ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾಲ್ತುಳಿತ ದುರಂತ | ಇಲಾಖೆಗೂ ಪಾಠ: ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಂದರ್ಶನ

ಸಮರ್ಪಕ ಭದ್ರತಾ ವ್ಯವಸ್ಥೆಗೆ ಸಮಯಾವಕಾಶ ಬೇಕು
Published : 6 ಜೂನ್ 2025, 23:30 IST
Last Updated : 6 ಜೂನ್ 2025, 23:30 IST
ಫಾಲೋ ಮಾಡಿ
Comments
ಬೆಂಗಳೂರು: ನಗರದ 39ನೇ ಪೊಲೀಸ್ ಕಮಿಷನರ್‌ ಆಗಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್ ಅವರು ನೇಮಕಗೊಂಡಿದ್ದಾರೆ. ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ, ಇದರ ತನಿಖೆ ಕುರಿತು ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದು ಅದರ ವಿವರ ಇಲ್ಲಿದೆ.
ಪ್ರ

ಹೊಸ ಜವಾಬ್ದಾರಿಯ ಬಗ್ಗೆ ಅನಿಸಿಕೆ?

ಪರಿಸ್ಥಿತಿ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತಿದೆ. ಸರ್ಕಾರದ ಆದೇಶದಂತೆ ಗುರುವಾರ ತಡರಾತ್ರಿಯೇ ಅಧಿಕಾರ ಸ್ವೀಕರಿಸಿ, ಪೊಲೀಸ್‌ ಅಧಿಕಾರಿಗಳ ಜತೆಗೆ ಸಭೆಯನ್ನೂ ನಡೆಸಿದ್ದೇನೆ. ಆದ್ಯತಾ ವಲಯವನ್ನು ಗುರುತಿಸಿ ಇಲಾಖೆಯ ಎಲ್ಲ ಸಿಬ್ಬಂದಿ ಸೇರಿ ಕೆಲಸ ಮಾಡುತ್ತೇವೆ. ಬೆಂಗಳೂರು ನಗರದಲ್ಲಿ ಕೆಲಸ ಮಾಡಿದ್ದ ಕಾರಣಕ್ಕೆ ಇಲ್ಲಿನ ಪರಿಸ್ಥಿತಿಯ ಅರಿವಿದೆ. ನಗರ ವಿಸ್ತಾರವಾಗಿದೆ. ಅದಕ್ಕೆ ತಕ್ಕಂತೆ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಮತ್ತೆ ಮೂರು ಠಾಣೆಗಳು ಕಮಿಷನರೇಟ್‌ ವ್ಯಾಪ್ತಿಗೆ ಸೇರಿವೆ.

ಪ್ರ

ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ?

ಕಬ್ಬನ್‌ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ನಾಲ್ವರನ್ನು ಬಂಧಿಸಲಾಗಿದೆ.  ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗುವುದು. ವಿಶೇಷ ತನಿಖಾ ದಳ ರಚಿಸಿ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಯಾರದ್ದು ತಪ್ಪು? ಹೇಗೆ ದುರಂತ ನಡೆಯಿತು? ಎಲ್ಲಿ ಲೋಪವಾಗಿದೆ ಎಂಬುದನ್ನೂ ಪತ್ತೆ ಮಾಡುತ್ತೇವೆ.

ಪ್ರ

ಕಾಲ್ತುಳಿತ ಪ್ರಕರಣದಿಂದ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಕ್ರಮದಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿದೆಯೇ?

ಸಿಬ್ಬಂದಿ ಹಾಗೂ ಅಧಿಕಾರಿಗಳು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ನಮ್ಮವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅದನ್ನು ಮುಂದುವರೆಸುತ್ತೇವೆ. ಸಿಬ್ಬಂದಿ ಕೆಲಸಕ್ಕೆ ಪ್ರೋತ್ಸಾಹ ನೀಡಲಾಗುವುದು. ಜನರು ಪೊಲೀಸರಿಗೆ, ಪೊಲೀಸರು ಜನರಿಗೆ ಗೌರವ ನೀಡುವ ವಾತಾವರಣ ಕಲ್ಪಿಸುತ್ತೇವೆ.

ಪ್ರ

ಮುಂದೆ ಕ್ರಿಕೆಟ್ ಪಂದ್ಯ, ಸಭೆ–ಸಮಾರಂಭಗಳಿಗೆ ಭದ್ರತಾ ವ್ಯವಸ್ಥೆ ಹೇಗಿರಲಿದೆ?

ಭದ್ರತಾ ವ್ಯವಸ್ಥೆ ಹೇಗಿರುತ್ತದೆ ಎಂದು ಈಗಲೇ ಹೇಳಲಾಗದು. ಆದರೆ, ಮೂಲ ಪೊಲೀಸ್‌ ವ್ಯವಸ್ಥೆಗೆ ಒತ್ತು ನೀಡಲಾಗುವುದು. ಕಾರ್ಯಕ್ರಮಕ್ಕೆ ಸೇರುವ ಜನಸಂಖ್ಯೆ ಆಧರಿಸಿ ಸಿಬ್ಬಂದಿ ನಿಯೋಜಿಸುತ್ತೇವೆ.

ಪ್ರ

ವಿಜಯೋತ್ಸವ, ಸಭೆ–ಸಮಾರಂಭಕ್ಕೆ ಅನುಮತಿ ಪಡೆಯಲು ಎಷ್ಟು ದಿನ ಮೊದಲು ಮನವಿ ಸಲ್ಲಿಸಬೇಕು?

ಚಳವಳಿ, ಪ್ರತಿಭಟನೆ, ರ್‍ಯಾಲಿ, ಸಭೆ–ಸಮಾರಂಭ ಹಾಗೂ ವಿಜಯೋತ್ಸವಕ್ಕೆ ಸೇರುವ ಜನಸಂಖ್ಯೆ ಒಂದೊಂದು ರೀತಿಯಲ್ಲಿ ಇರುತ್ತದೆ. ಯಾವ ರೀತಿಯ ಗುಂಪು ಜಮಾವಣೆ ಆಗಲಿದೆ ಎಂಬುದು ಬಹಳ ಮುಖ್ಯ. ವಿಜಯೋತ್ಸವಕ್ಕೆ ಬರುವವರ ವರ್ತನೆಯೂ ಭಿನ್ನ. ಆದ್ದರಿಂದ, ಭದ್ರತಾ ವ್ಯವಸ್ಥೆ ಕಲ್ಪಿಸಲು ಇಲಾಖೆಗೆ ಸಮಯಾವಕಾಶ ಬೇಕು. ತರಾತುರಿಯಲ್ಲಿ ಮನವಿ ಮಾಡಿದರೆ ಭದ್ರತಾ ವ್ಯವಸ್ಥೆಗೆ ತೊಂದರೆ ಆಗಲಿದೆ. ಹೆಚ್ಚಿನ ಜನರು ಬರುವ ಕಾರ್ಯಕ್ರಮಕ್ಕೆ ಮೊದಲೇ ಅನುಮತಿ ಪಡೆದುಕೊಳ್ಳಬೇಕು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತದ ಬಗ್ಗೆ ನೋವಿದೆ. ಒಬ್ಬರ ಮೇಲೆ ಆಪಾದನೆ ಮಾಡುವುದು ತಪ್ಪು. ಈ ದುರಂತವು ಇಲಾಖೆಗೂ ಒಂದು ಪಾಠ. ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದು ಈ ರೀತಿಯ ಘಟನೆ ಮರುಕಳಿಸುವುದಿಲ್ಲ.

ಪ್ರ

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಾಕಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ, ವೈಷಮ್ಯ ಬಿತ್ತುವ ಕೆಲಸ ನಡೆಯುತ್ತಿದೆ. ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮವೇನು? 

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗುತ್ತಿದೆ. ಇನ್ನೂ ಹೆಚ್ಚಿನ ನಿಗಾ ವಹಿಸಲು ಸಿಬ್ಬಂದಿಗೆ ಸೂಚಿಸುತ್ತೇನೆ. ನಗರದ ಕೇಂದ್ರ ವಲಯದಲ್ಲಿ ದಟ್ಟಣೆ ಸಮಸ್ಯೆ ಇದೆ. ರಸ್ತೆಗಳೂ ಕಿರಿದಾಗಿವೆ. ತಪ್ಪು ಮಾಹಿತಿಯಿಂದ ಕೇಂದ್ರ ವಲಯಕ್ಕೆ ಹೆಚ್ಚಿನ ಜನರು ಬಂದಾಗ ಸಮಸ್ಯೆ ಆಗಲಿದೆ. ತಪ್ಪು ಮಾಹಿತಿ ನೀಡುವವರ ವಿರುದ್ಧ ಕ್ರಮ ಆಗಲಿದೆ. ಹೆಚ್ಚಿನ ದಟ್ಟಣೆ ಇರುವ ಕಡೆ ಎಚ್ಚರಿಕೆ ವಹಿಸುವಂತೆ ಜನರಲ್ಲೂ ತಿಳಿವಳಿಕೆ ಮೂಡಿಸಲಾಗುವುದು. ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಶಾಂತಿ ಕಾಪಾಡಲಾಗುವುದು. ಸಂದರ್ಭಕ್ಕೆ ಅನುಗುಣವಾಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ.

ಕಾರ್ಯ ನಿರ್ವಹಣೆ ಅನುಭವ
ಸೀಮಂತ್‌ ಕುಮಾರ್ ಸಿಂಗ್‌ ಅವರು ಜಾರ್ಖಂಡ್‌ನ ರಾಂಚಿಯವರು. 1996ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ರಾಜ್ಯದ ಭಟ್ಕಳ ಉಪ ವಿಭಾಗದಲ್ಲಿ ಎಎಸ್‌ಪಿ ಹಾಗೂ ಕೋಲಾರ, ಬಳ್ಳಾರಿ, ಕೊಡಗು, ದಕ್ಷಿಣ ಕನ್ನಡ, ವಿಜಯಪುರ, ಮಂಡ್ಯ ಎಸ್‌ಪಿಯಾಗಿ ಕೆಲಸ ಮಾಡಿದ್ದರು. ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ನಗರ ಪೊಲೀಸ್‌ ಕಮಿಷನರ್‌, ನಕ್ಸಲ್‌ ನಿಗ್ರಹ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಕೇಂದ್ರ ವಲಯದ ಐಜಿಪಿ, ಎಸಿಬಿಯ ಎಡಿಜಿಪಿ, ರಾಜ್ಯ ಮೀಸಲು ಪಡೆ ಹಾಗೂ ಬಿಎಂಟಿಎಫ್‌ನ ಎಡಿಜಿಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT