ಶುಕ್ರವಾರ, ಜೂನ್ 5, 2020
27 °C

ಸಂಪಾದಕೀಯ | ಆರೋಗ್ಯ ಸಂಸ್ಥೆಗೆ ದೇಣಿಗೆ ಸ್ಥಗಿತದ ನಿರ್ಧಾರ ಅನುಚಿತ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ಅತಿಹೆಚ್ಚಿನ ವಂತಿಗೆಯನ್ನು ನೀಡುವ ದೇಶ ಅಮೆರಿಕ. ಈಗ ವಿಶ್ವದೆಲ್ಲೆಡೆ ಸಾಂಕ್ರಾಮಿಕವಾಗಿ ಹರಡಿರುವ ಕೋವಿಡ್–19 ಕಾಯಿಲೆಗೆ ಅತಿಹೆಚ್ಚಿನ ಜನ ತುತ್ತಾಗಿರುವುದು ಅಮೆರಿಕದಲ್ಲಿ. ಆ ದೇಶದಲ್ಲಿ ಈ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 30 ಸಾವಿರ ದಾಟಿದೆ. ಸೋಂಕಿತರ ಸಂಖ್ಯೆ ಆರೂವರೆ ಲಕ್ಷ ಸಮೀಪಿಸಿದೆ. ಇಂತಹ ಭೀಕರ ಬಿಕ್ಕಟ್ಟಿನ ಸಂದರ್ಭದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಆರೋಗ್ಯ ಸಂಸ್ಥೆಗೆ ತಮ್ಮ ದೇಶದಿಂದ ನೀಡಲಾಗುತ್ತಿದ್ದ ಆರ್ಥಿಕ ನೆರವನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ‘ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಮೂಲಭೂತ ಕರ್ತವ್ಯ ನಿಭಾಯಿಸುವಲ್ಲಿ ಸೋತಿದೆ. ಹಾಗಾಗಿ, ಸಂಸ್ಥೆಯನ್ನು ಉತ್ತರದಾಯಿ ಆಗಿಸಬೇಕು. ಸಂಸ್ಥೆಯು ಕೊರೊನಾ ವೈರಾಣು ಸೋಂಕಿನ ವಿಚಾರದಲ್ಲಿ ಚೀನಾದ ತಪ್ಪು ಮಾಹಿತಿಗಳನ್ನು ಹರಡುವಲ್ಲಿ ನೆರವು ನೀಡಿತು. ಇದರ ಪರಿಣಾಮವಾಗಿಯೇ ಈ ವೈರಾಣು ಇಷ್ಟೊಂದು ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದೆ. ಚೀನಾ ನೀಡಿದ ತಪ್ಪು ಮಾಹಿತಿ ಹರಡಲು ಸಂಸ್ಥೆ ನೆರವಾಗದೇ ಇದ್ದಿದ್ದರೆ ಸೋಂಕು ಇಷ್ಟು ವ್ಯಾ‍ಪಕವಾಗುವ ಸಾಧ್ಯತೆ ಇರಲಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ. 2019ರಲ್ಲಿ ಡಬ್ಲ್ಯುಎಚ್‌ಒಗೆ ಅಮೆರಿಕವು ಒಟ್ಟು 40 ಕೋಟಿ ಡಾಲರ್ (ಸರಿಸುಮಾರು ₹3 ಸಾವಿರ ಕೋಟಿ) ಹಣಕಾಸಿನ ನೆರವು ನೀಡಿತ್ತು. ಸಂಸ್ಥೆಯ ಒಟ್ಟು ಆಯವ್ಯಯದ ಶೇಕಡ 15ರಷ್ಟನ್ನು ಅಮೆರಿಕವೇ ನೀಡುತ್ತಿದೆ. ಅದಕ್ಕಿಂತಲೂ ಹೆಚ್ಚಾಗಿ, ಎರಡನೆಯ ಮಹಾಯುದ್ಧದ ನಂತರದ ಕಾಲಘಟ್ಟದಲ್ಲಿ ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹತ್ತು ಹಲವು ಸಂಸ್ಥೆಗಳನ್ನು ಕಟ್ಟಿ, ಆ ಸಂಸ್ಥೆಗಳ ಮೂಲಕ ವಿಶ್ವದ ಎಲ್ಲೆಡೆ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿದ್ದು ಅಮೆರಿಕ ದೇಶ. ಹಣದ ಶಕ್ತಿಯ ಜೊತೆಯಲ್ಲೇ, ಇಂತಹ ಸಂಸ್ಥೆಗಳ ಮೂಲಕ ದಕ್ಕಿದ ಪ್ರಭಾವವನ್ನೂ ಬಳಸಿಕೊಂಡು ಅಮೆರಿಕ ಜಗತ್ತಿನಲ್ಲಿ ಅತ್ಯಂತ ಪ್ರಬಲ ದೇಶವಾಗಿ ಮೆರೆದಿದೆ. ಈ ಸಂಸ್ಥೆಗಳು ವಿಶ್ವದಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಕೂಡ ಮಾಡಿವೆ ಎಂಬುದರಲ್ಲಿಯೂ ಎರಡು ಮಾತಿಲ್ಲ.

ಈಗ ಇಡೀ ಮನುಕುಲ ಆರೋಗ್ಯ ಬಿಕ್ಕಟ್ಟಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿರುವಾಗ, ಅಮೆರಿಕವು ದೇಣಿಗೆ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದು ತೀರಾ ದುರದೃಷ್ಟಕರ. ಸಂಕಷ್ಟದ ಸನ್ನಿವೇಶದಲ್ಲಿ ಪ್ರಭಾವಿ ದೇಶಗಳು ಇಂತಹ ತೀರ್ಮಾನಗಳನ್ನು ಕೈಗೊಳ್ಳುವುದು ಸರಿಯಲ್ಲ. ಅಂದಮಾತ್ರಕ್ಕೆ, ಡೊನಾಲ್ಡ್ ಟ್ರಂಪ್ ಅವರ ಆರೋಪಗಳೆಲ್ಲ ನಿರಾಧಾರ ಎನ್ನಲು ಸಾಧ್ಯವಿಲ್ಲ. ಕೊರೊನಾ ವೈರಾಣುವಿನ ಕಾರಣದಿಂದಾಗಿ ಚೀನಾದ ವುಹಾನ್‌ ನಗರದಲ್ಲಿ ನ್ಯುಮೋನಿಯಾ ಮಾದರಿಯ ಕಾಯಿಲೆ ಹರಡುತ್ತಿದ್ದುದು 2019ರ ಡಿಸೆಂಬರ್‌ನಲ್ಲಿ ಪತ್ತೆಯಾಯಿತು. ಆದರೆ, ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷದ ಜನವರಿ 14ರಂದು ‘ಈಗಿರುವ ಮಾಹಿತಿ ಅನುಸಾರ ಮನುಷ್ಯನಿಂದ ಮನುಷ್ಯನಿಗೆ ಇದು ಹರಡುತ್ತದೆ ಎನ್ನಲು ಸ್ಪಷ್ಟ ಆಧಾರಗಳು ಇಲ್ಲ. ಚೀನಾದಲ್ಲಿ ಜನವರಿ 3ರ ನಂತರ ಹೆಚ್ಚುವರಿ ಪ್ರಕರಣಗಳು ವರದಿಯಾಗಿಲ್ಲ’ ಎಂದು ಹೇಳಿತು. ಕೊರೊನಾ ವೈರಾಣು ಈಗ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತ, ಜಗತ್ತಿನ ಆರ್ಥಿಕ ಚಕ್ರದ ಚಲನೆಗೆ ಅತಿದೊಡ್ಡ ಅಪಾಯ ತಂದೊಡ್ಡಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು, ಭಾರತೀಯರ ಅನುಭವಕ್ಕೂ ಬಂದಾಗಿದೆ. ಕೊರೊನಾ ಕಾರಣದಿಂದಾಗಿ ಅಮೆರಿಕದ ಅರ್ಥವ್ಯವಸ್ಥೆ ಕೂಡ ಏಟು ತಿಂದಿದೆ. ಹಾಗಿದ್ದರೂ ಒಂದು ದೇಶವಾಗಿ ಅಮೆರಿಕವು ತನ್ನ ಪಾಲಿನ ಹೊಣೆಯಿಂದ ತಪ್ಪಿಸಿಕೊಳ್ಳಲಾಗದು. ಅದು ಡಬ್ಲ್ಯುಎಚ್‌ಒಗೆ ಕೊಡಬೇಕಿರುವ ದೇಣಿಗೆಯನ್ನು ನಿಲ್ಲಿಸುವುದು ಸಮರ್ಥನೀಯವಲ್ಲ. ಕೋವಿಡ್‌–19 ಕಾಯಿಲೆಯ ಸಮಸ್ಯೆಯಿಂದ ವಿಶ್ವ ಹೊರಬಂದ ನಂತರ, ಈ ಕಾಯಿಲೆಯು ಸಾಂಕ್ರಾಮಿಕವಾಗಿ ಹರಡುವಲ್ಲಿ ಯಾರ ಹೊಣೆ ಎಷ್ಟು ಎಂಬುದರ ಪರಿಶೀಲನೆ ಆಗಲಿ. ಡಬ್ಲ್ಯುಎಚ್‌ಒ ಪ್ರಜ್ಞಾಪೂರ್ವಕವಾಗಿ ತಪ್ಪು ಮಾಡಿದೆ ಎಂಬುದು ಸಾಬೀತಾದರೆ, ಅದಕ್ಕೆ ಕಾರಣರಾದ ವ್ಯಕ್ತಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಆದರೆ ಇಡೀ ಸಂಸ್ಥೆ ಆರ್ಥಿಕವಾಗಿ ಬಡವಾಗುವಂತೆ ಮಾಡುವುದು ಸರಿಯಲ್ಲ. ಇದು, ಹಗೆ ತೀರಿಸಿಕೊಳ್ಳುವ ಹೊತ್ತಲ್ಲ; ಸಂಕಟವನ್ನು ನಿವಾರಿಸಿಕೊಳ್ಳಲೇಬೇಕಾದ ಹೊತ್ತು ಇದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು