ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಯಕ್ಷಗಾನ–ನಾಟಕ ಬೆಸುಗೆ ಕೆಲಸಕ್ಕೆ ಆದ್ಯತೆ: ಬಿ.ಆರ್. ವೆಂಕಟರಮಣ

ಕಾರ್ಕಳದ ಯಕ್ಷ ರಂಗಾಯಣದ ನೂತನ ನಿರ್ದೇಶಕ
Published : 14 ಆಗಸ್ಟ್ 2024, 6:44 IST
Last Updated : 14 ಆಗಸ್ಟ್ 2024, 6:44 IST
ಫಾಲೋ ಮಾಡಿ
Comments

ಉಡುಪಿ: ಕುವೆಂಪು ಅವರ ‘ರಕ್ತಾಕ್ಷಿ’, ಗಿರೀಶ್‌ ಕಾರ್ನಾಡರ ‘ರಾಕ್ಷಸ ತಂಗಡಿ’, ‘ಅಗ್ನಿ ಮತ್ತು ಮಳೆ’, ಪುತಿನ ಅವರ ‘ಹಂಸ ದಮಯಂತಿ’ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸುವ ಮೂಲಕ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಬಿ.ಆರ್. ವೆಂಕಟರಮಣ ಐತಾಳರು.

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಗ್ರಾಮದ ಕ್ರೋಡಬೈಲೂರಿನ ಐತಾಳರು ಕಾರ್ಕಳದ ಯಕ್ಷ ರಂಗಾಯಣದ ನೂತನ ನಿರ್ದೇಶಕರಾಗಿ ನೇಮ ಕಗೊಂಡಿದ್ದಾರೆ. ಉಡುಪಿಯ ಯಕ್ಷ ಗಾನ ಕೇಂದ್ರ, ಸಂಸ್ಕೃತ ಕಾಲೇಜು, ಹೆಗ್ಗೋಡಿನ ನೀನಾಸಂ, ಕೇರಳದ ತ್ರಿಶ್ಶೂರಿನ ಸ್ಕೂಲ್‌ ಆಫ್‌ ಡ್ರಾಮಾ ಆ್ಯಂಡ್ ಫೈನ್‌ ಆರ್ಟ್ಸ್‌ ಸಂಸ್ಥೆಗಳಲ್ಲಿ ರಂಗಶಿಕ್ಷಣ ಪೂರೈ ಸಿರುವ ಅವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಬಿ.ವಿ.ಕಾರಂತ ಫೆಲೋಶಿಪ್‌ಗೂ ಭಾಜನರಾಗಿದ್ದಾರೆ.

ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ರಂಗಶಿಕ್ಷಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿರುವ ಅವರು ಸದ್ಯ ಶಿವಮೊಗ್ಗ ಜಿಲ್ಲೆಯ ಭೀಮನಕೋಣೆಯಲ್ಲಿ ನೆಲೆಸಿದ್ದಾರೆ. ಹೊಸ ಜವಾಬ್ದಾರಿ ಹೆಗಲೇರಿರುವ ಈ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ಯ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.

ಪ್ರ

ಯಕ್ಷ ರಂಗಾಯಣ ಇತರ ರಂಗಾಯಣಗಳಿಗಿಂತ ಹೇಗೆ ಭಿನ್ನ?

ಅರ್ಥಪೂರ್ಣವಾದ ರಂಗ ಭೂಮಿಯನ್ನು ಗಂಭೀರವಾಗಿ ತೆಗೆದುಕೊಂಡು, ಅದನ್ನು ಜನರ ಮಧ್ಯೆ ಕೊಂಡೊಯ್ಯುವುದು ರಂಗಾಯಣದ ಮೂಲ ಉದ್ದೇಶ. ಯಕ್ಷ ರಂಗಾಯಣ ಎಂಬ ಹೆಸರು ಕೇಳಿ ಹಲವರಲ್ಲಿ ಗೊಂದಲ ಉಂಟಾಗುತ್ತಿದೆ. ಇಲ್ಲಿ ಯಕ್ಷಗಾನದ ಸ್ವರೂಪವನ್ನು ರಂಗಭೂಮಿಗೆ ಅಳವಡಿಸಿಕೊಳ್ಳುವುದಿಲ್ಲ. ಕರಾವಳಿಯ ಉದಾತ್ತ ಕಲೆಯ ಸತ್ವವನ್ನು ಇಟ್ಟುಕೊಂಡು ರಂಗಭೂಮಿಯನ್ನು ಬೆಳೆಸುವ ಕಾರ್ಯ ನಡೆಯಲಿದೆ. ಯಕ್ಷಗಾನ ಮತ್ತು ನಾಟಕವನ್ನು ಬೆರಕೆ ಮಾಡುವುದಲ್ಲ, ಎರಡನ್ನು ಬೆಸುಗೆ ಮಾಡುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು. ಹಾಗೆ ಮಾಡಿದರೆ ರಂಗಭೂಮಿಗೆ ಹೊಸ ಕೊಡುಗೆ ಕೊಟ್ಟಂತೆ ಆಗುತ್ತದೆ.

ಪ್ರ

ನಿಮ್ಮ ಮುಂದಿರುವ ಸವಾಲುಗಳು?

ಯಕ್ಷ ರಂಗಾಯಣವು ಎರಡು ವರ್ಷಗಳ ಹಿಂದೆಯಷ್ಟೇ ಆರಂಭಗೊಂಡಿದೆ. ಆದ್ದರಿಂದ ಹಲವು ಸವಾಲುಗಳು ನಮ್ಮ ಮುಂದಿವೆ. ಆರನೇ ರಂಗಾಯಣವಾಗಿರುವ ಇದು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಂಡಿಲ್ಲ. ಪ್ರಾಥಮಿಕ ಹಂತದ ಕೆಲಸಗಳಷ್ಟೇ ನಡೆದಿವೆ. ರಂಗಾಯಣದ ಆಶಯಗಳಿಗನುಗುಣವಾಗಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರಲಾಗುವುದು.

ಪ್ರ

ಮುಂದಿನ ಯೋಜನೆ?

ತುಳು ರಂಗಭೂಮಿ ಸೇರಿದಂತೆ ನಿರಂತರವಾಗಿ ರಂಗ ಚಟುವಟಿಕೆಗಳನ್ನು ನಡೆಸುವ ರಂಗ ತಂಡಗಳು, ರಂಗಕರ್ಮಿಗಳು ಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರೆಲ್ಲರಿಂದಲೂ ಸಲಹೆ, ಸಹಕಾರ ಪಡೆದು ಮುಂದಿನ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾರ್ಗಸೂಚಿಗಳಿಗನುಗುಣವಾಗಿ ಹೊಸ ತಂಡವನ್ನು ರಚಿಸಿ, ರಂಗಭೂಮಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸಲಾಗುವುದು.

ಪ್ರ

ದೇಸಿ ಸೊಗಡಿಗೆ ಮಹತ್ವ ನೀಡುತ್ತೀರಾ?

ನಟರನ್ನು ಆಯ್ಕೆ ಮಾಡಿದ ಬಳಿಕ ಅವರಿಗೆ ತರಬೇತಿ ನೀಡುವಲ್ಲಿ ಆಯಾ ರಂಗಾಯಣದವರು ಬೇರೆ ಬೇರೆ ರೀತಿ ಯೋಜನೆ ರೂಪಿಸುತ್ತಾರೆ. ಇಲ್ಲಿ ದೇಶಿ ರಂಗಭೂಮಿಯ ಸಾಧ್ಯತೆಗಳನ್ನು ಮನಗಂಡು ಆಧುನಿಕ ರಂಗಭೂಮಿಯನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಬೇಕೆನ್ನುವುದು ನನ್ನ ಆಶಯ. ನಾವು ತರಬೇತಿ ನೀಡಿದವರು ಬೇರೆ ಕಡೆಗೆ ಹೋಗಿ ರಂಗ ಪ್ರದರ್ಶನ ನೀಡಬೇಕು. ಅವರನ್ನು ರಂಗಭೂಮಿಯಲ್ಲಿ ಸಮರ್ಥರನ್ನಾಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT