲಿಸಿದರೆ, ತಳಮಟ್ಟದಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರ ಸಂಘಟನಾ ಶಕ್ತಿ ಕುಸಿದಿದೆ.

ನಾಯಕರ ಸಂಖ್ಯೆಯೇ ಹೆಚ್ಚಾಗಿದ್ದು ಕಾರ್ಯಕರ್ತರನ್ನು ಒಟ್ಟುಗೂಡಿಸುವ ಚುಂಬಕಶಕ್ತಿಯ ನಾಯಕತ್ವ ರಾಜ್ಯಗಳಲ್ಲಿಯೂ ಕಾಣಿಸುತ್ತಿಲ್ಲ. ಇವೆಲ್ಲ ಸವಾಲುಗಳನ್ನು ಮೆಟ್ಟಿನಿಂತು ಸೋನಿಯಾ ಅವರು ಪಕ್ಷಕ್ಕೆ ಹೇಗೆ ಚೈತನ್ಯ ತುಂಬುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ ವಿಧಾನಸಭಾ ಚುನಾವಣೆ ಸನಿಹದಲ್ಲೇ ಇರುವ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸುವ ಕೆಲಸಕ್ಕೆ ತಡ ಮಾಡುವಂತಿಲ್ಲ. ರಾಜ್ಯಗಳಲ್ಲಿ ಅಧಿಕಾರ ಇರುವಾಗ ಕಾರ್ಯಕರ್ತರನ್ನು ನಿರ್ಲಕ್ಷಿಸಿ ಶಾಸಕರನ್ನು ಮಾತ್ರ ಓಲೈಸುವ ರಾಜಕೀಯದಿಂದ ಪಕ್ಷಕ್ಕೆ ಆಗಿರುವ ಹಾನಿಯನ್ನು ಮಧ್ಯಂತರ ಅಧ್ಯಕ್ಷರು ಮನಗಾಣಬೇಕು. ಮಹತ್ವದ ರಾಜಕೀಯ ವಿಷಯಗಳಿಗೆ ಸಂಬಂಧಿಸಿ ಪಕ್ಷದ ನಾಯಕರ ನಡುವೆ ಸಹಮತ ಇಲ್ಲದಿರುವ ಸಮಸ್ಯೆಯನ್ನೂ ಕಾಂಗ್ರೆಸ್‌ ಎದುರಿಸುತ್ತಿದೆ. ಜಮ್ಮು–ಕಾಶ್ಮೀರದ ಇತ್ತೀಚಿನ ವಿದ್ಯಮಾನವು ಕಾಂಗ್ರೆಸ್‌ ಪಕ್ಷದ ಈ ದೌರ್ಬಲ್ಯವನ್ನು ಎತ್ತಿ ತೋರಿಸಿದೆ. ಸೈದ್ಧಾಂತಿಕ ನಿಲುವುಗಳಿಗೆ ಸಂಬಂಧಿಸಿ ಏಕಕಂಠದ ಸ್ಪಷ್ಟ ನಿಲುವನ್ನು ಹೊಂದುವುದೇ ಅಲ್ಲದೆ, ಅದನ್ನು ಕಾರ್ಯಕರ್ತರ ಮೂಲಕ ಸಮರ್ಥವಾಗಿ ಮತದಾರರಿಗೆ ಮುಟ್ಟಿಸುವ ಕೆಲಸವನ್ನೂ ಪಕ್ಷದ ನಾಯಕತ್ವ ಚುರುಕಿನಿಂದ ಮಾಡಬೇಕಿದೆ. ಹಾಗಾದಲ್ಲಿ ಮಾತ್ರ ಮುಂದಿನ ಐದು ವರ್ಷಗಳಲ್ಲಿ ಬಿಜೆಪಿಯ ರಾಜಕೀಯ ತಂತ್ರಗಳಿಗೆ ಸೂಕ್ತ ಪ್ರತಿತಂತ್ರಗಳನ್ನು ರೂಪಿಸಿ ಜನರ ಮನಸ್ಸು ಗೆಲ್ಲಲು ಆ ಪಕ್ಷಕ್ಕೆ ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT