ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ 50 ವರ್ಷ ತುಂಬಿದೆ. ರಾಜ್ಯದಾದ್ಯಂತ ಸುವರ್ಣ ಮಹೋತ್ಸವ ಕಾರ್ಯಕ್ರಮಗಳನ್ನು ಮಂಡಳಿ ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಿಸುವಲ್ಲಿ ನಾಗರಿಕರು, ಸಂಸ್ಥೆ–ಕಂಪನಿಗಳ ಜವಾಬ್ದಾರಿಗಳ ಬಗ್ಗೆ ಮಾತನಾಡಿರುವ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ, ‘ನಾವು ಪೊಲೀಸರಲ್ಲ, ಕಾಯ್ದೆಯಡಿ ಆಗಿರುವ ಲೋಪಗಳನ್ನು ತಿಳಿಸಿ, ಸರಿಪಡಿಸಿಕೊಳ್ಳಲು ಅವಕಾಶ ನೀಡುವ ಮಾರ್ಗದರ್ಶಕರು’ ಎಂದು ‘ಪ್ರಜಾವಾಣಿ’ಗೆ ಹೇಳಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ
ಮಾಲಿನ್ಯ ನಿಯಂತ್ರಣ ಮಂಡಳಿಯು ಜನರ ದೂರಿಗೆ ಸ್ಪಂದಿಸುವುದಿಲ್ಲ ಎಂಬ ಆರೋಪ ಇದೆಯಲ್ಲಾ?
ಜನರಿಂದ ಬಂದ ಎಲ್ಲ ದೂರುಗಳನ್ನೂ ನಮ್ಮ ಅಧಿಕಾರಿಗಳು ಪರಿಶೀಲಿಸುತ್ತಾರೆ. ಎಲ್ಲದರಲ್ಲೂ ನಿಜ ಇರುವುದಿಲ್ಲ, ವೈಯಕ್ತಿಕ ಕಾರಣದ ದೂರುಗಳೂ ಇರುತ್ತವೆ. ಇವುಗಳೆಲ್ಲವನ್ನೂ ಪರಿಶೀಲಿಸಿ, ಮುಂದಿನ ಕ್ರಮಕ್ಕೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗುತ್ತದೆ. ನಿಮಗೆ ಗೊತ್ತಿರಲಿ, ನಾವು ಪೊಲೀಸರಲ್ಲ. ಜಲ, ವಾಯು ಮಾಲಿನ್ಯ ನಿಯಂತ್ರಣ ಕಾನೂನುಗಳ ಅಡಿ ಆಗಿರುವ ಲೋಪಗಳನ್ನು ತಿಳಿಸಿ, ಅವಕಾಶ ಕೊಟ್ಟು ಸರಿಪಡಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ನೀಡುವುದು ನಮ್ಮ ಜವಾಬ್ದಾರಿ. ಮಾಲಿನ್ಯವಾಗುತ್ತಿರುವ ಬಗ್ಗೆ ಆರಂಭದಲ್ಲಿ ಮಾರ್ಗದರ್ಶನ ನೀಡುತ್ತೇವೆ. ನಂತರ ಹಂತಹಂತವಾಗಿ ಪ್ರಕ್ರಿಯೆ ನಡೆಸಿ, ಕಾಯ್ದೆ ಉಲ್ಲಂಘಿಸಿದ ಸಂಸ್ಥೆಗಳಿಗೆ ಬೀಗಮುದ್ರೆಯನ್ನೂ ಹಾಕಲು ಆದೇಶ ಹೊರಡಿಸುತ್ತೇವೆ. ಮಂಡಳಿ ನೀಡಿದ ಆದೇಶವನ್ನು ಅನುಷ್ಠಾನಕ್ಕೆ ತರಬೇಕಾದ್ದು ಸ್ಥಳೀಯ ಆಡಳಿತವೇ ವಿನಾ ಮಂಡಳಿಯಲ್ಲ. ಪೊಲೀಸರಂತೆ ನಾವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನಮ್ಮ ಆದೇಶವನ್ನು ಅನುಷ್ಠಾನಕ್ಕೆ ತರುವುದು ಸ್ಥಳೀಯ ಆಡಳಿತ, ಪೊಲೀಸರು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ.
ಗಣಿಗಾರಿಕೆಯಿಂದ ಆಗುವ ಮಾಲಿನ್ಯ ಮಂಡಳಿಯ ವ್ಯಾಪ್ತಿಗೆ ಬರುವುದಿಲ್ಲವೇ?
ಎಲ್ಲ ರೀತಿಯ ಮಾಲಿನ್ಯಗಳು, ವಿವಿಧ ಕಾಯ್ದೆಗಳಡಿ ನಮ್ಮ ವ್ಯಾಪ್ತಿಗೇ ಬರುತ್ತವೆ. ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಪೂರ್ಣ ಪ್ರಮಾಣದ ಪ್ರಯತ್ನವಾಗಿಲ್ಲ. ಗಣಿ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ದೂಳಿನ ಕಣಗಳು ಹಲವು ಕಿಲೋಮೀಟರ್‌ವರೆಗೂ ಹರಡುತ್ತಿವೆ. ಪ್ರತಿ ದಿನ ಸಾವಿರಾರು ತೆರೆದ ವಾಹನಗಳು ಅದಿರು ತುಂಬಿಕೊಂಡು ಸಂಚರಿಸುತ್ತಿವೆ. ಈ ವಾಹನಗಳಿಂದ ಹೊರಬರುವ ದೂಳು ಎಲ್ಲೆಡೆ ಪಸರಿಸಿಕೊಂಡು, ಹಸಿರು ಹಾಗೂ ಜಲಚರದ ಮೇಲೆ ಪರಿಣಾಮ ಬೀರುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ಗಣಿ ಕಾಯ್ದೆಯಲ್ಲಿ ನಮಗೆ ಅವಕಾಶವಿದೆ. ಈ ದಿಸೆಯಲ್ಲಿ ಕೆಲವು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಕೈಗಾರಿಕೋದ್ಯ ಮಿಗಳು ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಹಲವು ತಪ್ಪುಗಳನ್ನು ಮಾಡುತ್ತಾರೆ. ಮಾಲಿನ್ಯ ನಿಯಂತ್ರಣಕ್ಕೆ ಜಲ ಸಂಸ್ಕರಣೆಯಂತಹ ಕೆಲವು ವ್ಯವಸ್ಥೆಗಳು ಅವರ ಬಳಿ ಇದ್ದರೂ ವೆಚ್ಚ ಕಡಿತಗೊಳಿಸಲು ರಾತ್ರಿಯಲ್ಲಿ ಅವನ್ನು ಸ್ಥಗಿತಗೊಳಿಸುತ್ತಾರೆ. ಇದರಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮವನ್ನು ತಿಳಿಸಿ ಹೇಳುತ್ತಿದ್ದರೂ ಅವರು ಸರಿಪಡಿಸಿಕೊಳ್ಳುವುದಿಲ್ಲ. ಅಂತಹವರಿಗೆ ಬೀಗಮುದ್ರೆಯಂತಹ ಶಿಕ್ಷೆ ನೀಡಲಾಗುತ್ತಿದೆ.
ಮಂಡಳಿ ಕಾರ್ಯವೈಖರಿಯ ಬಗ್ಗೆ ದೂರುಗಳಿವೆ. ಅದು ಬದಲಾಗುವುದಿಲ್ಲವೇ?
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಶೇ 60ರಷ್ಟು ಸಿಬ್ಬಂದಿ ಕೊರತೆ ಇದೆ. ಇದರಿಂದ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗಿತ್ತು. ಅವರ ಆದೇಶದಂತೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. 300ಕ್ಕೂ ಹೆಚ್ಚು ಹುದ್ದೆಗಳನ್ನು ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಿದ್ದೇವೆ. ಇದಾದರೆ, ಎಲ್ಲ ಪ್ರಾದೇಶಿಕ ಕಚೇರಿಗಳು, ವಲಯ ಕಚೇರಿಗಳಲ್ಲಿ ಸಿಬ್ಬಂದಿ ಇರುತ್ತಾರೆ. ಅದಾದ ನಂತರ ಮಂಡಳಿಯ ಚಟುವಟಿಕೆಗಳಿಗೆ ಇನ್ನಷ್ಟು ವೇಗ ಸಿಗಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲೇ 15 ವರ್ಷಗಳಿಗಿಂತ ಹಳೆಯ ವಾಹನಗಳಿದ್ದವು. ಸರ್ಕಾರದ ಅನುಮೋದನೆ ಮೇರೆಗೆ, ಮಂಡಳಿಯ ಹಣದಿಂದಲೇ ಹೊಸ ವಾಹನಗಳನ್ನು ಖರೀದಿಸಿದ್ದೇವೆ. ಮಂಡಳಿಯ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುವತ್ತ ಚಿತ್ತ ಹರಿಸಿದ್ದೇವೆ. ಹಿಂದಿನ ಸವಾಲುಗಳ ಪರಾಮರ್ಶೆಯೊಂದಿಗೆ ಭವಿಷ್ಯಕ್ಕೆ ನೀಡಬೇಕಾದ ಕೊಡುಗೆಗಳತ್ತ ನೋಟ ಹರಿಸಿದ್ದೇವೆ. ಎಲ್ಲಕ್ಕೂ ಮಿಗಿಲಾಗಿ, ಕೇಂದ್ರ ಜಲ ಹಾಗೂ ವಾಯು ಮಾಲಿನ್ಯ ಕಾಯ್ದೆಯಲ್ಲಿರುವ ಅವಕಾಶದಂತೆ ಮಂಡಳಿಯ ಜವಾಬ್ದಾರಿಯನ್ನು ನಿರ್ವಹಿಸಲು ಪಣತೊಟ್ಟಿದ್ದೇವೆ.
ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಮಂಡಳಿ ನೀಡುವ ವರದಿಗೂ ವಾಸ್ತವ ಸ್ಥಿತಿಗೂ ಬಹಳ ವ್ಯತ್ಯಾಸ ಇರುತ್ತದೆಯಲ್ಲಾ?
ನಮಗೂ ಹಲವು ಬಾರಿ ಇಂತಹ ದೂರುಗಳು ಬಂದಿವೆ. ಮಾಲಿನ್ಯ ಕಾಣುತ್ತಿದ್ದರೂ ‘ಇಲ್ಲ’ ಎಂಬ ವರದಿ ನೀಡಲಾಗಿದೆ ಎನ್ನುತ್ತಾರೆ. ಆದರೆ, ಎಲ್ಲ ಪ್ರಕರಣಗಳಲ್ಲೂ ತಾಂತ್ರಿಕವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಿಯೇ ವರದಿಯನ್ನು ಮಂಡಳಿಯ ಅಧಿಕಾರಿಗಳು ನೀಡುತ್ತಾರೆ. ತಪ್ಪಾಗಿರುವ ಬಗ್ಗೆ ಈಗಾಗಲೇ ಒಂದೆರಡು ಪ್ರಕರಣಗಳು ನನ್ನ ಗಮನಕ್ಕೆ ಬಂದವು. ಅದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಲೋಪಗಳು ಕಂಡುಬಂದರೆ ಜನರು ದೂರು ನೀಡಬಹುದು. ಇನ್ನು ಕೆಲವು ದಿನಗಳಲ್ಲಿ ಆನ್‌ಲೈನ್‌ನಲ್ಲಿ ದೂರು ಕೊಡುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ದೂರು ಸಲ್ಲಿಸಿದ ಮೇಲೆ ಅದರ ಸಂಪೂರ್ಣ ಪ್ರಕ್ರಿಯೆ, ಸ್ಥಿತಿ–ಗತಿಯನ್ನು ಆನ್‌ಲೈನ್‌ನಲ್ಲೇ ಅರಿತುಕೊಳ್ಳಬಹುದು. ನಿಗದಿತ ಸಮಯದಲ್ಲಿ ಪರಿಹಾರ ನೀಡದ ಅಧಿಕಾರಿಗಳ ಮೇಲೆ ಕ್ರಮವೂ ಆಗುತ್ತದೆ.
ನದಿ, ಕೆರೆಯಂತಹ ಜಲಮೂಲ ಮಾಲಿನ್ಯ ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?
ನದಿ ನೀರು ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದನೆ ನೀಡಿರುವ ಉಪಕರಣಗಳನ್ನೇ ನಾವು ಬಳಸುತ್ತಿದ್ದೇವೆ. ನದಿ ಅಥವಾ ಜಲಮೂಲ ಮಾಲಿನ್ಯಕ್ಕೆ ಕಲ್ಮಷ ನೀರು ಮಾತ್ರ ಕಾರಣವಲ್ಲ. ನೀರು ಹರಿಯುವ ಹಾದಿಯಲ್ಲಿ ಹಲವು ಸ್ಥಳಗಳಲ್ಲಿ ಮಾಪನ ಕೇಂದ್ರಗಳನ್ನು ಸ್ಥಾಪಿಸಿ, ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳನ್ನು ಪಟ್ಟಿ ಮಾಡಲಾಗುತ್ತಿದೆ. ಮಾಲಿನ್ಯಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗುತ್ತಿದೆ. ಕೃಷಿಯಲ್ಲಿ ಬಳಸಲಾಗುತ್ತಿರುವ ರಾಸಾಯನಿಕಗಳೂ ಜಲಮೂಲಗಳಿಗೆ ಹರಿದುಹೋಗಿ ಮಾಲಿನ್ಯ ಉಂಟಾಗುತ್ತಿದೆ.
ನಿರ್ದೇಶನ ಪಾಲಿಸದ ಅಧಿಕಾರಿಗಳ ಮೇಲೆ ಕ್ರಮವಾಗಿದೆಯೇ?
ನಮ್ಮ ಕಾಯ್ದೆಗಳು ಸ್ಪಷ್ಟವಾಗಿವೆ. ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರೆ ಯಾರೂ ನುಣುಚಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಸಂಬಂಧಿಸಿದ ಇಲಾಖೆ ಅಥವಾ ಅಧಿಕಾರಿಗಳು ಅರಿತುಕೊಳ್ಳಬೇಕು. ಮಂಡಳಿ ತೀಕ್ಷ್ಣವಾಗಿ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ವ್ಯತಿರಿಕ್ತವಾಗಿರದೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಬೆಂಗಳೂರು ಜಲಮಂಡಳಿ, ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ನಮ್ಮ ಆದೇಶಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ರಾಜ್ಯದಲ್ಲಿ ಬಹುತೇಕ ತ್ಯಾಜ್ಯ ಸಂಸ್ಕರಣಾ ಘಟಕಗಳು (ಎಸ್‌ಟಿಪಿ) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವರದಿ ನಮ್ಮಲ್ಲಿದೆ. ಸರಿಪಡಿಸಿಕೊಳ್ಳಲು ಅವರಿಗೆ ಅವಕಾಶ ನೀಡಲಾಗಿದೆ. ಬೇಜವಾಬ್ದಾರಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ನಮಗೆ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಆದೇಶ, ಸಹಕಾರವೂ ಇದೆ.
ಪಿಒಪಿ ಗಣೇಶನ ಮೂರ್ತಿ, ಪಟಾಕಿಗಳನ್ನು ಪ್ರತಿ ವರ್ಷ ಕೊನೆ ಕ್ಷಣದಲ್ಲಿ ನಿಷೇಧಿಸುವುದೇಕೆ?
ಮಾಲಿನ್ಯಕಾರಕ ವಸ್ತುಗಳನ್ನು ನಿಷೇಧಿಸುವುದು ಮಂಡಳಿಯ ಜವಾಬ್ದಾರಿ. ಆದರೆ, ಆ ವಸ್ತುಗಳ ತಯಾರಿಕೆಯನ್ನು ನಿಯಂತ್ರಿಸುವುದು ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಹೊಣೆ. ತಯಾರಿಕೆಗಳ ಬಗ್ಗೆ ಗಮನವಹಿಸಿ, ಅವುಗಳನ್ನು ತಡೆಗಟ್ಟಬೇಕು. ಕುಂಬಳಗೋಡು ಬಳಿ ಇತ್ತೀಚೆಗೆ ಪಿಒಪಿ ಮೂರ್ತಿ ಗಳನ್ನು ಬೃಹತ್ ಪ್ರಮಾಣದಲ್ಲಿ ಸ್ಥಳೀಯ ಆಡಳಿತ ಸಹಯೋಗದಲ್ಲಿ ಜಪ್ತಿ ಮಾಡಲಾಯಿತು. ನಾಗರಿಕರು ಗಮನಿಸಿ ಮಾಹಿತಿ ನೀಡಿದರೆ, ವರ್ಷಪೂರ್ತಿ ಸ್ಥಳೀಯ ಆಡಳಿತ ಕಾರ್ಯನಿರ್ವಹಿಸುತ್ತದೆ. ಈ ಮೂಲಕವಷ್ಟೇ ಪಿಒಪಿ ಮೂರ್ತಿ, ರಾಸಾಯನಿಕ ಪಟಾಕಿಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
ಮಂಡ್ಯ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತಿದೆ ಎಂಬ ಮಾತಿದೆ. ನೀವೇನಂತೀರಿ?
ನಾನು ಮಂಡ್ಯದವನೇ. ನನಗೆ ಅದರ ಅರಿವಿದೆ. ಜಿಲ್ಲೆಯ ಸ್ಥಿತಿ ಶೋಚನೀಯವಾಗಿದೆ. ನಮ್ಮ ಭೂಮಿ ತಾಯಿಯನ್ನು ನಾವು ಸಾಯಿಸಿಬಿಟ್ಟಿದ್ದೇವೆ. ಮಂಡ್ಯದ ಭೂಮಿಯಲ್ಲಿ ಸತ್ವ ಇಲ್ಲ. ಅಲ್ಲಿನ ನೆಲದಲ್ಲಿ ಬರೀ ರಾಸಾಯನಿಕವೇ ತುಂಬಿಹೋಗಿದೆ. ನಾವು ಬೆಳೆಯುತ್ತಿರುವ ಬೆಳೆಯಲ್ಲಿ ಸತ್ವಗಳು ಇಲ್ಲವೇ ಇಲ್ಲ. ನಾವೇ ಕಲುಷಿತ ಮಾಡಿರುವ ವಾತಾವರಣದಲ್ಲಿ ಅರಿವಿಲ್ಲದೆ ಬದುಕುತ್ತಿದ್ದೇವೆ. ನಾನೊಬ್ಬ ಮಂಡ್ಯದವನಾಗಿ, ರೈತನ ಮಗನಾಗಿ ಈ ಭಾಗವನ್ನು ಕಂಡಿರುವುದರಿಂದ ಇಲ್ಲಿನ ವಾಸ್ತವಾಂಶ ಹೇಳುತ್ತಿದ್ದೇನೆ. ಆದರೆ, ಇದು ಮಂಡ್ಯಕ್ಕೆ ಸೀಮಿತವಾಗಿಲ್ಲ. ರಾಜ್ಯದೆಲ್ಲೆಡೆ ಅರಿವಿಲ್ಲದೆ ಇಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಬೆಂಕಿ ಬೀಳುವ ತನಕ ಕಾಯದೆ ಎಚ್ಚೆತ್ತುಕೊಳ್ಳಬೇಕು. ಸಾವಯವ ಕೃಷಿ ಜೊತೆಗೆ ಭೂಮಿಯ ಸತ್ವ ಕಾಪಾಡಿಕೊಳ್ಳಲು ರಾಸಾಯನಿಕಮುಕ್ತ ಪರಿಸರ ಕಟ್ಟಿಕೊಳ್ಳಬೇಕು.
ಸುವರ್ಣ ಸಂಭ್ರಮದ ಕಾರ್ಯಕ್ರಮಗಳು ಹೇಗಿರಲಿವೆ?
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಗಿದ್ದು 1974ರಲ್ಲಿಯಾದರೂ ಕಾಯ್ದೆಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿದ್ದು 2000 ಇಸವಿಯ ನಂತರ ಎಂದೇ ಹೇಳಬಹುದು. 50 ವರ್ಷ ಪೂರೈಸಿರುವ ಮಂಡಳಿಯ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳನ್ನು ಒಂದೇ ವೇದಿಕೆ, ಒಂದೇ ದಿನಕ್ಕೆ ಸೀಮಿತಗೊಳಿಸುತ್ತಿಲ್ಲ. ಮಂಡಳಿ ಸ್ಥಾಪನೆಗೆ ಕಾರಣರಾದ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸ್ಮರಣೆಯೊಂದಿಗೆ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ 10ರಿಂದ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ವಿಧಾನಸಭೆ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳ ಜೊತೆಗೆ, ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತಿದೆ. ಈ ಮೂಲಕ ಯುವಕರಲ್ಲಿ ಪರಿಸರ ಕಾಳಜಿಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಸಂವಾದ, ಚರ್ಚೆಗಳು, ಚಿತ್ರ ಸ್ಪರ್ಧೆಗಳು, ರೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಪ್ರತಿಯೊಂದು ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಲು ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಅವರ ಸೂಚನೆಯಂತೆ ಜಿಲ್ಲಾಡಳಿತಗಳು ಕಾರ್ಯಕ್ರಮ ನಿರ್ವಹಿಸುತ್ತಿದ್ದು, ಹಣವನ್ನು ಮಂಡಳಿಯಿಂದ ಭರಿಸಲಾಗುತ್ತದೆ. ಇಂದಿರಾ ಗಾಂಧಿಯವರ ಜನ್ಮದಿನವಾದ ನ.19ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನೂ ಆಹ್ವಾನಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.