ಅಹಮದಾಬಾದ್ನ ಗುಲ್ಬರ್ಗ್ ಹೌಸಿಂಗ್ ಸೊಸೈಟಿಯಲ್ಲಿ ನಡೆದ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಸಾಕ್ಷ್ಯಗಳು ಸಿಕ್ಕಿಲ್ಲ ಎಂಬುದರಿಂದ ಈ ಪ್ರಕರಣದಲ್ಲಿ ಅವರು ಆರೋಪ ಮುಕ್ತರಾಗಿದ್ದಾರೆ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ.

ವಿಧಾನಸಭೆ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನರೇಂದ್ರ ಮೋದಿ ಅವರನ್ನು ನಿರ್ದೋಷಿಯೆಂದು ನ್ಯಾಯಾಲಯ ಮುಕ್ತಗೊಳಿಸಿದೆ ಎಂದು ಹೇಳಿಕೊಳ್ಳುವುದು ಬೇಕಾಗಿದೆ.

ಸುಪ್ರೀಂ ಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (ಎಸ್ಐಟಿ) ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವಾಗ, ಘಟನೆ ನಡೆದು ಎಂಟು ವರ್ಷಗಳೇ ಸಂದಿದ್ದವು. ಅಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳ ಬಗ್ಗೆ ಸಾಕ್ಷ್ಯ ಸಂಗ್ರಹಿಸುವುದು ಸುಲಭವಲ್ಲ.

ರಾಜ್ಯ ಸರ್ಕಾರ ನೀಡಿದ ದಾಖಲೆಗಳನ್ನೇ ಅವಲಂಬಿಸಬೇಕಾದ ತನಿಖಾ ತಂಡಕ್ಕೆ ಮೋದಿ ವಿರುದ್ಧ ಸಾಕ್ಷ್ಯ ಸಿಗದಿರುವುದು ಅಸಹಜವಲ್ಲ. ಲಭ್ಯವಿದ್ದ ದಾಖಲೆಗಳನ್ನಷ್ಟೆ ಆಧರಿಸಿ ವರದಿ ನೀಡಿದ ಎಸ್ಐಟಿ ಅನಿವಾರ್ಯವಾಗಿ ಪ್ರಕರಣದ ಪರಿಸಮಾಪ್ತಿಗೆ ಮುಂದಾಗಿದೆ.

ಗುಲ್ಬರ್ಗ್ ಹೌಸಿಂಗ್ ಸೊಸೈಟಿಯಲ್ಲಿ ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಮಂದಿ ಸಜೀವ ದಹನವಾದ ಘೋರ ಘಟನೆ, ಹೀಗೆ ಸಾಕ್ಷ್ಯವಿಲ್ಲದೆ ಮುಚ್ಚಿಹೋಗುವುದೆಂದರೆ ದೇಶದ ತನಿಖಾ ವ್ಯವಸ್ಥೆಯ ಬಗ್ಗೆಯೇ ವಿಶ್ವಾಸ ಕಳೆದುಕೊಳ್ಳುವ ಸಂಗತಿ.

ಹತ್ತು ವರ್ಷಗಳ ಹಿಂದೆ ಗೋಧ್ರಾದಲ್ಲಿ ಸಬರಮತಿ ರೈಲಿನ ಬೋಗಿಗೆ ಬೆಂಕಿಹಚ್ಚಿ 59 ಕರಸೇವಕರು ಸಾವಿಗೀಡಾದ ಘಟನೆಗೆ ಪ್ರತೀಕಾರವಾಗಿ ಗುಜರಾತ್ ರಾಜ್ಯದಾದ್ಯಂತ ಹಬ್ಬಿದ ಸರಣಿ ಕೋಮುಗಲಭೆಗಳಿಂದ ಸಾವಿರಾರು ಅಮಾಯಕರು ಬಲಿಯಾಗಿದ್ದುದು ಕರಾಳ ಇತಿಹಾಸ.

ಕೋಮುಗಲಭೆ ನಡೆಯುತ್ತಿದ್ದಾಗ ಸರ್ಕಾರ ನಿಷ್ಕ್ರಿಯವಾಗಿತ್ತಲ್ಲದೆ, ಗಲಭೆಕೋರರಿಗೆ ಕುಮ್ಮಕ್ಕು ನೀಡುತ್ತಿತ್ತೆಂದು ಆರೋಪಿಸಲಾಗಿದ್ದರೂ ಎಲ್ಲ ಪ್ರಕರಣಗಳೂ ತನಿಖೆಗೆ ಒಳಪಡುವುದಕ್ಕೆ ಸಂತ್ರಸ್ತರು ಮತ್ತು ಸ್ವಯಂ ಸೇವಾ ಸಂಘಟನೆಗಳು ಇನ್ನಿಲ್ಲದ ಪಾಡು ಪಡಬೇಕಾಯಿತು.

ಸುಪ್ರೀಂ ಕೋರ್ಟ್ನ ಮಧ್ಯಪ್ರವೇಶದಿಂದ ಕೆಲವು ಪ್ರಕರಣಗಳ ತನಿಖೆ ನಡೆದಿದೆ. ಗಲಭೆಗೆ ಮೂಲವಾದ ಗೋಧ್ರಾ ಘಟನೆಗೆ ಕಾರಣರಾದವರಿಗೆ ನ್ಯಾಯಾಲಯದಿಂದ ಶಿಕ್ಷೆಯೂ ಆಗಿದೆ.

ಅದೇ ಸರಣಿಯ ಓಡ್ ಎಂಬಲ್ಲಿ 24 ಮಂದಿಯನ್ನು ಸಜೀವವಾಗಿ ಸುಟ್ಟು ಹಾಕಿದ ಇನ್ನೊಂದು ಪ್ರಕರಣದಲ್ಲಿ 24ಮಂದಿಯ ವಿರುದ್ಧ ಆರೋಪ ಸಾಬೀತಾಗಿದ್ದು ಶಿಕ್ಷೆಯನ್ನು ಪ್ರಕಟಿಸಬೇಕಾಗಿದೆ. ಗುಲ್ಬರ್ಗ್ ಹೌಸಿಂಗ್ ಸೊಸೈಟಿಯಲ್ಲಿ ಗಲಭೆ ಆರಂಭವಾಗಿದ್ದಾಗ ಮಾಜಿ ಸಂಸದ ಎಹಸಾನ್ ಜಾಫ್ರಿ ಸ್ವತಃ ಮುಖ್ಯಮಂತ್ರಿ ಕಚೇರಿಗೆ ಮೊರೆ ಇಟ್ಟಿದ್ದರೂ ಸಾವಿನಿಂದ ಪಾರಾಗಲು ಸಾಧ್ಯವಾಗಲಿಲ್ಲ.

ಈ ಪ್ರಕರಣದಲ್ಲಿ ಅವರ ಪತ್ನಿ ಜಕಿಯಾ ಜಾಫ್ರಿ ನರೇಂದ್ರ ಮೋದಿ, ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ 62 ಮಂದಿಯನ್ನು ಆರೋಪಗಳೆಂದು ಹೆಸರಿಸಿದ್ದರು. ಹತ್ಯಾಕಾಂಡಕ್ಕೆ ಕುಮ್ಮಕ್ಕು ನೀಡಿದ ಬಗ್ಗೆ ಮೋದಿ ವಿರುದ್ಧ ಸಾಕ್ಷ್ಯ ಸಂಗ್ರಹಿಸಲು ವಿಶೇಷ ತನಿಖಾ ತಂಡಕ್ಕೆ ಸಾಧ್ಯವಾಗಿಲ್ಲ ಎಂಬುದೇ ಪ್ರಕರಣದ ಕುರಿತಾಗಿ ಅಂತಿಮ ತೀರ್ಮಾನವಲ್ಲ.

69 ಮಂದಿ ಸಜೀವ ದಹನವಾದ ಪ್ರಕರಣಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ನೈತಿಕವಾಗಿ ಹೊಣೆಗಾರರು. ಆದ್ದರಿಂದ, ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡಕ್ಕೆ ಯಾರು ಕಾರಣರೆಂಬುದನ್ನು ಸರ್ಕಾರ ಪತ್ತೆ ಮಾಡುವವರೆಗೆ ಯಾರನ್ನೂ ಆರೋಪ ಮುಕ್ತರೆಂದು ತೀರ್ಮಾನಿಸಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.