ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರ್‌ ಗಂಭೀರವಾಗಿಲ್ಲ: ಆತಿಶಿ

Last Updated 3 ಮೇ 2019, 19:36 IST
ಅಕ್ಷರ ಗಾತ್ರ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರೆ ಆತಿಶಿ ಅವರು ಆಮ್ ಆದ್ಮಿ ಪಕ್ಷದಿಂದ ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದ ಅಖಾಡಕ್ಕೆ ಧುಮುಕಿದ್ದಾರೆ. ‘ಪ್ರಜಾವಾಣಿ’ಯ ಶೆಮಿನ್ ಜಾಯ್ ಜೊತೆ ಮಾತನಾಡಿದ್ದಾರೆ.

* ದೆಹಲಿ ಪೂರ್ವ ಕ್ಷೇತ್ರ ವೈಶಿಷ್ಟ್ಯದಿಂದ ಕೂಡಿದೆ. ನಿಮ್ಮ ಎದುರಾಳಿಗಳನ್ನು ಹೇಗೆ ನೋಡುತ್ತೀರಿ?
ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳ ಹಾಗೆ ಅರವಿಂದರ್ ಸಿಂಗ್ ಲವ್ಲಿ ಅವರು ಠೇವಣಿ ಉಳಿಸಿಕೊಳ್ಳಲೂ ಏದುಸಿರು ಬಿಡುವ ಸ್ಥಿತಿ ಇದೆ. ಹೀಗಾಗಿ ಅವರ ಬಗ್ಗೆ ಹೆಚ್ಚು ಮಾತನಾಡದಿರುವುದೇ ಸೂಕ್ತ. ಲವ್ಲಿ ಶಿಕ್ಷಣ ಸಚಿವರಾಗಿದ್ದಾಗ ಶಾಲೆಗಳ ಸ್ಥಿತಿ ಹೇಗಿತ್ತು? ಈಗ ಸುಧಾರಣೆ ಕಂಡಿರುವ ದೆಹಲಿ ಶಾಲೆಗಳ ಚಿತ್ರಣವೇ ಇದಕ್ಕೆ ಪುರಾವೆ. ಸ್ಪರ್ಧೆ ಇರುವುದು ಬಿಜೆಪಿ ಮತ್ತು ಎಎಪಿ ನಡುವೆ. ಗಂಭೀರ್ ವಿಷಯವಾಗಿ ಹೇಳುವುದಾದರೆ, ದೆಹಲಿ ಜನರು ಖ್ಯಾತನಾಮರಿಗೆ ಮತ ಹಾಕುವುದಿಲ್ಲ. ರಾಜೇಶ್ ಖನ್ನಾ, ಶತ್ರುಘ್ನ ಸಿನ್ಹಾ, ಸ್ಮೃತಿ ಇರಾನಿ ಅವರ ತಾರಾವರ್ಚಸ್ಸು ಇಲ್ಲಿ ನೆಲಕಚ್ಚಿದೆ. ಪಕ್ಷವನ್ನು ನೋಡಿ ಜನ ಮತ ಹಾಕುತ್ತಾರೆ. ದೆಹಲಿಗರ ಮನದಲ್ಲಿರುವ ಪಕ್ಷ ಎಎಪಿ ಮಾತ್ರ.

* ಗಂಭೀರ್ ವಿರುದ್ಧ ನೀವು ದೂರು ನೀಡಿದ್ದೀರಿ. ನೈಜ ವಿಷಯಗಳು ಇಲ್ಲದ ಕಾರಣ ನೀವು ಇಂತಹ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದೀರಿ ಎಂದು ಬಿಜೆಪಿ ಆರೋಪಿಸುತ್ತಿದೆಯಲ್ಲಾ?
ಗಂಭೀರ್ ಅವರಿಗೆ ಹೇಗೆ ನಾಮಪತ್ರ ಸಲ್ಲಿಸಬೇಕು ಎಂಬುದೇ ಗೊತ್ತಿಲ್ಲದಿದ್ದರೆ ನಾವಾದರೂ ಏನು ಮಾಡಲು ಸಾಧ್ಯ? ಚುನಾವಣೆ ಬಗ್ಗೆ ಅವರಲ್ಲಿ ಗಂಭೀರತೆಯೇ ಇಲ್ಲ. ಎರಡು ಕಡೆ ಮತದಾರರ ಚೀಟಿ ಹೊಂದುವುದು ಅಪರಾಧವಷ್ಟೇ ಅಲ್ಲ, ಸದ್ಯದಲ್ಲೇ ಅವರು ಕಣದಿಂದ ಅನರ್ಹಗೊಳ್ಳಲಿದ್ದಾರೆ. ಆಯೋಗದ ಅನುಮತಿ ಪಡೆಯದೇ ರ‍್ಯಾಲಿ ನಡೆಸಿದರು. ನಮಗೆ ದೂರದೃಷ್ಟಿ ಇಲ್ಲ ಎಂದು ಗಂಭೀರ್ ಹೇಳುತ್ತಾರೆ. ನಾಲ್ಕು ವರ್ಷಗಳಲ್ಲಿ ಬಿಜೆಪಿ ಸಂಸದ ಮಹೇಶ್ ಗಿರಿ ಅವರು ಏನು ಮಾಡಿದ್ದಾರೆ ಎಂದು ವರದಿ ಕೊಡಿ. ನಿಮ್ಮ ದೂರದೃಷ್ಟಿಯನ್ನೂ ತಿಳಿಸಿ. ಒಂದಂತೂ ನಿಜ. ಇದು ಕ್ರಿಕೆಟ್ ಪಂದ್ಯ ಅಲ್ಲ, ಚುನಾವಣೆ.

* ಕಾಂಗ್ರೆಸ್ ಜತೆ ಮೈತ್ರಿಗೆ ಎಎಪಿ ಹಂಬಲಿಸಿದ್ದು ಏಕೆ?
ದೆಹಲಿ, ಹರಿಯಾಣ, ಚಂಡಿಗಡ, ಪಂಜಾಬ್‌ನಲ್ಲಿ ಮೈತ್ರಿ ಬಯಸಿದ್ದು ನಿಜ. ಭವಿಷ್ಯದಲ್ಲಿ ಇಡೀ ಉತ್ತರ ಭಾರತಕ್ಕೆ ವಿಸ್ತರಿಸುವುದು ನಮ್ಮ ಉದ್ದೇಶವಾಗಿತ್ತು. ನಾಲ್ಕು ರಾಜ್ಯಗಳ 33 ಕ್ಷೇತ್ರಗಳಲ್ಲಿ ನಾವು ಕೈಜೋಡಿಸಿದ್ದರೆ ಬಿಜೆಪಿ ಸೋಲುವ ಸಾಧ್ಯತೆ ಅಧಿಕವಾಗಿತ್ತು. ಆದರೆ ದೆಹಲಿಯಲ್ಲಿ ಮೈತ್ರಿ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆವು. ಏಕೆಂದರೆ ಎಲ್ಲ ಏಳೂ ಸ್ಥಾನಗಳಲ್ಲಿ ಬಿಜೆಪಿಯನ್ನು ಮಣಿಸುವ ಸಾಮರ್ಥ್ಯ ನಮಗಿದೆ.

* ಮೈತ್ರಿ ಕುದುರದಿರಲು ಕಾರಣವೇನು?
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ಗೆ ಬಿಜೆಪಿಯನ್ನು ಸೋಲಿಸುವ ಉದ್ದೇಶವೇ ಇಲ್ಲ. ಪ್ರತಿಪಕ್ಷದ ಬಲವನ್ನು ಕಾಂಗ್ರೆಸ್ ಕುಗ್ಗಿಸುತ್ತಿದೆ. ದೆಹಲಿ, ಉತ್ತರ ಪ್ರದೇಶ ಅಥವಾ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ನೋಡಿ. ರಾಹುಲ್ ಗಾಂಧಿ ಅವರು ವಯನಾಡ್‌ನಿಂದ ಅದೂ ಎಡಪಕ್ಷದ ವಿರುದ್ಧ ಏಕೆ ಸ್ಪರ್ಧಿಸುತ್ತಿದ್ದಾರೆ? ಅವರು ಬಿಜೆಪಿ ವಿರುದ್ಧ ಹೋರಾಡಬೇಕಿದ್ದರೆ, ಅದು ಪ್ರಬಲವಾಗಿರುವ ಮಧ್ಯಪ್ರದೇಶ ಅಥವಾ ಗುಜರಾತ್‌ನಿಂದ
ಸ್ಪರ್ಧಿಸಬಹುದಿತ್ತಲ್ಲವೇ?

* ಪಕ್ಷದ ಅಭ್ಯರ್ಥಿಗಳ ಮತಗಳಿಕೆ ಪ್ರಮಾಣ ಶೇ 9.5ರಿಂದ ಶೇ 22ಕ್ಕೆ ಏರಿಕೆಯಾಗಿದೆ ಎಂದು ಕಾಂಗ್ರೆಸ್ ವಾದ ಮಂಡಿಸುತ್ತಿದೆ. ಏನು ಹೇಳುವಿರಿ?
ಅವರು ತಮ್ಮ ಆಂತರಿಕ ಸಮೀಕ್ಷೆಯನ್ನು ಒಮ್ಮೆ ಗಮನಿಸು ವುದು ಒಳ್ಳೆಯದು. ಪಕ್ಷದ ಯಾವುದೇ ನಾಯಕರು ಏಕೆ ಸ್ಪರ್ಧಿಸುತ್ತಿಲ್ಲ? ಬಹುತೇಕ ಅಭ್ಯರ್ಥಿಗಳನ್ನು ಒತ್ತಾಯಪೂರ್ವಕವಾಗಿ ಕಣಕ್ಕಿಳಿಸಿಲ್ಲವೇ? ಹಿಂದಿನ ನಾಲ್ಕು ಚುನಾವಣೆಗಳ ರೀತಿಯಲ್ಲೇ ಕಾಂಗ್ರೆಸ್ ಈ ಬಾರಿಯೂ ಮೂರನೇ ಸ್ಥಾನಕ್ಕೆ ತೃಪ್ತಿಪಡಲಿದೆ.

* ‘ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ’ ಎಎಪಿಯ ಚುನಾವಣಾ ವಿಷಯ. ಇದು ಕಷ್ಟ ಎಂದು ನಿಮಗೆ ಅನ್ನಿಸುವುದಿಲ್ಲವೇ?
ಕೇಂದ್ರ ಸರ್ಕಾರವು ನಮ್ಮನ್ನು ಕೆಲಸ ಮಾಡಲಿಕ್ಕೇ ಬಿಡಲಿಲ್ಲ. ಮುಂದೆ ಬರಲಿರುವುದು ಸಮ್ಮಿಶ್ರ ಸರ್ಕಾರ. ಮೈತ್ರಿ ಸರ್ಕಾರದಲ್ಲಿ ಏಳು ಸ್ಥಾನ ದೊಡ್ಡ ಸಂಖ್ಯೆಯಾಗಿದ್ದು, ನಿರ್ಣಾಯಕವೂ ಆಗಬಲ್ಲದು. ಸಚಿವ ಸ್ಥಾನಗಳಿಗೆ ನಾವು ಬೇಡಿಕೆ ಇಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡುವ ಬಿಜೆಪಿಯೇತರ ಸರ್ಕಾರಕ್ಕೆ ನಮ್ಮ ಬೆಂಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT