ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಕಮಾಂಡ್‌ಗೆ ಮಹಿಳೆ: ತೀರ್ಪು ಸ್ವಾಗತಾರ್ಹ, ಮನಃಸ್ಥಿತಿ ಬದಲಾಗಲಿ

Last Updated 19 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಭಾರತೀಯ ಸೇನೆಯಲ್ಲಿ ಕಾಯಂ ಸೇವೆಯ ಹುದ್ದೆ ಹಾಗೂ ಕಮಾಂಡ್ ಹುದ್ದೆಗಳಿಗೆ (ನಾಯಕತ್ವದ ಸ್ಥಾನ) ನಿಯೋಜನೆಗೊಳ್ಳುವಲ್ಲಿ ಮಹಿಳಾ ಅಧಿಕಾರಿಗಳಿಗೆ ಇರುವ ಅವಕಾಶದ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ನಮ್ಮ ಸಂವಿಧಾನವು ನಾಗರಿಕರಿಗೆ ಖಾತರಿಪಡಿಸಿರುವ ತಾರತಮ್ಯ ರಹಿತ ಮತ್ತು ಸಮಾನತೆಯ ಹಕ್ಕಿನ ತತ್ವಗಳನ್ನು ಆಧರಿಸಿ ಈ ತೀರ್ಪು ನೀಡಲಾಗಿದೆ.

ಅಲ್ಪಾವಧಿ ಸೇವೆಯಲ್ಲಿ 10 ವರ್ಷ ಪೂರೈಸಿದ ಪುರುಷ ಅಧಿಕಾರಿಗಳಿಗೆ ಮಾತ್ರ ಕಾಯಂ ಸೇವೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈವರೆಗೂ ಅವಕಾಶ ಇತ್ತು. ಆದರೆ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯರಿಗೆ ಈ ಆಯ್ಕೆಯನ್ನು ನಿರಾಕರಿಸಲಾಗಿತ್ತು. ಇದರ ಪರಿಣಾಮವಾಗಿ, ಮಹಿಳೆಯರಿಗೆ ಕಮಾಂಡ್ ಹುದ್ದೆಗಳು ಮರೀಚಿಕೆ ಆಗಿದ್ದವು. ಜೊತೆಗೆ, ಅವರಿಗೆ ಪಿಂಚಣಿ ಸೌಲಭ್ಯವನ್ನೂ ನಿರಾಕರಿಸಲಾಗಿತ್ತು. ಸುಪ್ರೀಂ ಕೋರ್ಟ್ ಇದೀಗ ನೀಡಿರುವ ತೀರ್ಪು, ಸೇನೆಯಲ್ಲಿ ಮಹಿಳೆಯರ ವೃತ್ತಿ ಅಭ್ಯುದಯಕ್ಕೆ ಇದ್ದ ಬಲುದೊಡ್ಡ ಅಡೆತಡೆಯನ್ನು ನಿವಾರಿಸಿದೆ.

ಅದಕ್ಕಿಂತಲೂ ಮುಖ್ಯವಾಗಿ, ಸೇನೆಯಲ್ಲಿ ಹಾಗೂ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಲಿಂಗತಾರತಮ್ಯ ಮತ್ತು ಪೂರ್ವಗ್ರಹಗಳನ್ನು ಕಿತ್ತೆಸೆಯುವ ದಿಸೆಯ‌ಲ್ಲಿ ಇದು ಮಹತ್ವದ ಹೆಜ್ಜೆ. ಇದೇ ವೇಳೆ, ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಅದರ ಮಹಿಳಾವಿರೋಧಿ ಪೂರ್ವಗ್ರಹ ಮನಃಸ್ಥಿತಿಗಾಗಿ ತರಾಟೆಗೆ ತೆಗೆದುಕೊಂಡಿದೆ.

ಮಹಿಳೆಯರಿಗೆ ಕಾಯಂ ಸೇವೆಯ ಹುದ್ದೆ ಹಾಗೂ ಕಮಾಂಡ್ ಹುದ್ದೆಗಳನ್ನು ನಿರಾಕರಿಸಿರುವ ನಿಲುವನ್ನು ಸಮರ್ಥಿಸಿಕೊಂಡು ಸರ್ಕಾರವು ನ್ಯಾಯಾಲಯಕ್ಕೆ ಹೇಳಿಕೆಯನ್ನು ಸಲ್ಲಿಸಿತ್ತು. ಪ್ರತಿಗಾಮಿ ಮನೋಧೋರಣೆಯ ವಾದಗಳನ್ನು ಅದು ಮುಂದಿಟ್ಟಿತ್ತು. ಮಹಿಳೆಯರು ಸೇನಾ ಬದುಕಿಗೆಸೂಕ್ತರಲ್ಲ, ಗರ್ಭಧಾರಣೆ- ತಾಯ್ತನವನ್ನು ಅವರು ಸಂಭಾಳಿಸಬೇಕಾಗುತ್ತದೆ, ಬಹುತೇಕ ಗ್ರಾಮೀಣ ಹಿನ್ನೆಲೆಯವರನ್ನು ಒಳಗೊಂಡಿರುವ ಸೇನೆಯ ತಳಹಂತದ ಸಿಬ್ಬಂದಿಯು ಮಹಿಳಾ ಕಮಾಂಡರ್‌ಗಳ ಆದೇಶಗಳನ್ನು ಒಪ್ಪಿಕೊಳ್ಳಲಿಕ್ಕಿಲ್ಲ
ಎಂಬ ಸಿದ್ಧಮಾದರಿಯ ವಾದಗಳನ್ನೇ ಅದು ತನ್ನ ನಿಲುವಿಗೆ ಸಮರ್ಥನೆಯಾಗಿ ಮುಂದಿಟ್ಟಿತ್ತು. ಸಮಾನತೆಯ ಪರವಾಗಿ ನಿಲ್ಲುವ ಬದಲು ಅದು ಯಥಾಸ್ಥಿತಿವಾದದ ಮೊರೆ ಹೋಗಿತ್ತು. ಕೇಂದ್ರದ ವಾದ ಟೊಳ್ಳು ಎಂಬುದನ್ನು ಈ ತೀರ್ಪು ಸಾರಿದೆ.

ಈ ತೀರ್ಪನ್ನು ಅನುಷ್ಠಾನಗೊಳಿಸಲು ಸುಪ್ರೀಂ ಕೋರ್ಟ್, ಮೂರು ತಿಂಗಳ ಗಡುವು ವಿಧಿಸಿದೆ. ಲಿಂಗತಾರತಮ್ಯದ ಮನೋಭಾವವನ್ನು ತಕ್ಷಣವೇ ಬದಲಿಸುವುದು ಸುಲಭದ ಮಾತೇನೂ ಅಲ್ಲ. ಆದರೆ, ಸೇನಾ ಶಿಸ್ತು ಎಂಬುದು ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆಗಳನ್ನು ತರಲು ಪೂರಕವಾಗಿಯೂ ಒದಗಿಬರಬಹುದು. ಹಾಗಿದ್ದರೂ ಸೇನೆಯ ಮುಂಚೂಣಿ ನಾಯಕತ್ವದ ಹುದ್ದೆಯಲ್ಲಿ ಇರುವವರು ಮಹಿಳೆಯರ ಕುರಿತು ಪೂರ್ವಗ್ರಹಪೀಡಿತರಾಗಿದ್ದಾರೆ ಎಂಬುದು ದುರದೃಷ್ಟಕರ.

ಸೇನಾ ಮುಖ್ಯಸ್ಥರಾಗಿದ್ದ ಹಾಗೂ ಈಗ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರು, ಸರ್ಕಾರವು ಸುಪ್ರೀಂ ಕೋರ್ಟ್ ಮುಂದೆ ಯಾವ ವಾದವನ್ನು ಮುಂದಿರಿಸಿತ್ತೋ ಅದೇ ಬಗೆಯ ಅಭಿಪ್ರಾಯಗಳನ್ನು 2018ರಲ್ಲಿಯೇ ವ್ಯಕ್ತಪಡಿಸಿದ್ದರು. ಮಹಿಳೆಯರನ್ನು ಮುಂಚೂಣಿ ಜವಾಬ್ದಾರಿಗಳಿಗೆ ನಿಯೋಜಿಸಲು ಅನುಮತಿ ನೀಡಿದರೆ, ಲೈಂಗಿಕ ದೌರ್ಜನ್ಯದ ಆರೋಪಗಳು ಹೆಚ್ಚಾಗುತ್ತವೆ ಎಂದು ಅವರು ಹೇಳಿದ್ದರು.

ಸೇನೆಯ ಮುಖ್ಯಸ್ಥರಾಗಿದ್ದವರೇ ತಮ್ಮ ಪಡೆಯ ಮಹಿಳಾ ಅಧಿಕಾರಿಗಳ ಸ್ಥೈರ್ಯ ಮತ್ತು ಸಾಮರ್ಥ್ಯಗಳ ಬಗ್ಗೆ ಹೀಗೆ ಮಾತನಾಡಿದರೆ, ಕೆಳಹಂತದ ಅಧಿಕಾರಿಗಳಿಂದ ಲಿಂಗಸಮಾನತೆಯ ನಿಲುವು ನಿರೀಕ್ಷಿಸಲು ಸಾಧ್ಯವೇ? ಮಹಿಳಾ ಅಧಿಕಾರಿಗಳ ಆದೇಶಗಳಿಗೆತಳಹಂತದ ಸೈನಿಕರು ಪ್ರತಿರೋಧ ತೋರಬಹುದು ಎಂಬ ಸರ್ಕಾರದ ವಾದವನ್ನು ಒಪ್ಪುವುದಾದರೆ, ಈ ಪ್ರತಿರೋಧಕ್ಕೆ ಸೈನಿಕರ ಗ್ರಾಮೀಣ ಹಿನ್ನೆಲೆಯಾಗಲೀ ಅಥವಾ ಅವರು ಹೆಚ್ಚು ವಿದ್ಯಾವಂತರಲ್ಲ ಎಂಬುದಾಗಲೀ ಕಾರಣ ಆಗಿರಲಿಕ್ಕಿಲ್ಲ. ಬದಲಿಗೆ, ದೇಶದ ರಾಜಕೀಯ ಮತ್ತು ಸೇನಾ ನಾಯಕತ್ವವು ತಮ್ಮ ಆಲೋಚನೆಗಳಲ್ಲಿ ಪ್ರತಿಗಾಮಿಯಾಗಿರುವುದೇ ಕಾರಣ. ಲಿಂಗಸಮಾನತೆಯ ನೀತಿಗಳು ಅನುಷ್ಠಾನಗೊಳ್ಳಬೇಕಾದರೆ ಇಂತಹ ಧೋರಣೆ ಮೊದಲು ಬದಲಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT