ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ಪ್ರತಿಭಟನೆಗೆ ಮಣಿದು ಸರ್ಕಾರವು 1,777 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಟ್ಟಿದೆ. ಇದು ರೈತರ ಹೋರಾಟಕ್ಕೆ ಸಂದ ಜಯ ಎಂದು ಹಲವರು ವ್ಯಾಖ್ಯಾನಿಸುತ್ತಿದ್ದರೆ, ಕೈಗಾರಿಕಾಭಿವೃದ್ಧಿಗೆ ಆದ ಹಿನ್ನಡೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಈ ಕುರಿತು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ
ಭೂಸ್ವಾಧೀನವನ್ನು ಕೈಬಿಡಬೇಕು ಎಂದು ರೈತರು ನಡೆಸಿದ ಹೋರಾಟಕ್ಕೆ ಸರ್ಕಾರ ಮಣಿದದ್ದು ಹೇಗೆ?
ಈ ಹೋರಾಟ ಯಶಸ್ವಿಯಾಗಲು ರೈತರ ಇಚ್ಛಾಶಕ್ತಿ ಮತ್ತು ಒಗ್ಗಟ್ಟು ಮಾತ್ರವೇ ಕಾರಣ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಂದು ದೇವನಹಳ್ಳಿಯ ಸಾವಿರಾರು ರೈತರು ಈ ಹಿಂದೆಯೇ ಜಮೀನು ನೀಡಿದ್ದರು. ಪರಿಹಾರವಾಗಿ ದೊರೆತ ಹಣವನ್ನು ಉಳಿಸಿಕೊಳ್ಳಲು ಬಹುತೇಕ ರೈತರಿಂದ ಆಗಿಲ್ಲ. ಅಂತಹವರು ತಮ್ಮದೇ ಜಾಗದಲ್ಲಿ ತಲೆಯೆತ್ತಿದ ಕಾರ್ಖಾನೆಗಳಲ್ಲಿ ಕಾವಲುಗಾರರಾಗಿಯೋ, ಶೌಚಾಲಯ ತೊಳೆಯುವವರಾಗಿಯೋ ಕೆಲಸ ಮಾಡುತ್ತಿದ್ದಾರೆ. ಜಮೀನು ಇದ್ದಾಗ ಹಲವರಿಗೆ ಕೂಲಿ ನೀಡುತ್ತಿದ್ದವರು, ಈಗ ತಾವು ಕೂಲಿಗೆ ಹೋಗುತ್ತಿದ್ದಾರೆ. ಚನ್ನರಾಯಪಟ್ಟಣ ಹೋರಾಟದಲ್ಲಿ ಭಾಗಿಯಾದ ರೈತರು ಇವೆಲ್ಲದಕ್ಕೂ ಸಾಕ್ಷಿಯಾಗಿದ್ದಾರೆ. ತಾವು ಭೂಮಿಯ ಕೈಬಿಡದಿದ್ದರೆ, ಅದೂ ತಮ್ಮ ಕೈಬಿಡುವುದಿಲ್ಲ ಎಂಬುದು ಅವರಿಗೆ ಅರ್ಥವಾಗಿತ್ತು. ಹೀಗಾಗಿ ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದೆ, ಪಟ್ಟು ಬಿಗಿಗೊಳಿಸಿದರು. ‘ನಾವು ಅಧಿಕಾರಕ್ಕೆ ಬಂದರೆ, ಭೂಸ್ವಾಧೀನ ಕೈಬಿಡುತ್ತೇವೆ’ ಎಂದು ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಹೇಳಿದ್ದರು. ಸಿದ್ದರಾಮಯ್ಯ ಅವರು ತಮ್ಮ ಮಾತಿಗೆ ಬದ್ಧರಾಗಿ ನಡೆಯುವಂತೆ ರೈತಮಂದಿ ಮಾಡಿದರು.
ರೈತ–ಕಾರ್ಮಿಕ–ದಲಿತ ಹೋರಾಟಗಾರರು ಒಟ್ಟಿಗೆ ಒಂದು ಹೋರಾಟ ನಡೆಸಿದ ಉದಾಹರಣೆಗಳು ಈಚಿನ ದಶಕಗಳಲ್ಲಿ ಇಲ್ಲವೇ ಇಲ್ಲ. ಈ ಹೋರಾಟದಲ್ಲಿ ಮೂರೂ ಧಾರೆಯ ಚಳವಳಿಗಾರರು ಒಟ್ಟಾಗಿದ್ದು ಹೇಗೆ ಮತ್ತು ಒಗ್ಗಟ್ಟು ಕಾಯ್ದುಕೊಂಡಿದ್ದು ಹೇಗೆ?
ಉದಾರೀಕರಣದ ನಂತರ ರೈತ ಚಳವಳಿ, ಕಾರ್ಮಿಕ ಚಳವಳಿಗಳು ಶಕ್ತಿ ಕಳೆದುಕೊಂಡಿದ್ದವು. ಕೋವಿಡ್ ನಂತರದಲ್ಲಿ ನವಬಂಡವಾಳಶಾಹಿ–ಕಾರ್ಪೊರೇಟ್ ಪರವಾದ ನೀತಿಗಳನ್ನು ಸರ್ಕಾರಗಳು ರೂಪಿಸುತ್ತಾ ಹೋದವು. ರೈತರು ಭೂಮಿ ಕಳೆದುಕೊಂಡರೆ, ಕಾರ್ಮಿಕರ ಹಕ್ಕುಗಳು ದುರ್ಬಲಗೊಂಡವು, ದಲಿತರ ಹಕ್ಕುಗಳಿಗೆ ಮನ್ನಣೆಯೇ ಇಲ್ಲದಂತಾಯಿತು. ನಮ್ಮೆಲ್ಲರ ಎದುರಿನ ದೊಡ್ಡ ಅಪಾಯ ಕಾರ್ಪೊರೇಟ್ ಅಥವಾ ನವಬಂಡವಾಳಶಾಹಿ ಎಂಬುದು ಅರ್ಥವಾಯಿತು. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್–ಹರಿಯಾಣದ ರೈತರು ನಡೆಸಿದ ಹೋರಾಟಕ್ಕೆ ಕಾರ್ಮಿಕ ಹಾಗೂ ದಲಿತ ಸಂಘಟನೆಗಳು ಜತೆಯಾಗಿದ್ದವು. ಆ ಹೋರಾಟ ಯಶಸ್ವಿಯಾಗಿತ್ತು. ಆ ಮಾದರಿಯನ್ನೇ ಇನ್ನಷ್ಟು ಸುಧಾರಿಸಿ, ‘ಸಂಯುಕ್ತ ಹೋರಾಟ ಕರ್ನಾಟಕ’ವನ್ನು ಸ್ಥಾಪಿಸಿದೆವು. ಆರೋಗ್ಯಕರ ಭಿನ್ನಾಭಿಪ್ರಾಯಗಳನ್ನು ಇರಿಸಿಕೊಂಡೇ, ರೈತರ ಪರವಾಗಿ ನಿಂತೆವು. ಹೋರಾಟದ ಹೊಸ ಮಾದರಿ ಕಂಡುಕೊಂಡಿದ್ದೇವೆ. ಇದು ಹೀಗೇ ಮುಂದು ವರಿಯಲಿದೆ.
ಈ ಹೋರಾಟ ಒಟ್ಟು 1,198 ದಿನ ನಡೆದಿದೆ. ಆರಂಭದಲ್ಲಿ ಬಂದವರು, ಕಡೆಯ 38 ದಿನಗಳಲ್ಲಿ ಮತ್ತೆ ಭಾಗಿಯಾದಿರಿ. ಇನ್ನೂ ಮೊದಲೇ ಬಂದಿದ್ದರೆ, ಹೋರಾಟವೂ ಬೇಗ ಯಶಸ್ಸು ಕಾಣುತ್ತಿತ್ತೇ?
ನನಗೆ ಹಾಗೆ ಅನಿಸುವುದಿಲ್ಲ. ಚನ್ನರಾಯಪಟ್ಟಣದ ರೈತರು ಪ್ರತಿಭಟನಾ ಸ್ವರೂಪದ ಹೋರಾಟದಲ್ಲಿ ತೊಡಗಿದ್ದರು. ಸಚಿವರು, ಮುಖ್ಯಮಂತ್ರಿಗೆ ನಾವೆಲ್ಲ ಮನವಿ ಪತ್ರಗಳನ್ನು ಸಲ್ಲಿಸಿ ಭೂಸ್ವಾಧೀನ ಕೈಬಿಡಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದೆವು. ಈ ಹಂತದಲ್ಲೇ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿತು. ಆಗ ಅನಿವಾರ್ಯವಾಗಿ ಎಲ್ಲರೂ ಬೀದಿಗೆ ಇಳಿಯಬೇಕಾಯಿತು. ಅಂತಿಮ ಅಧಿಸೂಚನೆ ಹೊರಡಿಸಿದ್ದು ರೈತರಲ್ಲಿ ಮತ್ತು ಹೋರಾಟಗಾರರಲ್ಲಿ ಆತಂಕ ಮೂಡಿಸಿತಲ್ಲದೇ, ಹೋರಾಟದ ಕಿಚ್ಚನ್ನೂ ಹೆಚ್ಚಿಸಿತು. ಅದರ ಬಿಸಿ ಸರ್ಕಾರಕ್ಕೂ ತಟ್ಟಿತು.
ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳು ಚನ್ನರಾಯಪಟ್ಟಣ ವ್ಯಾಪ್ತಿಯ ರೈತರ ಜತೆಗೆ ಜಿಪಿಎ ಮಾಡಿಕೊಂಡಿದ್ದು, ಈ ಹೋರಾಟಕ್ಕೆ ಅವರೇ ಕುಮ್ಮಕ್ಕು ನೀಡಿದ್ದರು ಎಂಬ ವಾದವಿದೆಯಲ್ಲಾ?
ಹೊರಗಿನವರ ಕುಮ್ಮಕ್ಕಿನಿಂದ 1,198 ದಿನ ಹೋರಾಟ ನಡೆಸಲು ಸಾಧ್ಯವಿದೆಯೇ? ಈ ಆರೋಪ ಸತ್ಯಕ್ಕೆ ದೂರವಾದುದು. ಅಧಿಸೂಚನೆಯಲ್ಲಿ ಗುರುತಿಸಲಾಗಿದ್ದ ಎರಡು ಹಳ್ಳಿಗಳಲ್ಲಿ 163 ದಲಿತ ಕುಟುಂಬಗಳು ಇದ್ದು, ಅವರದ್ದು ದರಖಾಸ್ತು ಭೂಮಿ. ಸರ್ಕಾರ ಅವರಿಗೆ ಭೂಮಿ ನೀಡಿದೆಯೇ ಹೊರತು, ಪೋಡಿ ಮಾಡಿಕೊಟ್ಟಿಲ್ಲ. ಪೋಡಿ–ಸರ್ವೆ ಸ್ಕೆಚ್ ಇಲ್ಲದೇ ಇದ್ದರೆ, ಪರಿಹಾರ ದೊರೆಯುವುದಿಲ್ಲ. ಕುಟುಂಬಗಳ ಅಸಹಾಯಕ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಕೆಲ ರಾಜಕಾರಣಿಗಳು ಜಿಪಿಎ ಮಾಡಿಸಿಕೊಂಡಿದ್ದು ಹೌದು. ಅಂತಹವರೇ ಹೋರಾಟದ ಕಡೆಯ ದಿನಗಳಲ್ಲಿ 449 ಎಕರೆ ನೀಡಲು ಸಿದ್ದರಿದ್ದೇವೆ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು. ಈಗ ಸರ್ಕಾರ ಭೂಸ್ವಾಧೀನವನ್ನು ಕೈಬಿಟ್ಟ ನಂತರ, ಆ ರೈತರೂ ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಸರ್ಕಾರಕ್ಕೆ ಭೂಮಿ ನೀಡುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಇನ್ನು ಯಾರೊ ಒಬ್ಬಿಬ್ಬ ರೈತರು ಮಾತ್ರ ಜಮೀನು ನೀಡಿದರೆ, ಸರ್ಕಾರಕ್ಕೆ ಆಗುವ ಉಪಯೋಗವಾದರೂ ಏನು?
ಭೂಸ್ವಾಧೀನಕ್ಕೆ ಗುರುತಿಸಲಾಗಿದ್ದ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳನ್ನು ನಿರ್ಬಂಧಿಸುವ ವಿಚಾರವೂ ಪ್ರಸ್ತಾಪವಾಗಿತ್ತು. ಸರ್ಕಾರ ಅಂತಹ ಕ್ರಮ ತೆಗೆದುಕೊಂಡರೆ, ರೈತರ ಪ್ರತಿಕ್ರಿಯೆ ಹೇಗಿರಲಿದೆ?
ಭೂಮಿಯನ್ನು ಉಳಿಸಿಕೊಳ್ಳಬೇಕು ಎಂಬುದೇ ಈ ಹೋರಾಟದ ಮೂಲ ಮತ್ತು ಏಕೈಕ ಉದ್ದೇಶವಾಗಿತ್ತು. ಪ್ರಾಥಮಿಕ ಅಧಿಸೂಚನೆಯಲ್ಲಿ ಇದ್ದವರ ಪೈಕಿ, 8 ಗುಂಟೆ, 12 ಗುಂಟೆ, 15 ಗುಂಟೆಯಷ್ಟು ಕಡಿಮೆ ಜಮೀನು ಇದ್ದ ರೈತರೂ ಇದ್ದರು. ಅವರು ಕೃಷಿಯನ್ನು ಮುಂದುವರಿಸಿ, ಲಾಭ ಪಡೆದುಕೊಳ್ಳುವಂತೆ ಮಾಡುವ ಬಗೆ ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆ ಭಾಗದ ಭೂಮಿ ಫಲವತ್ತಾಗಿದೆ, ನೀರೂ ಉತ್ತಮವಾಗಿದೆ. ಮಾರುಕಟ್ಟೆ ಮತ್ತು ರಫ್ತು ಅವಕಾಶಗಳು ವಿಪುಲವಾಗಿವೆ. ಸಣ್ಣ ರೈತರು ಮತ್ತು ದೊಡ್ಡ ರೈತರು ಸಹಕಾರ ತತ್ವದಲ್ಲಿ ಬೇಸಾಯ ಮಾಡಿ, ಹೊಸ ಮಾದರಿಯನ್ನು ರೂಪಿಸುವುದು ಸೂಕ್ತ ಎಂಬ ಸಲಹೆ ವ್ಯಕ್ತವಾಗಿದೆ. ಈ ಬಗೆಗಿನ ಚರ್ಚೆ ಇನ್ನೂ ಆರಂಭಿಕ ಹಂತದಲ್ಲಿದೆ. ಹೀಗಾಗಿ ಸರ್ಕಾರ ನಿರ್ಬಂಧ ಹೇರಿದರೂ, ರೈತ ಮಂದಿ ಆ ಬಗ್ಗೆ ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ.
ಒಂದು ನಾಡಿನ ಅಭಿವೃದ್ಧಿಗೆ ಕೈಗಾರಿಕೆಗಳೂ ಮುಖ್ಯವಾಗುತ್ತವೆ. ಭೂಸ್ವಾಧೀನ ನಡೆಸದೇ ಇದ್ದರೆ ಅಥವಾ ಕೈಬಿಟ್ಟರೆ ಕೈಗಾರಿಕೆಗಳು ರಾಜ್ಯದಿಂದ ದೂರ ಹೋಗುವುದಿಲ್ಲವೇ?
ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಬದಲಿಗೆ ನಾವು ಕೈಗಾರಿಕೆಗಳ ಪರವಾಗಿ ಇದ್ದೇವೆ. ವೈಮಾಂತರಿಕ್ಷ ಪಾರ್ಕ್‌ಗೆಂದು ಎರಡನೇ ಹಂತದಲ್ಲಿ ಸ್ವಾಧೀನಕ್ಕೆ ಪಡೆದುಕೊಂಡ ನೂರಾರು ಎಕರೆ ಭೂಮಿ ಇನ್ನೂ ಹಂಚಿಕೆಯಾಗಿಲ್ಲ. ಕೈಗಾರಿಕೆಗಳಿಗೆಂದು ಪಡೆದುಕೊಂಡ ಭೂಮಿಯನ್ನು ಸರ್ಕಾರವೇ ಬಿಲ್ಡರ್‌ಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೀಡಿದೆ. ಅವನ್ನು ರಕ್ಷಣಾ ಮತ್ತು ವೈಮಾಂತರಿಕ್ಷ ಉದ್ಯಮಗಳಿಗೇ ನೀಡಬಹುದಿತ್ತಲ್ಲಾ? ಈಗಾಗಲೇ ಸರ್ಕಾರದ ಸ್ವಾಧೀನದಲ್ಲಿರುವ ನೂರಾರು ಎಕರೆಯಷ್ಟು ಭೂಮಿ ಇನ್ನೂ ಖಾಲಿ ಇದೆ. ಅದನ್ನೇ ಉದ್ಯಮಗಳಿಗೆ ನೀಡಲಿ. ಬೆಂಗಳೂರಿನಾಚೆಗೆ, ಬೇರೆ ಜಿಲ್ಲೆಗಳಲ್ಲಿ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸಬೇಕು. ತಮಿಳುನಾಡು ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸ್ವರೂಪದ ಕೈಗಾರಿಕೆಗೆ ಒತ್ತು ನೀಡಿದೆ. ನಮಗೆ ಅದು ಮಾದರಿಯಾಗಬಲ್ಲದು. ಸರ್ಕಾರವು ಕೃಷಿ ಮತ್ತು ಕೈಗಾರಿಕೆ ಮಧ್ಯೆ ಸಮತೋಲನ ಸಾಧಿಸುವ ಸಮಗ್ರ ಕೃಷಿ ನೀತಿ, ಸಮಗ್ರ ಕೈಗಾರಿಕಾ ನೀತಿ ಮತ್ತು ಭೂಬಳಕೆ ನೀತಿಯನ್ನು ರೂಪಿಸಬೇಕು ಎಂಬುದು ನಮ್ಮ ಒತ್ತಾಯ.
ಈ ಹೋರಾಟದಲ್ಲಿ ಸರ್ಕಾರವು ಭೂಸ್ವಾಧೀನವನ್ನು ಕೈಬಿಟ್ಟ ನಂತರ ಬಳ್ಳಾರಿಯ ಕುಡಿತಿನಿ ಮತ್ತು ಚಿಕ್ಕಬಳ್ಳಾಪುರದ ಜಂಗಮಕೋಟೆಯಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಇದು ಹೀಗೆಯೇ ಹಬ್ಬುತ್ತದೆಯೇ?
ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಯಶ ದೊರೆತಿರುವುದು ಇತರ ರೈತರಲ್ಲೂ ಉತ್ಸಾಹ ಹೆಚ್ಚಿಸಿದೆ. ಕುಡುತಿನಿಯದ್ದು ಬೇರೆ ರೀತಿಯದ್ದೇ ಪ್ರಕರಣ. ಈಗಾಗಲೇ ಸ್ವಾಧೀನಕ್ಕೆ ತೆಗೆದುಕೊಂಡಿರುವ ಭೂಮಿಯನ್ನು ಬಳಸಿಕೊಳ್ಳಿ ಮತ್ತು ಪರಿಹಾರ ಹೆಚ್ಚಿಸಿ ಎಂಬುದು ಅಲ್ಲಿನ ರೈತರ ಒತ್ತಾಯ. ಜಂಗಮಕೋಟೆಯಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕೈಬಿಡಿ ಎಂದು ಒತ್ತಾಯಿಸುತ್ತಿದ್ದಾರೆ. ಭೂಬಳಕೆ ನೀತಿ ಮತ್ತು ಸಮಗ್ರ ಕೃಷಿ–ಕೈಗಾರಿಕಾ ನೀತಿ ರೂಪಿಸುವುದೇ ಇದಕ್ಕೆ ಪರಿಹಾರ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ಭಾಗವಾಗಿ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರವು ಎಪಿಎಂಸಿ, ಭೂಸುಧಾರಣೆ ಮತ್ತು ಕಾರ್ಮಿಕರ ಕಾಯ್ದೆಗಳಿಗೆ ತಿದ್ದುಪಡಿ ತಂದಿತ್ತು. ಇವುಗಳನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಈವರೆಗೂ ಆ ಕೆಲಸ ಆಗಿಲ್ಲ. ಇದರ ವಿರುದ್ಧದ ಹೋರಾಟ ಹೇಗಿರಲಿದೆ?
ನಾವು ಅಧಿಕಾರಕ್ಕೆ ಬಂದರೆ ಈ ತಿದ್ದುಪಡಿಗಳನ್ನು ವಾಪಸ್ ಪಡೆಯುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಧರಣಿ ನಡೆಸುತ್ತಿದ್ದ ನಮ್ಮೊಂದಿಗೆ ಬಂದು ಕುಳಿತಿದ್ದರು. ಅವರು ನೀಡಿದ್ದ ಭರವಸೆಯ ಮೇಲೆಯೇ ಹಲವು ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷವಾದರೂ ಈ ತಿದ್ದುಪಡಿಗಳು ರದ್ದಾಗಿಲ್ಲ. ಎಪಿಎಂಸಿ ತಿದ್ದುಪಡಿ ರದ್ದತಿ ಮಸೂದೆ ವಿಧಾನ ಪರಿಷತ್ತಿನಲ್ಲಿ ಬಿದ್ದುಹೋಯಿತು. ಭೂಸುಧಾರಣೆ ಮತ್ತು ಕಾರ್ಮಿಕರ ಕಾಯ್ದೆಗಳ ತಿದ್ದುಪಡಿ ರದ್ದತಿಗೆ ಸರ್ಕಾರ ಕ್ರಮವನ್ನೇ ತೆಗೆದುಕೊಂಡಿಲ್ಲ. ಇದರ ವಿರುದ್ಧವೂ ಹೋರಾಟ ನಡೆಸಬೇಕು ಎಂಬ ಒತ್ತಾಯ ಸಂಯುಕ್ತ ಹೋರಾಟ ಕರ್ನಾಟಕದ ವೇದಿಕೆಯಲ್ಲಿ ಚರ್ಚೆಯಾಗಿದೆ. ಕೆಲವೇ ದಿನಗಳಲ್ಲಿ ಈ ಹೋರಾಟವೂ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.