ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive – ಡ್ರಗ್ ಮಾಫಿಯಾ: ಸೆಲೆಬ್ರೆಟಿಗಳಷ್ಟೇ ಅಲ್ಲ, ಸಕಲರೂ ಇದ್ದಾರೆ

ಡ್ರಗ್ಸ್ ಜಾಲದ ಒಳ–ಹೊರಗು ಅಧ್ಯಯನ ಮಾಡಿದ್ದ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್
Last Updated 15 ಸೆಪ್ಟೆಂಬರ್ 2020, 11:33 IST
ಅಕ್ಷರ ಗಾತ್ರ

ಮಂಗಳೂರು: ಈಗ ಎಲ್ಲೆಡೆ ಮಾದಕ ವಸ್ತುಗಳದ್ದೇ ಸದ್ದು. ಸಮಾಜದ ಸೆಲೆಬ್ರೆಟಿಗಳೇ ಈ ಜಾಲದಲ್ಲಿ ಸಿಲುಕಿದ್ದರಿಂದ ಸುದ್ದಿಗಳು ಮತ್ತಷ್ಟು ರೋಚಕವಾಗಿವೆ. ಈ ಜಾಲದ ಒಳ–ಹೊರಗು ಹೇಗೆ? ಇದರ ಆಳ–ಅಗಲ ಎಷ್ಟು? ಈ ವ್ಯವಹಾರ ಪೊಲೀಸರಿಗೆ ತಿಳಿದಿಲ್ಲವೇ? ಇದು ರಾಜಕೀಯ ನಾಯಕರ ಕೃಪಾಪೋಷಿತ ದಂಧೆ ಅಲ್ಲವೇ? ಇತ್ಯಾದಿ ಸಂಗತಿಗಳು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿವೆ.

ರಾಜ್ಯದಲ್ಲಿ ಎಂಟು ವರ್ಷಗಳ ಹಿಂದೆ ಇದೇ ರೀತಿಯ ಚರ್ಚೆ ಎದ್ದಿತ್ತು. ಮಂಗಳೂರಿನಲ್ಲಿ ಡ್ರಗ್ಸ್ ಜಾಲ 2012ರಲ್ಲಿ ಹೆಚ್ಚಾಗಿತ್ತು. ವಿದ್ಯಾರ್ಥಿಗಳು ಮಾದಕ ವಸ್ತುಗಳ ಜಾಲಕ್ಕೆ ಸಿಲುಕಿ ನರಳಾಡುತ್ತಿರುವುದನ್ನು ಅವರ ಪೋಷಕರು, ಪ್ರಾಧ್ಯಾಪಕರು ಗುರುತು ಮಾಡಿ ತೋರಿಸಿದ್ದರು.

ಈ ಜಾಲವನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕೆಂಬ ಒತ್ತಡ ಸೃಷ್ಟಿಯಾಯಿತು. ಮಂಗಳೂರಿನ ಆಗಿನ ಶಾಸಕ ಎನ್‌. ಯೋಗೀಶ್ ಭಟ್ ಸ್ವಯಂ ಆಗಿ ಈ ವಿಚಾರ ಕೈಗೆತ್ತಿಕೊಂಡರು. ಅವರು ಅವಾಗ ರಾಜ್ಯ ವಿಧಾನಸಭಾ ಉಪ ಸಭಾಪತಿ. ಅವರ ಅಧ್ಯಕ್ಷತೆಯಲ್ಲೇ ಸಮಿತಿ ರಚನೆಗೊಂಡಿತು. ಎಂಟು ತಿಂಗಳು ಅಧ್ಯಯನ ನಡೆಸಿ ಸಮಿತಿ ಕೆಲವು ಶಿಫಾರಸುಗಳನ್ನು ನೀಡಿತ್ತು.

ಈಗ ರಾಜ್ಯದಲ್ಲಿ ಮತ್ತೆ ಭಾರೀ ಸದ್ದು ಮಾಡಿರುವ ಡ್ರಗ್ಸ್‌ ಜಾಲವನ್ನು ಮಟ್ಟ ಹಾಕುವ ಕುರಿತಂತೆ ಗೃಹ ಬಸವರಾಜ್ ಬೊಮ್ಮಾಯಿ ಈಚೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಲ್ಲಿ ಯೋಗೀಶ್ ಭಟ್ ವರದಿಯ ಪ್ರಮುಖ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ. ಇದೇ 21ರಿಂದ ಪ್ರಾರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಹಾಲಿ ಇರುವ ಮಾದಕವಸ್ತು ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸುವುದಾಗಿಯೂ ಪ್ರಕಟಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಯೋಗೀಶ್‌ ಭಟ್‌ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಸಂಪೂರ್ಣ ವಿವರ ಇಲ್ಲಿದೆ.


* ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಏನಾದರೂ ಮಾಡಬೇಕು ಅಂತ ಆ ಸಮಯದಲ್ಲಿ ನಿಮಗೆ ಏಕೆ ಅನ್ನಿಸಿತು?

ಕೆಲವು ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಕಾಲೇಜಿಗೆ ಸತತ ಗೈರಾಗುವುದು; ಅವರ ನಡವಳಿಕೆಯಲ್ಲಿ ಬದಲಾವಣೆಯಾಗಿರುವುದನ್ನು ವಿವಿಧ ಕಾಲೇಜಿನ ಉಪನ್ಯಾಸಕರು ನನ್ನ ಗಮನಕ್ಕೆ ತಂದಿದ್ದರು. ಮಂಗಳೂರಿನ ಇಬ್ಬರು ಉಪನ್ಯಾಸಕರು ಲಿಖಿತ ದೂರು ಕೂಡ ಕೊಟ್ಟರು. ಇದನ್ನು ಹಲವರು ಪೋಷಕರೂ ದೃಢಪಡಿಸಿದರು. ಹಾಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ಸಭೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸಲು ಮುಂದಾದೆ.

* ಎಂಟು ತಿಂಗಳ ಅಧ್ಯಯನದ ಸ್ವರೂಪ ಹೇಗಿತ್ತು?

ಸರ್ಕಾರದ ವಿವಿಧ ಇಲಾಖೆಗಳು, ಪ್ರಮುಖವಾಗಿ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಮಾನಸಿಕ ತಜ್ಞರು, ಶಿಕ್ಷಣ ತಜ್ಞರು, ಪೋಷಕರು, ವಿದ್ಯಾರ್ಥಿ ಸಂಘಟನೆಗಳು, ಉಪನ್ಯಾಸಕರು ಹೀಗೆ ಸಮಾಜದ ವಿವಿಧ ವಲಯದ ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.

* ಅಧ್ಯಯನ ಸಮಯದಲ್ಲಿ ನೀವು ಕಂಡುಕೊಂಡ ಪ್ರಮುಖ ವಿಚಾರಗಳು ಯಾವವು?

– ಡ್ರಗ್ಸ್‌ ವಿತರಣಾ ಜಾಲ ತುಂಬಾ ವ್ಯಾಪಕವಾಗಿದೆ ಎಂಬ ಅಂಶ ಅರಿವಿಗೆ ಬಂತು. ಸೇವನೆ ಮಾಡುವವರು ಒಂದು ಭಾಗವಾದರೆ, ಅದರ ವಿತರಣೆ, ಸಾಗಾಟ, ಅದಕ್ಕೆ ಹಿಂದೆ ಹಣ ಹೂಡುವವರದ್ದು ಇನ್ನೊಂದು ಭಾಗ. ಆದರೆ, ಇವರೆಲ್ಲರೂ ಅದೃಶ್ಯರು. ಈ ಜಾಲವನ್ನು ತುಂಡರಿಸದೆ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎಂಬುದು ಮನದಟ್ಟಾಯಿತು. ಇದು ಮಂಗಳೂರಿನ ಸಮಸ್ಯೆ ಮಾತ್ರ ಅಲ್ಲ; ಅಂತರ ರಾಜ್ಯ, ಅಂತರ ರಾಷ್ಟ್ರೀಯ ಮಟ್ಟದ ಸಮಸ್ಯೆ. ಕೇಂದ್ರದಿಂದ ರಾಜ್ಯ ಮಟ್ಟದ ತನಕವೂ ತನಿಖೆಯಾಗಬೇಕು ಅನಿಸಿತು.

* ಡ್ರಗ್ಸ್‌ ದಂಧೆಗೆ ಪೂರಕವಾಗಿ ಯಾವೆಲ್ಲ ಮಾಫಿಯಗಳು ಕೆಲಸ ಮಾಡುತ್ತಿವೆ?

–ನಕಲಿ ನೋಟು ಜಾಲದಂತೆಯೇ ಮಾದಕ ವಸ್ತು ಜಾಲ ಕೂಡ ಭಯಾನಕವಾದುದು. ಇದರ ಹಿಂದೆ ಒಂದು ಮಾಫಿಯಾವೇ ಕಾರ್ಯಾಚರಿಸುತ್ತದೆ. ಡ್ರಗ್ಸ್‌ ದಂಧೆ ಜತೆ ಹವಾಲ ಸಂಪರ್ಕ ಇದೆ. ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಾಣಿಕೆಯೂ ಇದೆ. ಯುವಪೀಳಿಗೆಯನ್ನು ನಿಷ್ಕ್ರಿಯಗೊಳಿಸುವ ದೊಡ್ಡ ಸಂಚು ಇದರ ಹಿಂದಿದೆ. ಇದರಿಂದ ಬರುವ ಹಣ ಸಮಾಜಘಾತುಕ ಕೃತ್ಯಗಳಿಗೆ ಬಳಕೆಯಾಗುತ್ತದೆ. ಈ ಅಂಶಗಳೆಲ್ಲವೂ ಅವಾಗ ಬೆಳಕಿಗೆ ಬಂದವು.

* ಈ ದಂಧೆ ಮಟ್ಟ ಹಾಕುವಲ್ಲಿ ಪೊಲೀಸರ ಪಾತ್ರ ಎಷ್ಟು?

–ದೊಡ್ಡ ಪಾತ್ರ ಪೊಲೀಸರದ್ದೆ; ಅವರಿಗೆ ಗೊತ್ತಿಲ್ಲದೆ ಈ ದಂಧೆ ನಡೆಯಲು ಸಾಧ್ಯವಿಲ್ಲ. ಯಾವ ಠಾಣಾ ವ್ಯಾಪ್ತಿಯಲ್ಲಿ ಈ ದಂಧೆ ನಡೆಯುತ್ತದೆ, ಅದಕ್ಕೆ ಅಲ್ಲಿನ ಠಾಣೆಯನ್ನೇ ಹೊಣೆ ಮಾಡಬೇಕು. ಹಲವು ವರ್ಷಗಳಿಂದ ಮಲೆನಾಡು ಹಾಗೂ ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊರ ರಾಜ್ಯದವರು ಬಂದು ಇಲ್ಲಿನ ಜಾಗ ಗುತ್ತಿಗೆ ಪಡೆದು ಗಾಂಜಾ ಬೆಳೆಯುತ್ತಿದ್ದಾರೆ. ಈಗಲೂ ಹಳ್ಳಿಗಳಲ್ಲಿ ಗಾಂಜಾ ಬೆಳೆಯುವ, ಅದನ್ನು ಮಾರಾಟ ಮಾಡುವ ಜಾಲ ಸಕ್ರಿಯವಾಗಿವೆ. ಇದೆಲ್ಲ ಸ್ಥಳೀಯ ರಾಜಕೀಯ ಮುಖಂಡರ ಆಶೀರ್ವಾದ ಇಲ್ಲದೆ ನಡೆಯಲ್ಲ.

* ಡ್ರಗ್ಸ್ ದಂಧೆ ಮಟ್ಟ ಹಾಕುವ ವ್ಯವಸ್ಥೆಯ ಕಾರ್ಯದಕ್ಷತೆ ಹೇಗಿದೆ?

–ಮಾದಕ ದ್ರವ್ಯ ನಿಯಂತ್ರಣ ಘಟಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ಬಲಗೊಳಿಸಬೇಕು. ತಕ್ಕ ವಿದ್ಯಾರ್ಹತೆ ಇರುವವರನ್ನೇ ಇಲ್ಲಿಗೆ ನಿಯೋಜಿಸಬೇಕು. ಆರೋಪಿಗಳನ್ನು ಕಷ್ಟಪಟ್ಟು ಹಿಡಿದರೂ ಅವರಿಗೆ ಶಿಕ್ಷೆಯಾಗದಿರುವುದು ಗಮನಕ್ಕೆ ಬಂದಿದೆ.

* ವಿದ್ಯಾರ್ಥಿ ಸಂಘಟನೆಗಳು ಯಾವ ಪಾತ್ರ ವಹಿಸಬೇಕು?

–ವಿದ್ಯಾರ್ಥಿ ಸಂಘಟನೆಗಳು ಡ್ರಗ್ಸ್‌ ದಂಧೆ ನಿರ್ಮೂಲನೆಯನ್ನೇ ತಮ್ಮ ಹೋರಾಟದ ಮುಖ್ಯ ಗುರಿಯಾಗಿಸಿಕೊಳ್ಳಬೇಕು. ಅವರ ಸಹಪಾಠಿಗಳೇ ಈ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು, ಎನ್‌ಎಸ್ಎಸ್‌ ಹಾಗೂ ಎನ್‌ಸಿಸಿ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕ ಸೇವಾ ಸಮಿತಿಗಳು ಇದರ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.

* ಮಾದಕ ವಸ್ತು ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆ ಇದೆಯೇ?

–ಖಂಡಿತಾ ಇದೆ. ಮಾದಕ ವಸ್ತು ಮಾರಾಟ ಮಾಡುವವರು ಕನಿಷ್ಠ 250 ಗ್ರಾಂ ನಷ್ಟು ಹೊಂದಿದ್ದರೆ ಮಾತ್ರ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ, ಡ್ರಗ್ಸ್ ಮಾರಾಟಗಾರರು ಶಾಲಾ–ಕಾಲೇಜುಗಳಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡುವುದರಿಂದ ಅವರನ್ನು ಪತ್ತೆ ಹಚ್ಚಿದರೂ ಕಾನೂನು ಕ್ರಮಕೈಗೊಳ್ಳಲು ಈಗಿರುವ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಮಾನದಂಡವನ್ನು ಕನಿಷ್ಠ 10 ಗ್ರಾಂಗೆ ಬದಲಾಯಿಸಬೇಕು.

* ಸರ್ಕಾರ ಈಗ ಏನು ಮಾಡಬೇಕು?

–ರಾಜ್ಯ ಸರ್ಕಾರ ಈಗ ಯುದ್ಧ ಸಾರಿದೆ ನಿಜ. ಆದರೆ, ಇದು ನಿರಂತರವಾಗಿ ನಡೆಯಬೇಕು. ಯಾರೋ ಸೆಲೆಬ್ರೆಟಿಗಳನ್ನು ಹಿಡಿದುಬಿಟ್ಟರೆ ಮುಗಿಯಲಿಲ್ಲ; ಸಮಾಜದ ಸರ್ವ ಕ್ಷೇತ್ರದಲ್ಲೂ ಇದು ವ್ಯಾಪಿಸಿದ್ದು, ಬೇರು ಸಮೇತ ಕೀಳುವ ಪ್ರಯತ್ನಗಳಾಗಬೇಕು. ಹಾಗಾದಾಗ ಮಾತ್ರ ವಿಶ್ವಾಸ ಮೂಡುತ್ತದೆ. ಸೇವಿಸುವವರನ್ನೆಲ್ಲ ಅಪರಾಧಿಗಳು ಎಂದು ಪರಿಗಣಿಸಬಾರದು; ರೋಗಿಗಳೆಂದು ಪರಿಗಣಿಸಿ, ವ್ಯಸನ ಮುಕ್ತ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT