ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ವಿಶ್ವಕ್ಕೆ ಬೇಕಿರುವುದು ಶಾಂತಿ– ಇನ್ನೊಂದು ಯುದ್ಧ ಬೇಡ

ಸಂಪಾದಕೀಯ
Published 15 ಏಪ್ರಿಲ್ 2024, 18:59 IST
Last Updated 15 ಏಪ್ರಿಲ್ 2024, 18:59 IST
ಅಕ್ಷರ ಗಾತ್ರ

ಏಷ್ಯಾದ ಪಶ್ಚಿಮ ಭಾಗವು ತೀವ್ರ ಸಂಘರ್ಷದ ಕಡೆ ಸಾಗುತ್ತಿದೆ. ಸಿರಿಯಾ ದೇಶದ ರಾಜಧಾನಿ
ಡಮಾಸ್ಕಸ್‌ನಲ್ಲಿ ಇರುವ ಇರಾನ್ ದೇಶದ ದೂತಾವಾಸ ಕಚೇರಿಯ ಮೇಲೆ ಇಸ್ರೇಲ್ ಏಪ್ರಿಲ್‌ 1ರಂದು ನಡೆಸಿದೆ ಎನ್ನಲಾದ ದಾಳಿಗೆ ಪ್ರತೀಕಾರ ಎಂಬಂತೆ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ಛಾಯಾ ಸಮರವು ದಶಕಗಳಿಂದ ನಡೆದುಬಂದಿದೆ. ಆದರೆ ಇಸ್ರೇಲ್ ಮೇಲೆ ಇರಾನ್ ನೇರವಾಗಿ ಮಿಲಿಟರಿ ದಾಳಿ ನಡೆಸಿರುವುದು ಇದೇ ಮೊದಲು. ಇಸ್ರೇಲ್‌ ಗುರಿಯಾಗಿಸಿಕೊಂಡು ಇರಾನ್‌ ನೂರಾರು ಕ್ಷಿಪಣಿಗಳನ್ನು ಹಾರಿಸಿದೆ. ಇಸ್ರೇಲ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಈ ಕ್ಷಿಪಣಿಗಳ ಪೈಕಿ ಹೆಚ್ಚಿನವನ್ನು ಆಗಸದಲ್ಲಿಯೇ ಹೊಡೆದುರುಳಿಸಲಾಗಿದೆ. ಶತ್ರುಗಳ ದಾಳಿಯಿಂದ ಇಸ್ರೇಲ್ ದೇಶವನ್ನು ರಕ್ಷಿಸುವ ವಿಚಾರದಲ್ಲಿ ತಮ್ಮ ಬದ್ಧತೆಯು ಎಂದಿಗೂ ಕುಗ್ಗುವುದಿಲ್ಲ ಎಂಬ ಮಾತನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಅಮೆರಿಕದ ಯುದ್ಧವಿಮಾನಗಳು ಹಾಗೂ ಕ್ಷಿಪಣಿ ನಾಶಕಗಳನ್ನು ಕಳೆದ ವಾರ ಇಸ್ರೇಲ್‌ ಕಡೆ ರವಾನಿಸಲಾಗಿತ್ತು. ಇವು ಇರಾನ್‌ ದಾಳಿಯನ್ನು ಮೆಟ್ಟಿನಿಲ್ಲಲು ಇಸ್ರೇಲ್‌ಗೆ ನೆರವಾಗಿವೆ. ಡಮಾಸ್ಕಸ್‌ನಲ್ಲಿ ನಡೆದ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ನ ಹಲವು ಮಂದಿ ಮಿಲಿಟರಿ ಕಮಾಂಡರ್‌ಗಳು, ಇರಾನ್ ಸೇನೆಯ ಯೋಧರು ಹಾಗೂ ಇರಾನ್‌ನ ಪ್ರಮುಖ ಜನರಲ್‌ ಒಬ್ಬರು ಮೃತಪಟ್ಟಿದ್ದರು. ಇಸ್ರೇಲ್‌ಗೆ ಕೆಡುಕು ಉಂಟುಮಾಡುವ ವರಿಗೆ ತಾವೂ ಕೆಡುಕು ತಂದಿಡುವುದಾಗಿ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. ರಷ್ಯಾ ಮತ್ತು ಉಕ್ರೇನ್ ಸಮರದಿಂದಾಗಿ ಉಂಟಾಗಿರುವ ಬೆಲೆ ಏರಿಕೆಯ ಸಮಸ್ಯೆ ಹಾಗೂ ಕೋವಿಡ್‌ ಸಾಂಕ್ರಾಮಿಕದ ನಂತರದಲ್ಲಿ ವಿವಿಧ ದೇಶಗಳ ಅರ್ಥವ್ಯವಸ್ಥೆ
ಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳು ಇನ್ನೂ ಪರಿಹಾರ ಕಂಡಿಲ್ಲ. ಈ ಸಂದರ್ಭದಲ್ಲಿ ವಿಶ್ವಕ್ಕೆ ಇನ್ನೊಂದು ಯುದ್ಧ ಬೇಕಿಲ್ಲ. ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸುವ ಕೆಲಸವನ್ನು ಇರಾನ್‌ ಮಾಡಿದೆ. ಈಗ ಸಂಯಮ ತೋರುವಂತೆ ನೆತನ್ಯಾಹು ಅವರ ಮೇಲೆ ಜಾಗತಿಕ ನಾಯಕರು ಯಾವ ರೀತಿಯಲ್ಲಿ ಒತ್ತಡ ತರುತ್ತಾರೆ ಎಂಬುದರ ಆಧಾರದ ಮೇಲೆ ಇಸ್ರೇಲ್‌ನ ಪ್ರತಿಕ್ರಿಯೆ ನಿಂತಿದೆ.

ಇಸ್ರೇಲ್‌ನ ಪಾಶ್ಚಿಮಾತ್ಯ ಮಿತ್ರರಾದ ಅಮೆರಿಕ ಮತ್ತು ಇತರ ಕೆಲವು ದೇಶಗಳು ಗಾಜಾ ವಿಚಾರವಾಗಿ ಇಸ್ರೇಲ್‌ ಕದನ ವಿರಾಮ ಘೋಷಿಸುವಂತೆ ಮಾಡುವಲ್ಲಿ ಯಶಸ್ಸು ಕಂಡಿಲ್ಲ. ಈ ದಿಕ್ಕಿನಲ್ಲಿ ಇಸ್ರೇಲ್‌ನ ಮಿತ್ರ
ರಾಷ್ಟ್ರಗಳು ಹೆಚ್ಚಿನ ಪ್ರಯತ್ನವನ್ನು ಮಾಡಿದಂತೆಯೂ ಕಾಣುತ್ತಿಲ್ಲ. ಪ್ಯಾಲೆಸ್ಟೀನಿಯನ್ನರ ಹತ್ಯಾಕಾಂಡಕ್ಕೆ ಕಾರಣವಾಗಬಲ್ಲ ಪರಿಸ್ಥಿತಿಯನ್ನು ಇಸ್ರೇಲ್‌ ರಕ್ಷಣಾ ಪಡೆಗಳು ನಿರ್ಮಿಸುತ್ತಿವೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಹೇಳಿದ್ದರೂ, ಕದನ ವಿರಾಮ ಸಾಧ್ಯವಾಗಿಸುವ ಕೆಲಸವನ್ನು ಈ ರಾಷ್ಟ್ರಗಳು ಮಾಡಿಲ್ಲ. ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 1,200 ಮಂದಿಯ ಹತ್ಯೆಯಾಯಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ಗೆ ‘ಆತ್ಮರಕ್ಷಣೆಯ ಹಕ್ಕು ಇದೆ’ ಎಂಬ ಕಾರಣ ನೀಡಿ, ಗಾಜಾದಲ್ಲಿ ನಾಗರಿಕರ ಹತ್ಯೆ ನಡೆಸಿದ್ದಕ್ಕೆ ವಿಶ್ವದ ಹಲವು ದೇಶಗಳು ಸಮರ್ಥನೆ ಒದಗಿಸಿದವು. ಗಾಜಾದಲ್ಲಿ ಸುಮಾರು 32 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು. ಈಗಿನ ಪರಿಸ್ಥಿತಿಗೆ ನೆತನ್ಯಾಹು ಅವರಿಗೆ ವಿಶ್ವದ ಹಲವು ದೇಶಗಳು ನೀಡಿದ ಅತಿಯಾದ ಬೆಂಬಲವೇ ಕಾರಣ ಎಂಬುದರಲ್ಲಿ ಅನುಮಾನ ಇಲ್ಲ. ಇಸ್ರೇಲ್ ಮತ್ತು ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸಿದಲ್ಲಿ, ಅದರ ಪರಿಣಾಮವು ರಷ್ಯಾ–ಉಕ್ರೇನ್ ಯುದ್ಧದ ಪರಿಣಾಮಗಳಿಗಿಂತ ಹೆಚ್ಚು ತೀವ್ರವಾಗಿರಲಿದೆ. ನೆತನ್ಯಾಹು ಅವರು ಸಕಾರಣಗಳ ಆಗ್ರಹವನ್ನು ಒಪ್ಪುತ್ತಿಲ್ಲ ಎಂದಾದರೆ, ಅವರನ್ನು ಬದಲಾಯಿಸುವಂತೆ ಜಗತ್ತು ಒತ್ತಾಯಿಸುವುದು ನ್ಯಾಯಸಮ್ಮತ ಆಗುತ್ತದೆ.

ಇಸ್ರೇಲ್‌ ಬಗ್ಗೆ ಒಲವು ಹೊಂದಿರುವ ಭಾರತದ ಪಾಲಿಗೆ ಒಂದಿಷ್ಟು ಒತ್ತಡಗಳು ಸೃಷ್ಟಿಯಾಗಿವೆ. ಭಾರತವು ಈಗ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ ವಶದಲ್ಲಿ ಇರುವ ಇಸ್ರೇಲ್‌ನ ಹಡಗಿನಲ್ಲಿರುವ 17 ಮಂದಿ ಭಾರತೀಯ ಸಿಬ್ಬಂದಿಯ ಬಿಡುಗಡೆಗಾಗಿ ಇರಾನ್ ಜೊತೆ ಮಾತುಕತೆ ನಡೆಸಬೇಕಿದೆ. ಭಾರತೀಯರು ಇರಾನ್ ಮತ್ತು ಇಸ್ರೇಲ್‌ಗೆ ಪ್ರಯಾಣಿಸುವುದನ್ನು ತಡೆಹಿಡಿಯಬೇಕು ಎಂದು ಕೇಂದ್ರ ಸರ್ಕಾರವು ಸಲಹೆ ನೀಡಿದೆ. ಆದರೆ, ಇಸ್ರೇಲ್‌ನಲ್ಲಿ ಹಲವು ಕೆಲಸಗಳಿಗೆ ಪ್ಯಾಲೆಸ್ಟೀನಿಯನ್ನರ ಬದಲು ಭಾರತೀಯರನ್ನು ನೇಮಕ ಮಾಡಿಕೊಳ್ಳಬೇಕು ಎಂದು ನೆತನ್ಯಾಹು ಕರೆ ನೀಡಿದಾಗ, ಅದಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದು ಆತುರದ ಹೆಜ್ಜೆಯಾಗಿತ್ತಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಆಗ ನೆತನ್ಯಾಹು ಅವರ ಕರೆಗೆ ಸ್ಪಂದಿಸಿದ್ದನ್ನು, ‘ಮುಸ್ಲಿಂ ಭಯೋತ್ಪಾದಕರ’ ವಿರುದ್ಧದ ಸಮರದಲ್ಲಿ ಇಸ್ರೇಲ್‌ಗೆ ಭಾರತವು ನೀಡುತ್ತಿರುವ ನೆರವು ಎಂದು ಭಾರತದಲ್ಲಿ ಹಲವರು ಕೊಂಡಾಡಿದ್ದರು. ಸರ್ಕಾರದ ಒಲವು ಏನೇ ಇರಬಹುದು. ಅದು ಭಾರತೀಯರನ್ನು ಅಪಾಯಕ್ಕೆ ಸಿಲುಕಿಸುವ ಕೆಲಸಗಳಿಂದ ದೂರ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT