ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭಾರತದ ಬಾಕ್ಸಿಂಗ್‌ಗೆ ಚಿನ್ನದ ಮೆರುಗು ತುಂಬಿದ ಮಹಿಳೆಯರು

Last Updated 28 ಮಾರ್ಚ್ 2023, 20:16 IST
ಅಕ್ಷರ ಗಾತ್ರ

ಭಾರತದ ಮಹಿಳಾ ಬಾಕ್ಸಿಂಗ್ ಕ್ರೀಡಾಪಟುಗಳು ವಿಶ್ವ ಚಾಂಪಿಯನ್‌ಷಿಪ್‌ ಕಣದಲ್ಲಿ ಚಿನ್ನದ ಹೊನಲು ಹರಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಮಹಿಳೆಯರ ವಿಶ್ವ ಬಾಕ್ಸಿಂಗ್‌ನಲ್ಲಿ ಆತಿಥೇಯ ವನಿತೆಯರು ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ನೀತು ಗಂಗಾಸ್, ಸ್ವೀಟಿ ಬೂರಾ, ನಿಖತ್ ಜರೀನ್ ಮತ್ತು ಲವ್ಲಿನಾ ಬೊರ್ಗೊಹೈನ್ ಅವರು ಈ ಸಾಧನೆ ಮಾಡಿದ್ದಾರೆ. ಇದೇ ವರ್ಷ ನಡೆಯಲಿರುವ ಏಷ್ಯನ್ ಕ್ರೀಡಾಕೂಟ ಹಾಗೂ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ ಕೂಟಕ್ಕೂ ಮುನ್ನ ಈ ಸಾಧನೆ ದಾಖಲಾಗಿರುವುದು ಹೊಸ ಭರವಸೆ ಮೂಡಿಸಿದೆ. ಇದರೊಂದಿಗೆ ವಿಶ್ವ ಬಾಕ್ಸಿಂಗ್‌ನಲ್ಲಿ ಭಾರತವು ಎರಡೂ ವಿಭಾಗಗಳಲ್ಲಿ ಸೇರಿ ಗೆದ್ದಿರುವ ಪದಕಗಳ ಸಂಖ್ಯೆಯು ಐವತ್ತಕ್ಕೇರಿದೆ. ಇದರಲ್ಲಿ ಮಹಿಳೆಯರದ್ದೇ ಸಿಂಹಪಾಲು. 14 ಚಿನ್ನ, 8 ಬೆಳ್ಳಿ ಮತ್ತು 21 ಕಂಚಿನ ಪದಕಗಳ ಕಾಣಿಕೆಯನ್ನು ವನಿತೆಯರು ನೀಡಿದ್ದಾರೆ. ಇದರೊಂದಿಗೆ ಭಾರತ ಮಹಿಳಾ ತಂಡವು ವಿಶ್ವ ಬಾಕ್ಸಿಂಗ್‌ನಲ್ಲಿ ರಷ್ಯಾ ಹಾಗೂ ಚೀನಾ ನಂತರದ ಸ್ಥಾನ ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ ಇನ್ನೂ ಚಿನ್ನದ ಸಾಧನೆ ಮೂಡಿಬಂದಿಲ್ಲ. ಒಂದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಮಾತ್ರ ಗೆದ್ದಿದ್ದಾರೆ.

ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಮತ್ತು ಬೆಲಾರೂಸ್‌ ದೇಶಗಳ ಬಾಕ್ಸಿಂಗ್‌ಪಟುಗಳಿಗೆ ತಮ್ಮದೇ ದೇಶದ ಧ್ವಜದಡಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದನ್ನು ವಿರೋಧಿಸಿ ಅಮೆರಿಕ, ಬ್ರಿಟನ್ ಮತ್ತು ಐರ್ಲೆಂಡ್ ಸೇರಿದಂತೆ ಹತ್ತು ದೇಶಗಳು ಈ ವಿಶ್ವ ಚಾಂಪಿಯನ್‌ಷಿಪ್ ಅನ್ನು ಬಹಿಷ್ಕರಿಸಿದ್ದವು. ಆದರೆ ಚೀನಾ, ಬ್ರೆಜಿಲ್, ವಿಯೆಟ್ನಾಂ ಸ್ಪರ್ಧಿಗಳ ಸವಾಲು ಮೀರಿ ನಿಲ್ಲುವುದು ಕೂಡ ಸುಲಭದ್ದಾಗಿರಲಿಲ್ಲ. ಒಟ್ಟು 65 ದೇಶಗಳ 324 ಸ್ಪರ್ಧಿಗಳು 12 ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಈ ಪೈಪೋಟಿಯಲ್ಲಿ ಆತಿಥೇಯ ವನಿತೆಯರು ಮಾಡಿರುವ ಸಾಧನೆ ಶ್ಲಾಘನೀಯ. ಬೇರೆ ಬೇರೆ ರಾಜ್ಯಗಳು ಹಾಗೂ ವಿಭಿನ್ನ ಕೌಟುಂಬಿಕ ಹಿನ್ನೆಲೆಯಿಂದ ಬಂದಿರುವ ಈ ಬಾಕ್ಸಿಂಗ್‌ ಪಟುಗಳ ಸಾಧನೆಯು ಯುವಪೀಳಿಗೆಗೆ ಪ್ರೇರಣೆಯಾಗಿದೆ. ದೇಶದ ಬಾಕ್ಸಿಂಗ್‌ ಕ್ಷೇತ್ರದಲ್ಲಿ ಇಂತಹ ಯಶೋಗಾಥೆ ಆರಂಭವಾಗಿದ್ದು ಮೇರಿ ಕೋಮ್ ಅವರಿಂದ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಆರು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು ಗೆದ್ದಿರುವ ‘ಸೂ‍ಪರ್‌ ಮಾಮ್’ ಖ್ಯಾತಿಯ ಮೇರಿ ಖಾತೆಯಲ್ಲಿ ಒಲಿಂಪಿಕ್‌ ಕೂಟದ ಪದಕವೂ ಇದೆ. ಅವರ ಸ್ಫೂರ್ತಿಯಿಂದ ದೇಶದಲ್ಲಿ ಹೆಣ್ಣುಮಕ್ಕಳು ಬಾಕ್ಸಿಂಗ್‌ ಕೈಗವಸುಗಳನ್ನು ಧರಿಸಲು ಆರಂಭಿಸಿದ್ದರ ಫಲ ಈಗ ಕಾಣುತ್ತಿದೆ.

ತೆಲಂಗಾಣದ 26 ವರ್ಷದ ನಿಖತ್ ಸತತ ಎರಡನೇ ಬಾರಿ ಪ್ರಶಸ್ತಿ ಸಾಧನೆ ಮಾಡಿ ಮೇರಿ ಕೋಮ್‌ ಹಾದಿಯಲ್ಲಿ ದೃಢವಾದ ಹೆಜ್ಜೆ ಇಟ್ಟಿದ್ದಾರೆ. ಎರಡು ಬಾರಿಯೂ ಅವರು 52 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು. ಅಸ್ಸಾಂನ ಲವ್ಲಿನಾ ಬೊರ್ಗೊಹೈನ್ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು. ವಿಶ್ವ ಚಾಂಪಿಯನ್ ಆಗುವ ಅವರ ಕನಸು ಈಗ ಈಡೇರಿದೆ. ಕಳೆದ ಎರಡು ವರ್ಷಗಳಲ್ಲಿ ಕೆಲವು ವಿವಾದಾಸ್ಪದ ಹೇಳಿಕೆಗಳಿಂದಲೂ ಅವರು ಗಮನ ಸೆಳೆದಿದ್ದರು. ಇದೀಗ ಮತ್ತೆ ತಮ್ಮ ಸಾಧನೆಯಿಂದ ಮನೆಮಾತಾಗಿದ್ದಾರೆ. 75 ಕೆ.ಜಿ. ವಿಭಾಗದಲ್ಲಿ ಅವರ ಚುರುಕಾದ ಪಂಚ್‌ಗಳಿಗೆ ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಶರಣಾದರು. ಲವ್ಲಿನಾ ಫಿಟ್‌ನೆಸ್‌ ಕೂಡ ಉತ್ತಮಗೊಂಡಿದೆ. ಹರಿಯಾಣದ ಗ್ರಾಮೀಣ ಪ್ರತಿಭೆಗಳಾದ ನೀತು ಗಂಗಾಸ್ ಮತ್ತು ಸ್ವೀಟಿ ಬೂರಾ ಅವರು ಕ್ರಮವಾಗಿ 48 ಕೆ.ಜಿ. ಹಾಗೂ 81 ಕೆ.ಜಿ. ವಿಭಾಗಗಳಲ್ಲಿ ಸ್ವರ್ಣ ಸಾಧನೆ ಮಾಡಿ ತಮ್ಮ ಮೇಲಿನ ವಿಶ್ವಾಸ ಉಳಿಸಿಕೊಂಡರು. ಹೋದ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀತು ಹಾಗೂ ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸ್ವೀಟಿ ಚಾಂಪಿಯನ್ ಆಗಿದ್ದರು. ಭಾರತದ ಬಾಕ್ಸರ್‌ಗಳ ಸಾಧನೆಯ ಹಿಂದೆ ತರಬೇತುದಾರರು, ಕ್ರೀಡಾವಿಜ್ಞಾನ ಪರಿಣತರು ಹಾಗೂ ತಂತ್ರಜ್ಞರ ತಂಡದ ಶ್ರಮವೂ ಇದೆ. ಈ ಚಾಂಪಿಯನ್‌ಷಿಪ್‌ಗಾಗಿ ನಡೆದ ತಂಡದ ಆಯ್ಕೆಯು ವಿವಾದ ಹುಟ್ಟುಹಾಕಿತ್ತು. ರಾಷ್ಟ್ರೀಯ ಪದಕವಿಜೇತರಾಗಿದ್ದ ಮೂವರು ಬಾಕ್ಸರ್‌ಗಳು ತಮ್ಮನ್ನು ಆಯ್ಕೆ ಮಾಡದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿರಲಿಲ್ಲ. ಇದರಿಂದಾಗಿ ಎಲ್ಲರ ಕಣ್ಣುಗಳೂ ಆಯ್ಕೆ ಸಮಿತಿಯ ಮೇಲೆ ನೆಟ್ಟಿದ್ದವು. ಆದರೆ ಈಗ ನಾಲ್ಕು ಚಿನ್ನದ ಪದಕಗಳ ಮೆರುಗಿನಲ್ಲಿ ವಿವಾದ ಮರೆಯಾಗಿದೆ. ದೇಶದ ಕ್ರೀಡಾಕ್ಷೇತ್ರದಲ್ಲಿ ಮಹಿಳೆಯರು ಐತಿಹಾಸಿಕ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT