ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕುಲಾಷ್ಟಮೀ: ಶ್ರೀಕೃಷ್ಣಪರ್ವ

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಕೃಷ್ಣನಿಲ್ಲದ ಭಾರತೀಯತೆಯನ್ನು ಕಲ್ಪಿಸಿಕೊಳ್ಳಲೂ ಆಗದು. ನಮ್ಮ ಕಲೆ, ಸಾಹಿತ್ಯ, ಸಂಗೀತ, ಇತಿಹಾಸ, ರಾಜನೀತಿ, ವಾಸ್ತುಶಿಲ್ಪ, ತತ್ತ್ವಶಾಸ್ತ್ರ – ಹೀಗೆ ಹಲವು ಕ್ಷೇತ್ರಗಳು ಕೃಷ್ಣನಿಂದಲೇ ಶಕ್ತಿಯನ್ನೂ ಸೊಗಸನ್ನೂ ಪಡೆದಿದೆ. ನಮ್ಮ ಜೀವನದ ಪ್ರತಿಕ್ಷಣವೂ ಕೃಷ್ಣಾನುಸಂಧಾನವೇ ಹೌದು. ಹೀಗಿದ್ದರೂ ವರ್ಷದ ಒಂದು ದಿನವನ್ನು ಅವನನ್ನು ಸ್ಮರಿಸಿಕೊಳ್ಳಲು, ಪೂಜಿಸಲು ನಿಗದಿ
ಪಡಿಸಿಕೊಂಡಿದ್ದೇವೆ. ಅಂದು ದೇಶದ ಉದ್ದಗಲಕ್ಕೂ ಅವನ ಉತ್ಸವ. ಅದನ್ನೇ ಶ್ರೀಕೃಷ್ಣಜಯಂತೀ, ಜನ್ಮಾಷ್ಟಮೀ, ಗೋಕುಲಾಷ್ಟಮೀ – ಹೀಗೆ ಹಲವು ಹೆಸರುಗಳಿಂದ ಕರೆಯಲಾಗಿದೆ.

ಶ್ರೀಮಹಾವಿಷ್ಣುವಿನ ಅವತಾರಗಳಲ್ಲಿ ಶ್ರೀಕೃಷ್ಣಾವತಾರವೂ ಒಂದು. ಈ ಅವತಾರದ ವಿವರಗಳ ಬಗ್ಗೆ ನಮಗೆ ಮುಖ್ಯವಾಗಿ ಮಹಾಭಾರತ, ಭಾಗವತ ಮತ್ತು ಹರಿವಂಶಗಳಲ್ಲಿ ಕಾಣಸಿಗುತ್ತವೆ. ಋಗ್ವೇದದಲ್ಲಿಯೇ ಕೃಷ್ಣನ ಉಲ್ಲೇಖ ಬಂದಿದೆ. ಅವನ ಹೆಸರಿನಲ್ಲಿ ಕಾವ್ಯಗಳೂ ಸ್ತೋತ್ರಗಳೂ ಹಾಡುಗಳೂ ಅಸಂಖ್ಯವಾಗಿ ರಚಿತವಾಗಿವೆ. ಸಾವಿರಾರು ವರ್ಷಗಳಿಂದ ಶ್ರೀಕೃಷ್ಣನ ಆರಾಧನೆ ಬೇರೆ ಬೇರೆ ವಿಧಾನಗಳಲ್ಲಿ ನಡೆಯುತ್ತಬಂದಿದೆ.

ಹಸುಳೆಯಾಗಿದ್ದಾಗಲೇ ಕೃಷ್ಣ ತನ್ನ ಅವತಾರದ ಉದ್ದೇಶವನ್ನು ನೆರವೇರಿಸುತ್ತಬಂದವನು. ಅವನ ಬದುಕಿನ ಎಲ್ಲ ಹಂತದಲ್ಲೂ ಧರ್ಮವನ್ನು ಕಾಪಾಡಲು ತೊಡಗಿದ್ದವನು ಅವನು.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |

ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||

ಇದು ಶ್ರೀಕೃಷ್ಣನೇ ನೀಡಿರುವ ಅಭಯ: ‘ಯಾವ ಯಾವ ಕಾಲದಲ್ಲಿ ಧರ್ಮಕ್ಕೆ ತೊಂದರೆ ಅಪಾಯ ಎದುರಾಗುತ್ತದೆಯೋ ಆಗೆಲ್ಲ ನಾನು ಅವತರಿಸುವೆ.’

ಧರ್ಮ ಯಾವುದು? ಅಧರ್ಮ ಯಾವುದು? – ಎಂದು ವಿಂಗಡಿಸುವುದು ಅಷ್ಟು ಸುಲಭವಲ್ಲ. ಆದುದರಿಂದಲೇ ಶ್ರೀಕೃಷ್ಣನ ವ್ಯಕ್ತಿತ್ವ ನಮಗೆ ತುಂಬ ಸಂಕೀರ್ಣವಾಗಿ ತೋರುವುದು. ಅವನು ಏಕಕಾಲದಲ್ಲಿ ಧರ್ಮರಕ್ಷಕನಾಗಿಯೂ ಕಾಣಬಲ್ಲ, ಕಪಟಸೂತ್ರಧಾರಿಯಾಗಿಯೂ ಕಾಣಬಲ್ಲ. ಬಹುಶಃ ಈ ಸಂಕೀರ್ಣತೆಯ ಕಾರಣದಿಂದಾಗಿಯೇ ಅವನು ಮನುಷ್ಯತ್ವಕ್ಕೂ ಹತ್ತಿರವಾಗಿದ್ದಾನೆ ಎನಿಸುತ್ತದೆ. ಕೃಷ್ಣಾವತಾರದ ಲೀಲೆಗಳ ಹಿಂದಿರುವ ಗಹನತೆಯನ್ನೂ ಸೌಂದರ್ಯವನ್ನೂ ಈ ಪದ್ಯ ಮನೋಜ್ಞವಾಗಿ ನಿರೂಪಿಸುತ್ತದೆ:

ಪಥಿ ಧಾವನ್ನಿಹ ಪತಿತೋ ರೋದಿಷ್ಯಂಬಾಕರಾವಲಂಬಾಯ |

ಪತಿತೋದ್ಧಾರಣಸಮಯೇ ಕಿಂ ನ ಸ್ಮರಸಿ ತ್ವಮಾತ್ಮಾನಮ್‌ ||

ಇಲ್ಲಿಯ ಸಂದರ್ಭವೇ ರಸವತ್ತಾಗಿದೆ. ಬಾಲಕೃಷ್ಣ ತಾಯಿಯೊಂದಿಗೆ ಹೋಗುತ್ತಿದ್ದಾನೆ; ಅವನು ಎಡವಿ ಬಿದ್ದುಬಿಟ್ಟ! ಅಲ್ಲೇ ಅವನು ಅಳುತ್ತ ಹೊರಳಾಡುತ್ತಿದ್ದಾನೆ, ತಾಯಿ ಬಂದು ಅವನ ಕೈ ಹಿಡಿದು ಎತ್ತಲೆಂದು. ಕವಿ ಈ ಸಂದರ್ಭವನ್ನು ನಮ್ಮ ಜೀವನದೊಂದಿಗೆ ಸಮೀಕರಿಸಿಕೊಂಡು, ಕೃಷ್ಣನನ್ನು ಆರ್ತತೆಯಿಂದ ಪ್ರಾರ್ಥಿಸಿಕೊಳ್ಳುತ್ತಿದ್ದಾನೆ. ‘ನಾವು ಸಂಸಾರದಲ್ಲಿ ಬಿದ್ದು ಒದ್ದಾಡುತ್ತಿದ್ದೇವೆ. ನಮ್ಮ ಈ ಹತಾಶಸ್ಥಿತಿಯನ್ನು ನೀನು ದಾರಿಯಲ್ಲಿ ಬಿದ್ದಾಗ ಏಕೆ ನೆನೆಸಿಕೊಳ್ಳುವುದಿಲ್ಲ? ಎಂದರೆ, ಬಿದ್ದವರ ಅವಸ್ಥೆ ಗೊತ್ತಾದರೆ ಅವನು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಬಹುದು – ಎಂಬ ಆಸೆಯಿಂದ ಕೃಷ್ಣನನ್ನು ಕವಿ ಪ್ರಶ್ನಿಸುತ್ತಿದ್ದಾನೆ.

ಕೃಷ್ಣನ ಬಾಲ್ಯದ ವಿವರಗಳು ಕವಿವರ್ಣನೆಗೆ ಒದಗಿದಷ್ಟು ಇನ್ನೊಬ್ಬ ಅವತಾರಪುರುಷ ದಕ್ಕಿಲ್ಲ. ‘ಶ್ರೀಕೃಷ್ಣಕರ್ಣಾಮೃತ’, ದಾಸರ ಪದಗಳು – ಹೀಗೆ ಹಲವು ಕೃತಿಗಳು ಅವನ ಬಾಲ್ಯವನ್ನು ಹೃದಯಂಗಮವಾಗಿ ಚಿತ್ರಿಸಿವೆ. ಮಾನುಷಸಂಬಂಧಗಳ ಎಲ್ಲ ಕೊಂಡಿಗಳಿಗೂ ಒದಗುವಂಥವನು ಕೃಷ್ಣ. ಅವನ ಈ ಸಂಬಂಧಸೂತ್ರವನ್ನು ಕುಮಾರವ್ಯಾಸನ ಪದ್ಯ ‘ವೇದಪುರುಷನ ಸುತನ ಸುತನ...’ ತುಂಬ ಧ್ವನಿ
ಪೂರ್ಣವಾಗಿ ಎತ್ತಿಹಿಡಿದಿದೆ.

ಲೌಕಿಕ ಸಂಬಂಧಗಳ ಜೊತೆಯಿದ್ದೂ ಆ ಎಲ್ಲ ಸಂಬಂಧಗಳನ್ನು ಮೀರಿದ ತತ್ತ್ವವೇ ಶ್ರೀಕೃಷ್ಣತತ್ತ್ವ ಎಂಬುದು ಆ ಪದ್ಯದ ತಾತ್ಪರ್ಯದಂತಿದೆ. ಮಗುವಾಗಿ, ಸ್ನೇಹಿತನಾಗಿ, ಪ್ರೇಮಿಯಾಗಿ, ಸಹೋದರನಾಗಿ, ಶಿಷ್ಯನಾಗಿ, ಗುರುವಾಗಿ – ಕೊನೆಗೆ ನಮ್ಮೆಲ್ಲರ ಜೀವನರಥದ ಸಾರಥಿಯಾಗಿರುವವನೇ ಅವನು. ಅವನನ್ನು ಒಲಿಸಿಕೊಳ್ಳುವುದು ಕೂಡ ಸುಲಭ: ‘ಎಲೆ, ಹೂವು, ಹಣ್ಣು, ಕೊನೆಗೆ ನೀರು – ಹೀಗೆ ಯಾವುದನ್ನಾದರೂ ಸರಿಯೇ, ಒಳ್ಳೆಯ ಹೃದಯದಿಂದ ಅವನಿಗೆ ಅರ್ಪಿಸಿದರೆ, ಅವನು ಒದಗಬಲ್ಲ’ ಎಂದು ಅವನೇ ಘೋಷಿಸಿದ್ದಾನೆ. ಅವನನ್ನು ಸಂಭ್ರಮದಿಂದ ಸ್ಮರಿಸಿಕೊಳ್ಳುವ, ಆರಾಧಿಸುವ ಪರ್ವವೇ ‘ಗೋಕುಲಾಷ್ಟಮೀ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT